ಪುತ್ತೂರು: ಫೆ. ೧೫ ರಂದು ಒಳಮೊಗ್ರು ಗ್ರಾಪಂ ಅಧ್ಯಕ್ಷೀಯ ಚುನಾವಣೆ ನಡೆದಿದೆ. ಕಾಂಗ್ರೆಸ್ ಬೆಂಬಲಿತರು ಬಹುಮತವಿದ್ದರೂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ, ಉಪಾಧ್ಯಕ್ಷ ಪಟ್ಟ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ. ಒಬ್ಬ ಸದಸ್ಯನ ಅಡ್ಡ ಮತದಾನದ ಕಾರಣ ಬಹುಮತವಿದ್ದರೂ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರಾಭವಗೊಂಡಿದ್ದರು. ಇದೆಲ್ಲವೂ ನಡೆದ ಬಳಿಕ ಕಾಂಗ್ರೆಸ್ ನಾಯಕರು ಸುಮ್ಮನಾಗಿದ್ದಾರೆ ಆದರೆ ಕಾರ್ಯಕರ್ತರು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಇದೇ ವಿಚಾರವನ್ನು ಚರ್ಚೆ ಮಾಡುತ್ತಲೇ ಇದ್ದು ಅಡ್ಡ ಮತದಾನ ಮಾಡಿದ ಸದಸ್ಯ ಮತ್ತು ಕುಮ್ಮಕ್ಕು ನೀಡಿದವರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.
ಅಡ್ಡಮತದಾನ ಮಾಡಿದ ಸದಸ್ಯ ಯಾರು ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಅಧ್ಯಕ್ಷೀಯ ಚುನಾವಣೆಯ ಬಳಿಕ ಪಕ್ಷದ ಸ್ಥಳೀಯ ನಾಯಕರು ಈ ವಿಚಾರದಲ್ಲಿ ಕಾರ್ಯಕರ್ತರ ಸಭೆಯನ್ನು ಕರೆದಿಲ್ಲ, ಮತದಾನ ಮಾಡಿದ ಮತ್ತು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡಿದವರನ್ನು ಸಂಪೂರ್ಣವಾಗಿ ಕಡೆಗಣಿಸಿ , ಪಕ್ಷಕ್ಕೆ ದ್ರೋಹ ಮಾಡಿ ಒಬ್ಬ ಸದಸ್ಯ ಬಿಜೆಪಿ ಬೆಂಬಲಿತರಿಗೆ ಅಡ್ಡ ಮತದಾನದ ಮೂಲಕ ಬೆಂಬಲ ನೀಡಿದ್ದರೂ ಅದನ್ನು ಪತ್ತೆ ಹಚ್ಚಲು ನಾಯಕರಿಗೆ ಸಾಧ್ಯವಾಗದೇ ಇರುವುದು ಮತ್ತು ಅಂಥವರ ವಿರುದ್ದ ಶಿಸ್ತು ಕ್ರಮಕೈಗೊಳ್ಳದೇ ಇರುವುದು ಸಾಮಾಜಿಕ ತಾಣದಲ್ಲಿ ಚರ್ಚೆಯ ವಿಷಯವಾಗಿದೆ.
ಅಶ್ರಫ್ ಅಧ್ಯಕ್ಷರಾದರೆ ಏನಾಗುತ್ತದೆ?
