HomePage_Banner
HomePage_Banner
HomePage_Banner
HomePage_Banner

ಸರ್ವಧರ್ಮ ಭಾವೈಕ್ಯತೆ ನೆಲೆಬೀಡು, ಕೊಡಗಿನ ಮೆಕ್ಕಾ- ಎಮ್ಮೆಮಾಡು ಸೂಫಿ ಶಹೀದ್, ಹಸನ್ ಸಖಾಫ್ ಮಖಾಂ ಉರೂಸ್

✍️ ಇಬ್ರಾಹಿಂ ಖಲೀಲ್ ಬನ್ನೂರು

ಪುತ್ತೂರು: ಕೊಡಗಿನ ಮೆಕ್ಕಾ ಎಂದೇ ಕರೆಯಲ್ಪಡುವ ಎಮ್ಮೆಮಾಡುವಿನಲ್ಲೀಗ ಪವಾಡ ಪುರುಷ ಸೂಫಿ ಶಹೀದ್, ಹಸನ್ ಸಖಾಫ್ ಹಳ್ರಮಿ ವಲಿಯಲ್ಲಾರವರ ಮಖಾಂ ಉರೂಸ್ ಆರಂಭಗೊಂಡಿದೆ. ಕೊಡಗು ಜಿಲ್ಲೆಯ ಮಡಿಕೇರಿಯಿಂದ ನಾಪೋಕ್ಲು ಮಾರ್ಗವಾಗಿ 32.ಕಿ.ಮೀ ದೂರಲ್ಲಿರುವ ಸೂಫಿ ಶಹೀದ್ ವಲಿಯಲ್ಲಾರವರ ದರ್ಗಾಕ್ಕೆ ಸಹಸ್ರಾರು ಆಸ್ತಿಕರು ಆಗಮಿಸಿ ತಮ್ಮ ತಮ್ಮ ಇಷ್ಟಾರ್ಥ ಪ್ರಾರ್ಥನೆಗಳನ್ನು ಸಲ್ಲಿಸಿ, ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ. ಐತಿಹಾಸಿಕ ತಾಣ, ಸರ್ವಧರ್ಮ ಭಾವೈಕ್ಯದ ನೆಲೆವೀಡಾಗಿ ಎಮ್ಮೆಮಾಡು ಇತಿಹಾಸ ಪ್ರಸಿದ್ಧಿಯನ್ನು ಹೊಂದಿದೆ.


ಇತಿಹಾಸ ಹೇಳುವುದೇನು?: ಸಾಮಾನ್ಯ ಶಕ 7ನೇ ಶತಮಾನದ ಅಂತ್ಯ ಭಾಗ ಹಾಗೂ 8ನೇ ಶತಮಾನದ ಆದಿಯಲ್ಲಿ ಭರತಖಂಡದ ಕಡೆ ತಮ್ಮ ಪ್ರಚಾರದ ಪ್ರಯಾಣವನ್ನು ಆರಂಭಿಸುತ್ತಾರೆ. 1300 ವರ್ಷಗಳ ಹಿಂದೆ ಕೊಡಗಿಗೆ ಆಧ್ಯಾತ್ಮವನ್ನು ಮೈಗೂಡಿಸಿಕೊಂಡ ಸೂಫಿ ಸಂತರು ಆಧ್ಯಾತ್ಮಿಕ ಸಾಧನೆಗಳಿಗಾಗಿ ಬಂದು ಕೊಡಗಿನ ಹಲವಾರು ಭಾಗಗಳಲ್ಲಿ ನೆಲೆ ನಿಲ್ಲುತ್ತಾರೆ. ಅವರಲ್ಲಿ ಬಹುಪಾಲು ಸೂಫಿ ಸಂತರು ತಲಕಾವೇರಿ, ಭಾಗಮಂಡಲ, ಕಕ್ಕಬ್ಬೆ, ಕೊಳಕೇರಿ, ನಾಪೋಕ್ಲು ಮುಂತಾದೆಡೆ ಧ್ಯಾನಾಸಕ್ತರಾಗಿ ತಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಮಗ್ನರಾಗುತ್ತಾರೆ. ಅಂತಹ ಆಧ್ಯಾತ್ಮಿಕ ಸಾಧಕರಲ್ಲಿ ಒಬ್ಬರಾದ ಕೊಡಗಿನ ಎಮ್ಮೆಮಾಡುವಿನಲ್ಲಿ ನೆಲೆಸಿರುವ ಸತ್ಯಸಂದ, ದೈವಭಕ್ತ, ಪವಾಡಪುರುಷ ಸೂಫಿ ಸಯ್ಯದ್ ವಲಿಯುಲ್ಲಾರವರು ಎಂದು ಇತಿಹಾಸ ತಿಳಿಸುತ್ತವೆ.

ಕಾರಣಿಕತೆಗೆ ಸಾಕ್ಷಿಯಾಗಿರುವ ದರ್ಗಾ: ಶಾಂತಿ ಸಂದೇಶವನ್ನು ಸಾರುತ್ತಾ ಸಾಗುತ್ತಿದ್ದ ಸೂಫಿ ಶಹೀದ್ ಸಂತರು ತಮ್ಮ ಜೀವಿತಾವಧಿಯ ಕೊನೆಯ ದಿನಗಳಲ್ಲಿ ಕೊಡಗಿನ ಎಮ್ಮೆಮಾಡಿಗೆ ಬಂದಿದ್ದರು. ತನ್ನ ಅಂತ್ಯ ವಿಶ್ರಾಂತಿಗೆ ಈ ತಾಣವೇ ಸೂಕ್ತವೆಂದು ನಿರ್ಧರಿಸಿದ ಅವರು ಗ್ರಾಮದ ಎಲ್ಲಾ ಜನಾಂಗದವರೊಂದಿಗೆ ಬೆರೆಯುತ್ತಾ ಅವರ ಕಷ್ಟಕಾರ್ಪಣ್ಯಕ್ಕೆ ಸಲಹೆ ನೀಡುತ್ತಾ, ಜನತೆಯಲ್ಲಿ ಸೌಹಾರ್ದತೆಯನ್ನು ಬಿತ್ತುತ್ತಾರೆ. ಸದಾ ದೇವರ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದ ಅವರನ್ನು ಜನ ಪೂಜ್ಯ ಭಾವನೆಯಿಂದ ಕಾಣುತ್ತಿದ್ದರಲ್ಲದೆ, ದೈವಸ್ವರೂಪಿಯಾದ ಅವರಿಗೆ ನಮಸ್ಕರಿಸಿ ಹೋಗುತ್ತಿದ್ದರಂತೆ. ಸೂಫಿ ಶಹೀದ್‌ರವರು ತಮ್ಮ ಬದುಕಿನ ಅಂತಿಮ ದಿನಗಳು ಸಮೀಪಿಸುತ್ತಿದೆ ಎಂಬುವುದು ಗೋಚರವಾಗಿ ಎಮ್ಮೆಮಾಡು ಬಳಿಯ ಬರಾಕೊಲ್ಲಿ ಎಂಬಲ್ಲಿ ಹೆಬ್ಬಂಡೆಯ ಮೇಲೆ ಮಲಗಿದ್ದರಂತೆ. ಬಳಲಿದ್ದ ಅವರನ್ನು ಕಂಡ ಹಸುವೊಂದು ಕಟ್ಟಿಹಾಕಿದ ಹಗ್ಗವನ್ನು ತುಂಡರಿಸಿಕೊಂಡು ಬಂದು ಪಕ್ಕದಲ್ಲೇ ಹರಿದು ಹೋಗುತ್ತಿದ್ದ ತೋಡು(ತೊರೆ)ನ ನೀರಿನಲ್ಲಿ ತನ್ನ ಕೆಚ್ಚಲನ್ನು ಮುಳುಗಿಸಿಕೊಂಡು ಬಂದು ಮಂಡಿಯೂರಿ ಅವರ ಬಾಯಿಗೆ ಹಾಲುಣಿಸಿತಂತೆ. ಇದಕ್ಕೆ ಇಂದಿಗೂ ಬಂಡೆಕಲ್ಲಿನ ಮೇಲೆ ಉಳಿದಿರುವ ಕೆಲವು ಕುರುಹುಗಳು ಸಾಕ್ಷಿಯಾಗಿವೆ. ಅಲ್ಲದೇ ಹಲವು ಕಾರಣಿಕತೆಗೆ ಹೆಸರುವಾಸಿಯಾಗಿದೆ.

