- ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಪರಿಗಣಿಸುವಂತೆ ಮನವಿ
ಪುತ್ತೂರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ತನ್ನನ್ನು ಪರಿಗಣಿಸುವಂತೆ ಆಗ್ರಹಿಸಿ ಹಿರಿಯ ಕಾಂಗ್ರೆಸ್ ಮುಖಂಡ ಕೆದಂಬಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ ರೈ ಬೋಳೋಡಿಯವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಕಳೆದ ೪೯ ವರ್ಷಗಳಿಂದ ತಾನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ತಂದ ಕ್ರಾಂತಿಕಾರಿ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವದರಲ್ಲಿ ಪ್ರಮುಖವಾಗಿ ದುಡಿದಿರುತ್ತೇನೆ. ಅದರ ಫಲವಾಗಿ ೧೯೭೮ರ ಕೆದಂಬಾಡಿ ಗ್ರಾ.ಪಂ ಚುನಾವಣೆಯಲ್ಲಿ ಬಹುಮತ ಪಡೆದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುತ್ತೇನೆ. ತನಗೆ ಪುತ್ತೂರಿನಲ್ಲಿ ಈ ತನಕ ಸೇವೆ ಸಲ್ಲಿಸಿದ ಎಲ್ಲಾ ಬ್ಲಾಕ್ ಅಧ್ಯಕ್ಷರ ಜೊತೆಯಲ್ಲಿ ಕೆಲಸ ಮಾಡಿದ ಅನುಭವವಿದ್ದು ತನಗೆ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷನಾಗಿ ಮತ್ತು ಎರಡು ಅವಧಿಗೆ ಜಿಲ್ಲಾ ಕಾಂಗ್ರೆಸ್ ಸದಸ್ಯನಾಗಿ ಸೇವೆ ಸಲ್ಲಿಸಿದ ಅನುಭವವಿರುತ್ತದೆ. ನಾನು ಇದುವರೆಗು ಪಕ್ಷಕ್ಕೆ ದ್ರೋಹ ಮಾಡಿರುವುದಿಲ್ಲ. ಗುಂಪುಗಾರಿಕೆಯಲ್ಲಿ ತೊಡಗಿರುವುದಿಲ್ಲ. ಮುಂಬರುವ ಯಾವುದೇ ಚುನಾವಣೆಯಲ್ಲಿ ನಾನು ಟಿಕೆಟ್ ಆಕಾಂಕ್ಷಿಯಲ್ಲ. ಪಕ್ಷದ ಈ ಸಂಕಷ್ಟ ಕಾಲದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲು ಪಕ್ಷದ ಒಬ್ಬ ಹಿರಿಯ ಕಾರ್ಯಕರ್ತನಾಗಿ ಪಕ್ಷದ ವರಿಷ್ಠರ ಮಾರ್ಗದರ್ಶನ ಮತ್ತು ಸಲಹೆಯಂತೆ ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಸಂಘಟಿಸುವ ಸಾಮರ್ಥ್ಯ ಮತ್ತು ಉತ್ಸಾಹ ನನ್ನಲ್ಲಿದೆ.
ಆದುದರಿಂದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನನ್ನನ್ನು ನೇಮಕಮಾಡಿ ಪಕ್ಷದ ಪುನರ್ ಸಂಘಟನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸುತ್ತೇನೆ ಎಂದು ಆಗ್ರಹಿಸಿರುವ ಮನವಿ ಪತ್ರವನ್ನು ಸಲೀಂ ಅಹಮ್ಮದ್ ಅವರಿಗೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಕೆದಂಬಾಡಿ ವಲಯಾಧ್ಯಕ್ಷ ಮನೋಹರ ರೈ ಎಂಡೆಸಾಗು, ಕಾರ್ಯದರ್ಶಿ ಮೆಲ್ವಿನ್ ಮೊಂತೆರೋ, ಬೂತ್ ಅಧ್ಯಕ್ಷ ಸೀತಾರಾಮ ರೈ ಬಾಳಾಯ ಜೊತೆಗಿದ್ದರು. ಇದೇ ಮನವಿ ಪ್ರತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ, ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ ಖಾದರ್, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ರವಾನಿಸಿದ್ದಾರೆ.
ಉಪಚುನಾವಣೆ ಬಳಿಕ ನೇಮಕ:
ಉಪಚುನಾವಣೆ ಮುಗಿದ ಕೂಡಲೇ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಲ್ಲಿ ಅಭಿಪ್ರಾಯ ಕೇಳಿ ಪುತ್ತೂರು ಬ್ಲಾಕ್ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಭರವಸೆ ನೀಡಿದ್ದಾರೆ ಎಂದು ಬೋಳೋಡಿ ಚಂದ್ರಹಾಸ ರೈಯವರು ತಿಳಿಸಿದ್ದಾರೆ