HomePage_Banner
HomePage_Banner
HomePage_Banner
HomePage_Banner

ಕೆಳಗಿನ ಕುಂಜಾಡಿಯಲ್ಲಿ 60 ವರ್ಷಗಳ ಬಳಿಕ ಧರ್ಮನೇಮದ ಸಂಭ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು:ಪಾಲ್ತಾಡಿ ಗ್ರಾಮದ ಪ್ರತಿಷ್ಠಿತ ಕೆಳಗಿನ ಕುಂಜಾಡಿಯಲ್ಲಿ ದ.ಕ.ಸಂಸದ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವದ ಸಂಭ್ರಮ..ಸಡಗರ.

ಕುಂಜಾಡಿ ಕೆಳಗಿನ ಮನೆಯಲ್ಲಿ ನಡೆಯುತ್ತಿರುವ ಧರ್ಮನೇಮ ಅನೇಕ ಹೊಸತನಗಳಿಗೆ ಸಾಕ್ಷಿಯಾಯಿತು.ಗ್ರಾಮೀಣ ಭಾಗದಲ್ಲಿ ಭೂತ ನೇಮಗಳು ಸಾಮಾನ್ಯವೇ ಆದರೂ ಅರವತ್ತು ವರ್ಷಗಳ ಬಳಿಕ ನಡೆಯುತ್ತಿರುವ ಈ ಧರ್ಮನೇಮ ವಿಜೃಂಭಣೆಯಿಂದ ಕಂಗೊಳಿಸುತ್ತಿತ್ತು.ದ.ಕ ಸಂಸದರೂ ಆಗಿರುವ ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದಾಳತ್ವದ ಕಾರ್ಯಕ್ರಮವಾದ್ದರಿಂದ ಅನೇಕ ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನ ಪ್ರತಿನಿಧಿಗಳು,ರಾಜಕೀಯ ಪಕ್ಷಗಳ ಪ್ರಮುಖರು, ಅಧಿಕಾರಿಗಳು ಕಾರ್ಯಕ್ರಮದುದ್ದಕ್ಕೂ ಭಾಗವಹಿಸಿದ್ದರು.

೫೦೦ ವರ್ಷಗಳ ಇತಿಹಾಸ ಹೊಂದಿರುವ ಕೆಳಗಿನ ಕುಂಜಾಡಿ ತರವಾಡು ಮನೆತನದಲ್ಲಿ ದೈವಗಳ ಆರಾಧನೆ ಮೂಲವಾಗಿದೆ.ಗ್ರಾಮದಲ್ಲಿ ದೈವಗಳೇ ಪ್ರಧಾನವಾಗಿದ್ದು,ಕುಂಜಾಡಿಯಲ್ಲಿ ದೇವರ ಮಠವೂ ಇದೆ.೬೦ ವರ್ಷಗಳ ಬಳಿಕ ಈ ಧರ್ಮ ನೇಮೋತ್ಸವ ನಡೆಯುತ್ತಿದ್ದು, ಇಡೀ ಊರಿಗೆ ಊರೇ ನೇಮೋತ್ಸವದ ಸಂಭ್ರಮದಲ್ಲಿದೆ.ಬಂಬಿಲಗುತ್ತು, ಮೇಗಿನ ಕುಂಜಾಡಿ,ಕೆಳಗಿನ ಕುಂಜಾಡಿ ಮಧ್ಯಸ್ಥರ ನೇತೃತ್ವದಲ್ಲಿ ಪೂರ್ವ ಸಂಪ್ರದಾಯದಂತೆ ಈ ಧರ್ಮ ನೇಮೋತ್ಸವ ನಡೆಯುತ್ತಿದೆ.

ಮೂರು ಕಡೆಗಳಿಂದ ದೈವದ ಭಂಡಾರ ಆಗಮನ: ಕೆಳಗಿನ ಕುಂಜಾಡಿಯಲ್ಲಿ ಎರಡು ದಿನಗಳ ಕಾಲ ದೈವಾರಾಧನೆ ನಡೆಯಲಿದ್ದು ದೈವಗಳ ಭಂಡಾರವು ಎ.೮ರ ಬೆಳಗ್ಗೆ ಪೂರ್ಣಕುಂಭ, ಬ್ಯಾಂಡ್ ವಾದನಗಳೊಂದಿಗೆ ಆಗಮಿಸಿತು.ತರವಾಡು ಮನೆಯ ಧರ್ಮದೈವವಾಗಿ ಶ್ರೀ ಪಿಲಿಚಾಮುಂಡಿ ದೈವ ಇದ್ದು, ಉಲ್ಲಾಕುಲು, ಗ್ರಾಮ ದೈವ, ರಕ್ತೇಶ್ವರಿ ಸಹಿತ ಒಟ್ಟು ೧೩ ದೈವಗಳಿಗೆ ನೇಮೋತ್ಸವ ನಡೆಯುವುದು ಇಲ್ಲಿಯ ವಿಶೇಷ.

ಉಲ್ಲಾಕುಲು, ಗ್ರಾಮದೈವ, ಧರ್ಮದೈವ ಪಿಲಿಚಾಮುಂಡಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರವು ೩ ದಿಕ್ಕಿನಿಂದ ತರವಾಡು ಮನೆ ವಠಾರಕ್ಕೆ ಆಗಮಿಸಿ ನೇಮೋತ್ಸವ ನಡಯುತ್ತದೆ.ಮೂರು ಮನೆಗಳಿಂದ ಭಂಡಾರ ಬಂದಿದ್ದು ಬಂಬಿಲ ಗುತ್ತಿನ ಮನೆಯಿಂದ ಉಲ್ಲಾಕ್ಲು ದೈವ, ಪಡ್ಯೊಟ್ಟು ಮನೆಯಿಂದ ಗ್ರಾಮದೈವ ಅಬ್ಬೆಜಲಾಯ, ಸರ್ವೆ ಮನೆಯಿಂದ ಪಿಲಿಭೂತ, ವರ್ಣರ ಪಂಜುರ್ಲಿ,ಜಾವತೆ,ಕಲ್ಲುರ್ಟಿ,ಗುಳಿಗ ದೈವಗಳ ಭಂಡಾರ ಹಾಗೂ ಕುಂಜಾಡಿ ಮೂಲಸ್ಥಾನದಿಂದ ರಕ್ತೇಶ್ವರಿ ದೈವದ ಭಂಡಾರ ತಂದು ರಾತ್ರಿಯ ವೇಳೆ ನೇಮ ಜರುಗಿತು.ನಿರಂತರ ಪ್ರಸಾದ ವಿತರಣೆಯು ನಡೆಯಿತು.

ಕಾರ್ಯಕ್ರಮಗಳು: ಎ ೮ರಂದು ವಿವಿಧ ಭಜನಾ ತಂಡಗಳಿಂದ ಭಜನೆ ಸೇವೆ, ಶ್ರೀ ಪಿಲಿಚಾಮುಂಡಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ತರಲಾಯಿತು.ಬಳಿಕ ಪಲ್ಲ ಪೂಜೆ, ಅನ್ನ ಸಂತರ್ಪಣೆ ನಡೆಯಿತು.ಈ ಸಂದರ್ಭ ಕುಂಜಾಡಿ ಸುಶೀಲಾವತಿ ಎನ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಕುಂಜಾಡಿ ನಾರಾಯಣ ರೈ, ಮಂಜುನಾಥ ರೈ ಮೊದಲಾದವರು ಇದ್ದರು.

