ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೊಯಿಲ ಗ್ರಾಮದ ಗಂಡಿಬಾಗಿಲು ಸನಿಹದ ಆನೆಗುಂಡಿ ಎಂಬಲ್ಲಿ ಮಾ.31ರಂದು ಮನೆಯವರು ಜಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಬಾಗಿಲ ಚಿಲಕ ಮುರಿದು ಮನೆಯೊಳಗೆ ನುಗ್ಗಿ ಕಪಾಟು ಬಾಗಿಲು ಮುರಿದು 8 ಪವನ್ ಚಿನ್ನಾಭರಣವನ್ನು ಲೂಟಿ ಮಾಡಿರುವ ಘಟನೆ ಸಂಭವಿಸಿದೆ.
ಗಂಡಿಬಾಗಿಲು ಆನೆಗುಂಡಿ ಎಂಬಲ್ಲಿ ಈಶ್ವರ ಗೌಡ ಮತ್ತು ಭುವನೇಶ್ವರಿ ಶಿಕ್ಷಕ ದಂಪತಿ ವಾಸ್ತವ್ಯ ಇರುವ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಹಿಂಬಾಗಿಲಿನ ಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟನ್ನು ಕತ್ತಿಯಿಂದ ಮೀಟಿ ತೆಗೆದು ಅದರಲ್ಲಿದ್ದ ಚಿನ್ನದ ನೆಕ್ಲೆಸ್-೨, ಕಿವಿ ಬೆಂಡೋಲೆ-೩, ಬಳೆ-೨ ಸೇರಿದಂತೆ ಒಟ್ಟು ಸುಮಾರು ೮ ಪವನ್ ತೂಕದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ ಎಂದು ಈಶ್ವರ ಗೌಡ ತಿಳಿಸಿದ್ದಾರೆ.
ಜಾತ್ರೆಗೆ ಹೋಗಿ ಬರುವಾಗ ಕಳವು ನಡೆದಿತ್ತು.
ಕೊಯಿಲ ಗ್ರಾಮದ ಆತೂರು ಸದಾಶಿವ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತಿದ್ದು, ಮಾ. ೩೧ರಂದು ಸಂಜೆ ೬ ಗಂಟೆಯ ಬಳಿಕ ಮನೆಯವರು ಜಾತ್ರೆಗೆ ಹೋಗಿದ್ದೆವು, ಅಲ್ಲಿಂದ ದೇವರು ಆನೆಗುಂಡಿಗೆ ಸವಾರಿ ಬರುವಾಗ ಅದರ ಜೊತೆ ಬಂದು ಆನೆಗುಂಡಿಯಲ್ಲಿ ಕಟ್ಟೆ ಪೂಜೆ ಮುಗಿಸಿ ದೇವರು ಹಿಂತಿರುಗಿ ಹೋಗಿದ್ದು, ಆ ಬಳಿಕ ನಾವು ಸುಮಾರು ೯-೩೦ರ ಹೊತ್ತಿಗೆ ಮನೆ ತಲುಪಿದ್ದೇವೆ. ಮನೆಯೊಳಗೆ ನೋಡುವಾಗ ಕಳ್ಳತನ ನಡೆದಿತ್ತು ಎಂದು ಈಶ್ವರ ಗೌಡ ಸ್ಥಳಕ್ಕೆ ಭೇಟಿ ನೀಡಿದ “ಸುದ್ದಿ”ಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಡಬ ಸಬ್ ಇನ್ಸ್ಪೆಕ್ಟರ್ ರುಕ್ಮ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.