- ಗಡಿಯಲ್ಲಿ ಸೈನಿಕರಂತೆ ಗ್ರಾಮಗ್ರಾಮಗಳಲ್ಲಿ ನಾವು ಸೈನಿಕರಾಗಬೇಕು – ಸೀತಾರಾಮ ರೈ
- ಸೈನಿಕರು ನಮ್ಮ ಹೀರೋಗಳು – ಚಿನ್ಮಯ್ ರೈ
ಪುತ್ತೂರು: ಛತ್ತೀಸ್ಗಡದ ಸುಕ್ಮಾ – ಬಿಜಾಪುರ್ ಎಂಬಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿರುವ ಹಿನ್ನೆಲೆಯಲ್ಲಿ ಪುತ್ತೂರು ಹಿಂದು ಜಾಗರಣ ವೇದಿಕೆಯಿಂದ ಎ.7ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಹಣತೆ ಬೆಳಗಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಗಡಿಯಲ್ಲಿ ಸೈನಿಕರಂತೆ ಗ್ರಾಮಗ್ರಾಮಗಳಲ್ಲಿ ನಾವು ಸೈನಿಕರಾಗಬೇಕು:
ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಅಮರ್ ಜವಾನ್ ಜ್ಯೋತಿ ಸ್ಮಾರಕದ ಎದುರು ಹಣತೆ ಬೆಳಗಿಸಿ ಮಾತನಾಡಿ ದೇಶ ಕಾಯುವ ಸೈನಿಕರಿಗೆ ನಾವು ಯಾವತ್ತೂ ಕೂಡಾ ಚಿರಋಣಿಯಾಗಿರಬೇಕು. ಯಾಕೆಂದರೆ ಅವರು ತಮ್ಮ ಕುಟುಂಬ, ಮನೆಯನ್ನು ಬಿಟ್ಟು ನಮಗಾಗಿ ದೇಶದ ಗಡಿಯಲ್ಲಿ ಕಾಯುತ್ತಾರೆ. ಇಂತಹ ಸಂದರ್ಭದಲ್ಲಿ ಗ್ರಾಮ ಗ್ರಾಮಗಳಲ್ಲೂ ನಾವು ಸೈನಿಕರಂತೆ ದೇಶ ಸೇವೆ ಮಾಡಬೇಕು. ಕೀಳು ಮಟ್ಟದ ನಕ್ಸಲರ ಅಟ್ಟಹಾಸದಿಂದ ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ಅವರ ಅಗಲುವಿಕೆಯ ದುಖಃವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಹೇಳಿದರು.
ಸೈನಿಕರು ನಮ್ಮ ಹೀರೋಗಳು:
ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನ್ಯಾಯವಾದಿ ಚಿನ್ಮಯ್ ರೈ ಈಶ್ವರಮಂಗಲ ಅವರು ಮಾತನಾಡಿ ವೀರ ಸೈನಿಕರ ಮೇಲೆ ಬೇರೆ ಬೇರೆ ರೀತಿಯಲ್ಲಿ ದಾಳಿ ನಡೆಯುತ್ತಿದೆ. ಒಂದು ಕಡೆಯಿಂದ ಭಯೋತ್ಪಾದಕರ ಮತ್ತು ನಕ್ಸಲರ ದಾಳಿಗಳ ಮೋಸದ ಆಟಕ್ಕೆ ಅವರು ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ವೀರ ಬಲಿದಾನದ ಕುರಿತು ಎಲ್ಲಿಯೂ ದೊಡ್ಡ ಸಂಗತಿ ಆಗುತ್ತಿಲ್ಲ. ಅದೇ ಸೀನಿಮಾ ನಟರು, ದೊಡ್ಡ ನಾಯಕರು ಅಪಘಾತದಲ್ಲೋ ಅಥವಾ ಇನ್ನಾವುದೂ ಕಾರಣದಿಂದ ಮೃತಪಟ್ಟರೆ ಅದು ದೊಡ್ಡದಾಗಿ ಪ್ರಚಾರ ಆಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ವೀರ ಯೋಧರ ಬಲಿದಾನವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿ ದೇಶ ಪ್ರೇಮ ಬೆಳೆಸುವ ಕೆಲಸ ಆಗಬೇಕು. ನಮ್ಮ ಹೀರೋಗಳು ಸೈನಿಕರಾಗಬೇಕು ಎಂದು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಹುತಾತ್ಮ ಯೋಧನರಿಗೆ ಚಿರಶಾಂತಿ ಕೋರಲಾಯಿತು. ನ್ಯಾಯವಾದಿ ಆದರ್ಶ ರೈ, ಹಿಂದು ಜಾಗರಣ ವೇದಿಕೆ ತಾಲೂಕು ಪ್ರದಾನ ಕಾರ್ಯದಶ ಅವಿನಾಶ್, ನಗರ ಅಧ್ಯಕ್ಷ ಪುಷ್ಪರಾಜ್ ದರ್ಬೆ, ತಾಲೂಕು ಸಂಪರ್ಕ ಪ್ರಮುಖ ದಿನೇಶ್ ಪಂಜಿಗ, ಮಾತೃ ಸುರಕ್ಷಾ ಪ್ರಮುಖ್ ಸ್ವಸ್ತಿಕ್ ಸರ್ವೆ, ರಾಕೇಶ್ ಓಜಾಲ, ಸವಣೂರು ಘಟಕದ ಅಧ್ಯಕ್ಷ ಶ್ರೀಧರ್ ಇಡ್ಯಾಡಿ, ಶ್ರೀಕಾಂತ್, ಮನೀಶ್ ಬಿರ್ವ, ಅಭಿ ಪುರುಷರಕಟ್ಟೆ, ಗಣೇಶ್ ಬೆದ್ರಾಳ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.