ಪುತ್ತೂರು: ಬನ್ನೂರು ಪರಿಸರದ ಗುತ್ತುಮನೆತನದ ಸುದೇಶ್ ಪೂಂಜಾ ಅವರ ಜಾಗದಲ್ಲಿ ೧೯೮೫ರಲ್ಲಿ ನಿರ್ಮಾಣಗೊಂಡಿರುವ ಶಿಲಾಮಯ ವಿಗ್ರಹ ಇರುವ ಶ್ರೀ ಮಹಾಲಕ್ಷ್ಮೀ ಮಂದಿರ ಜೀರ್ಣೋದ್ಧಾರದ ಕಾರ್ಯ ಭರದಿಂದ ನಡೆದು ಇದೀಗ ಒಂದು ಹಂತಕ್ಕೆ ತಲುಪಿದ್ದು ಮುಂದೆ ಬ್ರಹ್ಮಕಲಶದ ಕುರಿತು ಊರವರ ಸಮ್ಮುಖದಲ್ಲಿ ಮಾ.4ರಂದು ಶ್ರೀ ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಅವರ ಅಧ್ಯಕ್ಷತೆಯಲ್ಲಿ ಸಂಜೆ ಸಮಾಲೋಚನಾ ಸಭೆ ನಡೆಯಿತು.
ಕಳೆದ ವರ್ಷ ೨೦೨೦ನೇ ಮಾ.೧೯ರಂದು ಕೆಮ್ಮಿಂಜೆ ಬ್ರಹ್ಮಶ್ರೀ ವೇ.ಮೂ ಸುಬ್ರಹ್ಮಣ್ಯ ಬಳ್ಳಕುರಾಯ ಅವರ ನೇತೃತ್ವದಲ್ಲಿ ಅನುಜ್ಞಾ ಕಲಶ ನಡೆದು ಸರಿ ಸುಮಾರು ಒಂದು ವರ್ಷ ಪೂರ್ತಿ ಆಗುವ ಮೊದಲೇ ಜೀರ್ಣೋದ್ಧಾರ ಕಾರ್ಯಗಳು ಶೇ.೯೦ ಪೂರ್ಣಗೊಂಡಿದ್ದು, ಮುಂದಿನ ದಿನ ಸಣ್ಣ ಪುಟ್ಟ ಕಾಮಗಾರಿಗಳು ನಡೆಸುವ ಮತ್ತು ಮುಂದೆ ಮಂದಿರದ ಬ್ರಹ್ಮಕಲಶೋತ್ಸವದ ಕುರಿತು ಊರವರ ಸಮ್ಮುಖದಲ್ಲಿ ಮಂದಿರದ ವಠಾರದಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು. ಶ್ರೀ ಶಿವಪಾರ್ವತಿ ಮಂದಿರ ಅಧ್ಯಕ್ಷ ವಿಶ್ವನಾಥ ಗೌಡ ಅವರು ಜೀರ್ಣೋದ್ಧಾರ ಕಾರ್ಯದಲ್ಲಿ ದಾನಿಗಳಿಂದ ಬಂದ ವಸ್ತು ರೂಪ ಮತ್ತು ನಗದು ರೂಪದಲ್ಲಿ ಬಂದಿರುವ ದೇಣಿಗೆ, ಇಲ್ಲಿನ ತನಕ ಆಗಿರುವ ಕಾಮಗಾರಿಗಳ ಕುರಿತು ವಿವರಣೆ ನೀಡಿದರು. ಮುಂದೆ ದೈವಜ್ಞರ ಸೂಚನೆಯಂತೆ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ ಪಡಿಸಲಾಗುವುದು. ಅದ್ದೂರಿಯ ಕಾರ್ಯಕ್ರಮದ ಬದಲು ಸಂಪ್ರದಾಯಕ್ಕೆ ಅಡ್ಡಿಯಾಗದಂತೆ ವೈದಿಕ ವಿಧಿ ವಿಧಾನಗಳ ಮೂಲಕ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ಹೇಳಿದರು. ಶ್ರೀ ಶಿವಪಾರ್ವತಿ ಮಂದಿರದ ಕೋಶಾಧಿಕಾರಿ ಮೋಹನ್ ಜೈನ್, ಚಂದ್ರಶೇಖರ್, ಮಾಜಿ ಅಧ್ಯಕ್ಷ ಉದಯ ಕುಮಾರ್, ನಾರಾಯಣ ಆಚಾರ್ಯ, ಮಲ್ಲೇಶ ಆಚಾರ್ಯ, ರಾಜು ಪೂಜಾರಿ, ಸೀತಾರಾಮ ರೈ, ಚಂದ್ರಹಾಸ ಪೂಜಾರಿ, ರತ್ನಾಕರ ರೈ ಸೇರಿದಂತೆ ನೂರಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.