೧೫ ಸದಸ್ಯರ ಬಲ ಹೊಂದಿದ್ದ ಒಳಮೊಗ್ರು ಗ್ರಾಪಂ ನಲ್ಲಿ ೭ ಕಾಂಗ್ರೆಸ್ , ಒಂದು ಕಾಂಗ್ರೆಸ್, ಎಸ್ಡಿಪಿಐ ಬೆಂಬಲಿತ ಸದಸ್ಯ ಮತ್ತು ೭ ಮಂದಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು. ಅಧ್ಯಕ್ಷೀಯ ಹುದ್ದೆಗೆ ಒಂದಿಬ್ಬರ ಹೆಸರು ಚಾಲ್ತಿಯಲ್ಲಿತ್ತು. ಕೊನೇ ಗಳಿಗೆಯಲ್ಲಿ ಅಶ್ರಫ್ ಮತ್ತು ಲತೀಫ್ ಕುಂಬ್ರ ಅವರ ಹೆಸರು ಅಂತಿಮವಾಗಿತ್ತು. ಅಧ್ಯಕ್ಷ ಆಯ್ಕೆಗೆ ಕೊನೆ ಗಳಿಗೆಯಲ್ಲಿ ತರ್ಕ ಉಂಟಾದಾಗ ಟಾಸ್ ಮಾಡಲಾಗಿತ್ತು. ಟಾಸ್ ನಲ್ಲಿ ಅಶ್ರಫ್ ಹೆಸರು ಬಂದಿತ್ತು. ಆ ಬಳಿಕ ಅಶ್ರಫ್ ನಾಮಪತ್ರ ಸಲ್ಲಿಸಿದ್ದರು. ಅದೇ ವೇಳೆ ಅಧ್ಯಕ್ಷೀಯ ಹುದ್ದೆಗೆ ಬಿಜೆಪಿ ಬೆಂಬಲಿತ ತ್ರಿವೇಣಿಯವರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆಯಿತು. ಆ ವೇಳೆ ತ್ರಿವೇಣಿಯವರಿಗೆ ೮ ಮತಗಳು ಅಶ್ರಫ್ ಅವರಿಗೆ ೭ ಮತಗಳು ಲಭಿಸಿತ್ತು. ಅಶ್ರಫ್ ರವರು ಅಧ್ಯಕ್ಷರಾಗುವುದನ್ನು ತಪ್ಪಿಸಲು ಒಬ್ಬ ಸದಸ್ಯ ಅಡ್ಡ ಮತದಾನ ಮಾಡಿದ್ದು ಇದರ ಹಿಂದೆ ಕೆಲವರ ಕುಮ್ಮಕ್ಕು ಇರಬಹುದು ಎಂಬ ಚರ್ಚೆ ಸಾಮಾಜಿಕ ತಾಣದಲ್ಲಿ ಆಗುತ್ತಿದೆ.
ಬಯಸದೆ ಬಂದ ಭಾಗ್ಯ: ರಾಜೇಶ್ ರೈ ಪರ್ಪುಂಜ
ಬಿಜೆಪಿ ಬೆಂಬಲಿತ ಏಳು ಮಂದಿ ಸದಸ್ಯರಿದ್ದರು. ಆದರೂ ನಾವು ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದೆವು. ಆದರೆ ಕೊನೇಗಳಿಗೆಯಲ್ಲಿ ನಮ್ಮ ಅಭ್ಯರ್ಥಿ ವಿಜಯಿಯಾಗಿದ್ದಾರೆ. ಇದು ನಮಗೆ ಬಯಸದೆ ಬಂದ ಭಾಗ್ಯವಾಗಿದೆ. ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಾವು ಒಳಮೊಗ್ರು ಗ್ರಾಮವನ್ನು ಅಭಿವೃದ್ದಿ ಮಾಡುತ್ತೇವೆ ಎಂದು ಚುನಾವಣೆ ವೇಳೆ ಗ್ರಾಮಸ್ಥರಿಗೆ ಭರವಸೆ ಕೊಟ್ಟಿದ್ದೇವೆ ಅದೇ ರೀತಿ ಮುಂದಿನ ದಿನಗಳಲ್ಲಿ ಅಭಿವೃದ್ದಿ ಕೆಲಸವನ್ನು ಮಾಡಲಿದ್ದೇವೆ ಎಂದು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಅಭಿಪ್ರಾಯಿಸಿದ್ದಾರೆ.
ಕಾರ್ಯಕರ್ತರಿಗೆ ನೋವಾಗಿದೆ ನಿಜ : ಬಡಗನ್ನೂರು
ಅಡ್ಡ ಮತದಾನ ಪ್ರಕ್ರಿಯೆಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗಿರುವುದು ಕಾರ್ಯಕರ್ತರಿಗೆ ನೋವಾಗಿದೆ. ಮಾ. ೨ ರಂದು ನಾವು ಪಕ್ಷದ ಸಭೆ ಕರೆದಿದ್ದೇವೆ ಅಲ್ಲಿ ಈ ವಿಷಯ ಚರ್ಚೆಗೆ ಬರಬಹುದು ಆ ನಂತರ ಏನು ಮಾಡಲು ಸಾಧ್ಯವೋ ಅದನ್ನು ಮಾಡಲಿದ್ದೇವೆ. ಅಡ್ಡ ಮತದಾನ ಮಾಡಿದವರು ಯಾರೆಂಬುದು ಗೊತ್ತಾಗಲಿಲ್ಲ, ಗೊತ್ತಾದರೆ ಪಕ್ಷ ಕ್ರಮಕೈಗೊಳ್ಳುತ್ತದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ.