ಪುತ್ತೂರು:ಪಡ್ನೂರು ಗ್ರಾಮದ ದೇಂತಡ್ಕದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಸುಮಾರು ೧೦೦೦ ವರ್ಷಗಳ ಇತಿಹಾಸವಿರುವ ಶ್ರೀ ವನಶಾಸ್ತಾರ ಮತ್ತು ನಾಗಬ್ರಹ್ಮನ ದೇವಸ್ಥಾನಕ್ಕೆ ನೂತನ ನಾಗಬ್ರಹ್ಮನ ಶಿಲೆಯನ್ನು ಎ.೮ರಂದು ಭವ್ಯ ಮೆರವಣಿಗೆಯೊಂದಿಗೆ ತರಲಾಯಿತು.
ಬನ್ನೂರು ಶನೀಶ್ವರ ದೇವರ ಸನ್ನಿಧಿ ಬಳಿಯಿಂದ ಹೊರಟ ಶಿಲಾ ಮೆರವಣಿಗೆಗೆ ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಮುರಳೀಕೃಷ್ಣ ಹಸಂತಡ್ಕರವರು ನೂತನ ನಾಗಬ್ರಹ್ಮನ ಶಿಲೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಶನೀಶ್ವರ ದೇವರ ಸನ್ನಿಧಿಯ ಸಂಚಾಲಕ ದಿನೇಶ್ ಸಾಲಿಯಾನ್ ಪ್ರಾರ್ಥನೆ ನೆರವೇರಿಸಿದರು. ಬಳಿಕ ಸಾಗಿದ ಮೆರವಣಿಗೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತಾದಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ಬ್ಯಾಂಡ್, ವಾಲಗ, ಜಯಗಂಟೆಯ ಜಯಘೋಷದೊಂದಿಗೆ ಮೆರವಣಿಗೆಯ ಸಾಗಿತು. ಮೆರವಣಿಗೆ ಕ್ಷೇತ್ರಕ್ಕೆ ಆಗಮನದ ಬಳಿಕ ಶ್ರೀ ಕ್ಷೇತ್ರದಲ್ಲಿ ನಾಗಬ್ರಹ್ಮನ ಶಿಲೆಯನ್ನು ಶಾಸ್ತ್ರ ಪ್ರಕಾರ ಜಲಾಧಿವಾಸ ಮಾಡಲಾಯಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ಅಧ್ಯಕ್ಷ ಶಿವರಾಮ ನಾಕ್, ಕಾರ್ಯದರ್ಶಿ ವಿಜಯ ನಾರಾಯಣ, ಶ್ರೀವನಶಾಸ್ತಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ.ಟಿ ಮುರಳಿ, ನ್ಯಾಯವಾದಿ ಮಾಧವ ಪೂಜಾರಿ, ಬನ್ನೂರು ಗ್ರಾ.ಪಂ ಸದಸ್ಯ ಶ್ರೀನಿವಾಸ ಪೆರ್ವೋಡಿ, ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ನವೀನ್ ಪಡ್ನೂರು, ಪ್ರಮುಖರಾದ ಶ್ರೀಧರ ಕುಂಜಾರು, ಪೂವಪ್ಪ ದೇಂತಡ್ಕ, ಬಾಲಕೃಷ್ಣ ನಾಕ್ ಮಾಲ್ತೊಟ್ಟು, ಮಹಾಬಲ ಭಟ್ ಕುಂಬಾಡಿ ಸೇರಿದಂತೆ ಬನ್ನೂರು, ಪಡ್ನೂರು ಗ್ರಾಮಗಳು ನೂರಾರು ಮಂದಿ ಭಕ್ತಾದಿಗಳು ಬಾಗವಹಿಸಿದ್ದರು.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ವೇಗವಾಗಿ ನಡೆಯುತ್ತಿದ್ದು ಮೇ. ತಿಂಗಳ ೨೮ ರಿಂದ ೩೧ ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.