ಪುತ್ತೂರು: ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿ ಸದ್ಗುರು ಡಾ|ಎಸ್.ಆರ್.ಗೋಪಾಲನ್ ನಾಯರ್ರವರ ಹೆಸರಿನಲ್ಲಿ ರಂಗಮಂದಿರ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದ ಕೋಡಿಬೈಲು ವಿಠಲ ಭಂಡಾರಿಯವರಿಗೆ ನುಡಿನಮನ ಕಾರ್ಯಕ್ರಮ ಎ.೦೭ ರಂದು ಸನ್ಯಾಸಿಗುಡ್ಡೆ ಡಾ| ಎಸ್.ಆರ್.ಗೋಪಾಲನ್ ನಾಯರ್ ರಂಗಮಂದಿರದಲ್ಲಿ ನಡೆಯಿತು. ಬೆದ್ರುಮಾರು ಬಾಲಚಂದ್ರ ರೈಯವರು ನುಡಿನಮನ ಸಲ್ಲಿಸುತ್ತಾ, ವಿಠಲ ಭಂಡಾರಿಯವರು ಓರ್ವ ದೈವ ಭಕ್ತರಾಗಿದ್ದರು. ಸದ್ಗುರು ಡಾ| ಎಸ್.ಆರ್.ಗೋಪಾಲನ್ ನಾಯರ್ರವರನ್ನು ಮುಂಬಾಯಿಗೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ವ್ಯವಸ್ಥೆ ಮಾಡಿಕೊಟ್ಟರು.
ಅವರ ಅನುಯಾಯಿಯಾಗಿದ್ದ ವಿಠಲ ಭಂಡಾರಿಯವರು ನಾಯರ್ ಅವರ ನಿಧನದ ನಂತರ ಅವರ ದೈವಿಕ ಶಕ್ತಿಯ ಪರಿಕರಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ತಾನು ಕೂಡ ಓರ್ವ ತಪಸ್ವಿಯಂತೆ ಜೀವನ ನಡೆಸಿದವರು. ಗೋಪಾಲನ್ ನಾಯರ್ರವರ ಹೆಸರಲ್ಲಿ ಬಂದ ಎಲ್ಲಾ ಸಂಪತ್ತನ್ನು ಕೂಡ ಸನ್ಯಾಸಿಗುಡ್ಡೆ ರಾಮಮಂದಿರಕ್ಕೆ ಅರ್ಪಿಸಿದವರು, ಸದ್ಗುರುರವರ ಹೆಸರಿನಲ್ಲಿ ಸುಮಾರು ೪೦ ಲಕ್ಷದ ರಂಗಮಂದಿರವನ್ನು ನಿರ್ಮಿಸಿಕೊಟ್ಟವರಾಗಿದ್ದಾರೆ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು. ಶ್ರೀ ರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಕರುಣಾಕರ ರೈ ಅತ್ರೆಜಾಲು ಮಾತನಾಡಿ, ಶ್ರೀರಾಮ ಮಂದಿರದ ಸರ್ವಾಂಗೀಣ ಅಭಿವೃದ್ಧಿಯ ಹಿಂದೆ ವಿಠಲ ಭಂಡಾರಿಯವರ ಸಹಕಾರವಿದೆ. ರಂಗಮಂದಿರ, ಮಿನಿ ಸಭಾಭವನ, ಜನರೇಟರ್ ಹೀಗೆ ಬಹಳಷ್ಟು ಅಭಿವೃದ್ಧಿಗಳನ್ನು ಮಾಡಿದವರಾಗಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು. ವಿಠಲ ಭಂಡಾರಿಯವರು ಕೋಡಿಬೈಲು ಎಂಬಲ್ಲಿ ಜನಿಸಿ ಬೆದ್ರುಮಾರು ಲಕ್ಷ್ಮೀ ಎಂಬವರನ್ನು ವಿವಾಹವಾಗುವ ಮೂಲಕ ಹಲವು ವರ್ಷಗಳ ಜೀವನವನ್ನು ಬೆದ್ರುಮಾರುನಲ್ಲಿ ಕಳೆದಿದ್ದಾರೆ.
ಈ ಸಂದರ್ಭದಲ್ಲಿ ವಿಠಲ ಭಂಡಾರಿಯವರ ಪತ್ನಿ ಲಕ್ಷ್ಮೀ ವಿಠಲ ಭಂಡಾರಿ, ಪುತ್ರಿ ಸೀಮಾ ಹಾಗೂ ಬೆದ್ರುಮಾರು ಕುಟುಂಬಸ್ಥರು, ವಿಠಲ ಭಂಡಾರಿಯವರ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.