- ಗ್ರಾಮೀಣ ರಸ್ತೆಗಳನ್ನು ಅಭಿವೃದ್ದಿ ಮಾಡಿದ್ದೆ ಬಿಜೆಪಿ ಸರಕಾರ: ಸಚಿವ ಎಸ್. ಅಂಗಾರ
ಕಡಬ: ತೀರಾ ಹದಗೆಟ್ಟು ದುಸ್ಥಿತಿಯಲ್ಲಿದ್ದ ಗ್ರಾಮೀಣ ರಸ್ತೆಗಳಿಗೆ ಹೊಸ ರೂಪ ನೀಡಿ ಕಾಯ ಕಲ್ಪ ನೀಡಿದ್ದೇ ಬಿಜೆಪಿ ಸರಕಾರ ಎಂದು ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್.ಅಂಗಾರ ಹೇಳಿದರು.
ಅವರು ಬುಧವಾರ ಕಡಬ ಗ್ರಾಮದ ದೊಡ್ಡ ಕೊಪ್ಪ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ಬಳಿ ದೊಡ್ಡಕೊಪ್ಪ -ಪಣೆಮಜಲು-ಹೊಸಮಠ ಸಂಪರ್ಕಿಸುವ ಏಳು ಕಿಲೋ ಮೀಟರ್ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಸುಮಾರು ೭೧.೮೪ ರೂ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಮರುಡಾಮರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ದೇಶವನ್ನಾಳಿದ ಕಾಂಗ್ರೇಸ್ ಸರಕಾರ ಗ್ರಾಮೀಣ ರಸ್ತೆಗಳನ್ನು ಸಂಪೂರ್ಣ ಕಡೆಗಣಿಸಿತ್ತು, ಆದರೆ ಕೇಂದ್ರದಲ್ಲಿ ದಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಪ್ರಧಾನ ಮಂತ್ರಿ ಗ್ರಾಮ ಸಡಕ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದು ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿತ್ತು, ಆದರೆ ಬಳಿಕ ಬಂದ ಕಾಂಗ್ರೇಸ್ ನೇತೃತ್ವದ ಯುಪಿಎ ಸರಕಾರ ಈ ಯೋಜನೆಯನ್ನು ತಡೆ ಹಿಡಿಯಿತು. ಆಗ ರಾಜ್ಯದಲ್ಲಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಜಾರಿಗೆ ತಂದು ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಪಡಿಸಲಾಯಿತು. ಇದೀಗ ಮತ್ತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮ ಸಡಕ್ ಯೋಜನೆಯ ಮೂಲಕ ಅನುದಾನ ನೀಡುತ್ತಿದೆ, ಇದರಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಸಾಧ್ಯವಾಗುತ್ತಿದೆ ಎಂದರು.
ಕುಲಾಲ ಭವನಕ್ಕೆ ಅನುದಾನ:
ದೊಡ್ಡಕೊಪ್ಪದಲ್ಲಿ ಕುಲಾಲ ಭವನ ನಿರ್ಮಾಣಕ್ಕೆ ಹತ್ತು ಲಕ್ಷ ರೂ ಮಂಜೂರು ಮಾಡಲಾಗಿದೆ, ಉಳಿದಂತೆ ಇನ್ನೂ ಹತ್ತು ಲಕ್ಷ ರೂ ಒದಗಿಸಲಾಗುವುದು. ಇಲ್ಲಿ ಆವೆ ಕೊಟ್ಟಿಗೆ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ, ಹಾಗೂ ಇಲ್ಲಿರುವ ದೈವಸ್ಥಾನದ ನರ್ತನಾ ಜಾಗದಲ್ಲಿ ಶಾಶ್ವತ ಚಪ್ಪರ ವ್ಯವಸ್ಥೆಗೆ ಕೂಡಾ ಅನುದಾನ ನೀಡಲಾಗುವುದು, ಇದೀಗ ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ದೊಡ್ಡಕೊಪ್ಪದಿಂದ ಹೊಸಮಠಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಏಳು ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದೊಡ್ಡಕೊಪ್ಪ ಜನತೆಯ ಆಶಯದಂತೆ ಇಲ್ಲಿನ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸಚಿವ ಅಂಗಾರ ಹೇಳಿದರು.
ಜಿಲ್ಲಾ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಮಾತನಾಡಿ ದೊಡ್ಡ ಕೊಪ್ಪ ಎನ್ನುವ ಪ್ರದೇಶ ಬಿಜೆಪಿಯ ಭದ್ರಕೋಟೆ ಇಲ್ಲಿನ ಜನರಿಗೂ ಸಚಿವ ಅಂಗಾರರಿಗೂ ಭಾವನಾತ್ಮಕ ನಂಟು ಇದೆ, ಆದ್ದರಿಂದ ಇಲ್ಲಿನ ಜನ ಇಟ್ಟಿರುವ ಎಲ್ಲಾ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸಲಾಗುತ್ತಿದೆ. ಸ್ವಲ್ಪ ತಡವಾದರೂ ಬೇಡಿಕೆಗಳು ಈಡೇರುವುದು ಖಚಿತ ಆದ್ದರಿಂದ ಜನ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸೀತಾರಾಮ ಗೌಡ ಪೊಸವಳಿಕೆ, ವಾಡ್ಯಪ್ಪ ಗೌಡ ಎರ್ಮಾಯಿಲ್, ಪ್ರಕಾಶ್ ಎನ್.ಕೆ, ಪುಲಸ್ತ್ಯಾ ರೈ, ಸತೀಶ್ ನಾಯಕ್, ರಮೇಶ್ ಕಲ್ಪುರೆ ಮತ್ತಿತರರು ಉಪಸ್ಥಿತರಿದ್ದರು. ಕಡಬ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಾಧವ ಕೊಪ್ಪ ಸ್ವಾಗತಿಸಿದರು. ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್ ಎ.ಪಿ ವಂದಿಸಿದರು.