ಪುತ್ತೂರು; ತಮ್ಮ ಆವಶ್ಯ ಕೆಲಸ ಕಾರ್ಯಗಳಿಗೆ ಬರುವ ಗ್ರಾಮಸ್ಥರಿಗೆ ಪಂಚಾಯತ್ನಲ್ಲಿ ಸಿಬಂದಿಗಳು ಸೂಕ್ತ ಮಾಹಿತಿ ನೀಡಬೇಕು. ಕಚೇರಿ ಒಳಗಡೆ ಮಧ್ಯವರ್ತಿಗಳಿಗೆ ಅವಕಾಶ ಕೊಡಬಾರದು. ಗ್ರಾಮಸ್ಥರೇ ನೇರವಾಗಿ ಕಚೇರಿಗೆ ಬಂದು ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು. ಸಮಸ್ಯೆಗಳಿದ್ದರೆ ಆಯಾ ವಾರ್ಡ್ನ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ಕುಡಿಪ್ಪಾಡಿ ಗ್ರಾ.ಪಂನ ಪ್ರಥಮ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿ ಹಾಗೂ ಸಿಬಂದಿಗಳಿಗೆ ತಾಕೀತು ಮಾಡಿದರು.
ಪಂಚಾಯತ್ನ ಪ್ರಥಮ ಸಾಮಾನ್ಯ ಸಭೆಯು ಫೆ.೨೪ರಂದು ಅಧ್ಯಕ್ಷೆ ರೇಖಾ ಬಟ್ರುಪ್ಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮಸ್ಥರು ತಮ್ಮ ಕೆಲಸಗಳಿಗೆ ನೇರವಾಗಿ ಕಚೇರಿಗೆ ಬಂದು ಮಾಡಿಸಿಕೊಳ್ಳಬೇಕು. ಪಂಚಾಯತ್ ಕಚೇರಿಯೊಳಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಗ್ರಾಮಸ್ಥರು ಮಧ್ಯವರ್ತಿಗಳ ಮುಖಾಂತರ ಮಾಡಿಸಿಕೊಳ್ಳುವುದು ಬೇಡ. ಮಧ್ಯವರ್ತಿಗಳ ಮೂಲಕ ಅರ್ಜಿಗಳ ಬಂದರೆ ಸ್ವೀಕರಿಸಬಾರದು. ಗ್ರಾಮಸ್ಥರ ಯಾವುದೇ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಸಿಬಂದಿಗಳು ಸೂಕ್ತ ಮಾಹಿತಿ ನೀಡುವ ಮೂಲಕ ಮಾದರಿ ಪಂಚಾಯತ್ ಆಗಿ ಮಾಡಬೇಕು ಎಂದು ಅಧಿಕಾರಿ ಹಾಗೂ ಸಿಬಂದಿಗಳಿಗೆ ಸೂಚಿಸಿದರು.
ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು:
ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಕುಡಿಯುವ ನೀರಿನ ಸೂಕ್ತ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕೂಡಲೇ ನೀರು ನಿರ್ವಾಹಕರ ಸಭೆ ನಡೆಸಬೇಕು. ನೀರು ನಿರ್ವಾಹಕರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದಿದ್ದರೆ ಅಂತಹ ಸ್ಥಳಗಳಲ್ಲಿ ಬದಲಿ ಜನರು ನೇಮಕ ಮಾಡಬೇಕು. ಕೋಂಟ್ರುಪ್ಪಾಡಿಯಲ್ಲಿ ನೀರಿನ ಸಮಸ್ಯೆಯಿದೆ. ಅಲ್ಲಿ ಟ್ಯಾಂಕ್ ನಿರ್ಮಾಣ ಆಗಬೇಕು ಎಂದು ಪಿಡಿಓ ತಿಳಿಸಿದಾಗ ಕೋಂಟ್ರಪ್ಪಾಡಿಗೆ ಜಿ.ಪಂನಿಂದ ಟ್ಯಾಂಕ್ ಮಂಜೂರಾಗಿದ್ದ ಶೀಘ್ರದಲ್ಲಿ ನಿರ್ಮಾಣವಾಗಲಿದೆ ಎಂದು ಸದಸ್ಯರು ತಿಳಿಸಿದರು. ನೀರು ನಿರ್ವಾಹಕರಲ್ಲಿ ವಿಚಾರಿಸಿ ಅವರ ಸಭೆಗೆ ದಿನಾಂಕ ನಿಗದಿಗೊಳಿಸಬೇಕು. ಪಂಚಾಯತ್ನಿಂದ ನೇಮಕಗೊಂಡ ನಿರ್ವಾಹಕರೇ ಖುದ್ದು ಸಭಗೆ ಹಾಜರಾಗಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಅವರ ಬದಲಿಗೆ ಬೇರೊಬ್ಬರನ್ನು ಕಳುಹಿಸಬಾರದು. ಸಭೆಗೆ ಅವರು ಬಾರದಿದ್ದಲ್ಲಿ ಅಂತಹ ಘಟಕಗಳಿಗೆ ಬದಲಿ ಜನರನ್ನು ನೇಮಕ ಮಾಡಬೇಕು ಎಂದು ಸದಸ್ಯರು ತಿಳಿಸಿದರು.
