HomePage_Banner
HomePage_Banner
HomePage_Banner
HomePage_Banner

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಶಿಕ್ಷಣ ಕ್ಷೇತ್ರಕ್ಕೊಂದು ಕೊಡುಗೆ | ಏ.8ಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಇ) ನೂತನ ಕಟ್ಟಡದ ಲೋಕಾರ್ಪಣೆ

ಪುತ್ತೂರು: ಶಿಕ್ಷಣದೊಂದಿಗೆ ರಾಷ್ಟ್ರೀಯತೆ, ಆಧ್ಯಾತ್ಮ, ಸಾಂಸ್ಕೃತಿಕ ಚಿಂತನೆ ಮೈಗೂಡಿಸುತ್ತಾ ವಿದ್ಯಾರ್ಥಿಗಳನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸಿ ಸಮಾಜದ ಆಸ್ತಿಯನ್ನಾಗಿಸಬೇಕು ಎಂಬ ಧೈಯದಡಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಶೈಕ್ಷಣಿಕ ಕ್ಷೇತ್ರಕ್ಕೊಂದು ಹೊಸ ವರ್ಷದ ಕೊಡುಗೆಯಾಗಿ ಸಿಬಿಎಸ್‌ಇ ಆರಂಭಿಸಿದೆ. ಇದರ ನೂತನ ಕಟ್ಟಡ ಏ.೮ಕ್ಕೆ ಸಂಜೆ ಗಂಟೆ ೫.೩೦ಕ್ಕೆ ಲೋಕಾರ್ಪಣೆಗೊಳ್ಳುತ್ತಿದ್ದು, ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ.

 
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿವೇಕಾನಂದ ಸಿಬಿಎಸ್‌ಇ ಸಂಸ್ಥೆಯು, ಪುತ್ತೂರಿನ ಮಹಾಜನತೆಯ ಹಲವು ವರ್ಷಗಳ ಕನಸನ್ನು ಸಾಕಾರಗೊಳಿಸುವತ್ತ ಹೊಸ ಹೆಜ್ಜೆಯನ್ನಿರಿಸಿದೆ.

ವಿದ್ಯಾರ್ಥಿಯಲ್ಲಿ, ಭಾರತೀಯ ಸಂಸ್ಕೃತಿ, ಜ್ಞಾನ ಮಾತ್ರವಲ್ಲದೆ ಸದ್ಗುಣ, ಸನ್ನಡತೆಗಳನ್ನು ತುಂಬಿ, ರಾಷ್ಟ್ರಪ್ರೇಮವನ್ನು ಜಾಗೃತಿಗೊಳಿಸಿ, ನಮ್ಮ ಭವ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸಲು ಬೇಕಾದ ಸಕಲ ಚಟುವಟಿಕೆಗಳನ್ನು ಹೊಂದಿರುತ್ತದೆ. ಈ ಸಂಸ್ಥೆ ೨೦೨೦-೨೧ನೆ ಸಾಲಿನಿಂದಲೇ ಕಾರ್ಯ ಆರಂಭಿಸಿದೆ. ಎಲ್.ಕೆ.ಜಿ ಯಿಂದ ತೊಡಗಿ ಏಳನೆಯ ತರಗತಿಯವರೆಗೆ ಯಾವುದೇ ತರಗತಿಗೂ ವಿದ್ಯಾರ್ಥಿಗಳು ಬಂದು ಸೇರಿಕೊಳ್ಳುವುದಕ್ಕೆ ಇಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎಂದ ಅವರು ನೂತನ ಕಟ್ಟಡವನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ. ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಮುಖ್ಯ ಅಭ್ಯಾಗತರಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳೀನ್ ಕುಮಾರ್ ಕಟೀಲ್, ಕರ್ನಾಟಕ ಸರಕಾರದ ಮುಜರಾಯಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು, ಪುತ್ತೂರು ನಗರ ಸಭೆ ಅಧ್ಯಕ್ಷ ಜೀವಂಧರ್ ಜೈನ್, ಮಂಗಳೂರು ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್‌ನ ಜನರಲ್ ಮ್ಯಾನೇಜರ್ ಆಗಿರುವ ಯೋಗೀಶ್ ಆಚಾರ್ಯ ಉಪಸ್ಥಿತರಲಿದ್ದಾರೆ ಎಂದು ಅವರು ಹೇಳಿದರು.

