HomePage_Banner
HomePage_Banner
HomePage_Banner
HomePage_Banner

ಕ್ರೈಸ್ತ ದೇವಾಲಯಗಳಲ್ಲಿ `ಪವಿತ್ರ ಗುರುವಾರ’ ಆಚರಣೆ

ಪ್ರೀತಿ,ಸೇವೆ,ಸಹಾನುಭೂತಿ,ಕ್ಷಮೆಯಿದ್ದಾಗ ಸಂಬಂಧ ಉತ್ತಮ-ವಂ|ಆಂಟನಿ

ಪುತ್ತೂರು: ಮನುಷ್ಯನ ಲೌಕಿಕ ಬದುಕಿಗೆ ತನ್ನನ್ನೇ ಭೋಜನ ಮತ್ತು ಪಾನವಾಗಿ ಅರ್ಪಿಸಿಕೊಂಡ ಯೇಸುಕ್ರಿಸ್ತರ ಕೊನೆಯ ಭೋಜನ ಮನುಷ್ಯನ ಬದುಕಿಗೆ ಹೊಸ ಅರ್ಥ ನೀಡಿ ಮನಸ್ಸಿಗೆ ತೃಪ್ತಿ ನೀಡುತ್ತದೆ. ಪ್ರೀತಿ, ಸೇವೆ, ಸಹಾನುಭೂತಿ, ಕ್ಷಮೆಯ ಪ್ರತೀಕವಾಗಿರುವ ಯೇಸುಕ್ರಿಸ್ತರ ಈ ಗುಣಗಳನ್ನು ನಮ್ಮ ಹೃದಯದಲ್ಲಿ ರೂಢಿಸಿಕೊಂಡಾಗ ಮನುಷ್ಯನ ನಡುವೆ ಉತ್ತಮ ಸಂಬಂಧವೇರ್ಪಡುತ್ತದೆ ಎಂದು ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಹೇಳಿದರು.
ವಿಶ್ವದಾದ್ಯಂತ ಕ್ರೈಸ್ತರು ಆಚರಿಸುತ್ತಿರುವ `ಗುಡ್‌ಫ್ರೈಡೇ’ಯ ಮುನ್ನಾ ದಿನವಾದ ಎ.1 `ಪವಿತ್ರ ಗುರುವಾರ’ದಂದು ಪುತ್ತೂರಿನ ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಅವರು ಬೈಬಲ್ ವಾಚಿಸಿ ಸಂದೇಶ ನೀಡಿದರು. ಏಸುಕ್ರಿಸ್ತರು ಶಿಲುಬೆಗೇರುವ ಮುನ್ನ ತನ್ನ 12 ಮಂದಿ ಶಿಷ್ಯರೊಂದಿಗೆ ಮಾಡಿದ ಕೊನೆಯ ಭೋಜನವೇ ಪಾಸ್ಖಾ ಭೋಜನವಾಗಿದೆ. ಭೋಜನವು ಹಸಿವಿನ, ಪ್ರೀತಿಯ, ಭಾವೈಕ್ಯತೆಯ, ಗೆಳೆತನದ ಸಂಕೇತವಾಗಿದೆ. ಭೋಜನವು ದೇವರು ಹಾಗೂ ಮನುಷ್ಯನ ನಡುವೆ ಅಗಾಧ ಸಂಬಂಧವನ್ನು ತೋರಿಸಿಕೊಡುತ್ತದೆ. ಕ್ರೈಸ್ತ ಪವಿತ್ರಸಭೆಯಲ್ಲಿ ಕ್ರೈಸ್ತ ವಿಶ್ವಾಸಿ ಜನರೆಲ್ಲರೂ ಯೇಸುಕ್ರಿಸ್ತರ ಅನುಯಾಯಿಗಳು. ಕ್ರೈಸ್ತ ವಿಶ್ವಾಸಿ ಜನರು ಎಂದು ಹೇಳಿಕೊಳ್ಳುವ ನಾವು ಕ್ರಿಸ್ತ ನಡೆದ ಹಾದಿಯಲ್ಲಿ ಸಾಗಬೇಕಾಗಿದೆ. ಯೇಸುಕ್ರಿಸ್ತರು ಎಲ್ಲರನ್ನೂ ಒಂದೇ ಎಂಬ ಮನೋಭಾವನೆಯಿಂದ ಸೇವೆಯನ್ನು ಮಾಡುವ ಮೂಲಕ ಜೀವಿಸುವ ಉದ್ಧೇಶವನ್ನು ತೋರಿಸಿಕೊಟ್ಟವರಾಗಿದ್ದಾರೆ ಎಂದರು. ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ವಂ|ವಿಜಯ್ ಲೋಬೋ, ವಂ|ಸುನಿಲ್ ಜಾರ್ಜ್ ಡಿ’ಸೋಜ, ವಂ|ಅಶೋಕ್ ರಾಯನ್ ಕ್ರಾಸ್ತಾರವರು ಬಲಿಪೂಜೆಯಲ್ಲಿ ಪಾಲ್ಗೊಂಡರು.

