ಸುಬ್ರಹ್ಮಣ್ಯ: ಆದರ್ಶ ಗ್ರಾಮ ಬಳ್ಪ ಇಂದು ಸಣ್ಣ ಸಣ್ಣ ವಿಷಯಗಳಿಗೆ ಸುದ್ದಿಯಾಗುತ್ತಿದೆ. ಆದರ್ಶ ಗ್ರಾಮದ ಪರಿಕಲ್ಪನೆ ಇಲ್ಲದವರು ಸುದ್ದಿ ಮಾಡುತ್ತಿದ್ದಾರೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಮಾಧ್ಯಮದವರ ಮೇಲೆ ಮಾತಿನ ವಾಗ್ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಬಳ್ಪದಲ್ಲಿ ಬೋಗಾಯನ-ಅಡ್ಡಬೈಲು ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡುವ ಕಾರ್ಯಕ್ರಮದ ಸಭಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಣ್ಣ ವಿಷಯಗಳನ್ನೂ ಮಾದ್ಯಮಗಳಲ್ಲಿ ಬರುವಂತೆ ಮಾಡುತ್ತಾರೆ. ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತಾರದೇ ಮಾದ್ಯಮದವರಿಗೆ ನೀಡುತ್ತಿದ್ದಾರೆ. ಗ್ರಾಮದ ಬಗ್ಗೆ ಟೀಕೆ ಮಾಡಲಾಗುತ್ತದೆ, ಸಾಧ್ಯವಾದರೆ ಟೀಕೆ ಮಾಡುವವರು ಅನುದಾನ ತನ್ನಿ ಎಂದ ಅವರು, ಯಾರಿಗೋ ಮನೆಗೆ ಕರೆಂಟ್ ಇಲ್ಲ ಎಂದಾದಲ್ಲಿ ಸಂಸದ ಜವಬ್ದಾರನಲ್ಲ ಎಂಬುದನ್ನು ಮಾದ್ಯಮದವರು ತಿಳಿದುಕೊಳ್ಳಬೇಕು. ಅದು ನಮ್ಮ ಕೆಲಸವಲ್ಲ ಸ್ಥಳೀಯಾಡಳಿತದ ಕೆಲಸ ಎಂದು ಬಳ್ಪ ಗ್ರಾಮದ ಸಮಸ್ಯೆಗಳ ಬಗ್ಗೆ ಮಾದ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿರುವುದಕ್ಕೆ ಮಾದ್ಯಮದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ. ಸದಸ್ಯರಾದ ಆಶಾತಿಮ್ಮಪ್ಪ, ಹರೀಶ್ ಕಂಜಿಪಿಲಿ, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಗ್ರಾ.ಪಂ.ಅಧ್ಯಕ್ಷೆ ಕುಸುಮಾ ರೈ, ರಾಜ್ಯ ಕ್ಯೂನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಉದ್ಯಮಿ ರೋನ್ರೋಡ್ರಿಗಸ್, ಗುತ್ತಿಗೆದಾದ ಸುಧಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.