ಪುತ್ತೂರಿನಲ್ಲಿ ಬೃಹತ್ ಹಿಂದು ಐಕ್ಯತಾ ಸಮಾವೇಶ – ಸಾಗರೋಪದಿಯಲ್ಲಿ ಸೇರಿದ ಹಿಂದು ಬಂಧುಗಳಿಂದ ಜೈಕಾರದ ಘೋಷಣೆ

  • ಹಿಂದು ಘೋಷಣೆ ಅಲ್ಲ-ಹಿಂದು ಆಚರಣೆ-ಜಗದೀಶ್ ಕಾರಂತ್
  • ನೀನ್ ತಾಂಟ್ರೆ ಬಾ ತಾಂಟ್ ಸವಾಲು- ರವೀಶ ತಂತ್ರಿ
  • ರಾಮ ಮಂದಿರ ಉಳಿಯಲು ರಾಮ ರಾಜ್ಯದ ಕನಸು ನನಸಾಗಬೇಕು-ಪೇಜಾವರ ಶ್ರೀ
  • ಧರ್ಮಕ್ಕೆ ಚ್ಯುತಿಯಾದರೆ ನಾವೆಲ್ಲ ಒಂದು-ಒಡಿಯೂರು ಶ್ರೀ
  • ನಮ್ಮೊಳಗಿನ ಆಕ್ರಮಣ ನಿಲ್ಲಿಸುವ ಅಗತ್ಯವಿದೆ- ಮಾಣಿಲ ಶ್ರೀ
  • ಹೋರಾಟದ ಕಾರ್ಯಕ್ರಮವಲ್ಲ – ರಾಜಶೇಖರಾನಂದ ಸ್ವಾಮೀಜಿ
  • ಪುತ್ತೂರಿನಲ್ಲಿ ಹಿಂದುತ್ವದ ಗಂಗೆ ಹರಿಯುತ್ತಿದೆ – ಮುಕ್ತಾನಂದ ಸ್ವಾಮೀಜಿ
  • ಹಿಂದುತ್ವದ ಬೆಳಕು ಪಜ್ಞೆಯ ಬೆಳಕಾಗಲಿ – ಮಹಾಬಲ ಸ್ವಾಮೀಜಿ

ಪುತ್ತೂರು:ಸಮಾಜವನ್ನು ಕಾಯುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.ಈ ನಿಟ್ಟಿನಲ್ಲಿ ಹಿಂದು ಅನ್ನುವುದು ಕೇವಲ ಘೋಷಣೆ ಅಲ್ಲ. ಹಿಂದು ಅನ್ನುವುದು ಆಚರಣೆ ಆಗಬೇಕು. ಅದಕ್ಕೆ ಹಿಂದು ಸಮಾಜ ಬದ್ಧವಾಗಬೇಕು ಎಂದು ಹಿಂದು ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು.

ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಮಾ.೨೧ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆದ ಬೃಹತ್ ಹಿಂದೂ ಐಕ್ಯತಾ ಸಮಾವೇಶದ ಧರ್ಮಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಕಲಿಯುಗದಲ್ಲಿ ಭಗವಂತನ ಅವತಾರ ಇಲ್ಲ ಎಂದು ಸಾಕ್ಷಾತ್ ಭಗವಂತನೇ ಸಾರಿ ಹೇಳಿದಾಗ ಸಂಘಟಿತ ಶಕ್ತಿಯೇ ಧರ್ಮವನ್ನು ರಕ್ಷಿಸಬೇಕು.ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ.

ಹಾಗೆಯೇ ಸಮಾಜವನ್ನು ನಾವು ರಕ್ಷಿಸಿದರೆ ಸಮಾಜ ನಮ್ಮನ್ನು ರಕ್ಷಿಸುತ್ತದೆ.ರಾಷ್ಟ್ರವನ್ನು ನಾವು ಉಳಿಸಿದರೆ ರಾಷ್ಟ್ರ ನಮ್ಮನ್ನು ಉಳಿಸುತ್ತದೆ.ಈ ಮೂರು ಮಂತ್ರಗಳಿಗೆ ಬದ್ಧರಾಗಿ ಅದಕ್ಕೆ ತಕ್ಕಂತೆ ಬದುಕನ್ನು ರೂಪಿಸುವ ಸಂಕಲ್ಪವನ್ನು ಈ ಸಮಾವೇಶದಲ್ಲಿ ಕೈಗೊಂಡದ್ದೇ ಆದರೆ ಈ ಸಮಾವೇಶ ಅರ್ಥಗರ್ಭಿತವಾದೀತು ಮತ್ತು ಸಫಲವಾದೀತು ಎಂದವರು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಬಲ ಜಾತಿಗಳನ್ನೇ ಶಕ್ತಿಗಳನ್ನಾಗಿ ಎತ್ತಿ ಕಟ್ಟುವ ಕುತಂತ್ರ ಇವತ್ತು ತಿಳಿದಿದೆ.ಜಾತಿ ಅಭಿಮಾನ ತಪ್ಪಲ್ಲ. ಆದರೆ ದುರಭಿಮಾನ ತಪ್ಪು, ನಮ್ಮ ನಮ್ಮಲ್ಲಿ ಸಾಮರಸ್ಯ, ಸಮನ್ವಯ, ಇದನ್ನು ಸಾಧಿಸುವುದು ನಮ್ಮ ನಿತ್ಯದ ವ್ಯವಹಾರದ ಭಾಗವಾಗಬೇಕು.ನಾವೆಲ್ಲ ಹಿಂದು ನಾವೆಲ್ಲ ಒಂದು ಎಂಬ ಘೋಷಣೆ ಆಗಬಾರದು. ಅದು ಆಚರಣೆ ಆಗಬೇಕು. ದೋಷಗಳನ್ನು ಕಿತ್ತು ಎಸೆಯಬೇಕು ಎಂದ ಅವರು ಡಿಜೆ ಹಳ್ಳಿ, ಕೆಜೆ ಹಳ್ಳಿ, ಮಂಗಳೂರು ಸಿಎಎ ಪ್ರತಿಭಟನೆ, ಪಾದರಾಯನಪುರ, ಸಾದಿಕ್‌ಪಾಲ್ಯ, ಬೂಪಸಂದ್ರದ ಗಲಭೆಗಳು ನಿನ್ನೆಯ ತನಕ ಮಾತ್ರ ಆಗಿತ್ತು.ನಾಳೆಗೆ ಅಲ್ಲ.ಅಕಸ್ಮಾತ್ ತಮ್ಮ ಬೇಡಿಕೆ ಇಟ್ಟು ಯುದ್ದವನ್ನು ಸಮಾಜದ ವಿರುದ್ಧ ಸಾರಿದ್ದೇ ಆದರೆ ಅದು ಪುತ್ತೂರಿನಲ್ಲಿ ಅಥವಾ ಇತರ ಕಡೆಯಲ್ಲೂ ಆಗಬಹುದು.ಆದರೆ ಅದುವೇ ಫಸ್ಟ್ ಮತ್ತು ಲಾಸ್ಟ್ ಆಗಬೇಕು.ಭಾರತ ಒಂದು ಧರ್ಮ ಛತ್ರ ಅಲ್ಲ.ಹಿಂದೂ ಸಮಾಜ ಒಂದು ಫುಟ್‌ಬಾಲ್ ಅಲ್ಲ.ಒದ್ದವನ ಕಾಲು ಅಲ್ಲಿಯೇ ಮುರಿಯಬೇಕು ಎನ್ನುವ ಕಬ್ಬಿಣದ ತುಂಡು ಹಿಂದೂ ಸಮಾಜ ಆಗಬೇಕು.ಯಾವುದೇ ಒಂದು ಹೋರಾಟ ರಸ್ತೆಗೆ ಇಳಿದರೆ ಇದರ ಹಿಂದೆ ಯಾರಿದ್ದಾರೆ ಎಂಬ ಯೋಚನೆ ಮಾಡಿ.ಸತ್ಯವನ್ನು ಬೆಂಬಲಿಸಿ ದುಷ್ಟತೆಯನ್ನು ಮುಗಿಸಿ ಬಿಡಿ.ಸಾಮಾಜಿಕ ಶಕ್ತಿಯೇ ಧರ್ಮವನ್ನು ಉಳಿಸಬೇಕು ಎಂದು ಜಗದೀಶ್ ಕಾರಂತ ಹೇಳಿದರು.