೭೦ ಸಂಸ್ಥೆಗಳನ್ನು ಒಳಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘ ಸಮಾಜದ ಆವಶ್ಯಕತೆಯನ್ನು ಗಮನಿಸಿಕೊಂಡು ಕಾಲ ಕಾಲಕ್ಕೆ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪನೆ ಮಾಡುತ್ತಿದೆ. ೧೯೬೫ರಲ್ಲಿ ವಿವೇಕಾನಂದ ಕಾಲೇಜು ಸ್ಥಾಪನೆ ಆಯಿತು. ಆ ನಂತರದ ದಿನಗಳಲ್ಲಿ ಪಾಲಿಟೆಕ್ನಿಕ್, ಕಾನೂನು ಕಾಲೇಜು, ಇಂಜಿನಿಯರಿಂಗ್, ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಗಳು ಶಿಶು ಮಂದಿರಗಳು ಇತ್ಯಾದಿ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಪ್ರಕೃತ ೧೯೦೦೦ ಕ್ಕೂ ಅಧಿಕ ವಿದ್ಯಾರ್ಥಿ/ನಿಯರು ಈ ಶೈಕ್ಷಣಿಕ ಛತ್ರದಲ್ಲಿ ಜ್ಞಾನಾರ್ಜನೆ ಗೈಯುತ್ತಿದ್ದಾರೆ. ಸುಮಾರು ೧೬೦೦ ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಮಾತೃ ಭಾಷಾ ಶಿಕ್ಷಣಕ್ಕೆ ಆದ್ಯತೆಯನ್ನು ನೀಡುವುದಕ್ಕಾಗಿ ಗ್ರಾಮಾಂತರದಲ್ಲಿ ೨೦ ಕನ್ನಡ ಮಾಧ್ಯಮ ಪ್ರಾಥಮಿಕ & ಪ್ರೌಢ ಶಾಲೆಗಳಿವೆ. ಪುತ್ತೂರಿನಲ್ಲಿ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳು ಇವೆ. ಸಮಾಜದ ಎಲ್ಲಾ ವರ್ಗಗಳ ಜನರಿಗೂ ಭಾರತೀಯ ಸಂಸ್ಕೃತಿಯನ್ನೊಳಗೊಂಡ ಗುಣಮಟ್ಟದ ಶಿಕ್ಷಣವನ್ನು ನಮ್ಮಲ್ಲಿ ಸಂಸ್ಥೆಗಳಲ್ಲಿ ನೀಡುತ್ತಿದ್ದೇವೆ. ಪುತ್ತೂರು ತಾಲೂಕು ಮತ್ತು ಆಸುಪಾಸಿನ ತಾಲೂಕುಗಳಾದ ಸುಳ್ಯ, ಬಂಟ್ವಾಳ, ಬೆಳಗಂಡಿ ಹಾಗೂ ಕೇರಳ ರಾಜ್ಯದಲ್ಲಿ ನಮ್ಮ ಸಂಸ್ಥೆ ಕಾರ್ಯಾಚರಿಸುತ್ತದೆ ಎಂದ ಅವರು ಶಿಕ್ಷಣದ ಜೊತೆ ಸಾಮಾಜಿಕ ಕಳಕಳಿಯನ್ನು ಸಂಸ್ಥೆ ಹೊಂದಿದೆ ಎಂದು ಡಾ. ಪ್ರಭಾಕರ ಭಟ್ ಹೇಳಿದರು.