ಗಣ್ಯಾತಿಗಣ್ಯರ ಭೇಟಿ: ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಪೇಜಾವರ ಅದಮಾರು ಮಠದ ಶ್ರೀ ವಿಶ್ವತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ,ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ, ಚಾರುಕೀರ್ತಿ ಭಟ್ಟಾಚಾರ್ಯ ವರ್ಯ ಮೂಡಬಿದ್ರೆ ಜೈನ ಬಸದಿ,ಕಟೀಲು ಅಸ್ರಣ್ಣ, ಸಚಿವರಾದ ಕೆ.ಎಸ್.ಈಶ್ವರಪ್ಪ,ಸುಧಾಕರ್, ಆರ್.ಅಶೋಕ್, ಕೋಟ ಶ್ರೀನಿವಾಸ್ ಪೂಜಾರಿ,ಎಸ್.ಅಂಗಾರ,ಮುರುಗೇಶ್ ನಿರಾಣಿ,ಪ್ರಭು ಚೌಹಾಣ್,ಸಿ.ಪಿ.ಯೋಗೇಶ್ವರ್,ಎಸ್.ಟಿ.ಸೋಮಶೇಖರ್,ಗೋಪಾಲಯ್ಯ,ಸಂಸದರಾದ ಬಿ.ವೈ.ರಾಘವೇಂದ್ರ, ಶೋಭಾ ಕರಂದ್ಲಾಜೆ, ಡಿ.ಕೆ.ಸುರೇಶ್ ಕುಮಾರ್, ಮುನಿಸ್ವಾಮಿ, ಶಿವಕುಮಾರ್ ಉದಾಸಿ,ಅಣ್ಣಾ ಸಾಹೇಬ್ ಜೊಲ್ಲೆ, ಶಾಸಕರಾದ ಸಂಜೀವ ಮಠಂದೂರು,ಹರೀಶ್ ಪೂಂಜಾ, ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್,ಮುನಿರತ್ನ,ಆರ್.ಶಂಕರ್,ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯರಾದ ತುಳಸಿ ಮುನಿರಾಜು, ಪ್ರತಾಪಸಿಂಹ ನಾಯಕ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್, ಜಿಲ್ಲಾಧ್ಯಕ್ಷ ಸುದರ್ಶನ್, ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಜಿ, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಉದ್ಯಮಿ ರಾಕೇಶ್ ಮಲ್ಲಿ, ಪ್ರಕಾಶ್ ಶೆಟ್ಟಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ನಾಯಕರು, ಅಧಿಕಾರಿಗಳು, ಸಾಮಾಜಿಕ, ಧಾರ್ಮಿಕ ಮುಖಂಡರು ಸೇರಿ ಸಾವಿರಾರು ಮಂದಿ ಭಾಗವಹಿಸಿದ್ದರು.ರಾಕೇಶ್ ರೈ ಕೆಡೆಂಜಿ, ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹಿಂದೂ ಸಮಾಜದ ಏಕತೆಯ ಸಂಕೇತವಾಗಿ ಮೂಡಿಬಂದ ಕಾರ್ಯಕ್ರಮ: ವಿಶೇಷ ಅಂದರೆ ಈ ಧರ್ಮ ನೇಮೋತ್ಸವ ಒಂದು ಕುಟುಂಬದ ಕಾರ್ಯಕ್ರಮವಾಗಿ ಆಯೋಜನೆಗೊಂಡಿಲ್ಲ. ಬದಲಾಗಿ ಊರ, ಪರವೂರ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಹಿಂದೂ ಸಮಾಜದ ಏಕತೆಯ ಸಂಕೇತವಾಗಿ ಇಲ್ಲಿನ ಕಾರ್ಯಕ್ರಮಗಳು ಮೂಡಿಬಂದಿದೆ.ಇದೊಂದು ಊರಿನ ಹಬ್ಬದ ರೀತಿಯ ಪರಿಕಲ್ಪನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಊರ ಪರವೂರಿನ ಭಕ್ತಾಭಿಮಾನಿಗಳ ಸಹಕಾರ ದೊರೆತಿದೆ.ಕಾರ್ಯಕ್ರಮವು ಗ್ರಾಮದ ಜನತೆಗೆ ಹಬ್ಬದ ವಾತವರಣ ಸೃಷ್ಠಿಸಿದೆ.ಇಡೀ ಗ್ರಾಮವೇ ಕಾರ್ಯಕ್ರಮದ ಸಲುವಾಗಿ ಶೃಂಗಾರಗೊಂಡಿದೆ. ಊರ-ಪರವೂರಿನ ಸ್ವಯಂಸೇವಕರೇ ನೇಮೋತ್ಸವದ ಸಕಲ ಸಿದ್ಧತೆಗೆ ಕೈಜೋಡಿಸಿದ್ದು,ಊರಿನ ಕಾರ್ಯಕ್ರಮ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿಬಂದಿರುವುದು ವಿಶೇಷವಾಗಿದೆ.

