- ಪಕ್ಷವನ್ನು ಬಲಿಷ್ಠಗೊಳಿಸಲು ಜೊತೆಯಾಗಿ ಸಾಗೋಣ – ಜನಾರ್ದನ ಆಚಾರ್ಯ
ಕಾಣಿಯೂರು: ಅಖಂಡವಾದ ಭವ್ಯ ಭಾರತ ನಿರ್ಮಾಣದ ಕನಸನ್ನು ಕಂಡ ಹಿರಿಯ ನೇತಾರರು ೧೯೫೧ರಲ್ಲಿ ಜನಸಂಘದ ಸ್ಥಾಪನೆ ಮಾಡಿದರು. ನಂತರದ ದಿನಗಳಲ್ಲಿ ಜನತಾ ಪಾರ್ಟಿಯಾಗಿ ರೂಪಿಸಲಾಯಿತು. ಆದರೆ ಕೆಲವು ವ್ಯಕ್ತಿಗಳ ಅಭಿಪ್ರಾಯ ಭೇದಗಳಿಂದ ಭಾರತೀಯ ಮೂಲ ಸಂಸ್ಕೃತಿಗೆ ಬಲವಾದ ಪೆಟ್ಟು ಬೀಳುವ ಅನುಮಾನ ನಾಯಕರು ಚಿಂತನೆ ನಡೆಸಿ ೧೯೮೦ ಎಪ್ರಿಲ್ ೬ರಂದು ಭಾರತೀಯ ಜನತಾ ಪಾರ್ಟಿಯನ್ನು ಸ್ಥಾಪನೆ ಮಾಡಿದರು ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಜನಾರ್ದನ ಆಚಾರ್ಯ ಕಾಣಿಯೂರು ಹೇಳಿದರು.
ಅವರು ಬೆಳಂದೂರು ವಾರ್ಡ್ ೨ರಲ್ಲಿ ಬಿಜೆಪಿಯ ಬೂತ್ ಸಮಿತಿ ಅಧ್ಯಕ್ಷೆ ಚಂಪಾ ಕುಶಾಲಪ್ಪರವರ ಮನೆಯಲ್ಲಿ ಎ ೬ರಂದು ನಡೆದ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯರ ಆಶಯದಿಂದ ಅಳವಡಿಸಿಕೊಂಡ ತತ್ವ ಸಿದ್ಧಾಂತಗಳನ್ನು ಉಳಿಸಿಕೊಂಡು ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಾಗಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನೇ ಪಕ್ಷದ ಆಸ್ತಿ. ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಜೊತೆಯಾಗಿ ಸಾಗೋಣ ಎಂದರು. ಕಾರ್ಯಕ್ರಮವನ್ನು ಪಕ್ಷದ ಧ್ವಜ ವನ್ನು ಹಾರಿಸುವುದರೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೆಳಂದೂರು ಕ್ಷೇತ್ರದ ಜಿ.ಪಂ ಸದಸ್ಯೆ ಪ್ರಮೀಳಾ ಜನಾರ್ದನ, ಬೆಂಗಳೂರು ಸಹಕಾರ ಗ್ರಾಹಕರ ಮಹಾ ಮಂಡಲದ ಅಧ್ಯಕ್ಷ ಉದಯ ರೈ ಮಾದೋಡಿ, ಬೆಳಂದೂರು ಬಿಜೆಪಿ ಬೂತ್ ಸಮಿತಿಯ ಪ್ರಭಾರಿ ಚಂದ್ರಯ್ಯ ಆಚಾರ್ಯ ಅಬೀರ, ಬೆಳಂದೂರು ಗ್ರಾ.ಪಂ ಸದಸ್ಯ ಜಯಂತ ಅಬೀರ, ಗೌರಿ ಮಾದೋಡಿ, ಬೂತ್ ಸಮಿತಿ ಪ್ರ. ಕಾರ್ಯದರ್ಶಿ ಶೇಖರ ಮೇಗಿನ ಮನೆ, ಜತೆ ಕಾರ್ಯದರ್ಶಿ ದಿನೇಶ್ ಕೆಳಗಿನಮನೆ, ಕಾರ್ಯಕರ್ತರಾದ ಕುಶಾಲಪ್ಪ ಗೌಡ ಅಬೀರ, ಗಿರಿಯಪ್ಪ ಮಾದೋಡಿ, ಶಾಲಿನಿ ಅಬೀರ, ಸುಶ್ಮಿತಾ ಹೊಸೊಳಿಗೆ ಉಪಸ್ಥಿತರಿದ್ದರು. ಬಿಜೆಪಿಯ ಬೂತ್ ಸಮಿತಿ ಅಧ್ಯಕ್ಷೆ ಚಂಪಾ ಕುಶಾಲಪ್ಪ ಸ್ವಾಗತಿಸಿ, ವಂದಿಸಿದರು.