ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಪ್ರಕಾಶ್ ಬದಿನಾರುರವರ ನಾಮಪತ್ರ ತಿರಸ್ಕರಿಸಿದ್ದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕೆ.ರಾಮಚಂದ್ರ ಪೂಜಾರಿ ಶಾಂತಿನಗರವರು ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ ಮಾರ್ಚ್ ೪ರಂದು ಚುನಾವಣಾ ತಕರಾರು ದಾವೆ ದಾಖಲಾಗಿದೆ.
ಜಯಪ್ರಕಾಶ್ ಬದಿನಾರುರವರು ಅರ್ಜಿದಾರರಾಗಿದ್ದು ಚುನಾವಣಾಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮತ್ತು ಗ್ರಾ.ಪಂ. ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರರವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಜಯಪ್ರಕಾಶ್ ಬದಿನಾರು ಪರ ವಕೀಲರಾದ ಬೆಟ್ಟ ಪಿ. ಈಶ್ವರ ಭಟ್, ಅನೀಶ್ಕೃಷ್ಣ ಬೆಟ್ಟ ಮತ್ತು ಚಿದಾನಂದ ರೈ ಕೋಡಿಂಬಾಡಿರವರು ವಾದಿಸುತ್ತಿದ್ದಾರೆ.
ಕೋರ್ಟ್ನಲ್ಲಿ ತಕರಾರು ದಾವೆ ಸಲ್ಲಿಕೆ:
ಕೋಡಿಂಬಾಡಿ ಗ್ರಾಮ ಪಂಚಾಯತ್ನ ೧೧ ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತ ಸದಸ್ಯರಾಗಿ ಕೋಡಿಂಬಾಡಿ ವಾರ್ಡ್ ೨ರಿಂದ ವಿಶ್ವನಾಥ ಕೃಷ್ಣಗಿರಿ, ಬೆಳ್ಳಿಪ್ಪಾಡಿ ವಾರ್ಡ್ ೧ರಿಂದ ರಾಮಣ್ಣ ಗೌಡ ಗುಂಡೋಳೆ, ಉಷಾ ಲಕ್ಷ್ಮಣ ಪೂಜಾರಿ ಕೋರ್ಯ, ಪುಷ್ಪಾ ಲೋಕಯ್ಯ ನಾಯ್ಕ ಕಠಾರ, ಬೆಳ್ಳಿಪ್ಪಾಡಿ ವಾರ್ಡ್ ೨ರಿಂದ ರಾಮಚಂದ್ರ ಪೂಜಾರಿ ಶಾಂತಿನಗರ, ಮೋಹಿನಿ ಜನಾರ್ದನ ಗೌಡ ಕೋಡಿರವರು ಚುನಾಯಿತರಾಗಿದ್ದರು. ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಕೋಡಿಂಬಾಡಿ ವಾರ್ಡ್ ೧ರಿಂದ ಜಗನ್ನಾಥ ಶೆಟ್ಟಿ ನಡುಮನೆ, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಗೀತಾ ಕೋಡಿ ಮೋನಡ್ಕ, ಕೋಡಿಂಬಾಡಿ ವಾರ್ಡ್ ೨ರಿಂದ ಜಯಪ್ರಕಾಶ್ ಬದಿನಾರು ಮತ್ತು ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲುರವರು ಆಯ್ಕೆಯಾಗಿದ್ದರು. ಬಳಿಕ ಅಧ್ಯಕ್ಷ ಸ್ಥಾನ `ಹಿಂದುಳಿದ ವರ್ಗ ಎ’ಗೆ ಮತ್ತು ಉಪಾಧ್ಯಕ್ಷ ಸ್ಥಾನ `ಸಾಮಾನ್ಯ ಮಹಿಳೆ’ಗೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ರಾಮಚಂದ್ರ ಪೂಜಾರಿ ಮತ್ತು ಕಾಂಗ್ರೆಸ್ ಬೆಂಬಲಿತ ಜಯಪ್ರಕಾಶ್ ಬದಿನಾರುರವರು ನಾಮಪತ್ರ ಸಲ್ಲಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಉಷಾ ಲಕ್ಷ್ಮಣ ಪೂಜಾರಿ ಮತ್ತು ಕಾಂಗ್ರೆಸ್ ಬೆಂಬಲಿತ ಪೂರ್ಣಿಮಾ ಯತೀಶ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜಯಪ್ರಕಾಶ್ ಬದಿನಾರುರವರ ನಾಮಪತ್ರವನ್ನು ಚುನಾವಣಾಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.ರವರು ತಿರಸ್ಕರಿಸಿದ್ದರು. ಉಪಾಧ್ಯಕ್ಷ ಸ್ಥಾನದಲ್ಲಿ ೬ ಮತ ಪಡೆದ ಉಷಾ ಲಕ್ಷ್ಮಣ ಪೂಜಾರಿಯವರು ವಿಜೇತರಾಗಿದ್ದು ೫ ಮತ ಪಡೆದಿದ್ದ ಪೂರ್ಣಿಮಾ ಯತೀಶ್ ಶೆಟ್ಟಿ ಪರಾಜಿತರಾಗಿದ್ದರು. ಜಯಪ್ರಕಾಶ್ ಬದಿನಾರುರವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ವೇಳೆ ತಾನು `ಹಿಂದುಳಿದ ವರ್ಗ ಎ’ಗೆ ಸೇರಿದವರೆಂದು ನೀಡಿದ ಜಾತಿ ಪ್ರಮಾಣ ಪತ್ರದಲ್ಲಿ ಚುನಾವಣೆ ಬಗ್ಗೆ ನೀಡಲಾಗಿರುವ ಪ್ರಮಾಣ ಪತ್ರ ಎಂಬ ಸ್ಪಷ್ಟತೆ ಇಲ್ಲ ಎಂಬ ಕಾರಣಕ್ಕೆ ನಾಮಪತ್ರ ತಿರಸ್ಕರಿಸಿರುವುದಾಗಿ ತಿಳಿಸಿದ್ದರು. ಚುನಾವಣಾಧಿಕಾರಿಯವರ ಈ ನಡೆಯನ್ನು ಪ್ರಶ್ನಿಸಿ ಜಯಪ್ರಕಾಶ್ ಬದಿನಾರುರವರು ಚುನಾವಣಾಧಿಕಾರಿಯವರು ಕಾನೂನು ಉಲ್ಲಂಘಿಸಿ ಈ ಕ್ರಮ ಕೈಗೊಂಡಿದ್ದಾರೆ ಎಂಬ ಕಾರಣ ನೀಡಿ ಪುತ್ತೂರಿನ ಸಿವಿಲ್ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ದಾವೆ ಸಲ್ಲಿಸಿದ್ದಾರೆ. ನ್ಯಾಯಾಧೀಶ ಮಂಜುನಾಥರವರು ತಕರಾರು ಅರ್ಜಿಯನ್ನು ವಿಚಾರಣೆಗಾಗಿ ಅಂಗೀಕರಿಸಿದ್ದಾರೆ. ಮುಂದೆ ಪ್ರತಿವಾದಿಗಳಿಗೆ ನ್ಯಾಯಾಲಯದಿಂದ ನೊಟೀಸ್ ಜಾರಿಯಾಗಲಿದ್ದು ವಾದ-ಪ್ರತಿವಾದ ನಡೆಯಲಿದೆ.