ಬನ್ನೂರು ಚರ್ಚ್: ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್‌ರವರು ಧಾರ್ಮಿಕ ವಿಧಿವಿಧಾನ ನೆರವೇರಿಸಿ, ದೇವರ ರಾಜ್ಯದಲ್ಲಿ ಯಾರೂ ಸಣ್ಣವರು, ದೊಡ್ಡವರಿಲ್ಲ. ಪವಿತ್ರ ಪರಮಪ್ರಸಾದವು ಮನುಷ್ಯನಲ್ಲಿ ವಿಶ್ವಾಸ ಹಾಗೂ ಭ್ರಾತೃತ್ವವನ್ನು ವೃದ್ಧಿಸುತ್ತದೆ. ಮಾತ್ರವಲ್ಲದೆ ಸಮಾಜದಲ್ಲಿ, ಕುಟುಂಬದಲ್ಲಿ ಎಲ್ಲರನ್ನೂ ಹತ್ತಿರಕ್ಕೆ ಕರೆದೊಯ್ಯುತ್ತದೆ. ಯಾರು ಆತ್ಮಶುದ್ಧಿ ಮತ್ತು ಹೃದಯ ಶುದ್ಧಿಯಿಂದ ಭೋಜನವನ್ನು ಸ್ವೀಕರಿಸುತ್ತಾರೋ ಅವರು ದೇವರ ರಾಜ್ಯದಲ್ಲಿ ವಿಶೇಷ ಪ್ರಾತಿನಿಧ್ಯವನ್ನು ಹೊಂದುತ್ತಾರೆ. ಪವಿತ್ರ ಪರಮಪ್ರಸಾದದ ಮೂಲಕ ದೇವರ ಭೋಜನವನ್ನು ಸ್ವೀಕರಿಸಿದಾಗ ಆತ್ಮಸ್ಥೈರ್ಯ ದ್ವಿಗುಣಗೊಳ್ಳುತ್ತದೆ ಎಂದರು. ಸಹಾಯಕ ಧರ್ಮಗುರು ವಂ|ಪ್ರೇಮ್ ಡಿ’ಸೋಜ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಮರೀಲ್ ಚರ್ಚ್: ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಮಂಗಳೂರಿನ ಫ್ಯಾಮಿಲಿ ಲೈಫ್ ಸರ್ವಿಸ್ ಸೆಂಟರ್‌ನ ವಂ|ಅನಿಲ್ ಆಲ್ಫ್ರೆಡ್ ಡಿ’ಸೋಜರವರು ಸಂದೇಶ ನೀಡಿ, ಕ್ರೈಸ್ತ ಪವಿತ್ರಸಭೆಯಲ್ಲಿ ಧರ್ಮಗುರುಗಳು ಮಾತ್ರ ಯೇಸುಕ್ರಿಸ್ತರ ಅನುಯಾಯಿಗಳಲ್ಲ. ಕ್ರೈಸ್ತ ವಿಶ್ವ್ವಾಸಿ ಜನರು ಎಂದು ಕರೆದುಕೊಳ್ಳುವವರು ಎಲ್ಲರೂ ಕ್ರಿಸ್ತರ ಅನುಯಾಯಿಗಳು. ಪ್ರಭು ಯೇಸುಕ್ರಿಸ್ತರು ತನ್ನ ಕೊನೆಯ ಭೋಜನವನ್ನು ತನ್ನ ಹನ್ನೆರಡು ಜನ ಶಿಷ್ಯರೊಂದಿಗೆ ಶಾಶ್ವತ ಭೋಜನವನ್ನು ಸೇವಿಸಿರುವುದು ಕುಟುಂಬದ ಐಕ್ಯತೆಯನ್ನು ಸಾರುತ್ತದೆ. ಮನುಕುಲದ ಪಾಪ ಪರಿಹಾರಕ್ಕೋಸ್ಕರ ಪ್ರಭು ಯೇಸುಕ್ರಿಸ್ತರು ಭುವಿಗೆ ಜನ್ಮ ತಾಳಿದ ಉದ್ಧೇಶ ಪ್ರತಿಯೋರ್ವರು ಪ್ರೀತಿ, ವಿಶ್ವಾಸದಿಂದ ಬಾಳುವುದಾಗಿತ್ತು ಎಂದರು. ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ದಿಯಾಕೊನ್ ವಂ|ಜೊವಿನ್ ಸಿಕ್ವೇರಾರವರು ಬಲಿಪೂಜೆಯಲ್ಲಿ ಪಾಲ್ಗೊಂಡರು.

