ಪುತ್ತೂರು: ಯೇಸುಕ್ರಿಸ್ತರು ನಮ್ಮ ಬಾಳಿನ ಆಶಾಕಿರಣವಾಗಿ, ನಮ್ಮಲ್ಲಿ ಅಡಗಿರುವ ಕತ್ತಲನ್ನು ದೂರ ಮಾಡುತ್ತಾರೆ. ಮನುಷ್ಯರಾಗಿ ಭೂಮಿಗೆ ಬಂದು ದೀನತೆಯ ಪಾಠ ಕಲಿಸಿ ಮೃತ್ಯುಂಜಯರಾಗಿ ಸಾವನ್ನು ಜಯಿಸಿ ಜೀವಕ್ಕೆ ಗೆಲುವನ್ನಿತ್ತಿದ್ದಾರೆ. ಆದ್ದರಿಂದ ಯೇಸುಕ್ರಿಸ್ತರ ಪುನರುತ್ಥಾನವು ಮನುಷ್ಯನಲ್ಲಿನ ಅಂಧಕಾರವನ್ನು ಹೋಗಲಾಡಿಸಿ ಜೀವನದ ಜ್ಯೋತಿಯ ಬೆಳಗಿಸಿದ್ದಾರೆ ಎಂದು ಧರ್ಮಗುರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಹೇಳಿದರು.
ಎ.೪ ರಂದು ದೇಶದಾದ್ಯಂತ ಆಚರಿಸುವ ಯೇಸುಕ್ರಿಸ್ತರ ಪುನರುತ್ಥಾನ ಸಾರುವ ‘ಈಸ್ಟರ್ ಹಬ್ಬ’ದ ಕುರಿತು ಮಾಯಿದೆ ದೇವುಸ್ ಚರ್ಚ್ನಲ್ಲಿ ನಡೆದ ದಿವ್ಯ ಬಲಿಪೂಜೆಯಲ್ಲಿ ಅವರು ಕ್ರೈಸ್ತ ಭಕ್ತಾದಿಗಳಿಗೆ ಬೈಬಲಿನ ಮೇಲೆ ಸಂದೇಶ ನೀಡಿದರು. ಪ್ರಭು ಯೇಸುಕ್ರಿಸ್ತರು ತನ್ನ ಇಹಲೋಕದ ಜೀವನದುದ್ದಕ್ಕೂ ವ್ಯಕ್ತಪಡಿಸಿದ ಆಸೆ ಮಾನವನನ್ನು ಪಾಪದಿಂದ ಬಿಡಿಸಿ, ನಿತ್ಯ ಜೀವನದೆಡೆಗೆ ಕರೆದೊಯ್ಯುದಾಗಿತ್ತು. ಯೇಸುಕ್ರಿಸ್ತರ ಪುನರುತ್ಥಾನ ಸಾರು ಈಸ್ಟರ್ ಹಬ್ಬವು ನಾವು ಹೇಗೆ ಪರಿಶುದ್ಧತೆ ಮತ್ತು ಪಾವಿತ್ರ್ಯ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ಗಮನವನ್ನು ಸೆಳೆಯುತ್ತದೆ. ಮಾನವ ಯೇಸುಕ್ರಿಸ್ತರಂತೆ ಶ್ರೇಷ್ಠತೆಯನ್ನು ಬಯಸುವುದಾದರೆ ಅವರಂತೆ ಸೇವಾ ಮನೋಭಾವವನ್ನು ನಮ್ಮಲ್ಲಿ ಮೊದಲು ಬೆಳೆಸಿಕೊಳ್ಳಬೇಕು ಎಂದ ಅವರು ಪ್ರೀತಿಯು ಜೀವನದ ತಳಹದಿ ಎಂದು ಜಗತ್ತಿಗೆ ಸಾರಿದ ಯೇಸುಕ್ರಿಸ್ತರ ಪುನರುತ್ಥಾನವನ್ನು ಸಂಭ್ರಮದಿಂದ ಆಚರಿಸುವ ಈ ಶುಭಸಂದರ್ಭದಲ್ಲಿ ನಾನೇ ಜೀವ, ನಾನೇ ಪುನರುತ್ಥಾನ ಎಂಬ ಯೇಸುವಿನ ಮಾತು ನಮ್ಮ ಜೀವನದಲ್ಲಿ ಪ್ರೀತಿ ತುಂಬುವ, ಭರವಸೆ ಮೂಡಿಸುವ ಮಾತುಗಳಾಗಿ ಮಾರ್ದನಿಸಬೇಕು. ಆದ್ದರಿಂದ ಯೇಸುಕ್ರಿಸ್ತರ ಪುನರುತ್ಥಾನ ಸತ್ಯ ಜೀವಿತದ ಭರವಸೆಯಾಗಿದೆ ಎಂದು ಅವರು ಹೇಳಿದರು.
