ಪುತ್ತೂರು: ಬಡವರ ಹಸಿವನ್ನು ನೀಗಿಸುವ ಉದ್ದೇಶದಿಂದ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್ ಇದೀಗ ಸ್ಥಗಿತಗೊಳ್ಳುವ ಶೋಚನೀಯ ಸ್ಥಿತಿಗೆ ಬಂದಿದೆ.ಪುತ್ತೂರು, ಸುಳ್ಯ ಮತ್ತು ಬಂಟ್ವಾಳದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳಿಗೆ ಕಳೆದ ೪ ತಿಂಗಳಿನಿಂದ ವೇತನ ಸಿಕ್ಕಿಲ್ಲ ಎಂದು ಕಳೆದ ೨ ದಿನಗಳಿಂದ ಕ್ಯಾಂಟೀನ್ ಬಂದ್ ಆಗಿದ್ದು ಶಾಶ್ವತ ಬಂದ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಹೊಟೇಲ್ಗಳಲ್ಲಿ ದಿನೇ ದಿನೇ ಊಟೋಪಚಾರದ ದರಗಳು ಏರುತ್ತಿರುವ ನಡುವೆಯೇ ಪ್ರತಿ ದಿನ ಸುಮಾರು ೬೦೦ಕ್ಕೂ ಅಧಿಕ ಮಂದಿ ಕಡಿಮೆ ದರದಲ್ಲಿ ಆಹಾರ ಪಡೆದು ಹಸಿವು ನೀಗಿಸಿಕೊಳ್ಳುತ್ತಿದ್ದ ಇಂದಿರಾ ಕ್ಯಾಂಟೀನ್ ಬಂದ್ ಆಗಿರುವುದರಿಂದ ಬಡವರು ಕಂಗಾಲಾಗುವಂತಾಗಿದೆ.
ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಆಹಾರ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡಿದ್ದು, ೨೦೧೮ರಲ್ಲಿ ಸುಳ್ಯ, ೨೦೧೯ರಲ್ಲಿ ಪುತ್ತೂರು, ೨೦೨೦ರಲ್ಲಿ ಬಂಟ್ವಾಳದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡಿತ್ತು.ಸಾವಿರಾರು ಮಂದಿ ಮಧ್ಯಾಹ್ನದ ಆಹಾರಕ್ಕಾಗಿ ಇಂದಿರಾ ಕ್ಯಾಂಟೀನ್ನ್ನೇ ಅವಲಬಿಸಿದ್ದಾರೆ.ಇದೀಗ ೩ ತಾಲೂಕಿನ ಇಂದಿರಾ ಕ್ಯಾಂಟೀನ್ನಲ್ಲಿರುವ ೨೦ ಸಿಬ್ಬಂದಿಗಳಿಗೆ ವೇತನ ಸಿಗದ ಹಿನ್ನೆಲೆಯಲ್ಲಿ ಅವರು ಇದೀಗ ದಿಢೀರ್ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.ಪುತ್ತೂರು ಮತ್ತು ಸುಳ್ಯದಲ್ಲಿ ತಲಾ ೭ ಮಂದಿ, ಬಂಟ್ವಾಳದಲ್ಲಿ ೬ ಮಂದಿ ಸಿಬ್ಬಂದಿಗಳು ಇಂದಿರಾ ಕ್ಯಾಂಟೀನ್ನಲ್ಲಿ ಕರ್ತವ್ಯ ನಿರ್ವಹಹಿಸುತ್ತಿದ್ದು, ಮುಖ್ಯ ಅಡುಗೆದಾರ, ಅಡುಗೆ ಸಹಾಯಕ, ಇಬ್ಬರು ಶುಚಿತ್ವ ಸಿಬ್ಬಂದಿಗಳು, ಸಹಾಯಕ ಮೆನೇಜರ್, ಓರ್ವ ರಕ್ಷಣಾ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರತೀ ತಿಂಗಳು ಮುಖ್ಯ ಅಡುಗೆ ಸಿಬ್ಬಂದಿ ಹಾಗೂ ಸಹಾಯಕ ಮೆನೇಜರ್ಗೆ ರೂ.