HomePage_Banner
HomePage_Banner
HomePage_Banner
HomePage_Banner

ಕುಂಬ್ರ: ಒಳಮೊಗರು ಗ್ರಾಮ ಕಾಂಗ್ರೆಸ್ ಕಾರ್ಯಕರ್ತರ ಸಭೆ | ಪಕ್ಷಕ್ಕೆ ದ್ರೋಹ ಮಾಡಿದವರನ್ನು ಪಕ್ಷದಿಂದ ತಕ್ಷಣ ಉಚ್ಛಾಟಿಸಿ: ಕಾರ್ಯಕರ್ತರ ಆಗ್ರಹ

  • ಸಭೆಯಲ್ಲಿ ನಿರ್ಣಯ ಮಾಡಿ ಕಳಿಸಿ ತಕ್ಷಣ ಕ್ರಮಕೈಗೊಳ್ಳಲಿದ್ದೇವೆ: ಶಕುಂತಳಾ ಶೆಟ್ಟಿ

ಪುತ್ತೂರು: ಒಳಮೊಗ್ರು ಗ್ರಾಮ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಮಾ.3ರಂದು ಪರ್ಪುಂಜ ವಿರಾಮದ ಮನೆಯ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಗ್ರಾಪಂ ಚುನಾವಣೆಯ ವೇಳೆ ಪಕ್ಷಕ್ಕಾಗಿ ಕೆಲಸ ಮಾಡಿದ , ಮತದಾರನ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಪರ ಪ್ರಚಾರ ಮಾಡಿದ ಕಾರ್ಯಕರ್ತರಿಗೆ ಸಭೆಯಲ್ಲಿ ಕೃತಜ್ಞತೆಯನ್ನು ಸಲ್ಲಿಸಲಾಯಿತು.

ಪಕ್ಷಕ್ಕೆ ದ್ರೋಹ ಮಾಡಿದವರನ್ನು ಉಚ್ಛಾಟಿಸಿ
ಗ್ರಾಪಂ ಚುನಾವಣೆಯಲ್ಲಿ ಏಳು ಮಂದಿ ಕಾಂಗ್ರೆಸ್ ಸದಸ್ಯರು ಚುನಾಯಿತರಾಗಿದ್ದರೂ ಅಧ್ಯಕ್ಷರ ಆಯ್ಕೆ ವೇಳೆ ಅಡ್ಡಮತದಾನ ಮಾಡಿದ ಕಾರಣ ಕಾಂಗ್ರೆಸ್ ಗೆ ಪಂಚಾಯತ್ ಅಧಿಕಾರ ತಪ್ಪುವಂತಾಯಿತು. ಅಡ್ಡಮತದಾನ ಮಾಡಿದ ಕಾಂಗ್ರೆಸ್ ಸದಸ್ಯ ಮತ್ತು ಅವರಿಗೆ ಕುಮ್ಮಕ್ಕು ನೀಡಿದವರನ್ನು ತಕ್ಷಣ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತಿವಾಯಿತು. ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ನಾವು ಆಹೋರಾತ್ರಿ ಕೆಲಸ ಮಾಡಿದ್ದೇವೆ, ಮನೆ ಮನೆಗೆ ಭೇಟಿ ನೀಡಿ ಮತ ಕೇಳಿದ್ದೇವೆ ಆದರೆ ಗದ್ದ ಬಳಿಕ ಹಣದ ಆಸೆಗಾಗಿ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಬೆಂಬಲಿತರಿಗೆ ಬೆಂಬಲ ನೀಡಿದ್ದಾರೆ ಎಂದು ಕಾರ್ಯಕರ್ತರು ನಾಯಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಶೋಕ್ ಬೊಳ್ಳಾಡಿ ಮಹಮ್ಮದ್ ಮೈದಾನಿಮೂಲೆ ಮತ್ತು ನಾಸಿರುದ್ದೀನ್ ರವರು ಅಧ್ಯಕ್ಷರ ಆಯ್ಕೆ ವೇಳೆ ಅಡ್ಡ ಮತದಾನ ಮಾಡಿದ್ದು ಲತೀಫ್ ಕುಂಬ್ರ ಅವರಿಗೆ ಕುಮ್ಮಕ್ಕು ನೀಡಿದವರು ಮಾಜಿ ಗ್ರಾಪಂ ಅಧ್ಯಕ್ಷ ಅರಿಯಡ್ಕ ಅಬ್ದುಲ್‌ರಹಿಮಾನ್ ಎಂದು ಆರೋಪಿಸಿದರು. ಈ ವೇಳೆ ಸಭೆಯಲ್ಲಿದ್ದ ಕಾರ್ಯಕರ್ತರೆಲ್ಲರೂ ಒಕ್ಕೊರಳಿನಿಂದ ಇವರಿಬ್ಬರನ್ನೂ ತಕ್ಷಣ ಉಚ್ಚಾಟಿಸಬೇಕು ಈ ತೀರ್ಮಾನ ಸಭೆಯಲ್ಲೇ ಆಗಲಿ ಎಂದು ಆಗ್ರಹಿಸಿದರು. ಐದಾರು ಬಾರಿ ಪಕ್ಷದ ಚಿಹ್ನೆಯಡಿ ಗೆದ್ದು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿ ಉನ್ನತ ಸ್ಥಾನವನ್ನು ಪಡೆದು ಕೊಂಡವರು ಪಂಚಾಯತ್ ಅಧ್ಯಕ್ಷರ ಆಯ್ಕೆ ವೇಳೆ ಅಡ್ಡ ಮತದಾನ ಮಾಡುವಂತೆ ಸದಸ್ಯರೋರ್ವರಿಗೆ ಕುಮ್ಮಕ್ಕು ನೀಡಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಅವರಿನ್ನು ಪಕ್ಷಕ್ಕೆ ನಾಲಾಯಕ್ ಎಂದು ಹೇಳಿದರು. ನಾವೇ ಬೆಳೆಸಿದವರು ನಮಗೆ ದ್ರೋಹ ಮಾಡಿ ಉಂಡ ಮನೆಗೆ ದ್ರೋಹ ಬಗೆದವರನ್ನು ಜನ ಇನ್ನು ನಂಬುವುದಿಲ್ಲ ಎಂದು ಸಭೆಯಲ್ಲಿದ್ದ ಕಾರ್ಯಕರ್ತರು ಅಭಿಪ್ರಾಯಿಸಿದರು.

