ಪುತ್ತೂರು: ಇ ಫೌಂಡೇಶನ್ ಇಂಡಿಯಾ ವತಿಯಿಂದ ವಿಶ್ವ ಆರೋಗ್ಯ ದಿನದ ಅಂಗವಾಗಿ ಆರೋಗ್ಯ ಮಾಹಿತಿ ಶಿಬಿರ ಹಾಗೂ ಇ ಬ್ಲಡ್ ಕನೆಕ್ಟ್ ಲೋಕಾರ್ಪಣೆ ಕಾರ್ಯಕ್ರಮ ಎ.೭ರಂದು ಪುತ್ತೂರು ಕಾರುಣ್ಯ ಕಚೇರಿಯಲ್ಲಿ ನಡೆಯಿತು. ಇ ಫೌಂಡೇಶನ್ ಇಂಡಿಯಾ ಅಧ್ಯಕ್ಷ ಡಾ.ಇಸ್ಮಾಯಿಲ್ ಸರ್ಫ್ರಾಜ್ ಅಧ್ಯಕ್ಷತೆ ವಹಿಸಿದ್ದರು.
ರಕ್ತಕ್ಕೆ ರಕ್ತವೇ ಪರ್ಯಾಯ-ಡಾ.ರಾಮಚಂದ್ರ ಭಟ್
ಉದ್ಘಾಟಸಿದ ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಮಾತನಾಡಿ ರಕ್ತದಾನ ಮಾಡುವುದು, ರಕ್ತದಾನ ಶಿಬಿರ ಏರ್ಪಡಿಸಿ ರಕ್ತದಾನ ಮಾಡುವಂತೆ ಜನರನ್ನು ಪ್ರೇರೇಪಿಸುವುದು ಪುಣ್ಯದ ಕಾರ್ಯ, ರಕ್ತಕ್ಕೆ ರಕ್ತವೇ ಪರ್ಯಾಯವಾಗಿದೆ ಎಂದು ಹೇಳಿದರು. ಅರ್ಹತೆ ಹೊಂದಿದ ಪ್ರತಿಯೋರ್ವರೂ ರಕ್ತದಾನ ಮಾಡಲು ಮುಂದೆ ಬರಬೇಕು ಎಂದ ಅವರು ಇ ಫೌಂಡೇಶನ್ ಸಂಸ್ಥೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಕ್ತಕ್ಕೆ ಜಾತಿ, ಧರ್ಮವಿಲ್ಲ: ಡಾ. ರಾಘವೇಂದ್ರ ಪ್ರಸಾದ್
ಆರೋಗ್ಯ ಮಾಹಿತಿ ನೀಡಿದ ಆಯುರ್ವೇದ ತಜ್ಞ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿ ಮನುಷ್ಯನಿಗೆ ಆರೋಗ್ಯ ಅತೀ ಮುಖ್ಯ, ಇನ್ನೊಬ್ಬರ ಜೀವ ಉಳಿಸುವ ರಕ್ತದಾನ ಶ್ರೇಷ್ಠ ದಾನವಾಗಿದೆ, ರಕ್ತಕ್ಕೆ ಯಾವುದೇ ಜಾತಿ, ಧರ್ಮವಿಲ್ಲ ಎಂದು ಹೇಳಿದರು.
ಇ ಬ್ಲಡ್ ಕನೆಕ್ಟ್ ಲೋಕಾರ್ಪಣೆ
ಇ ಬ್ಲಡ್ ಕನೆಕ್ಟ್ ನ್ನು ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿಯವರು ಇ ಫೌಂಡೇಶನ್ ಮೆಡಿಕಲ್ ಮತ್ತು ಬ್ಲಡ್ ಉಸ್ತುವಾರಿಯಾದ ಬಶೀರ್ ಚಾಂದ್ ಮತ್ತು ಬಾತಿಶ್ ಐವ ಅವರ ಮುಖಾಂತರ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಇ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಆರಿಫ್ ಸಾಲ್ಮರ, ಉಪಾಧ್ಯಕ್ಷ ಹೈದರ್ ಚಾಯ್ಸ್, ಖಜಾಂಜಿ ಶುಕೂರ್, ಸದಸ್ಯರುಗಳಾದ ಇಮ್ತಿಯಾಜ್ ಪಾರ್ಲೆ, ಇಕ್ಬಾಲ್ ಚಮಕ್, ನೌಶಾದ್, ಶಾಕೀರ್, ಸೈಫ್ ಪರ್ಲಡ್ಕ, ಹಾರಿಸ್ ಝರಾ, ಅಸ್ಪಾಕ್ ಬಪ್ಪಳಿಗೆ, ರಿಯಾಜ್ ಝರಾ, ಮುಝಮಿಲ್ ಚಾಯ್ಸ್, ಇಬ್ರಾಹಿಂ ಚಾಯ್ಸ್, ರಝಾಕ್ ಆರ್.ಪಿ ಉಪಸ್ಥಿತರಿದ್ದರು. ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಯೂಸುಫ್ ರೆಂಜಲಾಡಿಯವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಇ ಫೌಂಡೇಶನ್ ಪ್ರೋಗ್ರಾಮ್ ಉಸ್ತುವಾರಿಗಳಾದ ಹನೀಫ್ ಪುಣ್ಚತ್ತಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮೀರ್ ಮಿಶ್ರ ವಂದಿಸಿದರು.