ವಿಶೇಷ ಭಜನಾ ಸಂಕೀರ್ತನೆ ಚಾಲನೆ: ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಅಂಗವಾಗಿ ಭಜನಾ ಸಂಕೀರ್ತನೆಗೆ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಭಜನಾ ಉಸ್ತುವಾರಿಗಳಾದ ಸತೀಶ್ ಕುಂಪಲ, ಗಿರಿಶಂಕರ ಸುಲಾಯ ಮೊದಲಾದವರಿದ್ದರು.ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಶ್ರೀ ಧಾಮ ಮಾಣಿಲ, ಶ್ರೀ ಕೊಂಡೆವೂರು ಕ್ಷೇತ್ರ ಭಜನಾ ಮಂಡಳಿ, ಶ್ರೀ ಒಡಿಯೂರು ಕ್ಷೇತ್ರ ಭಜನಾ ಮಂಡಳಿ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ, ಶ್ರೀ ರಾಮ ಯುವಕ ಭಜನಾ ಮಂಡಳಿ ಒಟ್ಟಕುದ್ರು ಹಕ್ಲಡಿ, ಶ್ರೀ ವೈದ್ಯನಾಥ ಭಜನಾ ಮಂಡಳಿ ಮಹಿಳಾ ಘಟಕ ಹೂ ಹಾಕುವ ಕಲ್ಲು, ಶ್ರೀ ಕೃಷ್ಣ ಭಜನಾ ಮಂಡಳಿ ಕೃಷ್ಣನಗರ ಮರಕ್ಕಡ, ಸ್ಪೂರ್ತಿ ಭಜನಾ ಮಂಡಳಿ ಪದವಿನಂಗಡಿ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನಾವೂರು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಂಬಾರು ಮಂಗಳ, ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಶ್ರೀ ಧಾಮ ಮಾಣಿಲ, ಶ್ರೀ ಗೆಜ್ಜೆಗಿರಿ ಭಜನಾ ಮಂಡಳಿ ಪುತ್ತೂರು, ಶ್ರೀ ಮಹಾವಿಷ್ಣು ಭಜನಾ ಮಂಡಳಿ ಮುಗೇರು ಸವಣೂರು, ಮಾಣಿ ಸಿದ್ದಲಿಂಗೇಶ್ವರ ಭಜನಾ ಮಂಡಳಿ ಮೂವಾಡಿತ್ರಾಸಿ ಕುಂದಾಪುರ, ಶ್ರೀರಾಮ ಭಜನಾ ಮಂಡಳಿ ಮುಚ್ಚೂರು, ಖಾನ ಎಡಪದವು, ಶ್ರೀ ದೇವಿ ಭಜನಾ ಮಂಡಳಿ ಮೂಡುಶೆಡ್ಡೆ, ಶ್ರೀ ಸೀತಾರಾಮಾಂಜನೇಯ ಭಾರತ ಕುಣಿತ ಭಜನಾ ತಂಡ ಎಣ್ಮೂರು ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಭವ್ಯವಾದ ವಿಶ್ರಾಂತಿ ಕೊಠಡಿ: ಕಾರ್ಯಕ್ರಮಕ್ಕೆ ಆಗಮಿಸುವ ಸಚಿವರುಗಳ ಸಹಿತ ಮುಖ್ಯ ಅತಿಥಿ ಅಭ್ಯಾಗತರಿಗಾಗಿ ತರವಾಡು ಮನೆಯ ಪಕ್ಕದಲ್ಲೇ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಲಾಗಿದ್ದು ಗ್ರಾಮೀಣ ಭಾಗಕ್ಕೆ ಇದು ಹೊಸ ಹಾಗೂ ಆಸಕ್ತಿದಾಯಕ ವಿಚಾರವಾಗಿತ್ತು.

ನಿರಂತರ ಭೋಜನ ವ್ಯವಸ್ಥೆ: ಧರ್ಮನೇಮದಲ್ಲಿ ದಾನ-ಧರ್ಮಕ್ಕೆ ಮೊದಲ ಪ್ರಾಶಸ್ತ್ಯ.ಅಂತೆಯೇ ಕೆಳಗಿನ ಕುಂಜಾಡಿಯಲ್ಲೂ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ನಿರಂತರ ಅನ್ನದಾನ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿದೆ.ಬೆಳಗ್ಗೆ ಮತ್ತು ಸಂಜೆ ಉಪಹಾರ,ಮಧ್ಯಾಹ್ನ ಹಾಗೂ ರಾತ್ರಿ ಭೋಜನವನ್ನು ಸಾವಿರಾರು ಭಕ್ತಾದಿಗಳು ಸ್ವೀಕರಿಸಿದರು.ಒಂದೆಡೆ ಬಫೆ ವ್ಯವಸ್ಥೆಯಿದ್ದರೆ ಇನ್ನೊಂದೆಡೆ ಕುಳಿತು ಊಟ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.ದಣಿದು ಬಂದವರಿಗೆ ಪಾನೀಯ,ಕಬ್ಬು ಜ್ಯೂಸ್ ಹಾಗೂ ಮಜ್ಜಿಗೆ ನೀಡಲಾಯಿತು.