ಉಪ್ಪಿನಂಗಡಿ ಚರ್ಚ್: ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ಉಪ್ಪಿನಂಗಡಿ ಪರಿಸರದ ಸ್ಥಳೀಯ ಧರ್ಮಗುರು ವಂ|ವಿನ್ಸೆಂಟ್ ಸಿಕ್ವೇರಾರವರು ಬೈಬಲ್ ವಾಚಿಸಿ, ದೇವರು ನಮ್ಮ ಹೃದಯದಲ್ಲಿ ನೆಲೆ ನಿಂತಾಗ ಮಾತ್ರ ನಮ್ಮಲ್ಲಿ ಏಕತೆಯ ಮನೋಭಾವನೆ ಮೂಡಬಲ್ಲುದು. ಯಾರು ತಾನೇ ಶ್ರೇಷ್ಟ ಎಂದು ಹೇಳಿಕೊಳ್ಳುತ್ತಾನೋ ಅವನು ನಿಜವಾಗಿಯೂ ಶ್ರೇಷ್ಟನಲ್ಲ. ಯಾರು ತಾನು ಶ್ರೇಷ್ಟನೆಂದು ಹೇಳಿಕೊಳ್ಳುವುದಿಲ್ಲವೋ ಆತನೇ ನಿಜವಾದ ಶ್ರೇಷ್ಟ ವ್ಯಕ್ತಿಯಾಗಿರುತ್ತಾನೆ ಮಾತ್ರವಲ್ಲದೆ ಸಮಾಜದಲ್ಲಿ ಗುರುತಿಸಿಕೊಳ್ಳುವವನಾಗುತ್ತಾನೆ ಎಂದು ಸಂದೇಶ ನೀಡಿದರು. ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೋ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪಾದ ತೊಳೆಯುವಲ್ಲಿ ಮಹಿಳೆ, ಯುವಜನರಿಗೂ ಪ್ರಾತಿನಿಧ್ಯ: ಸಮಾಜದಲ್ಲಿ ಮಹಿಳೆಯರು ಕೂಡ ಪುರುಷರಿಗೆ ಸರಿಸಮಾನರಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಮನಗಂಡು ಹಾಗೂ ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸಿ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕಥೋಲಿಕ್ ಕ್ರೈಸ್ತ ಸಭೆಯಲ್ಲಿ ಏಸುಕ್ರಿಸ್ತರ ಕೊನೆಯ ಭೋಜನದ ದಿನದಂದು ಆಚರಿಸುವ ವಿಶ್ವಾಸಿಗಳ ಪಾದ ತೊಳೆಯುವ ಈ ಪವಿತ್ರ ಕಾರ್ಯದಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸಲು ಕಥೋಲಿಕ್ ಜಗದ್ಗುರು ಪೋಪ್ ಫ್ರಾನ್ಸಿಸ್‌ರವರು ಅನುಮೋದನೆ ಮತ್ತು ಸೂಚನೆ ನೀಡಿದ್ದು ಜಗತ್ತಿನಾದ್ಯಂತ ಎಲ್ಲಾ ಚರ್ಚ್‌ಗಳಲ್ಲಿ ಜಾರಿಗೊಳಿಸುವಂತೆ ಕರೆ ನೀಡಿದ್ದರು. ಅದರಂತೆ ಪುರುಷರು, ಮಹಿಳೆಯರು, ಧರ್ಮಭಗಿನಿಯರು, ವಯಸ್ಕರು, ಆರೋಗ್ಯವಂತ ಸಾಮಾನ್ಯ ವ್ಯಕ್ತಿಗಳು, ಯುವಜನರಿಗೆ ಪ್ರಾತಿನಿಧ್ಯ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಚರ್ಚ್‌ಗಳಲ್ಲಿ ಧರ್ಮಗುರುಗಳು ಪಾದಗಳನ್ನು ತೊಳೆಯಲಾಗುತ್ತದೆ.