ಕಾರ್ಯಕರ್ತ ಮಹಮ್ಮದ್ ಬೊಳ್ಳಾಡಿ ಮಾತನಾಡಿ ಪಕ್ಷಕ್ಕಾಗಿ ನಾನು ೩೦ ವರ್ಷಗಳಿಂದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ, ಯಾವುದೇ ಸ್ಥಾನ ಮಾನವನ್ನು ಕೇಳಿಲ್ಲ, ಕೇಳುವುದೂ ಇಲ್ಲ ಆದರೆ ನಾನೆಂದೂ ಪಕ್ಷಕ್ಕೆ ದ್ರೋಹ ಮಾಡಿಲ್ಲ. ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿಯವರನ್ನು ಬೆಳೆಸಿದ್ದು ಕಾಂಗ್ರೆಸ್ ಆದರೆ ಅವರೇ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಪಕ್ಷ ಅವರನ್ನು ತಕ್ಷಣವೇ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು. ದುಡ್ಡಿನ ಆಸೆಗಾಗಿ ಅಡ್ಡ ಮತದಾನ ಮಾಡಿದ್ದಾರೆ. ಪಕ್ಷ ಮುಖ್ಯವೋ , ಹಣ ಮುಖ್ಯವೋ ಎಂಬುದನ್ನು ಅವರು ಆಲೋಚನೆ ಮಾಡಬೇಕಿತ್ತು. ತನಗೆ ಎಲ್ಲವನ್ನೂ ನೀಡಿದ ಪಕ್ಷಕ್ಕೆ ದ್ರೋಹ ಮಾಡಲು ಅವರಿಬ್ಬರಿಗೆ ಮನಸ್ಸಾದರೂ ಹೇಗೆ ಬಂತು ಎಂದು ಪ್ರಶ್ನಿಸಿದರು. ನಾಯಕರು ಸಭೆಯಲ್ಲಿ ನಮ್ಮ ಮಾತು ಕೇಳಿ ಹೋದರೆ ಸಾಲದು ಅವರ ವಿರುದ್ದ ಕ್ರಮಕೈಗೊಳ್ಳದೇ ಇದ್ದರೆ ಪಕ್ಷದಲ್ಲಿ ನಾವಿರುವುದಿಲ್ಲ ನಾವು ಬೇಕೋ ದ್ರೋಹ ಮಾಡಿದವರು ಬೇಕೋ ಎಂಬುದನ್ನು ನಾಯಕರೇ ತೀರ್ಮಾನಿಸಿ ಎಂದು ಹೇಳಿದರು.