ಮೂರು ಆಯಾಮಗಳ ಪಾರ್ಕ್:
ವಿಜ್ಞಾನ ಮಾದರಿಗಳ ಪಾರ್ಕ್: ಪುತ್ತೂರು ಆಸುಪಾಸಿನಲ್ಲಿಯೇ ಮೊತ್ತ ಮೊದಲ ಬಾರಿಗೆ ಮೂರು ಆಯಾಮಗಳ ವಿಜ್ಞಾನ ಮಾದರಿಗಳ ಪಾರ್ಕನ್ನು ಅಳವಡಿಸುತ್ತಿರುವ ಹೆಮ್ಮೆ ನಮ್ಮ ಸಂಸ್ಥೆಗಿದ್ದು, ಕೊಠಡಿಯೊಳಗಿನ ಪಾಠದ ಜೊತೆಗೆ ಹೊರಗಿನ ಜಗತನ್ನು ತಿಳಿಸುವ ಪರಿಕಲ್ಪನೆ ಹೊಂದಿಕೊಂಡು ಶಿಕ್ಷಣ ನಡೆಯಲಿದೆ. ವಿಜ್ಞಾನದ ಬಗ್ಗೆ ಓದುವುದರ ಜೊತೆಗೆ, ಆಯಾ ವಸ್ತುಗಳನ್ನು ಸ್ಮತಃ ನೋಡುವುದು, ಸ್ಪರ್ಷಿಸಿ ಅನುಭವಿಸುವುದು ತನ್ನ ಕುಶಲತೆಯನ್ನು ಅದರಲ್ಲಿ ಪ್ರದರ್ಶಿಸುವುದು ಇತ್ಯಾದಿಗಳು ನಿಜವಾದ ವಿಜ್ಞಾನದ ಕಲಿಕೆ ಎಂದೆನಿಸುತ್ತದೆ, ಉದಾಹರಣೆಗೆ, ನ್ಯೂಟನ್ ನ, ಚಲನೆಯ ಮೂರನೇ ನಿಯಮವಾದ, ‘ಯಾವುದೇ ಕ್ರಿಯೆಗೆ, ಅದಕ್ಕೆ ಸರಿಸನವಾದ ಆದರೆ ವಿರುದ್ಧ ಧಿಕ್ಕಿನಲ್ಲಿ ಪ್ರತಿಕ್ರಿಯೆ ಇರುತ್ತದೆ ಎಂಬುದನ್ನು ಮಕ್ಕಳು ಪಠ್ಯದಲ್ಲಿ ಓದುವುದಕ್ಕಿಂತ ಹೆಚ್ಚು ಅದನ್ನು ಸ್ವತಃ ನೋಡಿ ಅನುಭವಿಸಿದರೆ ನಿಜಕ್ಕೂ ಪರಿಣಾಮಕಾರಿಯಾಗುತ್ತದೆ.

