- ಪಿಎಫ್ಐಯನ್ನು ಹೆದರಿಸುವ ಷಡ್ಯಂತ್ರ ಸಲ್ಲದು – ಉಸ್ಮಾನ್ ಪೆರಮೊಗ್ರು
- ನೇರವಾಗಿ ಸೆನಸಾಡಲು ಆಗದ ಸಂಘಪರಿವಾರ – ಜಾಬೀರ್ ಅರಿಯಡ್ಕ
ಪುತ್ತೂರು: ಯು.ಪಿ ಪೊಲೀಸರಿಂದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಅಪಹರಣ ಮಾಡಿದ್ದಾರೆಂದು ಆರೋಪಿಸಿ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಫೆ.೨೪ ರಂದು ಪಿಎಫ್ಐ ಪುತ್ತೂರು ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.
ಪಿಎಫ್ಐಯನ್ನು ಹೆದರಿಸುವ ಷಡ್ಯಂತ್ರ ಸಲ್ಲದು:
ಪ್ರತಿಭಟನೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಪಿಎಫ್ಐ ಕಬಕ ಮಿತ್ತೂರು ಡಿವಿಜನ್ ಅಧ್ಯಕ್ಷ ಉಸ್ಮಾನ್ ಪೆರಮೊಗರು ಅವರು ಮಾತನಾಡಿ ಉತ್ತರ ಪ್ರದೇಶ ನಿರಂತರ ಕೋಮು ಪ್ರಚೋಧನೆ, ದಲಿತ ದೌರ್ಜನ್ಯ ಚರ್ಚೆಗೊಳಗಾಗುತ್ತಿದೆ. ಕಾವಿಯನ್ನು ತೊಟ್ಟು ಅಧಿಕಾರಕ್ಕೆ ಬಂದ ಯೋಗಿ ಮುಸ್ಲಿಂ ಮತ್ತು ದಲಿತ ಜನಾಂಗದ ವಿರುದ್ಧ ದೌರ್ಜನ್ಯ ಎಸಗುತ್ತಿದ್ದಾರೆ. ಎಲ್ಲಾ ಘಟನೆಗಳಿಗೆ ಪಿಎಪ್ಐ ಕಾರಣ ಎಂದು ಸುಳ್ಳು ಆರೋಪ ಸೃಷ್ಟಿಸಿ ಕಾರ್ಯಕರ್ತರನ್ನು ಬಂಧಿಸುವ ಹುನ್ನಾರ ನಡೆಸಿದ ಪಿಎಫ್ಐ ಹೆದರಿಸುವ ಷಡ್ಯಂತ್ರಕ್ಕೆ ನಾವು ಜಗ್ಗುವುದಿಲ್ಲ. ಷಡ್ಯಂತ್ರ ಮಾಡಿದರೆ ಅದರ ವಿರುದ್ಧ ಪ್ರತಿರೋಧಿಸಲು ಸಿದ್ದರಿದ್ದೇವೆ ಎಂದರು. ಸ್ವಾತಂತ್ರದ ಬಳಿಕ ಆಡಳಿತ ನಡೆಸಿದ ಪಕ್ಷಗಳ ದುರಾಡಳಿತದಿಂದಾಗಿ ಅಧಿಕಾರದ ಚುಕ್ಕಾಣಿ ಪ್ಯಾಸಿಸ್ಟ್ ಸಂಘ ಪರಿವಾರಕ್ಕೆ ಸಿಕ್ಕಿದ ಕಾರಣ ದೇಶದ ಮೂಲ ನಿವಾಸಿಗಳಿಗೆ ಅನ್ಯಾಯ ಆಗುತ್ತಿದೆ. ಹರ್ತಾಸ್ ಘಟನೆಗೆ ಸಂಬಂಧಿಸಿ ಸತ್ಯ ಶೋಧನೆಗೆ ಹೋದ ನಮ್ಮ ಕಾರ್ಯಕರ್ತರನ್ನು ಬಂಧಿಸಿ ಕೋಮುಗಲಭೆ ಮಾಡಲು ಯಾತ್ರೆ ಮಾಡುತ್ತಿದ್ದಾರೆಂದು ಸುಳ್ಳು ಆರೋಪ ಸೃಷ್ಟಿಸುತ್ತಿದ್ದಾರೆ. ಇಂತಹ ಬೆದರಿಕೆಯ ತಂತ್ರಕ್ಕೆ ನಾವು ಬಗ್ಗುವುದಿಲ್ಲ ಎಂದು ಅವರು ಹೇಳಿದರು.