ಹೆಂಗಸರನ್ನು ಜಾಗೃತೆ ಮಾಡಿ…!
ಗ್ರಾಪಂ ಅಧ್ಯಕ್ಷರ ಆಯ್ಕೆ ವೇಳೆ ಬಿಜೆಪಿಗೆ ಯಾರಾದರೂ ಅಡ್ಡಮತದಾನ ಮಾಡಬಹುದು ಎಚ್ಚರ ಇರಲಿ ಎಂದು ದ್ರೋಹ ಮಾಡಿದವರು ಹೇಳಿದ್ದರು. ನನಗೆ ಮಲೆಯಾಳಂ ಭಷೆ ಗೊತ್ತಿದೆ. ಅವರು ಹೇಳಿದ್ದು ನನಗೆ ಅರ್ಥವಾಗಿದೆ, ಮಹಿಳೆಯರ ಮೇಲೆ ಅವರಿಗೆ ವಿಶ್ವಾಸ ಇರಲಿಲ್ಲ, ನಾವು ಯಾರೂ ಅಡ್ಡ ಮತದಾನ ಮಾಡಿಲ್ಲ, ಹಾಗೆ ಹೇಳಿದವರೇ ಪಕ್ಷದ ಪುರುಷ ಸದಸ್ಯನ ಮೂಲಕ ಅಡ್ಡಮತದಾನ ಮಾಡಿಸಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಗ್ರಾಪಂ ಉಪಾಧ್ಯಕ್ಷೆ ಸುಂದರಿ ಆರೋಪಿಸಿದರು.

ಸಭೆಯಲ್ಲೇ ನಿರ್ಣಯ ಮಾಡಿ ಉಚ್ಛಾಟಿಸುವ : ಶಂಕುಂತಳಾ ಶೆಟ್ಟಿ
ಇಂದಿನ ಸಭೆಯಲ್ಲೇ ಕಾರ್ಯಕರ್ತರು ಸೇರಿ ದ್ರೋಹ ಮಾಡಿದವರನ್ನು ಉಚ್ಚಾಟಿಸುವ ನಿರ್ಣಯವನ್ನು ಕೈಗೊಳ್ಳಿ ಈ ನಿರ್ಣಯವನ್ನು ಪಕ್ಷದ ಮುಖಂಡರಿಗೆ ತಲುಪಿಸುವ ಕೆಲಸ ನಾವು ಮಾಡುತ್ತೇವೆ ಅಂಥವರನ್ನು ಪಕ್ಷದಿಂದ ಉಚ್ಚಾಟಿಸಲೇಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.ಕಾರ್ಯಕರ್ತರಿಗೆ ದ್ರೋಹ ಮಾಡಿ ಅವರು ಹೇಗೆ ಜನರಿಗೆ ಮುಖ ತೋರಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಹಣದ ಆಸೆಗೆ ಎಂಥಾ ನೀಚ ಕೆಲಸಕ್ಕೂ ಕೈ ಹಾಕುತ್ತಾರೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ, ಬಿಜೆಪಿ ಬೆಂಬಲಿಸಿದವರು ಹಿಂದುತ್ವಕ್ಕೆ ಓಟು ಕೇಳಲಿ ಅದು ಕೇಳ್ತಾರ ಎಂದು ಶಾಸಕಿ ಪ್ರಶ್ನಿಸಿದರು. ಇಂದಿನ ಸಭೆಗೆ ಬಂದಿಲ್ಲ, ಕಳ್ಳರಾದ ಕಾರಣ ಸಭೆಗೆ ಬಂದಿಲ್ಲ. ಕಳ್ಳರಿಗೆ ಬರಲು ಧೈರ್ಯವಿಲ್ಲ ಎಂದು ಶಾಸಕಿ ಕುಟುಕಿದರು. ಒಳಮೊಗ್ರು ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಲು ನಾನೇ ಕಾರಣ ಎಂದು ಬಹಿರಂಗವಾಗಿ ಹೇಳಿಕೊಳ್ಳಲಿ ಎಂದು ಸವಾಲು ಹಾಕಿದರು. ಶೆಟ್ರುಗಳು ಮೋಸ ಮಾಡಿದ್ದಾರೆ ಎಂದು ಅಬ್ದುಲ್‌ರಹಿಮಾನ್ ಅಪಪ್ರಚಾರ ಮಾಡಿದ್ದಾರೆ ಆದರೆ ಶೆಟ್ರುಗಳು ಮೋಸ ಮಾಡಿಲ್ಲ, ಶೆಟ್ರುಗಳು ಮೋಸ ಮಾಡುವ ಕೆಲಸವನ್ನು ಮಾಡುವವರಾಗಿರುತ್ತಿದ್ದರೆ ಈ ಹಿಂದೆ ಅವರು ಅಧ್ಯಕ್ಷರಾಗುತ್ತಿರಲಿಲ್ಲ ಎಂದು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ ಹೇಳಿದರು.

