ಚಿತ್ರ:ಆಡ್ಲ್ಯಾಬ್ ಪುತ್ತೂರು
ಪುತ್ತೂರು: ಶಿಕ್ಷಕ ವೃತ್ತಿಯಲ್ಲಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ರಾಜಶೇಖರ್ರವರನ್ನು ಬೀಳ್ಕೊಡುವ ಕಾರ್ಯಕ್ರಮ ಮಾ.೩೧ ರಂದು ಶಾಲೆಯಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಸೇವಾ ನಿವೃತ್ತಿ ಹೊಂದಿದ ಹಿರಿಯ ಶಿಕ್ಷಕ ರಾಜಶೇಖರ್ರವರಿಗೆ ಶಾಲು ಹೊದಿಸಿ ಬೀಳ್ಕೊಡುಗೆ ಸನ್ಮಾನ ನೆರವೇರಿಸಿ ಮಾತನಾಡಿ, ಹಿರಿಯ ಶಿಕ್ಷಕ ರಾಜಶೇಖರ್ರವರೋರ್ವ ಅದ್ಭುತ ಕಲಾವಿದರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಶಿಕ್ಷಕ ವೃತ್ತಿಯನ್ನು ನಿಭಾಯಿಸುವುದರ ಜೊತೆಗೆ ಹಾಡುವುದು, ಕೀಬೋರ್ಡ್, ಗಿಟಾರ್ ನುಡಿಸುವುದು ಇವೆಲ್ಲವನ್ನು ಬಹಳ ಚೆನ್ನಾಗಿ ಕರಗತ ಮಾಡಿಕೊಂಡವರಾಗಿದ್ದಾರೆ. ಅಲ್ಲದೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡುವುದರಲ್ಲೂ ಅವರು ನಿಸ್ಸೀಮರು ಎಂದು ಕೇಳಲ್ಪಟ್ಟಿದ್ದೇನೆ. ಶಿಕ್ಷಕ ರಾಜಶೇಖರ್ರವರ ಮುಂಬರುವ ನಿವೃತ್ತಿ ಜೀವನವು ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ಕೂಡಿರಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ಎನ್.ಕೆ ಜಗನ್ನೀವಾಸ್ ರಾವ್ ಮಾತನಾಡಿ, ನಾನು ಕಂಡ ಉತ್ತಮ ಶಿಕ್ಷಕ ಹಾಗೂ ಕಲಾವಿದರಲ್ಲೋರ್ವರು ಶಿಕ್ಷಕ ರಾಜಶೇಖರ್ರವರು. ಕಳೆದ ಹಲವು ವರ್ಷಗಳಿಂದ ರಾಜಶೇಖರ್ರವರನ್ನು ತುಂಬಾ ಹತ್ತಿರದಿಂದ ಬಲ್ಲವನಾಗಿದ್ದೇನೆ. ಮಾತು ಕಡಿಮೆ, ದುಡಿಮೆ ಜಾಸ್ತಿ ಎಂಬಂತೆ ತನಗೆ ನೀಡಿದ ಯಾವುದೇ ಕಾರ್ಯವನ್ನು ಬಹಳ ಯಶಸ್ವಿಯಾಗಿ ನಿಭಾಯಿಸುವ ಚಾಕಚಾಕ್ಯತೆ ರಾಜಶೇಖರ್ರವರಲ್ಲಿದೆ. ಸರಕಾರಿ ಹುದ್ದೆಯಲ್ಲಿ ನಿವೃತ್ತಿ ಎಂಬುದು ಕಟ್ಟಿಟ್ಟ ಬುತ್ತಿ. ಆದರೆ ರಾಜಶೇಖರ್ರವರು ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿ ನಿವೃತ್ತಿಗೊಂಡ ಶಿಕ್ಷಕ ರಾಜಶೇಖರ್ರವರ ನಿವೃತ್ತಿ ಬದುಕು ಹಸನಾಗಲಿ ಎಂದರು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಶಿಕ್ಷಕರು ವಿದ್ಯಾಸಂಸ್ಥೆಯ ಬೆನ್ನೆಲುಬು ಆಗಿದ್ದಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಹಿರಿದಾದುದು. ಶಿಕ್ಷಕರು ತಮ್ಮ ಶಿಕ್ಷಕ ವೃತ್ತಿಯ ಅವಧಿಯ ಸಂದರ್ಭದಲ್ಲಿ ತಾನು ಪ್ರತಿನಿಧಿಸುತ್ತಿರುವ ವಿದ್ಯಾಸಂಸ್ಥೆಯ ಏಳಿಗೆಯಲ್ಲಿ ಜವಾಬ್ದಾರಿಯುತ ಸ್ಥಾನವನ್ನು ಹೊಂದಿರುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ವೃತ್ತಿಯಿಂದ ನಿವೃತ್ತರಾದ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯು ನಿವೃತ್ತ ಶಿಕ್ಷಕರನ್ನು, ಆಡಳಿತ ಸಿಬ್ಬಂದಿ ವರ್ಗದವರನ್ನು ಗುರುತಿಸಿ ಬೀಳ್ಕೊಡುವುದು ಸಂಪ್ರದಾಯವಾಗಿದೆ. ಇದೀಗ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಶಿಕ್ಷಕ ರಾಜಶೇಖರ್ರವರ ಮುಂದಿನ ನಿವೃತ್ತ ಬದುಕು ಆಯುರಾರೋಗ್ಯದಿಂದ ಕೂಡಿರಲಿ ಎಂದು ಹೇಳಿ ಶುಭಹಾರೈಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಲ್ಯಾನ್ಸಿ ಮಸ್ಕರೇನ್ಹಸ್ ಮಾತನಾಡಿ, ಶಿಕ್ಷಕ ರಾಜಶೇಖರ್ರವರು ಸಾಂಸ್ಕೃತಿಕ ರಂಗದ ಓರ್ವ ಅಪ್ಪಟ ಕಲಾವಿದ ಎನ್ನುವುದಕ್ಕೆ ಎರಡು ಮಾತಿಲ್ಲ. ಅಲ್ಲದೆ ಶಾಲೆಯಲ್ಲಿನ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರ ಪ್ರತಿಭೆಗೆ ನೀರೆರೆಯುವ ಮೂಲಕ ಬಹಳಷ್ಟು ಪ್ರೋತ್ಸಾಹ ಮಾಡಿರುತ್ತಾರೆ. ನಿವೃತ್ತಿ ಸಂದರ್ಭ ವ್ಯಕ್ತಿಯನ್ನು ಗುರುತಿಸಿ ಸನ್ಮಾನಿಸುವುದು ವರ್ಷವಿಡೀ ವ್ಯಕ್ತಿಯೊಂದಿಗೆ ಕಳೆದ ಒಡನಾಟವನ್ನು ಭಾವನೆಗಳ ಮುಖಾಂತರ ವ್ತಕ್ತಪಡಿಸುವುದಾಗಿದೆ. ಮಾನವನ ಸುಂದರ ಬದುಕು ಆರಂಭವಾಗುವುದೇ ನಿವೃತ್ತಿಯ ಬಳಿಕವಾಗಿದೆ. ಯಾಕೆಂದರೆ ನಿವೃತ್ತಿ ಬಳಿಕ ಯಾವುದೇ ಒತ್ತಡವಿಲ್ಲದೆ ಸ್ವತಂತ್ರ ಬದುಕು ಸಾಗಿಸುವುದು ಆಗಿದೆ. ನಿವೃತ್ತರಾದ ಶಿಕ್ಷಕ ರಾಜಶೇಖರ್ರವರ ನಿವೃತ್ತಿ ಬದುಕು ಉತ್ತಮವಾಗಿ ಸಾಗಲಿ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಲಿಯೋನಿಲ್ಲಾ ವೇಗಸ್ ಸ್ವಾಗತಿಸಿ, ಶಿಕ್ಷಕ ಕ್ಲೆಮೆಂಟ್ ಪಿಂಟೋ ವಂದಿಸಿದರು. ಶಿಕ್ಷಕಿ ಆಶಾ ರೆಬೆಲ್ಲೋ ಸನ್ಮಾನಿತ ಪತ್ರ ವಾಚಿಸಿದರು. ಶಿಕ್ಷಕರ ಪರವಾಗಿ ರೋಶನ್ ಸಿಕ್ವೇರಾರವರು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಪ್ರಸನ್ನ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ಹಾಗೂ ಆಡಳಿತ ಸಿಬ್ಬಂದಿ ವೃಂದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ವೃತ್ತಿಯಲ್ಲಿ ಆತ್ಮತೃಪ್ತಿಯಿದೆ…
೧೯೮೬ರ ಜೂನ್ ೯ ರಿಂದ ಶಿಕ್ಷಕ ವೃತ್ತಿಯನ್ನು ಆರಂಭಿಸಿದ ನಾನು ಪೆರ್ಮನ್ನೂರು ಸಂತ ಸೆಬಾಸ್ಟಿನ್ ಪ್ರೌಢಶಾಲೆಯಲ್ಲಿ, ಪುತ್ತೂರು ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯಲ್ಲಿ ಹಾಗೂ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತೇನೆ. ಪ್ರತೀ ಶಾಲೆಯಲ್ಲಿ ತಾನು ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದ ಸಂದರ್ಭ ನನಗೆ ಸಹೋದ್ಯೋಗಿ ಬಂಧುಗಳು ಪ್ರೋತ್ಸಾಹ ನೀಡಿರುತ್ತಾರೆ. ಫಿಲೋಮಿನಾ ಪ್ರೌಢಶಾಲೆಯಲ್ಲಿ ನಿರಂತರ ೨೧ ವರ್ಷಗಳ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಶಿಕ್ಷಕ ವೃತ್ತಿಯ ಜೊತೆಗೆ ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿರುವ ನನಗೆ ನನ್ನ ವೃತ್ತಿಯಲ್ಲಿ ಆತ್ಮತೃಪ್ತಿಯನ್ನು ಕಂಡುಕೊಂಡಿದ್ದೇನೆ. ನನ್ನ ನಿವೃತ್ತಿಯ ಸಂದರ್ಭ ನನ್ನನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಶಾಲೆಗೆ ಹಾಗೂ ಶಾಲಾ ಆಡಳಿತ ಮಂಡಳಿಗೆ ನಾನು ಅಭಾರಿಯಾಗಿದ್ದೇನೆ.
-ರಾಜಶೇಖರ್, ನಿವೃತ್ತ ಹಿರಿಯ ಶಿಕ್ಷಕರು, ಫಿಲೋಮಿನಾ ಪ್ರೌಢಶಾಲೆ