ಆತ್ಮನಿರ್ಭರ ಭಾರತದ ಪರಿಕಲ್ಪನೆ: ಇದರಲ್ಲಿರುವ ವಿಜ್ಞಾನ ಮಾದರಿಗಳು ಮಕ್ಕಳಲ್ಲಿ ಮಾತ್ರವಲ್ಲದ ಹಿರಿಯರಲ್ಲೂ, ವಿಜ್ಞಾನದ ವಿವಿಧ ವಿಭಾಗಗಳಾದ ಬೆಳಕು, ಶಬ್ಬ, ಉಷ್ಣತೆ, ಯಂತ್ರಗಳ ರಚನೆ, ರಸಾಯನಶಾಸ್ತ್ರ, ಜೀವಶಾಸ್ತ್ರ ಮಾತ್ರವಲ್ಲದೆ ಇಂದಿನ ಅನ್ವಯಿಕ ವಿಜ್ಞಾನಗಳ ಬಗೆಗಿನ ಆಸಕ್ತಿಯನ್ನು ಉದ್ದೀಪನಗೊಳಿಸುವಂತೆ ರಚಿಸಲ್ಪಟ್ಟಿವೆ ಮತ್ತು ಸಂಶೋಧನಾತ್ಮಕ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತದೆ. ಇದು ನಮ್ಮ ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪೂರಕವಾಗಿರುತ್ತದೆ.
ಕಲಿತ ವಿಷಯ, ಸಂಪಾದಿಸಿದ ಜ್ಞಾನ ದೀರ್ಘಕಾಲ ಉಳಿಕೆ: ಹಾಗೆಯೇ, ಮಕ್ಕಳಿಗೆ ಪಠ್ಯದ ಸೈದ್ಧಾಂತಿಕ ನೆಲೆಯ ಬೋಧನೆಯ ಜೊತೆಗೆ ಅವರಲ್ಲಿ ಅವುಗಳ ಬಗೆಗಿನ ಜಿಜ್ಞಾಸೆ, ತಿಳಿಯಬೇಕೆನ್ನುವ ಕಾತರತೆ, ವೈಜ್ಞಾನಿಕ ನೆಲೆಯಲ್ಲಿ ಚಿಂತನೆ ಕುತೂಹಲ, ಇತ್ಯಾದಿಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ಮಕ್ಕಳಲ್ಲಿ ಸಂವಾದನಾತ್ಮಕತೆ ಮತ್ತು ಕ್ರಿಯಾಶೀಲ ಚಟುವಟಿಕೆಗಳನ್ನು ಹೆಚ್ಚಿಸಿ, ಕಲಿತ ವಿಷಯಗಳು ಸಂಪಾದಿಸಿದ ಜ್ಞಾನ ಮನದಲ್ಲಿ ದೀರ್ಘಕಾಲ ಉಳಿಯುವಂತೆ ಮಾಡುತ್ತದೆ. ಆ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವು ಇಲ್ಲಿಯ ಕೇಂದ್ರೀಯ ಶಿಕ್ಷಣ ವ್ಯವಸ್ಥೆಯ(ಸಿಬಿಎಸ್‌ಇ) ಕಲಿಕೆಯ ಮೂಲಕ ಸಾಕಾರಗೊಳ್ಳುವುದು. ಈ ಮೂರು ಆಯಾಮಗಳ ವಿಜ್ಞಾನ ಮಾದರಿಗಳ ಪಾರ್ಕ್, ಪ್ರಸ್ತುತ ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಖ್ಯಾತ ಹೃದ್ರೋಗ ತಜ್ಞೆ, ಹಾಗೂ ಅಲ್ಲಿಯ ಪ್ರತಿಷ್ಠಿತ ಎಲ್ಲಿಸ್ ಐಲ್ಯಾಂಡ್ ಮೆಡಿಕಲ್ ಆಫ್ ಹೊನಾರ್ ಗೌರವಯುತ ಸನ್ಮಾನವನ್ನು ಪಡೆದ ನಮ್ಮ ಸಂಸ್ಥೆಯ ಹೆಮ್ಮೆಯ ಹಳೆ ವಿದ್ಯಾರ್ಥಿನಿಯೂ ಆದ ಡಾ. ಅನ್ನಪೂರ್ಣ ಎಸ್ ಕಿಣಿಯವರ ಪ್ರೀತಿಯ ಕೊಡುಗೆಯಾಗಿದೆ. ಇವರು ಪುತ್ತೂರಿನ ಪುಖ್ಯಾತ ಉದ್ಯಮಿಗಳಾಗಿದ್ದ ನಾಮದೇವ ಪ್ರಭು ಮತ್ತು ಪುಷ್ಪಲತ ದಂಪತಿ ಸುಪುತ್ರಿ ಆಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಕೃಷ್ಣ ಭಟ್, ಸಿಬಿಎಸ್‌ಇ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ, ಕಾರ್ಯದರ್ಶಿ ಭರತ್ ಪೈ, ಪ್ರಾಂಶುಪಾಲೆ ಸಿಂಧು ಬಿ.ಜೆ, ಸದಸ್ಯರಾದ ಶಂಕರಿ ಶರ್ಮ, ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಚಲ್ಲಂಗಾರು ಉಪಸ್ಥಿತರಿದ್ದರು. ಸಂಸ್ಥೆಯಲ್ಲಿ ಖಜಾಂಜಿಯಾಗಿ ಡಾ. ಅಶೋಕ್ ಪ್ರಭು , ಅಜೇಯ್ ಪಡಿವಾಳ್, ವಿಜಯಾನಂದ, ನಿರೀಕ್ಷಿತ್ ರೈ, ಪ್ರೀತಿ ಶೆಣೈ, ಇಂಧುಶೇಖರ್ ಸಹಕರಿಸಲಿದ್ದಾರೆ.