 

ಹಿಂದೂ ಭಾವನೆಗಳನ್ನು ಕೆಣಕಿದರೆ ‘ನೀನ್ ತಾಂಟ್ರೆ ಬಾ ತಾಂಟ್ ಸವಾಲು : ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೂ ಸಮಾಜದ ವಿರುದ್ಧ ಮಾತನಾಡುವವರು ವೇದಿಕೆಯಲ್ಲಿ ಬೊಗಳಿದ್ರೆ ಸಾಲದು ಅದನ್ನು ಅನುಷ್ಠಾನಕ್ಕೆ ತರುವ ತಾಕತ್ತುಬೇಕು. ಇವತ್ತು ಎಲ್ಲವನ್ನು ಹಿಂದೂ ಸಮಾಜ ಸಹಿಸಿದೆ.ಮುಂದೆ ನಮ್ಮ ಭಾವನೆಗಳನ್ನು ಕೆಣಕಿದರೆ, ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದರೆ ನಿಮಗೆ ಮಾತ್ರ ಗೊತ್ತಿರುವುದಲ್ಲ. ನಮಗೂ ಗೊತ್ತಿದೆ.’ನೀನ್ ತಾಂಟ್ರೆ ಬಾ ತಾಂಟ್ ಎಂದು ಸವಾಲು ಹಾಕಿದರು.

ಕುಹಕ ದಾರಿಗಳಿಂದ ಹಿಂದೂ ಹೆಣ್ಣು ಮಕ್ಕಳನ್ನು ಪೊನ್ನಾನಿಗೆ ಕರೆದುಕೊಂಡು ಹೋಗಿ ಮತಾಂತರ ಕೇಂದ್ರದಲ್ಲಿ ಇರಿಸಿ ಅಲ್ಲಿ ಮತಾಂತರಗೊಳಿಸುವಿಕೆಗೆ ಪ್ರಯತ್ನಿಸುವಾಗ ಅಲ್ಲಿಂದಲೇ ವಾಪಾಸು ಕರೆದುಕೊಂಡು ಬಂದಂತಹ ಗಂಡು ಮಕ್ಕಳಿಗೆ ಪುತ್ತೂರಿನ ಮಣ್ಣಿನಲ್ಲಿ ಗಟ್ಟಿಯಾಗಿ ಮಾತನಾಡಲು ದಮ್ಮಿದೆ ಎಂದು ಸಾರಿ ಸಾರಿ ಹೇಳುತ್ತೇನೆ ಎಂದು, ಸಮಾವೇಶದ ಲೈವ್ ಕಾರ್ಯಕ್ರಮದಲ್ಲಿ ಬಂದ ಸವಾಲಿನ ಸಂದೇಶಕ್ಕೆ ಅವರು ಎದುರುತ್ತರ ನೀಡಿದರು.

ರಾಮ ಮಂದಿರ ಉಳಿಯಲು ರಾಮ ರಾಜ್ಯದ ಕನಸು ನನಸಾಗಬೇಕು: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ ರಾಮ ಮಂದಿರ ನಿರ್ಮಾಣ ಮಾಡೋದು ಒಂದು ಕಾಲದಲ್ಲಿ ಬಹಳ ದೊಡ್ಡ ಕೆಲಸ ಆಗಿತ್ತು.ಆದರೆ ಇವತ್ತು ರಾಮ ಭಕ್ತರು ರಾಮಮಂದಿರ ನಿರ್ಮಾಣ ದೊಡ್ಡ ಕೆಲಸ ಅಲ್ಲ ಎಂದು ತೀರ್ಮಾನ ಮಾಡಿದ್ದಾರೆ.ಆ ಮಂದಿರ ಮಂದಿರವಾಗಿಯೇ ಉಳಿಯಬೇಕಾದರೆ ರಾಮ ರಾಜ್ಯದ ಕನಸು ನನಸಾಗಬೇಕು.ರಾವಣನ ರಾಜ್ಯದಲ್ಲಿ ರಾಮ ಮಂದಿರ ಸಾಧ್ಯವಿಲ್ಲ.

ರಾಜರ ಆಳ್ವಿಕೆಯಿಂದ ಪ್ರಜಾ ಆಳ್ವಿಕೆಯಲ್ಲಿ ರಾಮ ರಾಜ್ಯದ ಕನಸು ನನಸಾಗಬೇಕಾದರೆ ಪ್ರಜೆಗಳೆಲ್ಲರೂ ರಾಮ ರಾಗಬೇಕಾಗುತ್ತದೆ.ಶ್ರೀರಾಮಚಂದ್ರ ತೋರಿದ ಆದರ್ಶದಂತೆ ರಾಮ ಅಂದರೆ ಒಬ್ಬ ವ್ಯಕ್ತಿಯಲ್ಲ.ಸದ್ಗುಣಗಳ ರಾಶಿ, ಸಂಸ್ಕೃತಿಯ ಪ್ರತೀಕ ಎಂದರು.ರಾಮ ತೋರಿದ ಆದರ್ಶವನ್ನು ನಮ್ಮ ಮುಂದಿನ ಪೀಳಿಗೆಯಲ್ಲಿ ಬಿತ್ತಿಲ್ಲ ಎಂದಾದರೆ ರಾಮ ರಾಜ್ಯ ಆಗುವುದಿಲ್ಲ.ಈ ನಿಟ್ಟಿನಲ್ಲಿ ಮಕ್ಕಳು ರಾಮನಾಗಬೇಕು ಎಂದ ಶ್ರೀಗಳು,ರಾಮ ನವಮಿಯಂದು ನಮ್ಮ ಮಕ್ಕಳಿಗೆ ರಾಮನ, ಸೀತೆಯ ವೇಷ ಧರಿಸಿ.ಮಕ್ಕಳಲ್ಲಿ ರಾಮನನ್ನು ಕಾಣೋಣ, ಮಾತೆಯರು ಕೌಶಲ್ಯ, ಶಬರೀಯರಾಗೋಣ ಎಂದರು. ನಮ್ಮ ಸಂಸ್ಕೃತಿಯನ್ನು ಮಕ್ಕಳಲ್ಲಿ ಬಿತ್ತಿ ಬೆಳೆಯಬೇಕಾಗಿದೆ. ಸಂಸ್ಕೃತಿಯನ್ನು ಕಾಯಬೇಕು. ಒಗ್ಗಟ್ಟನ್ನು ಉಳಿಸಬೇಕು. ಇವತ್ತಿಗೂ ಸಮಾಜದಲ್ಲಿ ಬಂಗಾರದ ಜಿಂಕೆಯಾಗಿ ರಾಮನ ಧ್ವನಿ ಕೂಗುವವರಿದ್ದಾರೆ ಇದರಿಂದ ಎಚ್ಚರಿಕೆಯಿಂದ ಇದ್ದು ಇವತ್ತಿಗೂ ನಾವು ಮೋಸಕ್ಕೆ ಒಳಗಾಗಬಾರದು ಎಂದರು.

ಧರ್ಮಕ್ಕೆ ಚ್ಯುತಿಯಾದರೆ ನಾವೆಲ್ಲ ಒಂದು ಎಂದು ಎದ್ದು ನಿಲ್ಲುವವರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಮಾತನಾಡಿ ಧರ್ಮ ಚಲನಶೀಲವಾಗಬೇಕು.ಐಕ್ಯತೆ ಅನ್ನುವ ಇನ್ನೊಂದು ಶಬ್ದವೇ ಧರ್ಮ.ಧರ್ಮಕ್ಕೆ ಚ್ಯುತಿಯಾದರೆ ನಾವೆಲ್ಲ ಒಂದು ಎಂದು ಎದ್ದು ನಿಲ್ಲುವವರು.ಧರ್ಮ ಯಾವತ್ತೂ ದ್ವೇಷವನ್ನು ತೋರಿಸಿಲ್ಲ.ಪ್ರೀತಿಯನ್ನು ಕಲಿಸಿದೆ.

ನಾವು ನಮ್ಮ ಧರ್ಮದಲ್ಲಿ ನಡೆಯುತ್ತೇವೆ.ಅನ್ಯರನ್ನು ಗೌರವಿಸುತ್ತೇವೆ.ಅನ್ಯಾಯ ಆದಾಗ ಏನು ಮಾಡುವುದು ಎಂದು ಪ್ರಶ್ನೆಯಾಗಿ ಉಳಿಯುತ್ತದೆ.ಅನ್ಯ ಧರ್ಮದಿಂದ ಅನ್ಯಾಯ ಆದಾಗ ಅದಕ್ಕೆ ಉತ್ತರ ಕೊಡಬೇಕಾದಾಗ ಉತ್ತರ ಕೊಡಲು ಸಿದ್ದ ಎಂದು ತೋರಿಸಬೇಕು.ನಮ್ಮ ಧರ್ಮವನ್ನು ಉಳಿಸಲು ನಾವು ಸಂಕಲ್ಪ ಮಾಡೋಣ ಎಂದರು.ಅಶ್ವತ್ಥ ಮರದಂತೆ ಕಿಲೋಮೀಟರ್ ದೂರ ಹೋಗಿ ಮೊಳಕೆ ಬರುವಂತೆ ಊರ್ದ್ವ ಮೂಲದ ಸನಾತನ ಹಿಂದು ಸಮಾಜಕ್ಕೆ ಕೊನೆ ಇಲ್ಲ. ಯಾವ ಸಂದರ್ಭದಲ್ಲೂ ಧರ್ಮ ಕಾರ್ಯಕ್ಕೆ ನಾವು ಸದಾ ಸಿದ್ದ ಎಂದವರು ಹೇಳಿದರು.

ನಮ್ಮೊಳಗಿನ ಆಕ್ರಮಣ ನಿಲ್ಲಿಸುವ ಅಗತ್ಯವಿದೆ: ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಮಾತನಾಡಿ ಹಿಂದು ಸಮಾಜದಲ್ಲಿರುವ ಎಲ್ಲಾ ಸಂಘಟನೆಗಳು ಐಕ್ಯತೆಯನ್ನು ಸಮಾಜದಲ್ಲಿ ಸಾರುವುದು ಅಗತ್ಯ. ಯಾಕೆಂದರೆ ಬೇರೆ ಬೇರೆ ಅಮಲು ಪದಾರ್ಥಗಳು ಹಿಂದು ಸಮಾಜವನ್ನು ಅಪವಿತ್ರ್ಯಗೊಳಿಸುವ ಕೆಲಸ ನಡೆಯುತ್ತಿದೆ.

