ಕೆಯ್ಯೂರು: ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕಣಿಯಾರು ಮಲೆಯ ಪ್ರಕೃತಿ ನಡುವೆ ರಮ್ಯವಾಗಿರುವ ಕಾಡಿನ ತಪ್ಪಲಿನಲ್ಲಿ ಮಾಡಾವು ಗೌರಿ ಹೊಳೆಯ ದಡದಲ್ಲಿ ನೆಲೆಯಾಗಿರುವ ಶ್ರೀ ಹೊಸಮ್ಮ ದೈವವು ಹತ್ತೂರ ಭಕ್ತರನ್ನು ಬಗೆ,ಬಗೆಯ ಕಾರಣಿಕ ಶಕ್ತಿಗಳಿಂದ ಸೆಳೆಯುತ್ತದೆ. ತುಳುನಾಡಿನ ಕಾರಣಿಕ ಕ್ಷೇತ್ರಗಳಲ್ಲಿ ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನವೂ ಒಂದಾಗಿದೆ.
ಹೊಸಮ್ಮ ಎಂದರೆ ಪಾರ್ವತಿ ಮಾತೆಯ ಅಂಶವನ್ನು ಪಡೆದ ದೈವವಾಗಿದೆ.ತುಳುವಿನಲ್ಲಿ “ಪೊಸ ಭೂತ” (ಪೊಸಮ್ಮ) ಎಂದು ಕರೆದಂತೆ ಕನ್ನಡದಲ್ಲಿ ಹೊಸಮ್ಮ ಎಂದು ಕರೆಯಾಗುತ್ತಿದೆ.
ಮಂತ್ರಕ್ಕೆ ಮಣಿಯದ ಮಹಾಶಕ್ತಿ
ತನ್ನ ಆಗಾದ ಶಕ್ತಿ ಚೈತನ್ಯ ದಿಂದ ಭಕ್ತರ ಇಷ್ಟಾರ್ಥ ಈಡೇರಿಸುವ ಮಾಹಾಮಾತೆ ಹೊಸಮ್ಮ ದೈವ ಯಾವುದೇ ಮಂತ್ರವಾದಿಗಳ ಮಂತ್ರ,ತಂತ್ರಗಳಿಗೆ ಮಣಿಯದ ಶಕ್ತಿಯಾಗಿದೆ. ಹಿಂದೊಮ್ಮ ಮಂತ್ರವಾದದಿಂದ ಈ ದೈವವನ್ನು ಮಣಿಸಲು ಯತ್ನಿಸಿದರಂತೆ ಆದರೆ ತನ್ನ ವಿಶಿಷ್ಟ ಕಾರಣಿಕ ಶಕ್ತಿಯಿಂದ ಆ ಮಂತ್ರಶಕ್ತಿಯನ್ನು ಮೆಟ್ಟಿನಿಂತ ಏಕೈಕ ದೈವ ಹೊಸಮ್ಮ. ನೇಮ ನಡಾವಳಿಯಲ್ಲಿ ಗಗ್ಗರವನ್ನು ಕಾಲಿಗೆ ತೊಡಿಸುವ ತನಕ ಮೊಣಕಾಲಿನಲ್ಲಿಯೇ ನರ್ತನ ಮಾಡುತ್ತದೆ. ಗಗ್ಗರವನ್ನು ಕಾಲಿಗೆ ತೊಡಿಸಿದ ಬಳಿಕ ದೈವ ಎದ್ದುನಿಲ್ಲುತ್ತದೆ. ಇದು ಬ್ರಾಹ್ಮಣತ್ವಕ್ಕೆ ಗೌರವ ನೀಡುವ ಮೂಲಕ ಮಂತ್ರಶಕ್ತಿಯನ್ನು ಮಣಿಸಿದ ಶಕ್ತಿಯಾಗಿ ಪ್ರತಿಬಿಂಬಿಸುತ್ತದೆ.ಬಂಟ್ವಾಳ ಅನಂತಾಡಿಯಿಂದ ಮಾತೆ ಬಂದಿದ್ದಾಗಿ ಹೇಳಲಾಗುತ್ತದೆ.
ಸತ್ಯ,ದರ್ಮದ ಚಾವಡಿ:
ಕೇರಳ ರಾಜ್ಯದ ಕಾನತ್ತೂರು ನಾಲ್ವರ್ ದೈವಸ್ಥಾನ, ನ್ಯಾಯಚಾವಡಿಯಾಗಿ ಎಷ್ಟು ಪ್ರಸಿದ್ದಿಯಾಗಿದೆಯೋ ಅಷ್ಟೇ ಪ್ರಸಿದ್ದಿಯನ್ನು ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನವು ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದು ದ.ಕ.ದ ಕಾನತ್ತೂರು ಎಂದು ಕರೆಯಲ್ಪಡುತ್ತದೆ.
ಪ್ರತ್ಯಕ್ಷ ನಾಗದೇವರ ದರ್ಶನ:
ತುಳುನಾಡಿನಲ್ಲಿ ದೈವ ಆರಾದನೆಯಂತಯೇ ನಾಗರಾದನೆಗೂ ತನ್ನದೇ ಆದ ವಿಶೇಷ ಮಹತ್ವವಿದೆ. ಆದೇ ರೀತಿ ಪಲ್ಲತ್ತಡ್ಕ ಕ್ಷೇತ್ರದಲ್ಲಿ ಪ್ರತಿದಿನ ನಾಗದೇವರು ಇಲ್ಲಿಗೆ ಬರುವ ಭಕ್ತರಿಗೆ ಪ್ರತ್ಯಕ್ಷ ದರ್ಶನ ನೀಡುವುದು ಇಲ್ಲಿನ ಇನ್ನೋಂದು ವೈಶಿಷ್ಟ್ಯ. ಎಂದು ಹೇಳಲಾಗುತ್ತದೆ. ಪರಿವಾರ ದೈವಗಳಾದ ನಾಗ ರಕ್ತೇಶ್ವರಿ, ಪಂಜುರ್ಲಿ, ಕಲ್ಲುರ್ಟಿ,ಕಲ್ಲಾಲ್ತ, ಗುಳಿಗ, ಓರಿಮಾಣಿ ಗುಳಿಗ, ದೈವಗಳ ನೇಮ ವಿಜೃಂಭಣೆಯಿಂದ ನಡೆಯುತ್ತದೆ. ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನದಲ್ಲಿ ಇದೀಗ ವರ್ಷಾವಧಿ ನೇಮದ ಸಂಭ್ರಮ.