HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ: ಅನಧಿಕೃತ ಅಂಗಡಿ, ಕಟ್ಟಡ ವಿಚಾರ ಗ್ರಾ.ಪಂ.ನಲ್ಲಿ ತಾರತಮ್ಯ ಧೋರಣೆ – ಜನಪರ ವೇದಿಕೆಯಿಂದ ಗಂಭೀರ ಆರೋಪ

ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ. ಬೀದಿ ಬದಿ ವ್ಯಾಪಾರಸ್ಥರ ಹಾಗೂ ಅನಧಿಕೃತ ಕಟ್ಟಡಗಳ ಕುರಿತು ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಇನ್ನೊಂದು ನ್ಯಾಯ ಎಂಬ ನೀತಿ ಅನುಸರಿಸುತ್ತಿದ್ದು, ಪಿಡಿಒ ಅವರು ಹಿಟ್ಲರ್‌ನಂತೆ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಬೀದಿ ಬದಿ ವ್ಯಾಪಾರಿಗಳ ಸಂಘಟನೆಯಾದ ಉಪ್ಪಿನಂಗಡಿಯ ಜನಪರ ವೇದಿಕೆ ಮಾಡಿದೆ. ಅಲ್ಲದೇ, ಅವಶ್ಯಕತೆಯುಳ್ಳವರಿಗೆ ಉಪ್ಪಿನಂಗಡಿಯಲ್ಲಿ ತಳ್ಳುಗಾಡಿ ವ್ಯಾಪಾರ ನಡೆಸಲು ಅನುಮತಿ ನೀಡಬೇಕು. ತಾರತಮ್ಯ ನೀತಿ ಅನುಸರಿಸಿದ್ದೇ ಆದಲ್ಲಿ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸುವುದಾಗಿ ಆಗ್ರಹಿಸಿದೆ.

ಉಪ್ಪಿನಂಗಡಿಯಲ್ಲಿ ಎ.೬ರಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಜನಪರ ವೇದಿಕೆಯ ಅಧ್ಯಕ್ಷ ಝವ್ರದ್ದೀನ್, ಕಳೆದ ಕೆಲವು ತಿಂಗಳಿಂದ ನಾವು ಉಪ್ಪಿನಂಗಡಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದೆವು. ಆದರೆ ಕೆಲವು ತಿಂಗಳ ಹಿಂದೆ ಉಪ್ಪಿನಂಗಡಿ ಗ್ರಾ.ಪಂ. ವತಿಯಿಂದ ದಿಡೀರನೇ ಬೀದಿ ಬದಿಯಲ್ಲಿದ್ದ ಅನಧಿಕೃತ ಅಂಗಡಿಗಳ ತೆರವು ನಡೆಯಿತು. ಅಂಗಡಿಗಳನ್ನು ನಾವೇ ತೆರವುಗೊಳಿಸುತ್ತೇವೆಂದು ಸ್ವಲ್ಪ ಕಾಲಾವಕಾಶ ಕೇಳಿದರೂ ಅದಕ್ಕೆ ಒಪ್ಪದೇ ಕೆಲವು ಅಂಗಡಿಗಳನ್ನು ಜೆಸಿಬಿ ಮೂಲಕ ಧ್ವಂಸ ಆ ಸಂದರ್ಭ ಧ್ವಂಸ ಮಾಡಲಾಗಿತ್ತು. ಇದರಿಂದ ಕೆಲವರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಆದರೆ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಸಂದರ್ಭ ಬಡವರಿಗೊಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯವನ್ನು ಗ್ರಾ.ಪಂ. ಅನುಸರಿಸಿದೆ. ಉಪ್ಪಿನಂಗಡಿಯ ಬಸ್‌ನಿಲ್ದಾಣದಲ್ಲಿ ಅನಧಿಕೃತ ಕಾಮಗಾರಿಗಳನ್ನು ಅಂದು ಜೆಸಿಬಿ ಮೂಲಕ ಧ್ವಂಸಗೊಳಿಸಿದ ಗ್ರಾ.ಪಂ. ಅವರಿಗೆ ಒಂದೆರಡು ವಾರದೊಳಗೆ ಮತ್ತೆ ಹಾಗೆ ಅನಧಿಕೃತ ಕಾಮಗಾರಿಯನ್ನು ನಿರ್ಮಿಸಿ ವ್ಯಾಪಾರ ನಡೆಸಲು ಅನುಮತಿ ನೀಡಿದೆ. ಆದರೆ ಗಾಂಧಿಪಾರ್ಕ್‌ನಲ್ಲಿ ಅನಧಿಕೃತ ಅಂಗಡಿಯೊಂದನ್ನು ಧ್ವಂಸ ಮಾಡಿ ಲಕ್ಷಾಂತರ ರೂಪಾಯಿ ನಷ್ಟವಾಗುವಂತೆ ಮಾಡಿದ ಗ್ರಾ.