ಲವ್ ಜಿಹಾದ್ ಮೂಲಕ ಮನೆ ಮತ್ತು ಮನ ಪರಿವರ್ತನೆ ಮಾಡುವಂತಹ ಈ ಕಾಲಸ್ಥಿತಿಯಲ್ಲಿ ಸಂಘಟಿತ ಹಿಂದೂ ಸಮಾಜ ಒಗ್ಗಟ್ಟು ಪ್ರದರ್ಶಿಸುವುದು ಬಹಳಷ್ಟು ಮುಖ್ಯ. ದೇಶದಲ್ಲಿ ನಾವೆಲ್ಲ ಒಂದಾದರೆ ಅದರ ಎದುರಿಗೆ ಯಾವುದೇ ದುಷ್ಟ ಶಕ್ತಿ ನಿಲ್ಲಲು ಸಾಧ್ಯವಿಲ್ಲ. ಹಿಂದೂ ಸಮಾಜದ ಮೇಲೆ ಹಿಂದೆಯೂ ಬಹಳಷ್ಡು ಆಕ್ರಮಣ ನಡೆದಾಗಲೂ ಕೂಡಾ ಹಿಂದು ಸಮಾಜ ಮತ್ತೆ ಮತ್ತೆ ಎದ್ದು ನಿಂತಿದೆ.ಇವತ್ತು ನಮ್ಮೊಳಗಿನ ಆಕ್ರಮಣ ನಿಲ್ಲಿಸುವ ಅಗತ್ಯವಿದೆ.ಮಾನವೀಯ ಮೌಲ್ಯದ ಜೊತೆಯಲ್ಲಿ ಸದ್ಗುಣ ಶೀಲವನ್ನು ಬೆಳೆಸಿದಂತಹ ದೇಶದಲ್ಲಿ ಎಲ್ಲರು ಒಳ್ಳೆಯದಾಗಿ ಬಾಳಲಿ ಎಂದು ಹೇಳಿದ ಉದಾಹರಣೆ ಇದ್ದರೆ ಅದು ಹಿಂದು ಸಮಾಜದಲ್ಲಿ ಮಾತ್ರ. ಈ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಬೇಕೆಂದರು.

ಹೋರಾಟದ ಕಾರ್ಯಕ್ರಮವಿಲ್ಲ: ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಮಾತನಾಡಿ ನಮ್ಮಲ್ಲಿ ಬಹಳ ಕಾಲದಿಂದ ಹಿಂದುತ್ವವನ್ನು ಹೊಸಕಿ ಹಾಕುವ ಕೆಲಸ ನಡೆದಿತ್ತು. ನಮ್ಮ ರಾಮನ ಬಗ್ಗೆ ಅವಹೇಳನ ಮಾಡುವಾಗಲೂ ಕೂಡಾ ಹಿಂದೂ ಸಮಾಜ ಸುಮ್ಮನಿತ್ತು.ಹಾಗೆಂದು ಹಿಂದುತ್ವ ಜಾಗೃತಿ ಮಾಡುವುದು ನಮ್ಮೊಳಗಿನ ಸಂಸ್ಕೃತಿಯನ್ನು ಬೆಳೆಸುವುದು, ಬಿತ್ತರಿಸುವುದು ನಮ್ಮ ಧರ್ಮ.ಆ ಧರ್ಮವನ್ನು ನಾವು ಮಾಡುತ್ತಿದ್ದೇವೆ.ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಹಿಸಿಕೊಂಡವರು ನಾವು ಎಂದು ಹೇಳಿದರು.ಹಿಂದೂ ಸಮಾಜ ಇವತ್ತಿನ ಸ್ಥಿತಿಯಲ್ಲಿ ಬಹಳ ಸದೃಢವಾಗಿ ಇದೆ.

ಹಿಂದೂ ಸಮಾಜ ಸದೃಢವಾಗಿರಬೇಕೆಂದು ಹಿಂದೆ ಹೆಗ್ಡೇವಾರರು ಎರೆದ ನೀರು ಇವತ್ತು ಸಂಘ ಪರಿವಾರದ ಮೂಲಕ ರಾಷ್ಟ್ರವನ್ನು ಮುನ್ನಡೆಸುತ್ತದೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ.ಹಿಂದೂ ಸಮಾಜದ ಯುವಕರು ಮನಸ್ಸು ಮಾಡಿದ್ದರೆ ಏನು ಮಾಡುತ್ತಾರೆ ಎಂಬುದನ್ನು ೮ ವರ್ಷದ ಹಿಂದೆ ತೋರಿಸಿದ್ದೇವೆ.ಇವತ್ತು ದೇಶಕ್ಕೊಬ್ಬ ನಾಯಕ ಸಿಕ್ಕಿದ್ದಾರೆ.ನಮ್ಮ ನಾಯಕ ಕೊರೋನಾ ಲಸಿಕೆ ಜಗತ್ತಿಗೆ ಉಚಿತವಾಗಿ ನೀಡುವ ಮೂಲಕ ಪ್ರಸಿದ್ದಿಯಾಗಿದ್ದಾರೆ.ಈ ನಿಟ್ಟಿನಲ್ಲಿ ಸಮಷ್ಠಿಯಾಗಿ ಸದೃಢರಾಗಿದ್ದೇವೆ ಎಂದು ನೆನಪಿಸಲು ಮಾತ್ರ ಈ ಕಾರ್ಯಕ್ರಮ ಹೊರತು ಹೋರಾಟದ ಕಾರ್ಯಕ್ರಮವಲ್ಲ.ಯಾಕೆಂದರೆ ನಾವು ಹೋರಾಟದಿಂದ ಬಂದಿದ್ದೇವೆ. ಇವತ್ತು ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದರು.

ಪುತ್ತೂರಿನಲ್ಲಿ ಹಿಂದುತ್ವದ ಗಂಗೆ ಹರಿಯುತ್ತಿದೆ: ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಮಾತನಾಡಿ ಭಾರತ ದೇಶದ ಜೀವಾಳ ಹಿಂದುತ್ವದ ದಮನಿಸುವ ಕೆಲಸ ಮಾಡಿದರೆ ಯಾವ ರೀತಿ ಗೋಳಿ ಮರದ ಕೆಳಗೆ ಯಾವುದೇ ಗಿಡ ಬೆಳೆಯಲು ಬಿಡುವುದಿಲ್ಲವೋ ಅದೇ ರೀತಿ ನಮ್ಮ ಹಿಂದೂ ಸಮಾಜ ಸದೃಢವಾಗಿ ನಿಲ್ಲಲಿದೆ.ಇವತ್ತು ಪುತ್ತೂರಿನಲ್ಲಿ ಹಿಂದುತ್ವದ ಗಂಗೆ ಹರಿಯುತ್ತಿದೆ ಎಂದರು.

