HomePage_Banner
HomePage_Banner
HomePage_Banner
HomePage_Banner
Breaking News

ಕೇರಳದಲ್ಲಿ ಮತ್ತೆ ಏರಿಕೆಯಾಗುತ್ತಿರುವ ಕೊರೋನ | ಇಂದಿನಿಂದ ನೆಗೆಟಿವ್ ರಿಪೋರ್ಟ್ ಇಲ್ಲದಿದ್ದರೆ ಜಿಲ್ಲೆಗೆ ನೋ ಎಂಟ್ರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸಾರಡ್ಕದಲ್ಲಿ ಬಿರುಸುಗೊಂಡ ತಪಾಸಣೆ – ಉಳಿದೆಡೆಯ ರಸ್ತೆ ಬಂದ್

ವಿಟ್ಲ: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಮಧ್ಯೆ ಸಂಚರಿಸುವ ಗಡಿ ರಸ್ತೆಯಲ್ಲಿ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ರವರು ಹೊರಡಿಸಿರುವ ಆದೇಶ ಫೆ.೨೨ರಂದು ಮುಂಜಾನೆಯಿಂದಲ್ಲೇ ಜಾರಿಯಾಗಿದ್ದು ಹೆಚ್ಚಿನ ಗಡಿ ರಸ್ತೆಗಳನ್ನು ಸ್ಥಳೀಯ ಠಾಣಾ ಪೊಲೀಸರು ಬ್ಯಾರಿಕೇಡ್ ಇಟ್ಟು ಬಂದ್ ಮಾಡಿದ್ದು, ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಕಲ್ಲಡ್ಕ- ಕಾಞಂಗಾಡ್ ಹೆದ್ದಾರಿಯ ಸಾರಡ್ಕ ಚೆಕ್ ಪೋಸ್ಟ್ ಮೂಲಕ ಕಾಸರಗೋಡು ಜಿಲ್ಲೆಯಿಂದ ದ.ಕ ಜಿಲ್ಲೆಯನ್ನು ಪ್ರವೇಶಿಸಲು ಅನುಮತಿ ನೀಡಲಾಗಿರುವ ನಿಟ್ಟಿನಲ್ಲಿ ಬೆಳಗ್ಗಿನಿಂದಲೇ ತಪಾಸಣೆ ಬಿರುಸುಗೊಂಡಿದ್ದು, ಕೋವಿಡ್ ನೆಗೆಟೀವ್ ಸರ್ಟಿಫಿಕೇಟ್ ಇಲ್ಲದವರನ್ನು ಕರ್ನಾಟಕಕ್ಕೆ ಸಂಚರಿಸಲು ಅನುಮತಿ ನಿರಾಕರಿಸಲಾಗುತ್ತಿದೆ. ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಮತ್ತಿತರ ಇಲಾಖೆಗಳ ಸಿಬ್ಬಂದಿಗಳ ತಂಡ ಪರಿಶೀಲನೆ ನಡೆಸಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇದ್ದ ವಾಹನ ಪ್ರಯಾಣಿಕರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ. ಆರಂಭದ ದಿನವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬಂಧಿಗಳು ಹಾಗೂ ಪೊಲೀಸ್ ಇಲಾಖಾ ಸಿಬಂಧಿಗಳು ಖಾಸಗಿ ವಾಹನ ಸವಾರರ ಸಹಿತ ಬಸ್ಸು ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡಿದ್ದು, ಪೆ.೨೩ರಿಂದ ಕೊರೋನಾ ನೆಗೆಟೀವ್ ಸರ್ಟಿಫಿಕೇಟ್ ಇಲ್ಲದ ವ್ಯಕ್ತಿಗಳನ್ನು ಗಡಿದಾಟಲು ಬಿಡುವುದಿಲ್ಲ ಎಂದು ಅಧಿಕಾರಿವರ್ಗ ತಿಳಿಸಿವೆ. ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು, ಆನೆಕಲ್ಲು, ನೆಲ್ಲಿಕಟ್ಟೆ, ರಸ್ತೆಗಳನ್ನು ಬ್ಯಾರೆಕೇಡ್ ಗಳನ್ನು ಅಳವಡಿಸಿ ಬಂದ್ ಮಾಡಲಾಗಿದ್ದು, ದ.ಕ. ಕಾಸರಗೋಡು ಮಧ್ಯೆಯ ಬಹುತೇಕ ರಸ್ತೆಗಳ ಗಡಿ ಬಂದ್ ಮಾಡಲು ಆದೇಶಿಸಲಾಗಿದ್ದು ಕೆಲವು ಪ್ರಮುಖ ರಸ್ತೆಗಳ ಮೂಲಕ ಮಾತ್ರ ಷರತ್ತು ಬದ್ಧ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಈ ಚೆಕ್ ಪೋಸ್ಟ್ ಗಳಲ್ಲಿ ಕೇರಳದಿಂದ ಆಗಮಿಸುವ ಆಂಬುಲೆನ್ಸ್ ಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಆದರೆ ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಿದ ಬಳಿಕ ರೋಗಿಗಳ ಜೊತೆಗೆ ಇರುವವರಿಗೆ ಟೆಸ್ಟ್ ಕಡ್ಡಾಯವಾಗಿರುತ್ತದೆ. ಕೇರಳದಿಂದ ಕರ್ನಾಟಕ ಪ್ರವೇಶಿಸುವ ವಿದ್ಯಾರ್ಥಿಗಳು ಪ್ರತೀ ೧೫ ದಿನಗಳಿಗೊಮ್ಮೆ ಕೋವಿಡ್ ಟೆಸ್ಟ್ ನಡೆಸುವುದು ಕಡ್ಡಾಯವಾಗಿದೆ. ದ.ಕ ಜಿಲ್ಲೆಯನ್ನು ಪ್ರವೇಶಿಸುವ ಎಲ್ಲಾ ಒಳರಸ್ತೆಯನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿರುವ ಜಿಲ್ಲಾಡಳಿತ ಮಂಗಳೂರಿನ ತಲಪಾಡಿ, ಬಂಟ್ವಾಳದ ಸಾರಡ್ಕ, ಪುತ್ತೂರಿನ ನೆಟ್ಟಣಿಗೆ ಮುಡ್ನೂರು ಮೇನಾಲ ಹಾಗೂ ಸುಳ್ಯದ ಜಾಲ್ಸೂರು ಚೆಕ್ ಪೋಸ್ಟ್ ಮೂಲಕ ಮಾತ್ರವೇ ಕಾಸರಗೋಡು ಜಿಲ್ಲೆಯಿಂದ ಪ್ರವೇಶಿಸಲು ಹಾಗೂ ನಿರ್ಗಮಿಸಲು ಅವಕಾಶ ನೀಡಿದೆ. ಉಳಿದಂತೆ ಕಾಸರಗೋಡು ಹಾಗೂ ದ.ಕ ಜಿಲ್ಲೆಯನ್ನು ಸಂಪರ್ಕಿಸುವ ಸುಮಾರು ೧೭ಗಡಿಗಳನ್ನು ಮುಚ್ಚುಗಡೆಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಬೆಳಗ್ಗೆ ತಾಲೂಕು ಆರೊಗ್ಯ ಅಧಿಕಾರಿ ಡಾ. ದೀಪ ಪ್ರಭು ರವರು ಸಾರಡ್ಕ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವೇಶ್ವರ ಭಟ್ ನೇತೃತ್ವದ ತಂಡ ಸಾರಡ್ಕ ಚೆಕ್ ಪೂಸ್ಟ್ ನಲ್ಲಿ ಟೆಸ್ಟ್ ನಡೆಸಿವೆ. ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಪ್ರವೀಣ್ ರವರ ನೇತೃತ್ವದಲ್ಲಿ ಸ್ಥಳದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.

