ಪುತ್ತೂರು: ಅರ್ಲಪದವು ಸಮೀಪ ಕಡಮ್ಮಾಜೆಯಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ವೇಳೆ ಮಣ್ಣಿನಡಿಗೆ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಾ.4ರಂದು ಬೆಳಿಗ್ಗೆ ನಡೆದಿದೆ.
ಕಡಮ್ಮಾಜೆ ಹಾಜಿ ಅಬ್ದುಲ್ಲಾ ರವರಿಗೆ ಸೇರಿದ ಕೋಳಿ ಫಾರ್ಮ್ನ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಜೆಸಿಬಿ ಮೂಲಕ ಹೊಂಡ ತೆಗೆಯುವ ಕೆಲಸ ನಡೆಸಲಾಗುತ್ತಿತ್ತು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಾದ ಪಾರ್ಪಳ್ಳ ನಿವಾಸಿಗಳಾದ ಬಾಬು ಮತ್ತು ರವಿ ಎಂಬವರು ಅಕಸ್ಮಾತ್ ಹೊಂಡದ ಒಳಗೆ ಬಿದ್ದಿದ್ದಾರೆ. ಬಳಿಕ ಇವರ ಮೇಲೇಯೇ ಮಣ್ಣು ಕೂಡ ಕುಸಿದು ಬಿದ್ದ ಪರಿಣಾಮವಾಗಿ ಮಣ್ಣಿನಡಿ ಸಿಲುಕಿ ಈರ್ವರೂ ಮೃತಪಟ್ಟಿದ್ದಾರೆ.
ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಬಾಬು ಮತ್ತು ರವಿ ಎಂಬವರ ಮೃತದೇಹವನ್ನು ಪುತ್ತೂರು ಅಗ್ನಿಶಾಮಕದಳ ಹಾಗೂ ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದಾರೆ. ಸ್ಥಳೀಯರು ಸಹಕಾರ ನೀಡಿದ್ದಾರೆ. ಆರಂಭದಲ್ಲಿ ಜೆಸಿಬಿಯ ಮೂಲಕ ಮಣ್ಣಿನ ಗುಡ್ಡೆಯನ್ನು ತೆರವು ಮಾಡಲಾಯಿತು. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡುಯ್ಯಲಾಗಿದೆ.