೨೦ ಸಾವಿರ, ಅಡುಗೆ ಸಹಾಯಕ ಹಾಗೂ ರಕ್ಷಣಾ ಸಿಬ್ಬಂದಿಗೆ ರೂ.೮ ಸಾವಿರ, ಶುಚಿತ್ವ ಸಿಬ್ಬಂದಿಗಳಿಗೆ ರೂ.೮ ಸಾವಿರ ವೇತನವನ್ನು ಇಂದಿರಾ ಕ್ಯಾಂಟೀನ್ನ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದ ಬೆಂಗಳೂರಿನ ಭಾರತೀಯ ಮಾನವ ಕಲ್ಯಾಣ ಪರಿಷತ್ತು ನೀಡುತ್ತಿತ್ತು.ಆದರೆ ೨೦೨೦ರ ನವೆಂಬರ್ನಿಂದ ಇಲ್ಲಿನ ತನಕ ಸಿಬಂದಿಗಳಿಗೆ ಯಾವುದೇ ವೇತನ ನೀಡಿಲ್ಲ.ಈ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿಲ್ಲ.ಹಾಗಾಗಿ ಕ್ಯಾಂಟಿನ್ ಬಂದ್ ಆಗಿದೆ.
ವಿದ್ಯಾರ್ಥಿಗಳಿಗೆ ಹಸಿವಿನ ಪಾಠ !: ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಳಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾ ಕ್ಯಾಂಟೀನ್ನಿಂದ, ಪಕ್ಕದಲ್ಲಿನ ಮಹಿಳಾ ಕಾಲೇಜಿನ ಸುಮಾರು ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಆಹಾರ ಪೂರೈಸಲಾಗುತ್ತಿತ್ತು.ಇದೀಗ ಇಂದಿರಾ ಕ್ಯಾಂಟೀನ್ ಬಂದ್ ಆಗಿದ್ದರಿಂದ ವಿದ್ಯಾರ್ಥಿಗಳು ಹಸಿವಿನಿಂದ ಪಾಠ ಕೇಳುವಂತಾಗಿದೆ.ಈ ನಡುವೆ ಆಸ್ಪತ್ರೆಗೆ ಬಂದವರು ಕೂಡಾ ಇಂದಿರಾ ಕ್ಯಾಂಟೀನ್ನಿಂದಲೇ ಊಟ ಪಡೆಯುತ್ತಿದ್ದು. ಇದೀಗ ಅವರಿಗೂ ಕೂಡಾ ಸಮಸ್ಯೆ ಉಂಟಾಗಿದೆ.
ವೇತನ ನೀಡುವ ತನಕ ಕೆಲಸ ಸ್ಥಗಿತ: ಕಳೆದ ನವೆಂಬರ್ನಿಂದ ಸುಳ್ಯ, ಪುತ್ತೂರು, ಬಂಟ್ವಾಳದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳಿಗೆ ಸಂಸ್ಥೆ ವೇತನ ನೀಡಿಲ್ಲ.ಈಗಾಗಲೇ ಹಲವಾರು ಜನಪ್ರತಿನಿಧಿ, ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ ವೇತನ ಬಿಡುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಕಳೆದ ೩-೪ ತಿಂಗಳಿನಿಂದ ವೇತನ ರಹಿತವಾಗಿ ಇಂದಿರಾ ಕ್ಯಾಂಟೀನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ನಾವೆಲ್ಲ ವೇತನ ನೀಡುವವರೆಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಸುಳ್ಯ, ಪುತ್ತೂರು, ಬಂಟ್ವಾಳದ ಇಂದಿರಾ ಕ್ಯಾಂಟೀನ್ ಸಹಾಯಕ ಮೆನೇಜರ್ ಮಜೀದ್ ಆರ್ಲಪದವು ತಿಳಿಸಿದ್ದಾರೆ.
