ಉಪ್ಪಿನಂಗಡಿ: ಕಳ್ಳತನಕ್ಕೆ ಯತ್ನ ನಡೆಸುವಾಗ ಪಕ್ಕಾಸು ಮುರಿದು ಕಳ್ಳ ಗಾಯಗೊಂಡು ಪರಾರಿ ಆಗಿರುವ ಇನ್ನೊಂದು ಘಟನೆ ಗುರುವಾರ ನಸುಕಿನ ವೇಖೆ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಮತ್ತೆ ಸಂಭವಿಸಿದೆ.
ಕಲ್ಲೇರಿ ನಿವಾಸಿ ಸಿನಾನ್ ಎಂಬವರ ಮನೆಗೆ ಛಾವಣಿಯ ಹಂಚು ತೆಗೆದು ಒಳ ನುಗ್ಗಲು ಯತ್ನಿಸಿದ ವೇಳೆ ಈ ಘಟನೆ ಸಂಭವಿಸಿದ್ದು, ಗೋಡೆಯ ಬಳಿಯಿಂದಲೇ ಮೂಲೆ ಪಕ್ಕಾಸು ಮುರಿದು ಕಳ್ಳ ನೆಲಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಗಾಯಗೊಂಡನಾದರೂ ಶಬ್ದ ಕೇಳಿ ಎಚ್ಚೆತ್ತ ಜನರ ಕೈಗೆ ಸಿಗದಂತೆ ಕಳ್ಳ ರಕ್ತ ಹರಿಸಿಕೊಂಡೇ ಓಡಿ ಪರಾರಿಯಾಗಿದ್ದಾನೆಂದು ಹೇಳಲಾಗಿದೆ.
ಘಟನೆ ಸಂಭವಿಸಿದಾಕ್ಷಣ ಎಚ್ಚೆತ್ತ ಮನೆ ಯಜಮಾನ ಸಿನಾನ್ ಟಾರ್ಚ್ ಲೈಟ್ ಹಾಕಿ ನೋಡಿದಾಗ, ಕೇವಲ ನಿಕ್ಕರ್ ಧರಿಸಿದ್ದ ಅಜಾನುಭಾಹು ವ್ಯಕ್ತಿ ದೇಹದ ಮೈ ಮೇಲೆ ಎಣ್ಣೆ ಹಚ್ಚಿದಂತಿದ್ದು, ಓಡುತ್ತಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.
ವಾರದ ಹಿಂದೆ ಇಂತದ್ದೇ ಘಟನೆ ನಡೆದಿತ್ತು:
ಒಂದು ವಾರದ ಹಿಂದೆಯಷ್ಟೇ ಇದೇ ಪರಿಸರದ ಫಾರೂಕ್ ಎಂಬವರ ಮನೆಗೂ ಕಳ್ಳತನಕ್ಕೆ ಯತ್ನಿಸಿದಾಗ ಪಕ್ಕಾಸು ಮುರಿದು ಮನೆ ಮಂದಿಯು ಎಚ್ಚರಗೊಂಡಾಗ ಕಳ್ಳ ಗಾಯಗೊಂಡು ಓಡಿ ಪರಾರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.