ಆಯಾ ಚರ್ಚ್‌ನಲ್ಲಿ ವಿಶೇಷ ಪೂಜೆಯೊಂದಿಗೆ ಧರ್ಮಗುರುಗಳು 12 ಮಂದಿ ಕ್ರೈಸ್ತ ವಿಶ್ವಾಸಿ ಜನರ ಪಾದಗಳನ್ನು ತೊಳೆದರು. ಆಯಾ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಸ್ಯಾಕ್ರಿಸ್ಟಿಯನ್, ಗುರಿಕಾರರು, ವೇದಿ ಸೇವಕರು, ಗಾಯನ ಮಂಡಳಿ ಸದಸ್ಯರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಕೋವಿಡ್ ನಿಯಮವನ್ನು ಪಾಲಿಸುವ ಮೂಲಕ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಯೇಸುಕ್ರಿಸ್ತರಿಂದ ಮಾನವತೆಯ ಸರಳತೆಯ ಪಾಠ…
ಪವಿತ್ರ ಗುರುವಾರವೆಂದರೆ ಧಾರ್ಮಿಕ ಮತ್ತು ಮಾನವೀಯತೆಯ ಭಾಷೆಯಲ್ಲಿ ಇದೊಂದು ಪ್ರೀತಿಯ ದಿನ. `ನಿನ್ನ ನೆರೆಯರನ್ನು ನಿನ್ನಂತೆಯೇ ಪ್ರೀತಿಸು’ ಎಂಬ ಪ್ರಭು ಕ್ರಿಸ್ತರ ಆಜ್ಞೆ ಪ್ರಾಯೋಗಿಕವಾಗಿ ಇಂದಿನ ಸಂಸ್ಕಾರ ವಿಧಿಗಳಲ್ಲಿ ವ್ಯಕ್ತವಾಗುವ ದಿನ. ಯೇಸು ಕ್ರಿಸ್ತರು ಶಿಲುಬೆಗೇರುವ ಮೊದಲು ತನ್ನ 12 ಮಂದಿ ಶಿಷ್ಯರೊಂದಿಗೆ ಕುಳಿತು ಕೊನೆಯ ಭೋಜನ ಮಾಡಿದ ದಿನದ ನೆನಪಿನಲ್ಲಿ ನಡೆಯುವ ಆಚರಣೆಯಾಗಿದೆ. ಅಲ್ಲದೆ ಕೊನೆಯ ಭೋಜನದಲ್ಲಿ ರೊಟ್ಟಿ ಹಾಗೂ ದ್ರಾಕ್ಷಾರಸವನ್ನು ಪರಸ್ಪರ ಹಂಚಿಕೊಂಡು ತಿಂದು, ಇದನ್ನು ತನ್ನ ಮರಣಾ ನಂತರವೂ ಮುಂದುವರೆಸುವಂತೆ ಆದೇಶಿಸಿದ್ದರು. ಇದರೊಂದಿಗೆ ಸೇವೆಯ ಪ್ರತೀಕವಾಗಿ ತನ್ನ ಶಿಷ್ಯರ ಪಾದಸ್ನಾನ ಮಾಡುತ್ತಾ ಮಾನವತೆಯ ಸರಳತೆಯ ಪಾಠವನ್ನು ಅವರಿಗೆ ಬೋಧಿಸಿದ್ದರು. ಸಮಾಜದಲ್ಲಿ ಒಂದಲ್ಲಾ ಒಂದು ಅಧಿಕಾರವನ್ನು ಹೊಂದಿರುವ ನಾವೆಲ್ಲರೂ ಪ್ರಭು ಕ್ರಿಸ್ತರಿಂದ ಪಡೆದ ಅಧಿಕಾರದ ಸದುಪಯೋಗದೊಂದಿಗೆ ದುರುಪಯೋಗಗಳನ್ನು ಧ್ಯಾನಿಸುವ ದಿನವಾಗಿದೆ.

ಅಧಿಕಾರಿಗಳಿಗೆ ಕೊಡಲಿ ಪೆಟ್ಟು ಕೊಡುವ ಕ್ರಿಸ್ತ ಅಧಿಕಾರದ ಅರ್ಥ `ಸ್ವಾರ್ಥ ರಹಿತ ಸೇವೆ’ ಎಂದು ಸಾರುವ ದಿನವಿದು. ಈ ನೆನಪಿಗಾಗಿ ಪವಿತ್ರ ಗುರುವಾರದಂದು ಆಯಾ ಚರ್ಚ್‌ಗಳಲ್ಲಿ ವಿಶೇಷ ಪೂಜೆಯೊಂದಿಗೆ ಧರ್ಮಗುರುಗಳು 12 ಮಂದಿ ಕ್ರೈಸ್ತ ವಿಶ್ವಾಸಿ ಜನರ ಪಾದಗಳನ್ನು ತೊಳೆಯುತ್ತಾರೆ. ಪವಿತ್ರ ಗುರುವಾರದ ನಂತರ ಭಾನುವಾರ ನಡೆಯುವ ಈಸ್ಟರ್ ಸಂಡೇವರೆಗೆ ಮೂರು ದಿನಗಳಲ್ಲಿ ಯೇಸುವಿನ ಕೊನೆಯ ಭೋಜನ, ಶಿಲುಬೆಗೇರುವಿಕೆ ಮತ್ತು ಪುನರುತ್ಥಾನದ ದಿನಗಳನ್ನಾಗಿ ಆಚರಿಸಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.