HomePage_Banner
HomePage_Banner
HomePage_Banner
HomePage_Banner

ಗೆಜ್ಜೆಗಿರಿ ಶ್ರೀ ಕ್ಷೇತ್ರದಲ್ಲಿ ವೈಭವದ ಜಾತ್ರೋತ್ಸವಕ್ಕೆ ಧ್ವಜಾರೋಹಣ, ತೋರಣ ಮುಹೂರ್ತ

  • ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ, ಸಿಂಗಾರಗೊಂಡಿದೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್

ಪುತ್ತೂರು: ಕಳೆದ ವರ್ಷ ಐತಿಹಾಸಿಕ ಎನ್ನುವ ರೀತಿಯಲ್ಲಿ ಬ್ರಹ್ಮಕಲಶೋತ್ಸವ ಮತ್ತು ನೇಮೊತ್ಸವ ನಡೆದ ಪರಮ ಪಾವನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಮೂಲಸ್ಥಾನದಲ್ಲಿ ಮೊದಲ ವರ್ಷದ ಪ್ರತಿಷ್ಠಾ ವರ್ಧಂತಿಯ ಮಹಾ ಸಂಭ್ರಮ ಆರಂಭಗೊಂಡಿದೆ. ಐದು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಫೆ.೨೬ ರಂದು ಧ್ವಜಾರೋಹಣದ ನೆರವೇರಿಸಲಾಯಿತು.


ಬೆಳಿಗ್ಗೆ ಶ್ರೀ ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ ನೇತೃತ್ವದಲ್ಲಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ಉಪಸ್ಥಿತಿಯಲ್ಲಿ, ಪ್ರಧಾನ ಅರ್ಚಕ ಶಿವಾನಂದ ಶಾಂತಿ ದೇವತಾ ಪ್ರಾರ್ಥನೆ ನಡೆಸಿಕೊಟ್ಟರು. ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಬಲ್ಯೊಟ್ಟು ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಆನುವಂಶಿಕ ಮೊಕ್ತೇಸರರಾದ ಮಾತೃಶ್ರೀ ಲೀಲಾವತಿ ಪೂಜಾರಿ, ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ, ಮಹಾಬಲ ಪೂಜಾರಿ, ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ನೇಮೋತ್ಸವ ಸಮಿತಿಯ ಉಪಾಧ್ಯಕ್ಷ ರವಿ ಕಕ್ಕೆಪದವು, ಪ್ರಕಾಶ್ ಪೂಜಾರಿ ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಉತ್ಸವಾರಂಭದ ಸಂದರ್ಭದಲ್ಲಿ ಪುಣ್ಯಾಹ, ಸ್ಥಳ ಶುದ್ಧಿ, ಶ್ರೀ ಗಣಪತಿ ಹೋಮ, ತೋರಣ ಮುಹೂರ್ತ, ನಾಗ ಸಾನಿಧ್ಯದಲ್ಲಿ ಕ್ಷೀರಾಭಿಷೇಕ, ತಂಬಿಲ ಸೇವೆ ನಡೆಸಲಾಯಿತು. ಕ್ಷೇತ್ರದ ಆದಿದೈವ ಧೂಮಾವತಿ ಸಾನಿಧ್ಯದಲ್ಲಿ ಪ್ರಾರ್ಥನೆ ನೆರವೇರಿಸಿ ಧ್ವಜಾರೋಹಣ ನಡೆಸುವ ಮೂಲಕ ಅಧಿಕೃತವಾಗಿ ಜಾತ್ರೆ ಆರಂಭಗೊಂಡಿತು. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಮಾತ್ರವಲ್ಲದೆ ದೂರದೂರದ ಊರುಗಳಿಂದ ದೇಯಿ ಬೈದ್ಯೆತಿ ಕೋಟಿ ಚೆನ್ನಯರ ಮೂಲಸ್ಥಾನ ಕ್ಷೇತ್ರಕ್ಕೆ ಭಕ್ತರು ಬರಲಾರಂಭಿಸಿದ್ದು, ಅವರಿಗಾಗಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಕ್ಷೇತ್ರದಲ್ಲಿ ಮಾಡಲಾಗಿದೆ.


