ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ 22 ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂಸ್ಥಾಪಣಾ ದಿನವನ್ನು ಟೈಲರ್ಸ್ ಡೇಯನ್ನಾಗಿ ಆಚರಿಸುವ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಮಾ.7ರಂದು ಪುತ್ತೂರು ಕ್ಷೇತ್ರ ಸಮಿತಿಯಿಂದ ಟೈಲರ್ಸ್ ಡೇ ಆಚರಣೆ ಮತ್ತು 12 ಮಂದಿ ಅಶಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಪುತ್ತೂರು ಸಮಿತಿ ಅಧ್ಯಕ್ಷ ಜಯರಾಮ ಬಿ.ಎನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವು ದರ್ಬೆಯಲ್ಲಿರುವ ಸಣ್ಣ ಕೈಗಾರಿಕಾ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ ನಡೆಯಲಿದ್ದು, ಶಾಸಕ ಸಂಜೀವ ಮಠಂದೂರು ಹೊಲಿಗೆ ಯಂತ್ರ ವಿತರಣೆ ಮಾಡಲಿದ್ದಾರೆ. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ದೇವಾ ಟ್ರೇಡರ್ಸ್ನ ಪಾಲುದಾರರು ಮತ್ತು ಸಿಡ್ಕೋ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಟಿ.ವಿ.ರವೀಂದ್ರನ್ ಸೇರಿದಂತೆ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ ಅವರು ನಮ್ಮ ಸಂಘವು ವೃತ್ತಿ ಬಾಂಧವರನ್ನು ಸಂಘಟಿಸುವುದರೊಂದಿಗೆ ಸರಕಾರದ ಮುಂದೆ ಹಲವು ರೀತಿಯ ಹೋರಾಟ ಮಾಡಿ ಕೆಲವೊಂದು ಸೌಲಭ್ಯಗಳನ್ನು ಪಡೆಯಲು ಯಶಸ್ವಿಯಾಗಿದೆ. ಮಾನವೀಯ ನೆಲೆಯಲ್ಲಿ ಸಮಾಜಕ್ಕೆ ಸಹಾಯ ಹಸ್ತವನ್ನು ಚಾಚುವ ಕೆಲಸ ಮಾಡಲಾಗಿದೆ. ಈ ವರ್ಷ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಟೈಲರ್ಸ್ ಎಸೋಸಿಯೇಶನ್ನ ಸಂಸ್ಥಾಪನಾ ದಿನವನ್ನು ಟೈಲರ್ಸ್ ಡೇ ಎಂದು ಆಚರಿಸುವ ಸಂದರ್ಭದಲ್ಲಿ ಮಹಿಳಾ ಸಬಲೀಕರಣಕ್ಕೆ ಮತ್ತು ಸ್ವಾವಲಂಬನೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಟೈಲರಿಂಗ್ ವೃತ್ತಿಯನ್ನು ಕಲಿತು ಯಂತ್ರವನ್ನು ಖರೀದಿಸಲು ಅಶಕ್ತರಾಗಿರುವ ಹೊಲಿಗೆ ವೃತ್ತಿ ಬಾಂಧವರನ್ನು ಸಂಘದ ವಲಯ ಸಮಿತಿಗಳ ಮೂಲಕ ಗುರುತಿ ಜನಪ್ರತಿನಿಧಿಗಳು ಮತ್ತು ದಾನಿಗಳ ಸಹಕಾರದೊಂದಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಗುವುದು. ನಮ್ಮ ಕೋರಿಗೆಗೆ ಶಾಸಕ ಸಂಜೀವ ಮಠಂದೂರು 10, ದೇವಾ ಟ್ರೇಡರ್ಸ್ನ ಟಿ.ವಿ.ರವೀಂದ್ರನ್ ಮತ್ತು ನಮ್ಮ ಸಂಘದ ವತಿಯಿಂದ ತಲಾ ಒಂದು ಹೊಲಿಗೆ ಯಂತ್ರವನ್ನು ಕೊಡುಗೆಯಾಗಿ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಟಿಎ ರಾಜ್ಯ ಸಮಿತಿ ಆಂತರಿಕ ಲೆಕ್ಕಪರಿಶೋಧಕ ರಘುನಾಥ ಬಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಂತ ಕೆ, ಪುತ್ತೂರು ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಉಮಾ ಯು ನಾಕ್ ಉಪಸ್ಥಿತರಿದ್ದರು.
ತಾಲೂಕಿನಲ್ಲಿ 750ಕ್ಕೂ ಮಿಕ್ಕಿ ಸದಸ್ಯರು
ಪುತ್ತೂರು ತಾಲೂಕಿಗೆ ಸಂಬಂಧಿಸಿ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ನಿಂದ ವಿಧಾನಸಭಾ ಕ್ಷೇತ್ರವನ್ನು ಮುಂದಿಟ್ಟು ಕೊಂಡು 9 ವಲಯಗಳನ್ನು ಮಾಡಲಾಗಿದ್ದು, ಪುತ್ತೂರು ನಗರ, ಉಪ್ಪಿನಂಗಡಿ, ಕುಂಬ್ರ, ನರಿಮೊಗರು, ಸವಣೂರು, ಕಾಣಿಯೂರು, ಈಶ್ವರಮಂಗಲ, ಪುಣಚ, ಪಾಣಾಜೆ ಸೇರಿ ಒಟ್ಟು ತಾಲೂಕಿನಲ್ಲಿ ಹಿರಿಯರು ಮತ್ತು ಕಿರಿಯರು ಸೇರಿ 750ಕ್ಕೂ ಹೆಚ್ಚು ಮಂದಿ ಸಂಘದ ಸದಸ್ಯರಿದ್ದಾರೆ. ಇದರಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಸರಕಾರದ ಸೌಲಭ್ಯ ಸಿಗುತ್ತಿಲ್ಲ. ಹಾಗೆಂದು ಅವರು ಸಂಘದ ಸದಸ್ಯತ್ವ ಪಡೆದು ಕೊಂಡಿದ್ದಾರೆ. ಅಂತಹ ಸದಸ್ಯರಿಗೆ ಆರೋಗ್ಯ ಸೇರಿದಂತೆ ಇತರ ಸಮಸ್ಯೆ ಎದುರಾದಾಗ ಅವರಿಗೆ ಸಂಘ ಸ್ಪಂಧನೆ ನೀಡಿ ಸಹಕಾರ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಜಯರಾಮ್ ಬಿ.ಎನ್ ಮಾಹಿತಿ ನೀಡಿದರು.