ಪುತ್ತೂರು: ತಾಲೂಕು ಕೃಷಿಕ ಸಮಾಜಕ್ಕೆ ಈಗಾಗಲೇ ಸ್ವಂತ ನಿವೇಶನವಿದ್ದು, ಇದರ ಸ್ವಂತ ಕಟ್ಟಡವನ್ನು ನಿರ್ಮಿಸಲು ಸರಕಾರದಿಂದ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯು ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗರವರ ಅಧ್ಯಕ್ಷತೆಯಲ್ಲಿ ಏ. ೬ ರಂದು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ನಡೆಯಿತು.
ಸ್ವಂತ ನಿವೇಶನಕ್ಕಾಗಿ ರಾಜ್ಯ ಕೃಷಿಕ ಸಮಾಜದಿಂದ ಅನುದಾನ ಬರುತ್ತದೆ. ಆದರೆ ಪುತ್ತೂರು ಕೃಷಿಕ ಸಮಾಜಕ್ಕೆ ಈಗಾಗಲೇ ಸ್ವಂತ ನಿವೇಶನವಿರುವುದರಿಂದ ಆ ಅನುದಾನವನ್ನು ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಕೇಳಿಕೊಳ್ಳುವುದು ಹಾಗೂ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಇತರೇ ಸರಕಾರಿ ಅನುದಾನಗಳನ್ನು ಒದಗಿಸಲು ಪ್ರಸ್ತಾವನೆ ಸಲ್ಲಿಸುವ ಹಿನ್ನೆಲೆಯಲ್ಲಿ ನಿರ್ಣಯ ಮಾಡಲಾಯಿತು.
ಸಭಾ ಭತ್ಯೆ
ಕೃಷಿಕ ಸಮಾಜದ ಸಭೆಯಲ್ಲಿ ಭಾಗವಹಿಸುವ ಆಡಳಿತ ಮಂಡಳಿ ಸದಸ್ಯರಿಗೆ ಗೌರವ ಸಭಾ ಭತ್ಯೆ ನೀಡುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಯಿತು. ಇತ್ತೀಚೆಗೆ ಅಗಲಿದ ಸಮಾಜದ ಈರ್ವರು ಆಡಳಿತ ಮಂಡಳಿ ನಿರ್ದೇಶಕರ ತೆರವಾದ ಸ್ಥಾನವನ್ನು ಭರ್ತಿಗೊಳಿಸಲು ಸದಸ್ಯರಾದ ರಾಜರಾಮ ಪ್ರಭು ಮತ್ತು ದೇವಣ್ಣ ರೈರವರನ್ನು ಆಯ್ಕೆ ಮಾಡಲಾಯಿತು. ಬೆಳೆವಿಮೆ ಯೋಜನೆ ಸರಕಾರದ ಯಶಸ್ವಿ ಯೋಜನೆಯಾಗಿದ್ದು, ಇದರಿಂದ ಹೆಚ್ಚಿನ ಕೃಷಿಕರಿಗೆ ಬಹಳ ಪ್ರಯೋಜನವಾಗಿದೆ. ಈ ದಿಶೆಯಲ್ಲಿ ಸರಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಇಲಾಖಾ ಮಾಹಿತಿ
ಸಭೆಯಲ್ಲಿ ಸಾಮಾಜಿಕ ಅರಣ್ಯ ಸಮಿತಿಯ ಸಿಬಂದಿ ವಿದ್ಯಾರಾಣಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಹಾಗೂ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಯಶಸ್ ಮಂಜುನಾಥ್ ಇಲಾಖಾ ಸೌಲಭ್ಯ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಶೀನಪ್ಪ ಪೂಜಾರಿ, ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯರಾದ ಮೂಲಚಂದ್ರ, ಬಾಲಕೃಷ್ಣ, ಎ. ವಿನೋದ್ ಶೆಟ್ಟಿ, ಸುಕುಮಾರ ಹಾಗೂ ಐ.ಸಿ. ಕೈಲಾಸ್ ಪಾಲ್ಗೊಂಡರು. ಯಶಸ್ ಮಂಜುನಾಥ್ರವರು ವರದಿ ಮಂಡಿಸಿ, ನಿರೂಪಿಸಿದರು.
ಸಣ್ಣ ರೈತ ಪ್ರಮಾಣ ಪತ್ರದಲ್ಲಿ ತೊಂದರೆ
ಎನ್ಆರ್ಐಜಿ ಯೋಜನೆಯಲ್ಲಿ ನೀರಾವರಿ ಪ್ರದೇಶ ೨.೫ ಎಕರೆ ಜಾಗವನ್ನು ೫.೦೦ ಎಕರೆ ಎಂದು ಪರಿಗಣಿಸಿ ಸಣ್ಣ ರೈತ ಪ್ರಮಾಣ ಪತ್ರವನ್ನು ನೀಡಲಾಗುತ್ತಿಲ್ಲ. ಇದರಿಂದ ಅನೇಕ ಕೃಷಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕು ಎಂದು ಅಧ್ಯಕ್ಷ ವಿಜಯಕುಮಾರ್ ರೈರವರು ತೋಟಗಾರಿಕಾ ಹಿರಿಯ ನಿರ್ದೇಶಕರಿಗೆ ಹೇಳಿದರು.