ಪಂ. ಅಂಗಡಿ ತೆರವಿನಿಂದ ಸಂತ್ರಸ್ಥರಾದ ವ್ಯಕ್ತಿಗೆ ಈವರೆಗೂ ಅಂಗಡಿ ನಿರ್ಮಾಣ ಮಾಡಲು ಅನುಮತಿ ನೀಡುತ್ತಿಲ್ಲ. ಜನಸಂದಣಿ ಇರುವ ಬಸ್‌ನಿಲ್ದಾಣದೊಳಗೆ ಅನಧಿಕೃತ ಕಾಮಗಾರಿ ನಿರ್ಮಾಣವಾದರೂ ಮೌನವಹಿಸಿರುವ ಗ್ರಾ.ಪಂ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಯಾರಿಗೂ ತೊಂದರೆಯಾಗದ ಹಾಗೆ ಅಂಗಡಿ ಹಾಕಲು ಯಾಕೆ ಅನುಮತಿ ನೀಡುತ್ತಿಲ್ಲ? ಇದರ ಹಿಂದೆ ಯಾವ ಲಾಬಿ ಕೆಲಸ ಮಾಡುತ್ತಿದೆ? ಎಂದು ಪ್ರಶ್ನಿಸಿದರಲ್ಲದೆ, ಬಡವರು ಹೊಟ್ಟೆಪಾಡಿಗಾಗಿ ನಿರ್ಮಿಸಿದ ಅನಧಿಕೃತ ಅಂಗಡಿ ಕಟ್ಟಡಗಳ ತೆರವಿನ ಸಂದರ್ಭ ಗ್ರಾ.ಪಂ.ನವರು ಶ್ರೀಮಂತರ, ರಾಜಕೀಯ, ಹಣ ಬಲವಿರುವವರ ಅನಧಿಕೃತ ಕಟ್ಟಡಗಳನ್ನು ಮುಟ್ಟುವ ಗೋಜಿಗೆ ಯಾಕೆ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯ ಸಮಾನವಾಗಿರಲಿ: ಉಪ್ಪಿನಂಗಡಿ ಗ್ರಾ.ಪಂ.ನವರು ಕಾನೂನಿನ ದೃಷ್ಟಿಯಲ್ಲಿ ಕೆಲಸ ಮಾಡುವಾಗ ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕು. ಉಪ್ಪಿನಂಗಡಿಯಲ್ಲಿ ಇದೀಗ ಕೆಲವು ಮಂದಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ ಬದಿ ಬೀದಿ ಬದಿ ವ್ಯಾಪಾರ ನಡೆಸಲು ಅನುಮತಿ ನೀಡುವ ಮೂಲಕ ತಾರತಮ್ಯ ನೀಡಿ ಅನುಸರಿಸಲಾಗಿದೆ. ಹೆಲ್ಮೆಟ್ ಮಾರಾಟಗಾರರಿಂದ ತಿಂಗಳಿಗೆ ೧,೦೦೦ ರೂ ಹಾಗೂ ಫಾಸ್ಟ್‌ಫುಡ್ ಅವರಿಂದ ತಿಂಗಳಿಗೆ ೨,೦೦೦ ರೂ. ಹಣವನ್ನು ಗ್ರಾ.ಪಂ. ಸ್ವಚ್ಛತಾ ಶುಲ್ಕದ ಹೆಸರಿನಲ್ಲಿ ವಸೂಲು ಮಾಡುತ್ತಿದೆ. ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಮಾರಧಾರ ಸೇತುವೆಯಿಂದ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತಿರುಗುವವಲ್ಲಿವರೆಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ ಬದಿ ವ್ಯಾಪಾರ ನಡೆಸಲು ಅನುಮತಿ ನೀಡುತ್ತೇನೆ. ಆದರೆ ಹಣ್ಣು- ಹಂಪಲು, ತರಕಾರಿ ಮಾರುವುದಾದರೆ ಅವಕಾಶ ನೀಡುವುದಿಲ್ಲ ಎಂದು ಪಿಡಿಒ ಅವರು ಹೇಳುತ್ತಾರೆ. ಅದು ಬೇರೆ ಕಡೆ ರಾಷ್ಟ್ರೀಯ ಹೆದ್ದಾರಿ ಬದಿ ಬೀದಿ ಬದಿ ವ್ಯಾಪಾರ ಮಾಡಬಾರದು. ಹಣ್ಣು- ಹಂಪಲು, ತರಕಾರಿ ಮಾರಾಟಕ್ಕೆ ಯಾಕೆ ಅನುಮತಿ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದ ಇವರು, ಇಲ್ಲಿ ಕೆಲವು ಶ್ರೀಮಂತ ವರ್ಗಗಳಿಂದ ಭಕ್ಷೀಸು ಪಡೆದು ಈ ರೀತಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಬದಿ ವಿಶಾಲ ಜಾಗವಿದ್ದರೆ ಅಲ್ಲಿ ಅವಕಾಶ ಮಾಡಿಕೊಡಬಹುದಲ್ಲವೆ ಎಂದು ಪ್ರಶ್ನಿಸಿದರು.

ಹಿಟ್ಲರ್ ಧೋರಣೆ: ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಅವರದ್ದು ಹಿಟ್ಟರ್‌ನಂತೆ ಸರ್ವಾಧಿಕಾರಿ ಧೋರಣೆ ಎಂದ ಅವರು, ಪೇಟೆಯಲ್ಲಿ ಫುಟ್‌ಪಾತ್‌ಗಳನ್ನು ಕೂಡಾ ಅಂಗಡಿಗಳವರು ಆಕ್ರಮಿಸಿಕೊಂಡಿದ್ದಾರೆ. ಆದರೆ ಅವರನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ. ಆದರೆ ಹಣ್ಣು ಹಂಪಲುಗಳನ್ನು ವಾಹನದಲ್ಲಿ ತುಂಬಿಕೊಂಡು ಉಪ್ಪಿನಂಗಡಿ ಪೇಟೆ ಮೂಲಕ ಬೇರೆ ಕಡೆ ವ್ಯಾಪಾರಕ್ಕೆ ಸಾಗುವಾಗಲೂ ಬೀದಿ ಬದಿ ವ್ಯಾಪಾರಿಗಳ ವಾಹನಗಳನ್ನು ಉಪ್ಪಿನಂಗಡಿ ಪೇಟೆಯಲ್ಲಿ ತಡೆದು ನಿಲ್ಲಿಸಿ ಗ್ರಾ.ಪಂ.ನವರು ದಂಡ ಹಾಕಿದ್ದಾರೆ. ಅಳತೆ ಮಾಪನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹಣ್ಣು- ಹಂಪಲುಗಳನ್ನು ಹೇರಿಕೊಂಡಿದ್ದ ವಾಹನವನ್ನು ಅದರ ಚಾಲಕ ಹೊಟೇಲ್ ಬದಿ ನಿಲ್ಲಿಸಿ ಚಾ ಕುಡಿಯಲು ಹೋಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಗ್ರಾ.ಪಂ.ನವರು ವಾಹನದಲ್ಲಿದ್ದ ಅಳತೆ ಮಾಪಕವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಲ್ಲಿ ಅಂಗಡಿಗಳೆದುರು ದೊಡ್ಡ ದೊಡ್ಡ ಲಾರಿಗಳಲ್ಲಿ ಬರುವ ದಿನಸಿ ಸಾಮಗ್ರಿಗಳನ್ನು ಅನ್‌ಲೋಡ್ ಮಾಡುವ ಸಂದರ್ಭ ದಿನವಿಡೀ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದರ ಬಗ್ಗೆ ಯಾವುದೇ ಕ್ರಮವಿಲ್ಲ ಯಾಕೆ? ಇದೆಲ್ಲಾ ನ್ಯಾಯವೇ ಎಂದು ಪ್ರಶ್ನಿಸಿದರಲ್ಲದೆ, ಬೀದಿ ಬದಿ ವ್ಯಾಪಾರದಿಂದ ನಮ್ಮನ್ನು ತೆರವುಗೊಳಿಸಿದ ಬಳಿಕ ನಾವು ಸಂತ್ರಸ್ತರಾಗಿದ್ದು, ನಮಗೆ ಉಪ್ಪಿನಂಗಡಿಯಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡಬೇಕು. ಅದು ಭಕ್ಷೀಸು ಕೊಡುವವನಿಗೆ ಒಂದು ನ್ಯಾಯ, ಕೊಡದವನಿಗೆ ಒಂದು ನ್ಯಾಯ ಎಂಬಂತೆ ಇಲ್ಲಿ ತಾರತಮ್ಯ ನೀತಿ ಅನುಸರಿಸಿದ್ದೇ ಆದಲ್ಲಿ ಸಂತ್ರಸ್ತರಾಗಿರುವ ಎಲ್ಲಾ ಬೀದಿ ಬದಿ ವ್ಯಾಪಾರಿಗಳನ್ನು ಒಗ್ಗೂಡಿಸಿ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಜನಪರ ವೇದಿಕೆಯ ಉಪಾಧ್ಯಕ್ಷ ವಿನುತ್ ಜೈನ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸದಸ್ಯರಾದ ಝಕಾರಿಯಾ, ಅಬ್ದುರ್ರಹ್ಮಾನ್ ಪೆದಮಲೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.