ಕ್ಷೇತ್ರದಲ್ಲಿ ಸಕಲ ಸಿದ್ಧತೆ, ಸಿಂಗಾರಗೊಂಡಿದೆ ಶ್ರೀ ಕ್ಷೇತ್ರ
ಜಾತ್ರೋತ್ಸವವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆ ಪೂರ್ಣಗೊಂಡಿದೆ. ಧೂಮಾವತಿ, ಕುಪ್ಪೆ ಪಂಜುರ್ಲಿ ಸಾನಿಧ್ಯ, ದೇಯಿ ಬೈದ್ಯೆತಿ ಸತ್ಯ ಧರ್ಮ ಚಾವಡಿಯ ಸುತ್ತ ಸಾಂಪ್ರದಾಯಿಕ ಚಪ್ಪರ ಹಾಕಲಾಗಿದ್ದು, ಎದುರಿನ ವಿಶಾಲ ಮೈದಾನದಲ್ಲಿ ಪೆಂಡಾಲ್ ಹಾಕಲಾಗಿದೆ. ಸತ್ಯಧರ್ಮ ಚಾವಡಿಯ ಎದುರು ಬಲಭಾಗದಲ್ಲಿ ನೇಮೋತ್ಸವಕ್ಕಾಗಿ ಸುಂದರ ಕೊಡಿಯಡಿ ನಿರ್ಮಿಸಲಾಗಿದೆ. ಇದರ ಪಕ್ಕದಲ್ಲಿ ಕೋಟಿ ಚೆನ್ನಯರ ನೇಮೋತ್ಸವಕ್ಕಾಗಿ ಸಾಂಪ್ರದಾಯಿಕ ರಂಗಸ್ಥಳ ನಿರ್ಮಿಸಲಾಗಿದೆ. ಮೂಲಸ್ಥಾನ ಗರಡಿ ಮತ್ತು ಸತ್ಯಧರ್ಮ ಚಾವಡಿ ನಡುವಿನ ವೀರಪಥವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಗರಡಿಯನ್ನೇರುವ ಮೆಟ್ಟಿಲುಗಳನ್ನು ಸುಂದರಗೊಳಿಸಲಾಗಿದೆ. ಶಿಖರಾಗ್ರದ ಮೂಲಸ್ಥಾನ ಗರಡಿ ಸೇರಿದಂತೆ ಎಲ್ಲ ಸಾನಿಧ್ಯಗಳನ್ನು ಪುಷ್ಪಾಲಂಕಾರಗೊಳಿಸಲಾಗಿದ್ದು, ರಾತ್ರಿ ಹೊತ್ತು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಅನ್ನ ಸಂತರ್ಪಣೆಗೆ ಪ್ರತ್ಯೇಕವಾದ ವಿಶಾಲ ಭೋಜನಶಾಲೆ ಮತ್ತು ಪಾಕ ಶಾಲೆ ನಿರ್ಮಿಸಲಾಗಿದ್ದು, ನಿರಂತರ ಅನ್ನದಾನ ನಡೆಯುತ್ತಿದೆ. ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತರ ಅನುಕೂಲಕ್ಕಾಗಿ ಸೇವಾ ಕೌಂಟರ್ ತೆರೆಯಲಾಗಿದೆ.

ಇಂದಿನಿಂದ ನೇಮೋತ್ಸವ ಆರಂಭ/ ಇಂದು ಧೂಮಾವತಿ ದೈವದ ನೇಮೋತ್ಸವ
ಫೆ. ೨೭ ರಿಂದ ನೇಮೋತ್ಸವಗಳು  ಆರಂಭಗೊಳ್ಳಲಿವೆ. ಬೆಳಿಗ್ಗೆ ಆದಿದೈವ ಧೂಮಾವತಿ ನೇಮೋತ್ಸವ ನಡೆಯಲಿದ್ದು, ರಾತ್ರಿ ಕುಪ್ಪೆ ಪಂಜುರ್ಲಿ ನೇಮೋತ್ಸವ ನಡೆಯಲಿದೆ. ಫೆ. ೨೮ ರಂದು ರಾತ್ರಿ ಕಲ್ಲಾಲ್ದಾಯ ಮತ್ತು ಕೊರತಿ ದೈವಗಳ ಕೋಲ ನಡೆಯಲಿದೆ. ಮಾ.೦೧ ರಂದು ರಾತ್ರಿ ಮೂಲಸ್ಥಾನ ಗರಡಿಯಲ್ಲಿ ಕೋಟಿ ಚೆನ್ನಯರ ದರ್ಶನ ಸೇವೆ, ನೇಮೋತ್ಸವ ನಡೆಯಲಿದೆ. ಇದೇ ವೇಳೆ ಮಹಾಮಾತೆ ದೇಯಿ ಬೈದ್ಯೆತಿಯ ದರ್ಶನ ಸೇವೆ, ಮಾತೆ- ಮಕ್ಕಳ ಪುನೀತ ಸಮಾಗಮ ನಡೆಯಲಿದೆ. ಮಾ.೦೨ ರಂದು ಬೆಳಿಗ್ಗೆ ದೇಯಿ ಬೈದ್ಯೆತಿ ನೇಮೋತ್ಸವ ನಡೆದು ಮಧ್ಯಾಹ್ನ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ. ಜಾತ್ರೋತ್ಸವದ ಪ್ರಯುಕ್ತ ನಿತ್ಯ ಅನ್ನಸಂತರ್ಪಣೆ ನಡೆಯಲಿದೆ.

ಚಿತ್ರ: ಆತ್ಮಿ ಸ್ಟುಡಿಯೊ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.