ಅಲಂಕಾರ ಭೂಷಿತವಾದ ಕೆಳಗಿನ ಕುಂಜಾಡಿ: ಕೆಳಗಿನ ಕುಂಜಾಡಿ ಧರ್ಮನೇಮದ ಪವಿತ್ರ ಭೂಮಿ ಅಲಂಕಾರ ಭೂಷಿತವಾಗಿ ಕಂಗೊಳಿಸುತ್ತಿತ್ತು.ಗೂಡುದೀಪಗಳು,ಬೆದುರು ಗೊಂಬೆಗಳು ಹಾಗೂ ಬಣ್ಣ-ಬಣ್ಣದ ವಿದ್ಯುತ್ ದೀಪಗಳು ಧರ್ಮನೇಮದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು,ತುಳುನಾಡಿನ ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ಕಂಬಳ ಕೋಣವನ್ನು ಓಡಿಸುವ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯುತ್ತಿತ್ತು.ಕಟೀಲು ದೇವಿಯ ಗುಡಿಯ ಚಿತ್ರಣ,ಗಣಪತಿ ವಿಗ್ರಹದ ಅಲಂಕಾರಗಳು ಮತ್ತಷ್ಟು ಧಾರ್ಮಿಕ ಭಾವನೆಯ ಬೀಜ ಬಿತ್ತಿದವು.ದೈವಗಳು ನರ್ತಿಸುವ ಕೊಡಿಯಡಿಯು ವಿಶಾಲವಾಗಿದ್ದು ಅಡಿಕೆ,ಸಿಹಿಯಾಳಗಳಿಂದ ವಿಶಿಷ್ಠವಾಗಿ ಸಿಂಗರಿಸಲ್ಪಟ್ಟಿತ್ತು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಧರ್ಮನೇಮೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿದ್ದು ಎ.೬ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ ಮದನಾಕ್ಷಿ ತಾರಾವಳಿ- ವೀರಮಣಿ ಕಾಳಗ- ಕುಶಲವನಡೆಯಿತು.ಎ.೭ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ತಾಳಮದ್ದಳೆ ವಾಲಿ ಮೋಕ್ಷ ಎ.೮ರಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ವಿದ್ಯಾರ್ಥಿಗಳಿಂದ ದೇಶಿಯ, ಶಾಸ್ತ್ರೀಯ, ಜನಪದ ಕಲೆಗಳ ಅನಾವರಣ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಿತು.
ಕೋವಿಡ್ ಮುಂಜಾಗ್ರತಾ ಕ್ರಮಗಳ ಪಾಲನೆ
ಇಷ್ಟೆಲ್ಲಾ ಸಂಭ್ರಮದ ನಡುವೆಯೂ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಯಿತು.ಧರ್ಮನೇಮಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಧರ್ಮಲ್ ಸ್ಕ್ರೀನಿಂಗ್,ಸ್ಯಾನಿಟೈಸಿಂಗ್ ಮಾಡಿ ಮಾಸ್ಕ್ ಹಾಕುವಂತೆ ಸೂಚಿಸಲಾಗಿತ್ತು.ಜೊತೆಗೆ ಉಚಿತ ಮಾಸ್ಕ್ ವಿತರಣೆಯೂ ನಡೆಯಿತು. ಧ್ವನಿವರ್ಧಕ ಗಳ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆಯೂ ಸೂಚಿಸಲಾಗುತ್ತಿತ್ತು.ಒಟ್ಟಿನಲ್ಲಿ ಕೆಳಗಿನ ಕುಂಜಾಡಿಯಲ್ಲಿ ಧರ್ಮನೇಮವು ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ತಿಪಟೂರಿನಿಂದ ಹೆತ್ತವ್ವನನ್ನು ಹೆಗಲಲ್ಲಿ ಹೊತ್ತು ತಂದ ಶಿವರುದ್ರಪ್ಪ
ಕೆಳಗಿನ ಕುಂಜಾಡಿಯಲ್ಲಿ ನಡೆಯುವ ಧರ್ಮ ನೇಮೋತ್ಸವದ ಕುರಿತು ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ನೋಡಿ ತಿಪಟೂರಿನ 95 ವರ್ಷದ ಶಿವಮ್ಮರವರನ್ನು ಅವರ ಮಗ ಶಿವರುದ್ರಪ್ಪ ಹೆಗಲ ಮೇಲೆ ಹೊತ್ತುಕೊಂಡು ಧರ್ಮ ನೇಮೋತ್ಸವ ನೋಡಲು ಕರೆತಂದಿದ್ದರು. 

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.