ಪುತ್ತೂರು: ಕೊರೋನಾದ ಸಂದರ್ಭದಲ್ಲಿ ಮುಂದಿನ ದಿನ ರಾಜ್ಯ ಮತ್ತು ಕೇಂದ್ರ ಸರಕಾರ ಕಠಿಣ ನಿರ್ಬಂಧ ಹೇರಿದರೆ ಜಾತ್ರೆಗೆ ಭಾಗವಹಿಸಲು ಆಗುತ್ತದೆಯೋ ಇಲ್ಲವೋ ಎಂಬ ಆತಂಕದಿಂದ ಇವತ್ತೇ ದೇವರ ದರುಶನ ಪಡೆದು ಪ್ರಾರ್ಥನೆ ಮಾಡಿದ್ದೇನೆ. ಕೊರೋನಾವೇ ಕೊನೆಯಾಗಬೇಕು ಮತ್ತು ಜಾತ್ರೋತ್ಸವ ಮುಗಿಯುವ ತನಕ ಯಾವುದೇ ನಿರ್ಬಂಧ ಪುತ್ತೂರಿಗೆ ಅನ್ವಯ ಆಗದಿರಲಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.
ಅವರು ಎ.9ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಪುತ್ರ ಕಾರ್ತಿಕ್ ಸಹಿತ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಪುತ್ತೂರಿನಲ್ಲಿ ಮಹಾಲಿಂಗೇಶ್ವರ ದೇವರು ನನಗೆ ಎಲ್ಲಾ ಅವಕಾಶ ಮಾಡಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಯಾವತ್ತೂ ಕೂಡಾ ಜಾತ್ರೋತ್ಸವ ಕಾರ್ಯಕ್ರಮದ ದರ್ಶನ ಬಲಿ, ರಾತ್ರಿ ಬ್ರಹ್ಮರಥೋತ್ಸವ, ಸಿಡಿ ಮದ್ದು ಪ್ರದರ್ಶನದಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದೆ. ಈ ವರ್ಷವೂ ಪಾಲ್ಗೊಳ್ಳಬೇಕೆಂಬ ಹುಮ್ಮಸು ಇದೆ. ಆದರೆ ಎಲ್ಲೋ ಒಂದು ಕಡೆ ಆತಂಕವೂ ಇದೆ. ಇವತ್ತಿನ ಕೊರೋನಾ ಏರುವಿಕೆಯನ್ನು ನೋಡಿದರೆ. ಮುಂದಿನ ಎರಡುಮೂರು ದಿನಗಳಲ್ಲಿ ಏನಾದರೂ ಕಠಿಣ ನಿರ್ಬಂಧವನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಹೇರಿದ್ದರೆ ಅಂತಹ ಸಂದರ್ಭದಲ್ಲಿ ಜಾತ್ರೆಗೆ ಭಾಗವಹಿಸಲು ಆಗುತ್ತದೆಯೋ ಇಲ್ಲವೋ ಎಂಬ ಆತಂಕವಿತ್ತು. ಹಾಗಾಗಿ ಇವತ್ತೆ ಬಂದು ಪುತ್ತೂರಿನ ಜಾತ್ರೋತ್ಸವ ಮುಗಿಯುವ ತನಕ ಯಾವುದೇ ರೀತಿಯ ನಿರ್ಬಂಧಗಳು ಪುತ್ತೂರಿಗೆ ಅನ್ವಯ ಆಗದ ರೀತಿಯಲ್ಲಿ ಇರಲಿ ದೇವರಲ್ಲಿ ನಾವೆಲ್ಲ ಸೇರಿ ಪ್ರಾರ್ಥನೆ ಮಾಡಿದ್ದೇವೆ. ಅದೇ ರೀತಿ ಕೊರೋನ ಕೂಡಾ ಕೊನೆಯಾಗಬೇಕು. ಕೊರೋನಾ ಕೊನೆಯಾದರೆ ನಿರ್ಬಂದದ ಪ್ರಶ್ನೆಯೇ ಇಲ್ಲ ಎಂದರು.
ದೇವಳದ ಪ್ರಧಾನ ಅರ್ಚಕರೂ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಿ.ಎಸ್ ಭಟ್ ಸಚಿವರಿಗೆ ಪ್ರಸಾದ ವಿತರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಸಚಿವರಿಗೆ ಶಾಲು ಹೊದೆಸಿ ಗೌರವಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮಚಂದ್ರ ಕಾಮತ್, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮ್ದಾಸ್ ಗೌಡ, ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಹಿರಿಯ ನಾಯಕ ಎಸ್ ಅಪ್ಪಯ್ಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಉದ್ಯಮಿ ಅಶೋಕ್ ರೈ ಕೋಡಿಂಬಾಡಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ಜಿಲ್ಲಾ ಸಮಿತಿ ಕಾರ್ಯದರ್ಶಿ ಜಯಂತಿ ನಾಯಕ್, ರಾಮ್ದಾಸ್ ಹಾರಾಡಿ, ಶಿವಕುಮಾರ್ ಪಿ ಬಿ, ಉದಯ ಹೆಚ್, ರಾಮ್ ದಾಸ್ ಹಾರಾಡಿ, ತಾ.ಪಂ ಸದಸ್ಯ ಶಿವರಂಜನ್, ಅನೀಶ್ ಬಡೆಕ್ಕಿಲ, ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಡಿ.ವಿ.ಮನೋಹರ್, ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ, ವಿಶ್ವನಾಥ ಕುಲಾಲ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.