ಹರಕೆಯ ರೂಪ: ಸೂಫಿ ಶಹೀದ್ ಸಂತರಿಗೆ ಹಸು ಹಾಲುಣಿಸಿದ ಪವಾಡ ನಡೆದಲ್ಲಿಂದ ಇಲ್ಲಿಯವರೆಗೂ ಎಮ್ಮೆಮಾಡು ದರ್ಗಾದಲ್ಲಿ ಹಸು-ಕರುಗಳಿಗೆ ಉಂಟಾಗುವ ರೋಗರುಜಿನ ಇನ್ನಿತರ ಯಾವುದೇ ತೊಂದರೆಗಳಿದ್ದರೂ ಪರಿಹಾರ ನೀಡುತ್ತಾ ಬರುತ್ತಿರುವುದು ಗಮನಾರ್ಹವಾಗಿದೆ. ಮನೆಯಲ್ಲಿ ಸಾಕಿದ ಹಸು-ಕರುಗಳಿಗೆ ಏನಾದರು ಕಾಯಿಲೆ, ತೊಂದರೆಗಳು ಆದಾಗ ಎಮ್ಮೆಮಾಡು ದರ್ಗಾಕ್ಕೆ ಹರಕೆ ಹೊತ್ತುಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿ ವರ್ಷವೂ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿದ್ದಕ್ಕಾಗಿ ಬೆಳ್ಳಿಯ ಹಸು-ಕರುವಿನ ಪ್ರತಿಕೃತಿ ಹಾಗೂ ತುಪ್ಪ, ನಗದನ್ನು ಹರಕೆಯ ರೂಪದಲ್ಲಿ ಒಪ್ಪಿಸುತ್ತಾರೆ. ಇದುವರೆಗೆ ಕೇವಲ ದನಕರುಗಳ ಸಮಸ್ಯೆಗೆ ಮಾತ್ರವಲ್ಲದೆ, ಮಾನಸಿಕ, ಶಾರೀರಿಕವಾಗಿ ಕೆಲವೊಂದು ತೊಂದರೆಗಳಿಂದ ಬಳಲುತ್ತಿದ್ದವರು ಕೂಡ ಇಲ್ಲಿಗೆ ಸರ್ವಧರ್ಮೀಯರು ಭೇಟಿ ನೀಡಿ ಪರಿಹಾರ ಕಂಡುಕೊಂಡ ಹಲವು ಉದಾಹರಣೆಗಳನ್ನು ಕಾಣಬಹುದು.

ಹಸನ್ ಸಖಾಫ್ ಮಖಾಂ: ಸೂಫಿ ಸಯ್ಯದ್ ವಲಿಯಲ್ಲಾರವರ ಸಂದರ್ಶನ ನಡೆಸಿದ ಸಯ್ಯದ್ ಹಸನ್ ಸಖಾಫ್ ಹಳ್ರಮಿ ತಂಙಳ್‌ರವರು ಕೇರಳದ ಸದೂರಿನವರು. ಸೂಫಿ ಸಯ್ಯದ್ ದರ್ಗಾ ಶರೀಫ್‌ಗೆ ತೆರಳುವ ಬಲಭಾಗದಲ್ಲಿ ಸಯ್ಯದ್ ಹಳ್ರಮಿ ತಂಙಳ್ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಭೂತಪ್ರೇತ ಬಾಧೆಪೀಡಿತ ವ್ಯಕ್ತಿಗಳನ್ನು ಹಳ್ರಮಿ ತಂಙಳ್‌ರವರ ದರ್ಗಾ ಶರೀಫ್‌ಗೆ ಕರೆದೊಯ್ದರೆ ನಿವಾರಣೆಗೊಳ್ಳುತ್ತದೆ ಎಂಬುದು ಈಗಲೂ ನಂಬುತ್ತಾರೆ.