ನೈಟಿ ಹಾಕಿ ತಿರುಗಾಡಲಿ
ಪಕ್ಷಕ್ಕೆ ದ್ರೋಹ ಮಾಡಿ , ಅಡ್ಡಮತದಾನ ಮಾಡಿ ಕಾರ್ಯಕರ್ತರ ಮನಸ್ಸಿಗೆ ನೋವು ಮಾಡಿದವರು ನೈಟಿ ಹಾಕಿ ರಸ್ತೆಯಲ್ಲಿ ತಿರುಗಾಡಲಿ. ಅವರು ಅದಕ್ಕೆ ಸೀಮಿತ ಎಂದು ಅಶೋಕ್ ಬೊಳ್ಳಾಡಿ ಹೇಳಿದರು. ಪಕ್ಷದ ಕಾರ್ಯಕರ್ತರು ದ್ರೋಹ ಮಾಡಿದವರನ್ನು ಈ ಮೊದಲು ನಾಯಕನಂತೆ ಕಂಡಿದ್ದರು. ಆದರೆ ತನ್ನನ್ನು ಬೆಳಸಿದವರಿಗೆ ಮೋಸ ಮಾಡುವ ಪ್ರವೃತ್ತಿ ಜನ ಮಾತ್ರವಲ್ಲ ದೇವರು ಕೂಡಾ ಮೆಚ್ಚುವುದಿಲ್ಲ. ದ್ರೋಹ ಮಾಡಿದವರು ಅದರ ಫಲವನ್ನು ಅನುಭವಿಸಲಿದ್ದಾರೆ ಎಂದು ಮಹಮ್ಮದ್ ಮೈದಾನಿಮೂಲೆ ಹೇಳಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ವಿಶ್ವನಾಥ ರೈ ಎಂ ಬಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್, ಕಾಂಗ್ರೆಸ್ ವಕ್ತಾರ ಕುಂಬ್ರ ದುರ್ಗಾಪ್ರಸಾದ್ ರೈ, ಗ್ರಾಪಂ ಸದಸ್ಯರುಗಳಾದ ಅಶ್ರಫ್ ಯು ಕೆ ಉಜಿರೋಡಿ, ಬಿ ಸಿ ಚಿತ್ರ, ಕೆ ಶಾರದಾ, ಶೀನಪ್ಪ ನಾಯ್ಕ, ಮಾಜಿ ಸದಸ್ಯ ಶಶಿಕಿರಣ್ ನೂಜಿ ಬೈಲು,ರಕ್ಷಿತ್ ರೈ ಮುಗೇರು, ಹಾರಿಸ್ ಉಜಿರೋಡಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಕೆ.ಪಿ ಹಸನ್, ಮಹಮ್ಮದ್ ಕಡ್ತಿಮಾರ್, ಇಬ್ರಾಹಿಂ ಕಡ್ತಿಮಾರ್,ಪಳ್ಳಿಕುಂಞಿ ಕಡ್ತಿಮಾರ್, ಸಂಶು ಕುಂಬ್ರ, ಸಲಾಂ ಕುಂಬ್ರ, ಲೆತೀಫ್ ಕೆ ಚ್ ಕುಂಬ್ರ, ಆಚಿ ಕುಂಬ್ರ,ಮಹಮ್ಮದ್ ಡಿಂಬ್ರಿ, ಹುಕ್ರ, ಚೆನ್ನ ಉರುವ,ಇಲ್ಯಾಸ್ ಅಲೆಂಬಾಡಿ, ಫಾರೂಕ್ ಮಗಿರೆ,ಎಂ ಟಿ ಲತೀಫ್, ರಾಝಿಕ್ ಕುಂಬ್ರ, ಸಿರಾಜು ಕೊಯಿಲತ್ತಡ್ಕ, ರಹಿಮಾನ್ ಕೆ ಎಚ್, ಸಾದಿಕ್ ಯು ಕೆ, ಕಬೀರ್ ಮೈದಾನಿಮೂಲೆ, ರಫೀಕ್ ಯು ಕೆ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.