- ಸುದ್ದಿ ಮಾಹಿತಿ ಟ್ರಸ್ಟ್ನ ಅಪರಾಧ ಮುಕ್ತ ನಮ್ಮೂರು ಅಭಿಯಾನ ಶ್ಲಾಘನೀಯ
ಸೋನವಣೆ ಋಷಿಕೇಷ್ ಭಗವಾನ್: ಮಹಾರಾಷ್ಟ್ರ ಮೂಲದವರಾಗಿರುವ ಸೋನವಣೆ ಅವರು, ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಷನ್ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪಡೆದು ಬಳಿಕ ಮೂರು ವರ್ಷಗಳ ಕಾಲ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ೨೦೧೫ರಲ್ಲಿ ಐಪಿಎಸ್ ಸೆಲೆಕ್ಷನ್ ಆಗಿ ಕಾನೂನು ಸುವ್ಯವಸ್ಥೆ ಪಾಲನೆಯ ಮಹತ್ತರ ಹೊಣೆ ಇರುವ ಪೊಲೀಸ್ ಇಲಾಖೆಗೆ ಕಾಲಿಟ್ಟರು.ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಕಳ ಮತ್ತು ಬಂಟ್ವಾಳದಲ್ಲಿ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿರುವ ಸೋನವಣೆ ಅವರು ಯಾದಗಿರಿಯಲ್ಲಿ ಎರಡು ವರ್ಷಗಳ ಕಾಲ ಎಸ್.ಪಿ.ಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್ ಆಶ್ರಯದಲ್ಲಿ ಪುತ್ತೂರಿನ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿರುವ ಲೋಕಲ್-ವೋಕಲ್ ಅಭಿಯಾನ ಸರಣಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಅಪರಾಧ ಮಕ್ತ ನಮ್ಮೂರು ಅಭಿಯಾನ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಸೋನವಣೆ ಋಷಿಕೇಷ್ ಭಗವಾನ್ ಹೇಳಿದ್ದಾರೆ.
ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಏ.೩ರಂದು ಪುತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಯೊಂದಿಗೆ ಮಾತನಾಡಿದರು.ಸುದ್ದಿ ವರದಿಗಾರರು ಎಸ್.ಪಿ.ಯವರನ್ನು ಭೇಟಿ ಮಾಡಿ ಮಾತುಕತೆ ಆರಂಭಿಸಿದಾಗಲೇ, ಏ.೩ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆದ ಗ್ರಾಮ ಸ್ವರಾಜ್ಯ-ಜನಾಧಿಕಾರ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ನೀವೀಗ ಪ್ರಾರಂಭಿಸಿರುವ ಅಭಿಯಾನ ಶ್ಲಾಘನೀಯವಾದುದು.ಸಾರ್ವಜನಿಕರ ಸಹಕಾರ ಸಿಕ್ಕಿದಾಗ ಮಾತ್ರ ಈ ಯೋಚನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದಕ್ಕೆ ಸಾಧ್ಯ, ಹಾಗಾಗಿ ತಮ್ಮ ಭಾಗದಲ್ಲಿ ನಡೆಯುವ ಅಪರಾಧ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಲ್ಲಿ ನಾವು ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ. ಹಾಗಾಗಿ ಸಾರ್ವಜನಿಕರ ಸಹಕಾರದ ಮೇಲೆ ಅಪರಾಧ ಮುಕ್ತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಇಲ್ಲಿನ ಜನ ಕಾನೂನು ತಿಳುವಳಿಕೆಯುಳ್ಳವರು: ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ನೀವು ಅಧಿಕಾರ ಸ್ವೀಕರಿಸಿದ್ದೀರಿ.ಜಿಲ್ಲೆಯ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಋಷಿಕೇಶ್ ಅವರು, ನಾನು ಈ ಹಿಂದೆ ಬಂಟ್ವಾಳದಲ್ಲಿ ಎ.ಎಸ್.ಪಿ. ಆಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇದೆ.ಇಲ್ಲಿನ ಜನರಲ್ಲಿ ಕಾನೂನಿನ ತಿಳುವಳಿಕೆ ಇದ್ದು, ತಮ್ಮ ಹಕ್ಕುಗಳ ಬಗ್ಗೆ ಧ್ವನಿ ಎತ್ತುವ ಮತ್ತು ತಮ್ಮ ಹಕ್ಕುಗಳ ಕುರಿತಾಗಿ ಸ್ಪಷ್ಟವಾಗಿ ಇಲ್ಲಿನ ಜನ ಮಾತನಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕ ದೂರಿಗೆ ತಕ್ಷಣ ಸ್ಪಂದನೆ ಇಲಾಖೆಯ ಆದ್ಯತೆಯಾಗಿದೆ: ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ನಿಮ್ಮ ಯೋಚನೆಗಳೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಸೋನವಣೆ ಅವರು, ಠಾಣೆಗೆ ದೂರು ನೀಡಲು ಸಾರ್ವಜನಿಕರು ಬಂದ ಸಂದರ್ಭದಲ್ಲಿ ಅವರ ದೂರಿಗೆ ಸೂಕ್ತವಾಗಿ ಸ್ಪಂದನೆಯನ್ನು ನೀಡಬೇಕು ಮತ್ತು ದೂರಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಜರಗಿಸುವ ಕಾರ್ಯಗಳು ನಮ್ಮ ಆದ್ಯತೆಯಾಗಿರುತ್ತದೆ.