ಉಪ್ಪಿನಂಗಡಿ: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡಿದ ಅರೆಬಿಕ್ ಶಾಲಾ ಶಿಕ್ಷಕನೋರ್ವನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ಮಂಗಳವಾರ ಬೆಳಗ್ಗೆ ಬಂದಿದೆ.
ಮೂಲತಃ ಚಿಕ್ಕಮಗಳೂರು ನಿವಾಸಿಯಾಗಿರುವ ಸುಳ್ಯದ ಅರೆಬಿಕ್ ಶಾಲಾ ಶಿಕ್ಷಕ ಮುಹಮ್ಮದ್ ಸೈಪುಲ್ಲಾ (೩೨) ಬಂಧಿತ ಆರೋಪಿ. ಧರ್ಮಸ್ಥಳದಿಂದ ಉಪ್ಪಿನಂಗಡಿಯತ್ತ ಸಂಚರಿಸುತ್ತಿದ್ದ ಬಸ್ನಲ್ಲಿ ಈ ಘಟನೆ ನಡೆದಿದ್ದು, ಈತ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿಗೆ ಮೈ ಮುಟ್ಟಿ ಕಿರುಕುಳ ನೀಡುತ್ತಿದ್ದ. ಇದನ್ನು ಆಕ್ಷೇಪಿಸಿದ ಈಕೆ ಈ ಬಗ್ಗೆ ಬಸ್ಸಿನ ನಿರ್ವಾಹಕನಿಗೆ ದೂರು ನೀಡಿದ್ದು, ಬಸ್ಸಿನ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ನೇರವಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲು ನೆರವಾದರು. ಉಪ್ಪಿನಂಗಡಿ ಪೊಲೀಸರು ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿಯ ದೂರನ್ನು ಸ್ವೀಕರಿಸಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೋಮವಾರ ರಾತ್ರಿ ಉದ್ವಿಗ್ನತೆ ಸೃಷ್ಟಿಸಿದ ಕಿರುಕುಳ ಪ್ರಕರಣ:
ಬಸ್ನಲ್ಲಿ ಸಂಚರಿಸುವಾಗ ಯುವತಿಯರಿಗೆ ಕಿರುಕುಳ ನೀಡುವ ಪ್ರಕರಣ ಉಪ್ಪಿನಂಗಡಿಯಲ್ಲಿ ಹೆಚ್ಚಾಗುತ್ತಿದೆ. ಸೋಮವಾರ ರಾತ್ರಿಯೂ ಬೆಂಗಳೂರಿನಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ವೇಳೆ ಬಸ್ನಲ್ಲಿದ್ದ ರಫೀಕ್ ನೆಲ್ಲಿಪಳಿಕೆ ಎಂಬಾತ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದು, ಇದರ ಬಗ್ಗೆ ಮಾಹಿತಿ ಪಡೆದ ವಿದ್ಯಾರ್ಥಿನಿಯ ಸಂಬಂಧಿಕ ಈ ಬಗ್ಗೆ ಉಪ್ಪಿನಂಗಡಿ ಬಸ್ನಿಲ್ದಾಣದಲ್ಲಿ ಪ್ರಶ್ನಿಸಲು ಮುಂದಾಗಿದ್ದ. ಈ ಸಂದರ್ಭ ಆರೋಪಿಯ ಪರವಾಗಿ ಒಗ್ಗೂಡಿದ ಗುಂಪೊಂದು ವಿದ್ಯಾರ್ಥಿಯ ಸಂಬಂಧಿಕನ ಮೇಲೆ ಹಲ್ಲೆ ನಡೆಸಿದ ಘಟನೆ ಸಂಭವಿಸಿತ್ತು. ಈ ಘಟನೆ ಉದ್ವಿಗ್ನ ಸ್ಥಿತಿ ತಲುಪುದರಲ್ಲಿತ್ತು. ಈ ಬಗ್ಗೆ ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಬಸ್ ನಿಲ್ದಾಣದಲ್ಲಿ ಪೊಲೀಸರನ್ನು ನಿಯೋಜಿಸಿದರಲ್ಲದೆ, ಅಲ್ಲಿದ್ದವರನ್ನೆಲ್ಲಾ ಚದುರಿಸಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಕಿರುಕುಳಕ್ಕೊಳಗಾದ ಹೆಚ್ಚಿನ ಯುವತಿಯರು ಮರ್ಯಾದೆ ಪ್ರಶ್ನೆಗೆ ಅಂಜಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗದಿರುವುದೇ ಇಂತಹ ಕಾಮುಕರಿಗೆ ವರವಾಗಿ ಪರಿಣಮಿಸಿದೆ.
ಶಾಂತಿ ಕಡದುವ ಹುನ್ನಾರ: ಬಜರಂಗದಳ, ವಿಎಚ್ಪಿ
ಹಿಂದೂ ಯುವತಿಯರಿಗೆ ಅನ್ಯ ಧರ್ಮೀಯರು ಬಸ್ಸಿನಲ್ಲಿ ಕಿರುಕುಳ ನೀಡುತ್ತಿರುವುದು ಇದು ನಿತ್ಯ ನಿರಂತರ ಎಂಬಂತಾಗಿದೆ. ಇದರ ಹಿಂದೆ ಸಮಾಜದ ಸಹನೆಯನ್ನು ಕೆಣಕಿ ಶಾಂತಿ ಕದಡಿಸುವ ಹುನ್ನಾರವಿದ್ದಂತೆ ತೋರುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ನಿಗಾವಿರಿಸಿ ತಪ್ಪಿತಸ್ಥರ ವಿರುದ್ಧ ಮೃದು ನಿಲುವು ತಾಳದೇ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಬೇಕು. ಇದೇ ರೀತಿ ಹಿಂದೂ ಸಮಾಜದ ಹೆಣ್ಮಕ್ಕಳ ಮೇಲೆ ದೌರ್ಜನ್ಯ ಮುಂದುವರಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಬಜರಂಗದಳ, ವಿಎಚ್ಪಿಯ ಉಪ್ಪಿನಂಗಡಿ ಘಟಕ ಎಚ್ಚರಿಕೆ ನೀಡಿದೆ.
ತಕ್ಷಣ ಪೊಲೀಸರ ಗಮನಕ್ಕೆ ತನ್ನಿ: ಎಸೈ
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಈರಯ್ಯ ಡಿ.ಎನ್., ಎಲ್ಲೇ ಆಗಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಕಿರುಕುಳ ನಡೆದದ್ದೇ ಆದಲ್ಲಿ ತಕ್ಷಣವೇ ಪೊಲೀಸರ ಗಮನಕ್ಕೆ ತನ್ನಿ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು. ಯಾವುದೇ ಅಪರಾಧ ಪ್ರಕರಣವನ್ನು ಮತೀಯ ದೃಷ್ಟಿಯಿಂದ ನೋಡುವುದಾಗಲೀ, ಕಾನೂನು ಕೈಗೆತ್ತಿಕೊಳ್ಳುವುದಾಗಲೀ ಮಾಡಬಾರದು ಎಂದು ತಿಳಿಸಿದರಲ್ಲದೆ, ಮಂಗಳವಾರದಂದು ನಡೆದ ಕೃತ್ಯದ ಬಗ್ಗೆ ದೂರು ನೀಡಿದ ವಿದ್ಯಾರ್ಥಿನಿಯ ನಡೆಯನ್ನು ಶ್ಲಾಘಿಸಿದರು.