ಒಡಿಯೂರು ಶ್ರೀಗಳ ಷಷ್ಟಬ್ಧ ಪ್ರಯುಕ್ತ ಕಡಬದಲ್ಲಿ ರಕ್ತದಾನ ಶಿಬಿರ
ರಕ್ತದಾನ ಮಹತ್ವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ : ರಾಜೇಶ್ವರಿ ಕನ್ಯಾಮಂಗಲ
ಕಡಬ: ರಕ್ತದಾನ ಮಾಡುವುದು ಶ್ರೇಷ್ಟವಾಗಿದ್ದು ರಕ್ತದಾನದ ಬಗ್ಗೆ ಸಮಾಜದಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕಡಬ ತಾ.ಪಂ.ನ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರು ಹೇಳಿದರು.
ಅವರು ಫೆ.28ರಂದು ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಕಾರ್ಯಕ್ರಮದ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಡಬ ವಲಯ, ಕಡಬ ತಾಲೂಕು ಒಡಿಯೂರು ಶ್ರೀ ಷಷ್ಟ್ಯಬ್ಧ ಆಚರಣ ಸಮಿತಿ, ಒಡಿಯೂರು ಶ್ರೀ ಸೇವಾ ಬಳಗ ಕಡಬ, ಕಡಬ ಸಮುದಾಯ ಆರೋಗ್ಯ ಕೇಂದ್ರ, ಮಂಗಳೂರಿನ ವೆನ್ಲಾಕ್ ಜಿಲ್ಲಾ ಅಸ್ಪತ್ರೆಯ ರಕ್ತನಿಧಿ ಕೇಂದ್ರದ ಹಾಗೂ ಸಹಯೋಗದೊಂದಿಗೆ ಜರಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಕ್ತದಾನದ ಮಹತ್ವದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಹೆಚ್ಚಿನ ಒತ್ತು ನೀಡಬೇಕು, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬೇಕು. ರಕ್ತದಾನ ಎನ್ನುವುದು ಜೀವದಾನಕ್ಕೆ ಸಮನಾದ ಪುಣ್ಯಕಾರ್ಯ ಎಂದು ಅವರು ಹೇಳಿದರು.
ಒಡಿಯೂರು ಶ್ರೀ ಷಷ್ಟ್ಯಬ್ಧ ಆಚರಣ ಕೇಂದ್ರ ಸಮಿತಿಯ ಕಾರ್ಯದಶರ್ಿ ಯಶಂವಂತ ವಿಟ್ಲ ಅವರು ಮಾತನಾಡಿ, ಒಡಿಯೂರು ಕ್ಷೇತ್ರದಿಂದ ನಡೆಸಲ್ಪಡುತ್ತಿರುವ ಸಮಾಜಮುಖಿ ಸೇವಾ ಕಾರ್ಯಗಳು, ಷಷ್ಟ್ಯಬ್ಧ ಆಚರಣ ಸಮಿತಿಯ ನೇತೃತ್ವದಲ್ಲಿ ವಿವಿದೆಡೆ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮಂಗಳೂರಿನ ವೆನ್ಲಾಕ್ ಜಿಲ್ಲಾ ಅಸ್ಪತ್ರೆಯ ರಕ್ತನಿಧಿ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಆ್ಯಂಟನಿ ಅವರು ಮಾತನಾಡಿ ರಕ್ತದಾನದ ಮಹತ್ವ ಹಾಗೂ ಅದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು. ವೆನ್ಲಾಕ್ ಜಿಲ್ಲಾ ಅಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ| ಅಭಿಷೇಕ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಯಶೋಧರ ಸಾಲಿಯಾನ್, ಕಡಬ ಸಮುದಾಯ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ| ಅನುಷಾ, ಕಡಬ ಒಡಿಯೂರು ಶ್ರೀ ಸೇವಾ ಬಳಗದ ಕಾರ್ಯದರ್ಶಿ ಸೀತಾರಾಮ ಗೌಡ ಎ. ಉಪಸ್ಥಿತರಿದ್ದರು. ಅಕಾಲಿಕವಾಗಿ ನಿಧನ ಹೊಂದಿದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸ್ವ ಸಹಾಯ ಸಂಘದ ಸದಸ್ಯ ಫಲಾನುಭವಿಗೆ ಮಂಜೂರಾದ ವಿಮಾ ಪರಿಹಾರದ ಚೆಕ್ನ್ನು ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಕಡಬ ತಾಲೂಕು ಒಡಿಯೂರು ಶ್ರೀ ಷಷ್ಟ್ಯಬ್ಧ ಆಚರಣ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅವರು ಸ್ವಾಗತಿಸಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ನಿರ್ದೇಶಕ ಕಿರಣ್ ಊರ್ವ ಪ್ರಸ್ತಾವನೆಗೈದರು. ಪತ್ರಕರ್ತ ನಾಗರಾಜ್ ಎನ್.ಕೆ. ನಿರೂಪಿಸಿ, ಒಡಿಯೂರು ಶ್ರೀ ವಿವಿದ್ದೋದ್ದೇಶ ಸಹಕಾರ ಸಂಘದ ನಿರ್ಧೆಶಕ ಸೋಮಪ್ಪ ನಾಯ್ಕ್ ಕಡಬ ವಂದಿಸಿದರು.