ಮನೆ ತೆರಿಗೆ, ನೀರಿನ ಶುಲ್ಕ ನಿಗದಿತ ಸಮಯಕ್ಕೆ ಪಾವತಿಯಾಗಲಿ:
ಗ್ರಾಮಸ್ಥರು ಮನೆ ತೆರಿಗೆ ಹಾಗೂ ಕುಡಿಯುವ ನೀರಿನ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಪಂಚಾಯತ್ಗೆ ಇದೇ ಆದಾಯವಾಗಿದೆ. ನೀರಿನ ಶುಲ್ಕ ಪಾವತಿಸದ ಫಲಾನುಭವಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಶುಲ್ಕ ಪಾವತಿಸಲು ಹೆಚ್ಚು ಕಾಲಾವಕಾಶಕೊಡಬಾರದು. ಶುಲ್ಕ ಪಾವತಿಸದಿದ್ದರೆ ಅಂತಹ ಫಲಾನುಭವಿಗಳನೀರಿನ ಸಂಪರ್ಕ ಕಡಿತಗೊಳಿಸಬೇಕು ಎಂದು ಸದಸ್ಯರು ತಿಳಿಸಿದರು.
ಮನೆ, ಕಟ್ಟಡ ಪರವಾಣಿಗೆ ಕಡ್ಡಾಯ:
ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರದ ನಿಯಮದಂತೆ ಪಂಚಾಯತ್ನಿಂದ ಕಡ್ಡಾಯವಾಗಿ ಪರವಾನಿಗೆ ಪಡೆದು ಮನೆ ಅಥವಾ ಅಂಗಡಿ ಇನ್ನಿತರ ಕಟ್ಟಡಗಳ ನಿರ್ಮಿಸಬೇಕು. ಪರವಾನಿಗೆ ಪಡೆಯದೇ ಈಗಾಗಲೇ ನಿರ್ಮಾಣ ಮಾಡಿರುವವರಿಗೆ ಪರವಾನಿಗೆಗೆ ಪಾವತಿಸುವ ಶುಲ್ಕ ಶೇ.೫೦ರಷ್ಟು ದಂಡ ವಿಧಿಸಬೇಕು. ಅಂಗಡಿ ವ್ಯಾಪಾರಗಳಿಗೂ ಪಂಚಾಯತ್ನ ಪರವಾನಿಗೆ ಕಡ್ಡಾಯವಾಗಿದ್ದು ಪರವಾನಿಗೆ ಪಡೆಯದ ಅಂಗಡಿಗಳಿಗೆ ನೋಟೀಸ್ ಜಾರಿಮಾಡಬೇಕು. ಅನಧಿಕೃತವಾಗಿ ಕಟ್ಟಡ, ಕಾಂಪೌಂಡ್ ನಿರ್ಮಾಣ ಮಾಡುವ ಕುರಿತು ನಿಗಾವಹಿಸಬೇಕು. ಪರವಾನಿಗೆ ಪಡೆಯದೇ ನಿರ್ಮಾಣವಾಗುತ್ತಿದ್ದರೆ ಅವರಿಗೆ ಸೂಚನೆ ನೀಡಬೇಕು ಸದಸ್ಯರು ಅಧಿಕಾರಿಗಳಿಗೆ ತಿಳಿಸಿದರು.
ವಿವಿಧ ಸಮಿತಿಗಳ ರಚನೆ;
ಸರಕಾರದ ನಿಯಮದಂತೆ ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು, ಲೆಕ್ಕಪರಿಶೋಧನ, ಯೋಜನಾ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸಮಿತಿಗಳನ್ನು ಸಭೆಯಲ್ಲಿ ರಚಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಪಾಧ್ಯಕ್ಷೆ ಸುಮಿತ್ರ, ಉಪಾಧ್ಯಕ್ಷರಾಗಿ ಸ್ಮಿತಾ, ಸದಸ್ಯರಾಗಿ ಸೋಮಪ್ಪ ಪೂಜಾರಿ, ನವೀನ್, ಚಂದ್ರಾವತಿ, ಯೋಜನಾ ಸಮಿತಿ ಅಧ್ಯಕ್ಷರಾಗಿ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷರಾಗಿ ಗಿರೀಶ್ ನಂದನ, ಸದಸ್ಯರಾಗಿ ಗಿರಿಧರ್ ಗೌಡ ಗೋಮುಖ, ನವೀನ, ಸುಮಿತ್ರ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಚಂದ್ರಾವತಿ, ಉಪಾಧ್ಯಕ್ಷರಾಗಿ ನವೀನ, ಸದಸ್ಯರಾಗಿ ಸ್ಮಿತಾ, ರೇಖಾ, ಗಿರಿಧರ ಗೌಡ ಗೋಮುಖರವರನ್ನು ಆಯ್ಕೆ ಮಾಡಲಾಯಿತು. ವಿವಿಧ ಸಮಿತಿಗಳ ಜವಾಬ್ದಾರಿಯನ್ನು ಪಿಡಿಓ ಹೊನ್ನಮ್ಮ ತಿಳಿಸಿದರು.
ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಗಿರಿಧರ ಗೌಡ ಗೋಮುಖ, ಗಿರೀಶ್ ನಂದನ, ಸ್ಮಿತಾ, ಸೋಮಪ್ಪ ಪೂಜಾರಿ, ನವೀನ್, ಚಂದ್ರಾವತಿ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಹೊನ್ನಮ್ಮ ಸ್ವಾಗತಿಸಿದರು. ಕಾರ್ಯದರ್ಶಿ ಭವಾನಿ ವಂದಿಸಿದರು. ಸಿಬಂದಿಗಳು ಸಹಕರಿಸಿದರು.