- ಕೇರಳದ ಪೊಲೀಸರಿಗೆ ತನಿಖೆಯಲ್ಲಿ ಬಯಲು
- ಒರ್ವನ ಸೆರೆ-ಇನ್ನಿಬ್ಬರ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು
- ಚಾಕು, ಅಡವಿಟ್ಟ ಬಂಗಾರ ಪೊಲೀಸರ ವಶಕ್ಕೆ
ಕಾಣಿಯೂರು: ಕೇರಳ ರಾಜ್ಯದ ಮೂಲದ ತಂಡವೊಂದು ದರೋಡೆಗೈದ ಚಿನ್ನಾಭರಣವನ್ನು ಕಡಬ ತಾಲೂಕಿನ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಡವಿರಿಸಿವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರ ತಂಡ ಚಾರ್ವಾಕ ಸಿ.ಎ ಬ್ಯಾಂಕಿಗೆ ಮಾ ೨ರಂದು ಆಗಮಿಸಿ ತನಿಖೆ ನಡೆಸಿದೆ.
ಕಾಣಿಯೂರಿನಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದ ಮೂವರು ಈ ಕೃತ್ಯ ಎಸಗಿದ್ದು, ಓರ್ವ ಆರೋಪಿ ಸೆರೆಯಾಗಿದ್ದಾನೆ. ಈತನನ್ನು ಕೇರಳ ಪೊಲೀಸರು ಬ್ಯಾಂಕಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಘಟನೆ ವಿವರ
ಕೇರಳ ಮೂಲದ ರಾಜೀವ್ , ಉನ್ಮೇಶ್ ಹಾಗೂ ಜೋಬಿ ಎಂಬವವರು ಕಾಣಿಯೂರಿನಲ್ಲಿ ವಾಸ್ತವ್ಯ ಹೂಡಿ ರಬ್ಬರ್ ಟ್ಯಾಪಿಂಗ್ ನಡೆಸುತ್ತ, ಪರಂಗಿಹಣ್ಣು ವ್ಯಾಪರವೂ ನಡೆಸುತ್ತಿದ್ದರು ಎನ್ನಲಾಗಿದೆ. ಫೆ.೧೧ ರಂದು ಈ ಮೂವರು ಕಡಬದಲ್ಲಿ ಪರಂಗಿ ಹಣ್ಣು ವ್ಯಾಪಾರದ ಬಗ್ಗೆ ಮಾತುಕತೆ ನಡೆಸಲು ಕೇರಳದಿಂದ ಬಾಡಿಗೆ ಕಾರು ಗೊತ್ತು ಪಡಿಸಿಕೊಂಡು ಸುಳ್ಯ ರಸ್ತೆಯಾಗಿ ಕಡಬಕ್ಕೆ ಆಗಮಿಸಿದ್ದರು. ರಾತ್ರಿ ವಾಪಸ್ಸಾದಾಗ ಕಡಬದಿಂದ ಸುಮಾರು ಒಂದು ಕಿಮೀ ದೂರಕ್ಕೆ ತಲುಪುವಷ್ಟರಲ್ಲಿ ಕಾರು ಚಾಲಕ ಕೇರಳ ಮೂಲದ ಸ್ರೀರಾಜ್ ಎಂಬವವರಿಗೆ ಚಾಕು ತೋರಿಸಿ ಸುಮಾರು ೩ ಸಾವಿರ ನಗದು ಮತ್ತು ಚಿನ್ನದ ಉಂಗರವನ್ನು ದರೋಡೆಗೈದು ಪರಾರಿಯಾಗಿದ್ದರು. ಘಟನೆ ಬಗ್ಗೆ ಚಾಲಕ ಕೇರಳದ ಕಣ್ಣೂರು ಜಿಲ್ಲೆಯ ಅಲಕ್ಕೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆ ಸಂಬಂಧ ಕೇರಳ ಪೊಲೀಸರು ರಾಜೀವ್ ಎಂಬವನನ್ನು ಬಂಧಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಂತೆಯೇ ಬೆಳ್ಳಾರೆ ಪೊಲೀಸರ ಸಹಾಯದೊಂದಿಗೆ ಚಾರ್ವಾಕ ಸಿ ಎ ಬ್ಯಾಂಕಿಗೆ ಆಗಮಿಸಿ ತನಿಖೆ ನಡೆಸಿದರು. ದರೋಡೆಗೈದ ಚಿನ್ನದ ಉಂಗರವನ್ನು ಆರೋಪಿ ಉನ್ಮೇಶ್ ಹೆಸರಿನಲ್ಲಿ ಫೆ.೧೨ ರಂದು ಬ್ಯಾಂಕಿನಲ್ಲಿ ಅಡವಿಟ್ಟಿರುವುದು ತನಿಖೆ ವೇಳೆ ಬಯಲಾಗಿದೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ತನಿಖೆ ಸಂದರ್ಭ ಬ್ಯಾಂಕಿನ ಹಿಂಭಾಗದಲ್ಲಿ ಚಾಕು ಪತ್ತೆಯಾಗಿದ್ದು, ಚಾಕು ಹಾಗೂ ಅಡವಿಟ್ಟ ಬಂಗಾರ, ದಾಖಲೆ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದರು. ಅಲಕ್ಕೋಡು ಪೊಲೀಸ್ ಠಾಣಾಧಿಕಾರಿ ರಂಜಿತ್ ಎಂ. ಕೆ ನೇತೃತ್ವದ ಪೊಲೀಸ್ ತನಿಖಾ ತಂಡಕ್ಕೆ ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ಅಂಜನೇಯ ರೆಡ್ಡಿ ಮತ್ತು ಸಿಬ್ಬಂದಿಗಳು ಸಹಕರಿಸಿದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಆಶೋಕ್ ಬ್ಯಾಂಕಿನ ಬಗೆಗಿನ ಪೂರಕ ಮಾಹಿತಿ ನೀಡಿದರು. ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಮೇಲ್ಮನೆ, ನಿರ್ದೇಶಕರಾದ ಧರ್ಮೇಂದ್ರ ಗೌಡ ಕಟ್ಟಾತ್ತಾರು, ಅನಂತ ಬೈಲಂಗಡಿ ಮೊದಲಾದವರು ಇದ್ದರು.