ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ಲಾರಿಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ಗುರುವಾರ ನಸುಕಿನ ಜಾವ ನಡೆದಿದೆ.
ಹಾಸನ ಜಿಲ್ಲೆಯ ಆಲೂರು ಸಿಂಗೊಡನಹಳ್ಳಿ ಎಂ.ಎಚ್.ಪುರ ನಿವಾಸಿ ವೆಂಕಟೇಶ್ ಎಂಬವರ ಪುತ್ರ ಚೇತನ್ ಎಂ.ವಿ. (೨೨) ಮೃತಪಟ್ಟ ದುರ್ದೈವಿ. ಈತ ಹಾಸನ ಕಡೆಯಿಂದ ಮಂಗಳೂರಿನತ್ತ ಚಲಾಯಿಸುತ್ತಿದ್ದ ಲಾರಿಗೆ ಗುರುವಾರ ನಸುಕಿನ ಜಾವ ಸುಮಾರು ೨ಗಂಟೆಯ ಸುಮಾರಿಗೆ ಎದುರಿನಿಂದ ಬಂದ ಲಾರಿಯೊಂದು ಕೋಲ್ಪೆ ಎಂಬಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ಸದ್ದು ಕೇಳಿ ಅಲ್ಲಿಗೆ ಬಂದ ಸ್ಥಳೀಯರು ಅಪಘಾತದಿಂದ ಜಖಂಗೊಂಡಿದ್ದ ಲಾರಿಯಲ್ಲಿ ಸಿಲುಕಿಕೊಂಡು ಗಂಭೀರ ಗಾಯಗೊಂಡಿದ್ದ ಚೇತನ್ ಅವರನ್ನು ಪ್ರಯಾಸದಿಂದ ಲಾರಿಯಿಂದ ಹೊರತೆಗೆದು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿ ಅವರು ಕೊನೆಯುಸಿರೆಳೆದರು. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.