ಕಾವಿ ಹಾಕಿದ ಸಂತರು ಬೀದಿಗೆ ಇಳಿದರೆ ಭಯೋತ್ಪಾದಕರು ಪಾಕಿಸ್ತಾನಕ್ಕೆ ಓಡಬೇಕಾದೀತು ಎಂದ ಅವರು ಸಂತರು ಕೂಡಾ ಗಟ್ಟಿ ಧ್ವನಿ ಮಾಡುವ ಪ್ರಸಂಗ ಬಂದಿದೆ.ಇವತ್ತು ಶೋಭಾಯಾತ್ರೆಯಲ್ಲಿ ನಾರಿಯರು ಬುಲೆಟ್ ಬೈಕ್ ಚಲಾಯಿಸಿದ್ದು ಸಂತೋಷ ಆಗಿದೆ.ಅದೇ ರೀತಿ ನಮ್ಮ ಮೇಲೆ ಪ್ರಬಲವಾದ ಆಕ್ರಮಣ ಆದಾಗ ಬುಲೆಟ್ ಹಾರಿಸುವ ಪ್ರಯತ್ನವನ್ನೂ ಮಾಡಲು ಯುವತಿಯರು ಸಿದ್ದರಾಗಬೇಕೆಂದರು.

ಹಿಂದುತ್ವದ ಬೆಳಕು ಪಜ್ಞೆಯ ಬೆಳಕಾಗಲಿ: ಕಣಿಯೂರು ಮಠದ ಶ್ರೀ ಮಹಾಬಲ ಸ್ವಾಮೀಜಿಯವರು ಮಾತನಾಡಿ ಹಿಂದುತ್ವದ ದೀಪದ ಬೆಳಕು ಭಾರತದ ಪ್ರಜ್ಞೆಯ ಬೆಳಕಾಗಲಿ. ಸನಾತನ ಧರ್ಮಕ್ಕೆ ಚ್ಯುತಿ ಬಂದಾಗ ಬೆಂಕಿಗೆ ಬಿದ್ದು ಹೋರಾಟ ಮಾಡೋಣ ಎಂದರು.

ಐಕ್ಯತೆಯೊಂದೇ ಸಮಾಜಕ್ಕೆ ರಕ್ಷಣೆ: ಹಿಂದು ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೯೬ ವರ್ಷಗಳಿಂದ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರನಿರ್ಮಾಣದ ಸಂಕಲ್ಪ ತೊಟ್ಟು ಲಕ್ಷಾಂತರ ಸ್ವಯಂ ಸೇವಕರನ್ನು ನಿರ್ಮಾಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾರ್ಗದರ್ಶನದಲ್ಲಿ ಹಿಂದು ಸಮಾಜದ ಜಾಗೃತಿ, ಸಂಘಟನೆ, ಸುರಕ್ಷೆಯೊಂದಿಗೆ ಕಳೆದ ೩೩ ವರ್ಷಗಳಿಂದ ಕರ್ನಾಟಕದ ಉದ್ಗಗಲದಲ್ಲಿ ಸಮಾಜದ ಜಾಗೃತಿ, ಒಂದುಗೂಡಿಸುವ, ರಕ್ಷಣೆಯ ಎಚ್ಚರಿಕೆಯ ಸಂದೇಶ ಕೊಡುತ್ತಿರುವ ಹಿಂದು ಜಾಗರಣ ವೇದಿಕೆ ಹಲವಾರು ಜಾಗೃತಿ ಕಾರ್ಯಕ್ರಮ ನಡೆಸುತ್ತಾ ಬರುತ್ತಿದೆ.ಕರಾವಳಿಯನ್ನು ನಡುಗಿಸುವ ರೀತಿಯಲ್ಲಿ ಇವತ್ತು ಭಯೋತ್ಪಾದನೆ ತಾಂಡವವಾಡುತ್ತಿದೆ.ಇದನ್ನು ಮಟ್ಟ ಹಾಕಲು ಹಿಂದೂ ಸಮಾಜ ಒಟ್ಟಾಗಬೇಕಾಗಿದೆ. ಅದಕ್ಕಾಗಿ ನಮ್ಮಲ್ಲಿನ ಜಾತೀಯ, ಮತೀಯ, ವೈಯುಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಇಡೀ ಸಮಾಜಕ್ಕೆ ಸಮಾಜವೇ ಒಟ್ಟಾಗಿ ನಿಲ್ಲೋಣ. ಐಕ್ಯತೆಯೊಂದೇ ಸಮಾಜದ ರಕ್ಷಣೆ ಎಂದರು.

ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆ ತಾಲೂಕು ಗೌರವಾಧ್ಯಕ್ಷ ಡಾ.ಎಮ್.ಕೆ.ಪ್ರಸಾದ್, ನಗರ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ಕುಂಜಾಡಿ ಹಿಂದು ಜಾಗರಣ ವೇದಿಕೆ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ನಿರಾಣಿ, ಉದ್ಯಮಿ ರೈ ಎಸ್ಟೇಟ್‌ನ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಬೆಂಗಳೂರಿನ ಶ್ರೀ ವಿದ್ಯಾಮಾನ ವಿದ್ಯಾಕೇಂದ್ರ ಮತ್ತು ಅಂಬಿಕಾ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಸೊಸೈಟಿ ನಿರ್ದೇಶಕ ಭರತ್ ಸೌಂದರ್ಯ, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಜಗದೀಶ ನೆತ್ತರಕೆರೆ, ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಉಪಸ್ಥಿತರಿದ್ದರು. ಹಿಂಜಾವೇ ನಗರ ಕಾರ್ಯದರ್ಶಿ ರಾಜು ಕೋರ್ಟು ರಸ್ತೆ, ಪದ್ಮಶ್ರೀ ಗ್ರೂಪ್ಸ್ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ರೈ ಈಶ್ವರಮಂಗಲ, ಹಿಂಜಾವೆ ತಾಲೂಕು ಅಧ್ಯಕ್ಷ ಶಶಿಕಾಂತ್, ಕಾರ್ಯದರ್ಶಿ ಪುಷ್ಪರಾಜ್ ಸವಣೂರು, ಪುತ್ತೂರು ನಗರ ಉಪಾಧ್ಯಕ್ಷ ಗಿತೇಶ್ ಮಡಪ್ಪಾಡಿ, ತಾಲೂಕು ಮಾತೃ ಸುರಕ್ಷಾ ಸಹ ಸಂಯೋಜಕ ಗಣೇಶ್ ಬೆದ್ರಾಳ, ಹಿಂಜಾವೇ ಬನ್ನೂರು ಅಧ್ಯಕ್ಷ ಮನೀಶ್ ಕುಲಾಲ್, ಕಾರ್ಯದರ್ಶಿ ಮನೀಶ್ ಬಿರ್ವ, ಮಾತೃ ಸುರಕ್ಷಾ ಜಿಲ್ಲಾ ಸಂಯೋಜಕ ರಾಜೇಶ್ ಪಂಚೋಡಿ ಪುತ್ತೂರು ನಗರದ ಸಂಪರ್ಕ ಪ್ರಮುಖ್ ರಾಕೇಶ್ ಓಜಾಲ, ತಾಲೂಕು ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಸಾಧು ಸಂತರಿಗೆ ಫಲಪುಷ್ಪ ನೀಡಿ ಗೌರವಿಸಿದರು. ಮಾತೃಸುರಕ್ಷಾ ತಾಲೂಕು ಮಾತೃ ಸಂಯೋಜಕ ಸ್ವಸ್ತಿಕ್ ಸರ್ವೆ, ಈಶ್ವರಮಂಗಲ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಮಡ್ಯಲಮಜಲು, ಕಾರ್ಯಕರ್ತ ಅನಂತಕೃಷ್ಣ, ಪೆರ್ಲಂಪಾಡಿ ಪ್ರಧಾನ ಕಾರ್ಯದರ್ಶಿ ಜಯಂತ್ ಪೆರ್ಲಂಪಾಡಿ, ನಗರ ಕಾರ್ಯದರ್ಶಿ ಪ್ರತೀಕ್ ಪುತ್ತೂರು, ಪ್ರಚಾರ ಪ್ರಮುಖ್ ಭರತ್ ಆನಡ್ಕ, ನಗರ ಕಾರ್ಯದರ್ಶಿ ವಿನೋದ್ ಸಾಲ್ಯಾನ್, ಆನಡ್ಕ ಪ್ರಧಾನ ಕಾರ್ಯದರ್ಶಿ ಸಂದೀಪ್ ಕರ್ಗಲ್, ಕಾರ್ಯಕರ್ತ ಕೌಶಿಕ್ ಉರಮಾಲ್, ಸುನಿಲ್ ಕುಮಾರ್ ಪೆರ್ಲಂಪಾಡಿ ಅತಿಥಿಗಳನ್ನು ಗೌರವಿಸಿದರು.ಗುರುಪ್ರಿಯ ಪ್ರಾರ್ಥಿಸಿದರು. ವಿದ್ಯಾಶ್ರೀ ಕಲ್ಲಡ್ಕ ವೈಯುಕ್ತಿಕ ಗೀತೆ ಹಾಡಿದರು. ಹಿಂದು ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ ಸ್ವಾಗತಿಸಿದರು. ನಗರ ಅಧ್ಯಕ್ಷ ಪುಷ್ಪರಾಜ್ ವಂದಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.ಸಭೆಯ ಆರಂಭದಲ್ಲಿ ನಾಸಿಕ್ ಬ್ಯಾಂಡ್‌ನಲ್ಲಿ ಎಸ್.ಆರ್.ಕೆ. ಕೆದಿಲ, ಶಬರಿ ಪುತ್ತೂರು, ಸ್ತಬ್ದ ಚಿತ್ರದ ಕಲ್ಲೇಗ ಟೈಗರ್‍ಸ್, ಸಿಂಗಾರಿ ಮೇಳದಲ್ಲಿ ಸಹಕರಿಸಿದ ಶ್ರೀಶಾಸ್ತಂ ದೇಲಂಪಾಡಿ, ವೈಯುಕ್ತಿಕ ಗೀತೆ ಹಾಡಿದ ವಿದ್ಯಾಶ್ರೀ ಕಲ್ಲಡ್ಕ, ವಂದೇ ಮಾತರಂ ಹಾಡಿದ ಗುರುಪ್ರಿಯಾ ನಾಯಕ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಹಿಂಜಾವೇ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಸಚಿನ್ ರೈ ಪಾಪೆಮಜಲು, ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ ಸೇರಿದಂತೆ ಹಲವಾರು ಮಂದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಪಿ.ಜಿ ಜಗನ್ನಿವಾಸ ರಾವ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಕಾರ್‍ಯದರ್ಶಿ ಯತೀಶ್, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸದಸ್ಯರಾದ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಬೂಡಿಯಾರ್ ರಾಧಾಕೃಷ್ಣ ರೈ, ಗ್ರಾ.ಪಂ.ಸದಸ್ಯ ಕರುಣಾಕರ ಎಲಿಯ, ಉದ್ಯಮಿ ರತ್ನಾಕರ ರೈ ಕೆದಂಬಾಡಿಗುತ್ತು, ಮೋಹನ್ ರೈ ನರಿಮೊಗರು, ನ್ಯಾಯವಾದಿ ಮಹೇಶ್ ಕಜೆ, ಭವೀನ್ ಶೆಟ್,ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಐತ್ತಪ್ಪ ನಾಯ್ಕ್, ರಾಮ್‌ದಾಸ್ ಗೌಡ, ರಾಮಚಂದ್ರ ಕಾಮತ್,ಡಾ.ದೀಪಕ್ ರೈ, ನಗರಸಭಾ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ತಾ.ಪಂ ಸದಸ್ಯ ಹರೀಶ್ ಬಿಜತ್ರೆ, ರಾಮ್‌ದಾಸ್ ಆಚಾರ್ಯ, ಡಾ.ಸುರೇಶ್ ಪುತ್ತೂರಾಯ,ವೆಂಕಟ್ರಮಣ ಗೌಡ ಕಳುವಾಜೆ ಸೇರಿದಂತೆ ಹಲವು ಪ್ರಮುಖರು ವೇದಿಕೆಯ ಮುಂಭಾಗದಲ್ಲಿ ಅಸೀನರಾಗಿದ್ದರು.