ಪ್ರತಿ ತಿಂಗಳು ಜಿಲ್ಲೆಗೆ ವರದಿ ಕಳುಹಿಸುತ್ತೇವೆ: ಪುತ್ತೂರು ಇಂದಿರಾ ಕ್ಯಾಂಟೀನ್ ನಿರ್ವಹಣೆ ಕುರಿತು ಪ್ರತಿ ತಿಂಗಳು ನಾವು ಜಿಲ್ಲಾಡಳಿತಕ್ಕೆ ವರದಿ ಕಳುಹಿಸುತ್ತೇವೆ.ವೇತನ ಕುರಿತು ಅದರ ನಿರ್ವಹಣೆ ಮಾಡುತ್ತಿರುವ ಬೆಂಗಳೂರಿನ ಸಂಸ್ಥೆಗೆ ಪ್ರತಿಬಾರಿ ತಿಳಿಸುತ್ತಿzನೆ ಎಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ.
ಕೋವಿಡ್ ಸಂದರ್ಭ ರಾಜ್ಯದಲ್ಲೇ ಇಂದಿರಾ ಕ್ಯಾಂಟೀನ್ ಬಂದ್ ಆಗಿತ್ತು.ಆದರೆ ಮತ್ತೆ ತೆರೆಯುವಂತೆ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಆಗಿತ್ತು.ಅದರಂತೆ ಶೀಘ್ರದಲ್ಲಿ ಕಾರ್ಯಾರಂಭ ಆಗಲಿದೆ.ಹಿಂದುಳಿದ ವರ್ಗಗಳ ಹಾಸ್ಟೇಲ್, ಬಿಸಿಎಮ್ ಹಾಸ್ಟೆಲ್ಗಳು ಕೂಡಾ ತೆರೆದಿವೆ.ವೇತನಕ್ಕೆ ಸಂಬಂಧಿಸಿದ ವಿಚಾರವನ್ನು ಆಯಾ ಸ್ಥಳೀಯಾಡಳಿತ ನೋಡಿಕೊಳ್ಳುತ್ತದೆ.ಈ ಕುರಿತು ನಾನೇ ಖುದ್ದು ಪರಿಶೀಲಿಸುತ್ತೇನೆ –ಸಂಜೀವ ಮಠಂದೂರು, ಶಾಸಕರು ಪುತ್ತೂರು
೨ ದಿನದಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆ
ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್ಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು, ಸುಳ್ಯ, ಬಂಟ್ವಾಳವನ್ನು ಭಾರತೀಯ ಮಾನವ ಕಲ್ಯಾಣ ಪರಿಷತ್ತು ನಿರ್ವಹಣೆ ಮಾಡುತ್ತಿದೆ.ಆದರೆ ಕಳೆದ ಮಾರ್ಚ್ನಿಂದ ನಮಗೆ ಜಿಲ್ಲಾಡಳಿತ ವೇತನ ನೀಡಿಲ್ಲ.ಆದರೂ ನಾವು ಅಕ್ಟೋಬರ್ ತನಕ ತಮ್ಮ ಕೈಯಿಂದಲೇ ಹಾಕಿ ಸಿಬ್ಬಂದಿಗಳಿಗೆ ವೇತನ ನೀಡಿದ್ದೇವೆ.ಇದೀಗ ನಮ್ಮಿಂದ ವೇತನ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಮಗೆ ಏನೂ ಮಾಡಲು ಆಗುತ್ತಿಲ್ಲ.ಅದರೆ ಸಿಬ್ಬಂದಿಗಳು ನಾವು ವೇತನ ಕೊಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.ಈಗಾಗಲೇ ಜಿಲ್ಲಾಡಳಿತದಲ್ಲಿ ಮಾತನಾಡಿದ್ದು, ಎರಡು ದಿನಗಳಲ್ಲಿ ಸಮಸ್ಯೆ ಬಗೆ ಹರಿಯುವ ಭರವಸೆ ಇದೆ –ಶಶಿಕುಮಾರ್, ಆಡಳಿತ ವಿಭಾಗ , ಭಾರತೀಯ ಮಾನವ ಕಲ್ಯಾಣ ಪರಿಷತ್ತು ಬೆಂಗಳೂರು