ಹೀಗೆ ಸಾರ್ವಜನಿಕರ ದೂರುಗಳಿಗೆ ನಾವು ಶೀಘ್ರವಾಗಿ ಸ್ಪಂದಿಸಿದಷ್ಟು ಪೊಲೀಸರ ಬಗ್ಗೆ ನಾಗರಿಕರಿಗೆ ನಂಬಿಕೆ ಹೆಚ್ಚಾಗುತ್ತದೆ.ಈಗಾಗಲೇ ಪೊಲೀಸ್ ಬೀಟ್ ವ್ಯವಸ್ಥೆ ಜಾರಿಯಲ್ಲಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗುವಂತೆ ಮಾಡುವಲ್ಲಿ ಹಾಗೂ ಈ ಮೂಲಕ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿಗಳ ನಡುವಿನ ಸಂಬಂಧ ಸುಧಾರಣೆಗೊಳ್ಳುವಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಭರವಸೆಯನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಕೋಮು ಸೌಹಾರ್ದತೆಗೆ ಧಕ್ಕೆ ಮಾಡುವ ವ್ಯಕ್ತಿ, ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ದ.ಕ.ಜಿಲ್ಲೆಯಲ್ಲಿ ಕೋಮುಸೂಕ್ಷ್ಮ ಪ್ರದೇಶಗಳು ಹೆಚ್ಚು ಇದ್ದು, ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸಂಬಂಧಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವುದರಿಂದ ಈ ಎರಡು ಪ್ರಮುಖ ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ನಿಮ್ಮ ಆಲೋಚನಗಳೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್.ಪಿ.ಯವರು, ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಿದ್ದು, ಕೋಮು ಸೌಹಾರ್ದತೆಯನ್ನು ಹಾಳುಮಾಡುವ ಶಕ್ತಿಗಳು ಮತ್ತು ವ್ಯಕ್ತಿಗಳ ವಿರುದ್ಧ ನಾವು ಕಟ್ಟುನಿಟ್ಟಿನ ತುರ್ತು ಕ್ರಮವನ್ನು ಕೈಗೊಳ್ಳುತ್ತೇವೆ ಎಂಬ ಖಾತ್ರಿಯನ್ನು ಸಾರ್ವಜನಿಕರಿಗೆ ನಾನು ಈ ಮಾಧ್ಯಮದ ಮೂಲಕ ನೀಡಲು ಬಯಸುತ್ತೇನೆ ಹಾಗೂ ಗಾಂಜಾ ಹಾಗೂ ಮಾದಕದ್ರವ್ಯ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ ಮತ್ತು ಮುಂಬರುವ ದಿನಗಳಲ್ಲೂ ಈ ಜಾಲದ ಮೂಲವನ್ನು ಪತ್ತೆ ಮಾಡುವಲ್ಲಿ ಹಾಗೂ ಇದರಲ್ಲಿ ಭಾಗಿಯಾಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ನಮ್ಮ ಇಲಾಖೆ ನಿರಂತರ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಲಿದೆ ಎಂಬ ಭರವಸೆಯನ್ನು ನೂತನ ಪೊಲೀಸ್ ವರಿಷ್ಠಾಧಿಕಾರಿಯವರು ಇದೇ ಸಂದರ್ಭದಲ್ಲಿ ನೀಡಿದರು.
ಕೋವಿಡ್ ನಿಯಮ ಪಾಲನೆ ಅತ್ಯಗತ್ಯ: ಕೋವಿಡ್ ನಿಯಮಾವಳಿಗಳ ಬಗ್ಗೆ ಸಾರ್ವಜನಿಕರಲ್ಲಿ ಇರುವ ಗೊಂದಲಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಮ್ಮ ಸ್ಪಷ್ಟನೆ ಏನೆಂಬ ಪ್ರಶ್ನೆಗೆ ಉತ್ತರಿಸಿದ ಸೋನವಣೆ ಅವರು, ಸರಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ವ್ಯವಹರಿಸುವುದು ಮತ್ತು ಕಾರ್ಯಕ್ರಮಗಳನ್ನು ನಡೆಸುವುದು, ಸಾಮಾಜಿಕ ಅಂತರಗಳ ಪಾಲನೆ, ಮಾಸ್ಕ್ ಧರಿಸುವುದು.. ಹೀಗೆ ಪ್ರತಿಯೊಬ್ಬರೂ ಈ ನಿಯಮಾವಳಿಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸಾರ್ವಜನಿಕರ ನಿರೀಕ್ಷೆಯಂತೆ ಸಮಸ್ಯೆಗಳಿಗೆ ಸ್ಪಂದಿಸುವೆ”: ಸಾರ್ವಜನಿಕರ ನಿರೀಕ್ಷೆಗಳಿಗೆ ತಕ್ಕ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ತಮ್ಮ ಮೇಲಿದ್ದು, ಜನಸ್ನೇಹಿಯಾಗಿ ಮತ್ತು ಜನರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಭರವಸೆಯನ್ನು ನೂತನ ಎಸ್.ಪಿ. ಸೋನವಣೆ ಋಷಿಕೇಶ್ ಭಗವಾನ್ ಅವರು ಇದೇ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ನೀಡಿದ್ದಾರೆ.