ಪೊಲೀಸ್ ಬಿಗಿ ಬಂದೋಬಸ್ತ್: ಸಮಾವೇಶದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮತ್ತು ಪುತ್ತೂರು ಡಿವೈಎಸ್‌ಪಿ ಡಾ. ಗಾನ ಪಿ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.ಪುತ್ತೂರು ನಗರ ಠಾಣಾ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಸಂಚಾರ ಪೊಲೀಸ್ ಠಾಣೆ ಎಸ್.ಐ ರಾಮ ನಾಯ್ಕ, ಮಹಿಳಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಮತ್ತು ಪುತ್ತೂರು ನಗರ ಪೊಲೀಸ್ ಠಾಣೆ, ಸಂಚಾರ ಪೊಲೀಸ್ ಠಾಣೆ, ಪುತ್ತೂರು ಗ್ರಾಮಾಂತರ, ಉಪ್ಪಿನಂಗಡಿ, ಬಂಟ್ವಾಳ, ಕಡಬ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ಗಳು, ಎ.ಎಸ್.ಐ.ಗಳು, ಸಿಬ್ಬಂದಿಗಳು ಮತ್ತು ಗೃಹರಕ್ಷಕ ದಳದವರು ಬಂದೋಬಸ್ತ್ ಕಾರ್ಯದಲ್ಲಿ ಕೈ ಜೋಡಿಸಿದ್ದರು. ಕೆಎಸ್‌ಆರ್‌ಪಿ, ಡಿ.ಆರ್, ಕ್ಷಿಪ್ರ ಕಾರ್ಯಾಚರಣೆ ಪಡೆ ‘ವಜ್ರವನ್ನು ಕರೆಸಿಕೊಳ್ಳಲಾಗಿತ್ತು.ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.ಅಲ್ಲದೆ ಪುತ್ತೂರು ಪಟ್ಟಣ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು.ಸಮಾವೇಶದ ಬಳಿ ಮೈದಾನದಲ್ಲಿ ಪಾರ್ಕ್ ಮಾಡಿದ ವಾಹನಗಳನ್ನು ಮತ್ತು ಸಮಾವೇಶದಲ್ಲಿ ಭಾಗವಹಿಸಿದವರನ್ನು ಪೊಲೀಸರು ವಿಡಿಯೋ ಚಿತ್ರಿಕರಣದ ಮೂಲಕ ದಾಖಲಿಸುತ್ತಿದ್ದರು.ಶೋಭಾಯಾತ್ರೆ ಸಂದರ್ಭದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಿಂದ ಅಲ್ಲಲ್ಲಿ ಅಳವಡಿಸಿದ್ದ ಸಿ.ಸಿ.ಕ್ಯಾಮರಾ ಮೂಲಕ ಪೊಲೀಸರು ಠಾಣೆಯಲ್ಲೇ ಶೋಭಾಯಾತ್ರೆ ವೀಕ್ಷಣೆ ಮಾಡುತ್ತಿದ್ದರು. ಎಸ್ಪಿ ಬಿ.ಎಮ್.ಲಕ್ಷ್ಮೀಪ್ರಸಾದ್ ಅವರು ಪುತ್ತೂರು ಡಿವೈಎಸ್ಪಿ ಕಚೇರಿಯಲ್ಲಿದ್ದು ಸಮಾವೇಶದ ಕುರಿತು ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದರು.

ಹಿಂದು ಐಕ್ಯತಾ ಸಮಾವೇಶದ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಅರ್ಧ ಏಕಾಹ ಭಜನೆ ವಿವಿಧ ಭಜನಾ ತಂಡಗಳಿಂದ ನಡೆಯಿತು.ಸಂಜೆ ಬೃಹತ್ ಶೋಭಾಯಾತ್ರೆಯನ್ನು ಹಿಂದು ಜಾಗರಣ ವೇದಿಕೆ ಗೌರವಾಧ್ಯಕ್ಷ ಡಾ.ಎಮ್.ಕೆ.ಪ್ರಸಾದ್ ಉದ್ಘಾಟಿಸಿದರು. ದರ್ಬೆ ವೃತ್ತದಿಂದ ಆರಂಭಗೊಂಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರಕ್ಕೆ ತಲುಪಿದ ಬಳಿಕ ವೇ.ಮೂ. ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಗುರು ತಂತ್ರಿಯವರ ವೈದಿಕತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಹಾಮಂಗಳಾರತಿ ಜರಗಿತು.ಇಡ್ಯಾಡಿ ಶ್ರೀಧರ್ ದಂಪತಿ ಪೂಜೆಯ ವ್ರತಾಚರಣೆ ಮಾಡಿದರು. ಪೂಜಾ ಕಾರ್ಯಕ್ರಮ ಮುಗಿದ ಬಳಿಕ ಶ್ರೀಗಳು ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವೇದಿಕೆ ಅಲಂಕರಿಸಿದರು. ಬಳಿಕ ಧರ್ಮ ಸಭೆ ಜರಗಿತು.

ಆಂಬುಲೆನ್ಸ್ ಲೋಕಾರ್ಪಣೆ
ತುರ್ತು ಚಿಕಿತ್ಸೆಗಾಗಿ ಅಗತ್ಯ ಇರುವವರಿಗೆ ಆಂಬುಲೆನ್ಸ್ ಸೇವೆಯನ್ನು ಹಿಂದು ಜಾಗರಣ ವೇದಿಕೆ ವತಿಯಿಂದ ನೀಡಲಾಗುತ್ತಿದ್ದು, ಅದನ್ನು ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನೆ ಕಾರ್ಯದರ್ಶಿ ಜಗದೀಶ್ ಕಾರಂತ್ ಮತ್ತು ಸಾಧು ಸಂತರು ತೆಂಗಿನ ಕಾಯಿ ಒಡೆದು ಲೋಕಾರ್ಪಣೆಗೊಳಿಸಿದರು.ಲೋಕಾರ್ಪಣೆಗೊಂಡ ಆಂಬುಲೆನ್ಸ್ ಹಿಂಜಾವೇ ಈಶ್ವರಮಂಗಲ ಘಟಕದ ನಿರ್ವಹಣೆಯಲ್ಲಿ ಈಶ್ವರಮಂಗಲದಲ್ಲಿ ಸೇವೆಗೆ ಲಭ್ಯವಾಗಲಿದೆ.ಕೊಳ್ತಿಗೆ, ಸುಳ್ಯಪದವು, ಈಶ್ವರಮಂಗಲ, ಪಡುಮಲೆ, ಕೌಡಿಚ್ಚಾರು, ಕಾವು ಭಾಗಗಳಲ್ಲಿ ಈ ನೂತನ ಆಂಬುಲೆನ್ಸ್ ಸೇವೆ ದೊರಕಲಿದೆ. ಆಂಬುಲೆನ್ಸ್ ಸೇವೆ ತೀರಾ ಅಶಕ್ತರಿಗೆ ಉಚಿತವಾಗಿದ್ದು, ಉಳಿದವರಿಗೆ ಮಿತದರದಲ್ಲಿ ಸೇವೆ ನೀಡಲಿದೆ. ಹಿಂದು ಜಾಗರಣ ವೇದಿಕೆ ರಕ್ತ ಸಹಾಯವಾಣಿಯಿಂದ ಹಲವು ಸೇವೆ ನೀಡಿದೆ. ಕೊರೋನಾ ಸಂದರ್ಭದಲ್ಲೂ ಅಗತ್ಯ ವಸ್ತುಗಳ ಪೂರೈಕೆ,ಶವ ಸಂಸ್ಕಾರವನ್ನು ನಡೆಸಿದೆ ಎಂದು ಉದ್ಘೋಷಕರು ತಿಳಿಸಿದರು.

