ಪುತ್ತೂರು: ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಇಲಾಖೆಯ ಜಾಗಕ್ಕೆ ಬೇಲಿ ಹಾಕುವ ಪ್ರಕ್ರಿಯೆಗೆ ಇಲಾಖೆ ಮುಂದಾಗಿದ್ದು ಇದರಿಂದ ರೈಲ್ವೇ ನಿಲ್ದಾಣದ ಬಳಿಯ ಅಂಗಡಿ ಮುಂಗಟ್ಟು ಮತ್ತು ಮನೆಯವರಿಗೆ ಹೋಗಲು ದಾರಿ ಇಲ್ಲದ ಪರಿಸ್ಥಿತಿ ಎದುರಾದ ಮತ್ತು ಸ್ಥಳಿಯರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ ಘಟನೆ ಫೆ.೨೭ ರಂದು ನಡೆದಿದೆ.
ಸ್ಥಳಕ್ಕೆ ನಗರಸಭೆ ಸ್ಥಳೀಯ ಸದಸ್ಯ ಶಕ್ತಿ ಸಿನ್ಹ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಹಲವಾರು ಮಂದಿ ಸ್ಥಳಕ್ಕೆ ಆಗಮಿಸಿ ಬೇಲಿ ಹಾಕಲು ಬಂದವರನ್ನು ತರಾಟೆಗೆತ್ತಿಗೊಂಡರು. ಇದೆ ಸಂದರ್ಭದಲ್ಲಿ ಶಾಸಕರು, ಸಂಸದರು, ರೈಲ್ವೇ ಇಲಾಖೆ ಅಧಿಕಾರಿಗಳಿಗೆ ಪ್ರತಿಭಟನಾ ಕಾರರು ಪೋನ್ ಮಾಡಿ ಕಾಮಗಾರಿಯನ್ನು ನಿಲ್ಲಿಸಿದ ಘಟನೆ ನಡೆಯಿತು. ಕೊನೆಗೆ ಬೇಲಿ ಹಾಕಲು ಬಂದ ಗುತ್ತಿಗೆದಾರರು ಮತ್ತು ಕಾರ್ಮಿಕರು ಬಂದ ದಾರಿಗೆ ಹೊರಟು ಹೋದರು.ಘಟನೆಗೆ ಸಂಬಂಧಿಸಿ ಗುತ್ತಿಗೆದಾರ ಶಿವ ಕುಮಾರ್ ಅವರು ಕಾಮಗಾರಿ ಮಾಡುವುದಿಲ್ಲ ಎಂದು ಪ್ರತಿಭಟನಾ ಕಾರರಲ್ಲಿ ತಿಳಿಸಿ ತನ್ನ ಕಾರ್ಮಿಕರನ್ನು ಕರೆದೊಯ್ದರು.ಸುಮಾರು ೧೦೦ ಕ್ಕೂ ಅಧಿಕ ಮಂದಿ ಜಮಾಯಿಸಿದರೂ ರೈಲ್ವೇ ಇಂಜಿನಿಯರ್ ಮಾತ್ರ ಸ್ಥಳಕ್ಕೆ ಆಗಮಿಸಿಲ್ಲ.