ಇಂದಿನಿಂದ ಉರೂಸ್: ಉರೂಸ್ ಸಮಾರಂಭದಲ್ಲಿ ಫೆ.26ರಂದು ಮಖಾಂ ಝಿಯಾರತ್, ಉರೂಸ್ ಉದ್ಘಾಟನೆ ನಡೆಯಲಿದೆ. ಎಮ್ಮೆಮಾಡು ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನಡೆಸಲಿದ್ದಾರೆ. ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ಉರೂಸ್ ಉದ್ಘಾಟಿಸಲಿದ್ದಾರೆ. ರಾತ್ರಿ ಮತಪ್ರವಚನ ನಡೆಯಲಿದೆ. ಫೆ.27ರಂದು ದಿಕ್ರ್ ಹಲ್ಕಾ, ಫೆ.28ರಂದು ಖತಂ ದುಅ ಮಗ್ರಿಬ್ ಬಳಿಕ, ಮಾ.1ರಂದು ಸಾರ್ವಜನಿಕ ಸಮ್ಮೇಳನ, ಮಾ.3ರಂದು ದುಅ ಮಜ್ಲಿಸ್, ಮಾ.4ರಂದು ಮಗ್ರಿಬ್ ಬಳಿಕ ಸ್ವಲಾತುನ್ನಾರಿಯ ಮಜ್ಲಿಸ್ ಹಾಗೂ ಮಾ.5ರಂದು ಸಮಾರೋಪ ಸಮ್ಮೇಳನ ಜುಮಾ ನಮಾಝ್ ನ ಬಳಿಕ ನಡೆಯಲಿದೆ. ಕೊವೀಡ್ ನಿಯಮಾವಳಿ ಆದೇಶದಂತೆ ಅನ್ನದಾನ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

`ಬರಾಕೊಲ್ಲಿ’ ಬಂಡೆಕಲ್ಲಲ್ಲಿ ಹೆಜ್ಜೆಗುರುತು…
ಸೂಫಿ ಸಯ್ಯದ್ ವಲಿಯಲ್ಲಾರವರಿಗೆ ಮರಣಶಯ್ಯೆಯಲ್ಲಿ ಹಾಲುಣಿಸಿದ ಹಸು ಹಾಗೂ ಕರುವಿನ ಹೆಜ್ಜೆಗುರುತು ಬಂಡೆಕಲ್ಲಿನ ಮೇಲೆ ಅಚ್ಚೊತ್ತಿದಂತೆ ಇದ್ದು, ಈ ದೃಶ್ಯವನ್ನು ಬರಾಕೊಲ್ಲಿ ಬಂಡೆಯ ಮೇಲೆ ಭಕ್ತಾದಿಗಳು ಇಂದಿಗೂ ಕಾಣಬಹುದಾಗಿದೆ. ಹಸು ಹಗ್ಗವನ್ನು ಏಳೆದೊಯ್ದ ಗುರುತು, ಹಸು ಮತ್ತು ಕರುವಿನ ಕಾಲು ಗುರುತುಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸ್ಥಳವು ಎಮ್ಮೆಮಾಡು ದರ್ಗಾ ಶರೀಫ್‌ನಿಂದ ಒಂದೂವರೆ ಕಿ.ಮೀ. ದೂರದಲ್ಲಿದೆ.

  • ಸರ್ವಧರ್ಮೀಯರ ಕಷ್ಟಕಾರ್ಪಣ್ಯಕ್ಕೆ ಪರಿಹಾರ
  • ಹಸು-ಕರುಗಳ ಕಾಯಿಲೆಗೆ ಸೂಫಿ ಶಹೀದರಿಂದ ಶಮನ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.