ನೇರವಾಗಿ ಸೆನಸಾಡಲು ಆಗದ ಸಂಘಪರಿವಾರ:
ಪಿ ಎಫ್ ಐ ಜಿಲ್ಲಾ ಅಧ್ಯಕ್ಷ ಜಾಬೀರ್ ಅರಿಯಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನಾ ಚಟುವಟಿಕೆ ಮಾಡುವ ಯಾತ್ರೆಯಲ್ಲಿದ್ದ ನಮ್ಮ ಕಾರ್ಯಕರ್ತರ ಮೇಲೆ ಯು ಪಿ ಪೊಲೀಸರು ಸುಳ್ಳು ಕೇಸು ದಾಖಲಿಸಿದ್ದಾರೆ. ಆದರೆ ಎರಡು ಕಾರ್ಯಕರ್ತರನ್ನು ಬಂಧಿಸಿದ ಕೂಡಾಲೆ ಪಿಎಫ್ಐ ನಲುಗುವುದಿಲ್ಲ ಎಂದ ಅವರು ಸಂಘಪರಿವಾರ ನಮ್ಮೊಂದಿಗೆ ನೇರವಾಗಿ ಬಂದು ಸೆನಸಾಡಲು ಆಗದಿದ್ದಾಗ ಪೊಲೀಸರನ್ನು ಮುಂದೆ ಬಿಟ್ಟಿದ್ದಾರೆ. ಆದರೆ ನಾವು ಇದಕ್ಕೆ ಜಗ್ಗುವುದಿಲ್ಲ. ನಾವು ಭಯಪಡುವುದು ಸಂವಿಧಾನಕ್ಕೆ ಮಾತ್ರ. ಸಂವಿಧಾನ ಇರುವ ತನಕ ನಮ್ಮ ಹೋರಾಟ ಮಾಡಿಯೇ ಮಾಡುತ್ತೇವೆ. ಸಂಘ ಪರಿವಾರಕ್ಕೆ ಶರಣಾಗುವ ಸಂಗತಿಯೇ ಇಲ್ಲ. ನಾವು ಶರಣಾಗುವುದು ಅಲ್ಲಾಹುನಿಗೆ ಮಾತ್ರ. ಕೇರಳದಲ್ಲಿ ಆರ್ಎಸ್ಎಸ್ ಶಾಖೆಗಳಲ್ಲಿ ಆಯುಧ ಸಂಗ್ರಹ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಪೊಲೀಸರು ಪಿಎಪ್ಐ ಕಚೇರಿಗೆ ಧಾಳಿ ಮಾಡುವ ಬದಲು ಅವರ ಶಾಖೆಗೆ ದಾಳಿ ಮಾಡಿ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಪಿಎಫ್ಐ ಜಿಲ್ಲಾ ಸದಸ್ಯ ಅಜೀಜ್, ಎಮ್.ಎ ರಫಿಕ್, ಎಸ್ಡಿಪಿಐ ಪುತ್ತೂರು ಕಾರ್ಯದರ್ಶಿ ಅಶ್ರಪ್ ಬಾವ, ಉಮ್ಮರ್ ಕೂರ್ನಡ್ಕ, ಎಸ್ಡಿಪಿಐ ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಡ್ಕ, ಜಿಲ್ಲಾ ಕಾರ್ಯದರ್ಶಿ ಮುಸ್ತಾಪ ಪೈಜಾರ್, ಎಸ್ಟಿಡಿಯು ಇದರ ಅಧ್ಯಕ್ಷ ಹಮೀದ್ ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು. ಇಕ್ಬಾಲ್ ಮುರ ಕಾರ್ಯಕ್ರಮ ನಿರೂಪಿಸಿದರು.