ಟೆಸ್ಟ್ ಗಾಗಿ ಸರತಿ ಸಾಲು
ಬೆಳಗ್ಗಿನಿಂದಲೇ ಕಾಸರಗೋಡು ಜಿಲ್ಲೆಯಿಂದ ದ.ಕ ಜಿಲ್ಲೆಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಗಳಿಗೆ ತೆರಳುವವರ ಸಹಿತ ಅಗತ್ಯ ಕೆಲಸಕ್ಕಾಗಿ ತೆರಳುವ ಮಂದಿಯನ್ನು ಸಾರಡ್ಕ ಚೆಕ್ ಪೋಸ್ಟ್ ನಲ್ಲಿದ್ದ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಟೆಸ್ಟ್ ರಿಪೋರ್ಟ್ ರಹಿತರಿಗೆ ಸ್ಥಳದಲ್ಲೇ ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿಗಳು ಉಚಿತ ರ್‍ಯಾಟ್ ಹಾಗೂ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಗಳನ್ನು ನಡೆಸುತ್ತಿದ್ದರು. ಈ ಟೆಸ್ಟ್ ನಡೆಸಲು ಪ್ರಯಾಣಿಕರು ಸರತಿಸಾಲಿನಲ್ಲಿ ನಿಲ್ಲಬೇಕಾಯಿತು. ಸ್ಥಳದಲ್ಲಿ ಟೆಸ್ಟ್ ನಡೆಸಲಾದ ವ್ಯಕ್ತಿಗಳಿಗೆ ರಿಪೋರ್ಟ್ ಎರಡು ದಿನಗಳ ಒಳಗೆ ಅವರ ಮೊಬೈಲ್ ಗೆ ಕಳುಹಿಸಿಕೊಡಲಾಗುತ್ತದೆ. ಅವರು ಮುಂದಿನ ಹದಿನೈದು ದಿನಗಳ ವರೆಗೆ ಆ ಸರ್ಟಿಫಿಕೇಟನ್ನು ತೋರಿಸಿ ಚೆಕ್ ಪೋಸ್ಟ್ ಮೂಲಕ ಸಂಚರಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.