ಮಾಯಿದೆ ದೇವುಸ್ ಚರ್ಚ್ನಲ್ಲಿ ಪ್ರಧಾನ ದಿವ್ಯ ಬಲಿಪೂಜೆಯನ್ನು ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ನೆರವೇರಿಸಿದರು. ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಧರ್ಮಗುರುಗಳಾದ ವಂ|ಆಂಟನಿ ಪ್ರಕಾಶ್ ಮೊಂತೇರೋ, ವಂ|ಸುನಿಲ್ ಜಾರ್ಜ್ ಡಿ’ಸೋಜ, ವಂ|ಅಶೋಕ್ ರಾಯನ್ ಕ್ರಾಸ್ತಾ, ಸ್ಥಳೀಯ ಪುತ್ತೂರು ವಾಳೆಯ ನಿವಾಸಿ ಧರ್ಮಗುರು ವಂ|ರೊಯ್ಸ್ಟನ್ ಮಾಡ್ತಾರವರು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ನಲ್ಲಿ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ದಿಯಾಕೊನ್ ವಂ|ಜೊವಿನ್ ಸಿಕ್ವೇರಾ, ಬನ್ನೂರು ಸಂತ ಅಂತೋನಿ ಚರ್ಚ್ನಲ್ಲಿ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ವಂ|ಪ್ರೇಮ್ ಡಿ’ಸೋಜ, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೋ, ಸ್ಥಳೀಯ ಧರ್ಮಗುರು ವಂ|ವಿನ್ಸೆಂಟ್ ಸಿಕ್ವೇರಾರವರು ಹಬ್ಬದ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಸಂದೇಶ ನೀಡಿರುವರು.
ಆಯಾ ಚರ್ಚ್ನ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಆರ್ಥಿಕ ಸಮಿತಿ ಸದಸ್ಯರು, ಸ್ಯಾಕ್ರಿಸ್ಟಿಯನ್, ಗುರಿಕಾರರು, ಧರ್ಮಭಗಿನಿಯರು, ವೇದಿ ಸೇವಕರು, ಗಾಯನ ಮಂಡಳಿ ಸದಸ್ಯರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ದಿವ್ಯ ಬಲಿಪೂಜೆ ಬಳಿಕ ಆಯಾ ಚರ್ಚ್ಗಳಲ್ಲಿ ಅಶೀರ್ವಚಿಸಿದ ಪವಿತ್ರ ಜಲವನ್ನು ಭಕ್ತಾಧಿಗಳಿಗೆ ವಿತರಿಸಲಾಯಿತು. ಮಾದೆ ದೇವುಸ್ ಚರ್ಚ್ನಲ್ಲಿ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಸದಸ್ಯರು, ಬನ್ನೂರು, ಮರೀಲು ಹಾಗೂ ಉಪ್ಪಿನಂಗಡಿ ಚರ್ಚ್ಗಳಲ್ಲಿ ಐಸಿವೈಎಂ, ಸದಸ್ಯರು, ಕೆಥೋಲಿಕ್ ಸಭಾದ, ಪವಿತ್ರ ಜಲವನ್ನು ವಿತರಿಸಲು ನೆರವಾದರು. ಯೇಸುಕ್ರಿಸ್ತರ ಪುನರುತ್ಥಾನದ ಸಂಭ್ರಮದಲ್ಲಿ ಕ್ರೈಸ್ತ ಬಾಂಧವರು ಒಬ್ಬರನ್ನೊಬ್ಬರು ಅಪ್ಪಿಕೊಂಡು, ಕೈ ಕುಲುಕಿಕೊಂಡು ಹಬ್ಬದ ಸಂತೋಷವನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.