ವೈಭವದ ಶೋಭಾಯಾತ್ರೆ

ಸಮಾವೇಶದ ಮೊದಲು ದರ್ಬೆ ವೃತ್ತದ ಬಳಿಯಿಂದ ಬೃಹತ್ ಶೋಭಾಯಾತ್ರೆ ನಡೆಯಿತು.ಹಿಂದು ಜಾಗರಣ ವೇದಿಕೆ ಗೌರವಾಧ್ಯಕ್ಷ ಡಾ.ಎಂ.ಕೆ ಪ್ರಸಾದ್‌ರವರು ತೆಂಗಿನಕಾಯಿ ಒಡೆದು,ಹಿಂದು ಜಾಗರಣಾ ವೇದಿಕೆ ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರರವರಿಗೆ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು.ಬಳಿಕ ಶೋಭಾಯಾತ್ರೆಯು ಮುಖ್ಯ ರಸ್ತೆಯ ಮೂಲಕ ಸಾಗಿ ಪ್ರಧಾನ ಅಂಚೆ ಕಚೇರಿ ಬಳಿಯಿಂದಾಗಿ ಸಮಾವೇಶ ನಡೆಯುವ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಗೆ ಆಗಮಿಸಿತು.ಚೆಂಡೆ ವಾದನ, ನಾಸಿಕ್ ಬ್ಯಾಂಡ್‌ನ ಅಬ್ಬರದೊಂದಿಗೆ ಮೆರವಣಿಗೆ ಸಾಗಿ ಬಂದಿದೆ.

ಒಡಿಯೂರು ಗುರುದೇವಾನಂದ ಸ್ವಾಮೀಜಿ, ಕರಿಂಜೆ ಮುಕ್ತಾನಂದ ಸ್ವಾಮೀಜಿ., ಮಾಣಿಲ ಮೋಹನದಾಸ ಸ್ವಾಮೀಜಿ, ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ, ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿದ್ದ ಜಗದೀಶ್ ಕಾರಂತ, ಮುಖ್ಯ ಅತಿಥಿ ಲಕ್ಷ್ಮಣ ನಿರಾಣಿ ಸಹಿತ ಹಲವು ಮಂದಿ ಗಣ್ಯರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಹಿಂದು ಬಾಂಧವರ ಜೊತೆಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.ಐದು ಮಂದಿ ಯುವತಿಯರ ಬುಲೆಟ್ ಬೈಕ್ ಚಾಲನೆ ಹಾಗೂ ಯುವತಿಯರ ತಂಡದ ನಾಸಿಕ್ ಬ್ಯಾಂಡ್ ಸದ್ದು ಮೆರವಣಿಗೆಯಲ್ಲಿ ಆಕರ್ಷಣೆಯಾಗಿತ್ತು.ಮೆರವಣಿಗೆಯಲ್ಲಿ ಪಾಲ್ಗೊಂಡವರೆಲ್ಲರೂ ಕೇಸರಿ ಧ್ವಜ ಪ್ರದರ್ಶನ ಮಾಡುತ್ತಿದ್ದುದರಿಂದ ಮೆರವಣಿಗೆ ಸಾಗುವ ಹಾದಿ ಪೂರ್ತಿ ಕೇಸರೀಮಯವಾಗಿ ಕಂಗೊಳಿಸುತ್ತಿತ್ತು.ಮೆರವಣಿಗೆ ಹಾದಿಯಲ್ಲಿ ಅಲ್ಲಲ್ಲಿ ತಂಪು ಪಾನೀಯ ವಿತರಣೆ ಮಾಡಲಾಗುತ್ತಿತ್ತು.ಶೋಭಾಯಾತ್ರೆ ದೇವಸ್ಥಾನದ ಗದ್ದೆಗೆ ಆಗಮಿಸುತ್ತಿದ್ದಂತೆ ಅಲ್ಲಿ ಬನ್ ಹಾಗೂ ಪಾನೀಯಗಳನ್ನು ವಿತರಿಸಲಾಗಿತ್ತು.

ಕಾರ್ತಿಕ್ ಮೇರ್ಲ ಭಾವಚಿತ್ರ: ಒಂದು ವರ್ಷದ ಹಿಂದೆ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಸಂಪ್ಯದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾರ್ತಿಕ್ ಮೇರ್ಲರವರ ಶಾಲು ಹಾಕಿದ ಭಾವಚಿತ್ರವು ಮೆರವಣಿಗೆಯುದ್ದಕ್ಕೂ ರಾರಾಜಿಸುತ್ತಿತ್ತು.ಅದೇ ರೀತಿ ಸಮಾವೇಶದ ಭವ್ಯ ವೇದಿಕೆಯ ಬಲ ಬದಿಯಲ್ಲಿ ದಿ.ಕಾರ್ತಿಕ್ ಮೇರ್ಲ ಅವರ ಭಾವ ಚಿತ್ರ ಮತ್ತು ಎಡ ಬದಿಯಲ್ಲಿ ದಿ.ವೆಂಕಟೇಶ್ ಅವರ ಭಾವ ಚಿತ್ರವನ್ನು ಅಳವಡಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.