ವಿಶೇಷತೆಗಳು:
ವಿಶಾಲವಾದ ಮತ್ತು ಆಕರ್ಷಣಾಯುಕ್ತ ಕ್ಯಾಂಪಸ್, ಆಕರ್ಷಕ, ಸುಸಜ್ಜಿತ ಕಟ್ಟಡ, ವಿಶಾಲವಾದ ತರಗತಿ ಹಾಗೂ ಆಧುನಿಕ ತಂತ್ರಾಂಶಗಳ ಬಳಕೆ, ಪುತ್ತೂರಿನ ಆಸುಪಾಸಿನಲ್ಲೇ ಮೊತ್ತಮೊದಲ ೩ ಆಯಾಮಗಳ ವಿಜ್ಞಾನ ಮಾದರಿಗಳ ಪಾರ್ಕ್, ಪಠ್ಯೇತರ ಚಟುವಟಿಕೆ, ವಿಡಿಯೋ ಕ್ಲಾಸ್, ಹೊರಾಂಗಣ ಕ್ರೀಡಾ ವ್ಯವಸ್ಥೆ, ಯೋಗ ವಿಜ್ಞಾನ, ಶ್ರೇಷ್ಠಗುಣ ಮಟ್ಟದ ಶಿಕ್ಷಣ, ನುರಿತ ಹಾಗೂ ಪರಿಣಿತ ಅಧ್ಯಾಪಕರ ತಂಡ

ಶಿಕ್ಷಣದ ಜತೆ ಸಾಮಾಜಿಕ ಕಳಕಳಿ :
ಶಿಕ್ಷಣ ಜತೆಗೆ ವಿದ್ಯಾರ್ಥಿಗಳಿಗೆ ಸಾಮಾಜಿಕ ಸಂಬಂಧಗಳು, ಮೌಲ್ಯಗಳು ಪರಿಸರ ಇತ್ಯಾದಿ ಕ್ಷೇತ್ರ ಕುರಿತು ಅಧ್ಯಯನ ಹಾಗೂ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಗ್ರಾಮ ವಿಕಾಸ ಯೋಜನೆ ಕೆಲಸ ನಿರ್ವಹಿಸುತ್ತಾರೆ. ನಮ್ಮ ೩೬ ಶಿಕ್ಷಣ ಸಂಸ್ಥೆಗಳು ೩೬ ಗ್ರಾಮಗಳನ್ನು ದತ್ತು ಸ್ವೀಕಾರ ಮಾಡಿ ಕೃಷಿ, ಆರೋಗ್ಯ, ಸಾಂಸ್ಕೃತಿಕ, ನೆಲ-ಜಲ ಸಂಸ್ಕಾರ ಮುಂತಾದ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆ ನಡೆಸುತ್ತದೆ. ಭಾರತೀಯ ನಾಗರೀಕ್ಷ ಸೇವೆಗಳಿಗೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಯಶಸ್. ಸಂಸ್ಥೆಯಡಿಯಲ್ಲಿ ನೀಡುತ್ತೇವೆ. ಪ್ರಸ್ತುತ ೬೨ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಭವಿಷ್‌ನಲ್ಲಿ ಉತ್ತಮ ಶಿಕ್ಷಕರ ಅಗತ್ಯ ಮನಗಂಡು ಉತ್ತಮ ಶಿಕ್ಷಕರನ್ನ ತಯಾರು ಮಾಡುವ ಘಟಕ ಭವಿಷ್, ಸುಮಾರು ೧೨೦ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಾರೆ. ರೇಡಿಯೋ ಪಾಂಚಜನ್ಯದ ಮೂಲಕ ಸಮುದಾಯದ ಬಂಧುಗಳನ್ನು ರೆಡಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.