ವಿಟ್ಲ: ಕರ್ನಾಟಕ-ಕೇರಳ ಗಡಿ ಪ್ರದೇಶವಾದ ಸಾಲೆತ್ತೂರು ಸಮೀಪದ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆಯ ವೇಳೆ ವಿಟ್ಲ ಪೊಲೀಸ್ ಠಾಣಾ ಎಸ್.ಐರವರ ನೇತೃತ್ವದ ಪೊಲೀಸರ ತಂಡದ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದ ಡಿ ಗ್ಯಾಂಗ್ ಮುಖ್ಯಸ್ಥ ಸೇರಿ ನಾಲ್ಕು ಮಂದಿ ಕುಖ್ಯಾತರನ್ನು ಪೆರಾಜೆ ಗ್ರಾಮದ ಬುಡೋಳಿಯಲ್ಲಿ ಎಂಬಲ್ಲಿ ವಿಟ್ಲ ಠಾಣಾ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದೆ.
ಡಿ ಗ್ಯಾಂಗ್ ಮುಖ್ಯಸ್ಥನೆನ್ನಲಾಗಿರುವ ಮೀಯಪದವು ಮೂಡಂಬೈಲು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ (೨೫ ವ.), ಮಹಾರಾಷ್ಟ್ರ ಮೂಲದ ಜಲಗಾವ್ ಮುಕುಂದ ನಗರ ನಿವಾಸಿ ರಾಕೇಶ್ ಕಿಶೋರ್ ಬಾವಿಸ್ಕರ್ ಯಾನೆ ರಾಕಿ ಯಾನೆ ರಾಕಿ ಬಾಯ್ (೨೭ ವ.), ಡಿ ಗ್ಯಾಂಗ್ ಸದಸ್ಯರಾದ ಕಡಂಬಾರು ಬಟ್ಯಪದವು ನಿವಾಸಿ ಮಹಮ್ಮದ್ ಫಯಾಝ್ ಯಾನೆ ಕೂವ ಫಯಾಝ್ (೨೨ ವ.), ಮಂಗಲ್ಪಾಡಿ ಸೋಂಕಲ್ ನಿವಾಸಿ ಹೈದರ್ ಅಲಿ ಯಾನೆ ಹೈದರ್ (೨೦ ವ.)ರವರು ಬಂಧಿತ ಆರೋಪಿಗಳಾಗಿದ್ದಾರೆ.
ಪೊಲೀಸರು ಗಸ್ತು ನಿರತರಾಗಿದ್ದ ವೇಳೆ
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ೭.೬೫ ಎಂಎಂ ಪಿಸ್ತೂಲ್ – ೩, ನಾಡ ಕೊವಿ – ೧ , ಸಜೀವ ಮದ್ದುಗುಂಡು -೧೩, ಕಾರು – ೧ ನ್ನು ವಶ ಪಡೆದುಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟನ್ ಡಿಸೋಜ್ ಅವರ ನಿರ್ದೇಶನದಂತೆ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣೆಯ ಉಪನಿರೀಕ್ಷಕ ವಿನೋದ್ ರೆಡ್ಡಿ, ಎ ಎಸ್ ಐ ಕರುಣಾಕರ್, ಸಿಬ್ಬಂದಿಗಳಾದ ಪ್ರಸನ್ನ, ಗಿರೀಶ್, ಪ್ರತಾಪ, ವಿನಾಯಕ, ಲೋಕೇಶ್, ಹೇಮರಾಜ್, ನಝೀರ್, ವಿವೇಕ್, ಪ್ರವೀಣ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.