HomePage_Banner
HomePage_Banner
HomePage_Banner
HomePage_Banner

ಕೋವಿಡ್ ಬಿಕ್ಕಟ್ಟಿನಿಂದ ವರ್ಷವಿಡೀ ಸ್ಥಗಿತಗೊಂಡಿದ್ದ ವ್ಯಾಪಾರ ವಹಿವಾಟು | ಪ್ರತಿಷ್ಠಿತ ಪುತ್ತೂರು ಸಂತೆಗೆ ಮರುಜೀವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಿಲ್ಲೆ ಮೈದಾನದಲ್ಲಿ ನಡೆಯುವ ಸೋಮವಾರ ಸಂತೆಗೆ ವಿಶೇಷ ಪ್ರಾಮುಖ್ಯತೆ ಇದೆ. ಯಾಕೆಂದರೆ ಈ ಕಿಲ್ಲೆ ಮೈದಾನದಲ್ಲಿ ನಡೆಯುವ ಸೋಮವಾರ ಸಂತೆಯು ನಗರಸಭೆಯ ಸುಪರ್ದಿಗೆ ಬರುತ್ತದೆ ಮಾತ್ರವಲ್ಲ ಅತ್ಯಧಿಕ ವ್ಯವಹಾರ ನಡೆಸುವ ಕೇಂದ್ರವೂ ಅಗಿದೆ. ಮಹಾಮಾರಿ ಕೋವಿಡ್‌ನಿಂದಾಗಿ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಸೋಮವಾರ ಸಂತೆಗೆ ಏ.೧೨ ರಂದು ಮರುಜೀವ ಲಭಿಸಿದಂತಾಗಿದೆ.


ನಗರಸಭೆ ವತಿಯಿಂದ ಇಲ್ಲಿನ ಸಂತೆ ಮಾರುಕಟ್ಟೆಗೆ ಏಲಂ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ರೂ.೬ ಲಕ್ಷಕ್ಕೆ ಸಂತೆಯು ಏಲಂನಲ್ಲಿ ಭಿಕರಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಮೊತ್ತಕ್ಕೆ ಸಂತೆ ಏಲಂ ಆಗಿದ್ದು, ಇದಕ್ಕೆ ಕೋವಿಡ್ ಪ್ರಮುಖ ಕಾರಣವಾಗಿದೆ. ಏಲಂನಲ್ಲಿ ಪಡೆದುಕೊಂಡವರು ಕೋವಿಡ್ ಹಿನ್ನೆಲೆಯಲ್ಲಿ ಸಂತೆಯನ್ನು ಪ್ರಾಯೋಗಿಕವಾಗಿ ಪುನರಾರಂಭಿಸಲು ತೀರ್ಮಾನಿಸಿ ಅದರಂತೆ ಸೋಮವಾರದಂದು ಚಾಲನೆ ನೀಡಿದ್ದಾರೆ. ಸಂತೆ ಆರಂಭಿಸುವುದಕ್ಕೆ ಸ್ಥಳೀಯ ನಗರಸಭೆ ಇನ್ನಷ್ಟೇ ಅಧಿಕೃತ ಆದೇಶ ನೀಡಬೇಕಾಗಿದೆ.

ವ್ಯಾಪಾರವನ್ನೇ ನಂಬಿದವರ ಮುಖದಲ್ಲಿ ಹರ್ಷ:
ಮನೆಯಲ್ಲಿಯೇ ಉತ್ಪನ್ನಗೊಳಿಸಿದ ತಾಜಾ ತರಕಾರಿಗಳು, ಸಾವಯವ ತರಕಾರಿಗಳು, ಹಣ್ಣು ಹಂಪಲುಗಳು, ಆಟದ ಸಾಮಾನುಗಳನ್ನು ಹೊತ್ತುಕೊಂಡು ಊರಿಂದೂರಿಗೆ ಪ್ರಯಾಣ ಬೆಳೆಸಿ ವ್ಯಾಪಾರವನ್ನು ನಡೆಸುವ ವ್ಯಾಪಾರಿಗಳ ಮುಖದಲ್ಲಿ ಕೊಂಚ ಹರ್ಷ ಮುಖದಲ್ಲಿ ಎದ್ದು ಕಾಣುವಂತಿತ್ತು. ಕೊರೋನಾ ಮಹಾಮಾರಿಯಿಂದಾಗಿ ಕಳೆದೊಂದು ವರ್ಷ ವ್ಯಾಪಾರವೇ ಇಲ್ಲದೆ ಹೈರಾಣಾಗಿ ಮನೆಯಲ್ಲಿಯೇ ಕೂತು ನಿರಾಶೆ ಅನುಭವಿಸಿದ್ದ ವ್ಯಾಪಾರಸ್ಥರಿಗೆ ಈ ಸಂತೆ ಮರುಜೀವ ನೀಡುವಂತಾಗಿದೆ. ವ್ಯಾಪಾರವೇ ಜೀವಾಳವಾಗಿರುವ ವ್ಯಾಪಾರಸ್ಥರಿಗೆ ಗಾಳಿ-ಮಳೆ-ಬಿಸಿಲು ಲೆಕ್ಕಿಸದೆ ವ್ಯಾಪಾರದಲ್ಲಿ ತೊಡಗಿಕೊಳ್ಳುವ ಈ ಸೋಮವಾರ ಸಂತೆ ತುಸು ಮಂದಹಾಸ ಬೀರಿದೆಯಂತೂ ಸತ್ಯ. ಗ್ರಾಹಕರಲ್ಲಿ ಚೌಕಾಸಿ ಮಾಡುತ್ತಾ ತಾನು ತಂದಂತಹ ದಿನಬಳಕೆಯ ತರಕಾರಿ ಸಾಮಾಗ್ರಿಗಳನ್ನು ಮಾರುತ್ತಾ ದಿನದ ಕೊನೆಗೆ ಐನೂರೋ, ಸಾವಿರ ಲಾಭವನ್ನು ಪಡೆಯುವ ರೈತ ವ್ಯಾಪಾರಸ್ಥರಿಗೆ ಆಕ್ಸಿಜನ್ ಲಭಿಸಿದಂತಾಗಿದೆ ಈ ಸಂತೆ.

ಪರ-ವಿರೋಧ ಚರ್ಚೆ:
ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರಕಾರ ಬಹಳಷ್ಟು ಎಚ್ಚರಿಕೆಯನ್ನು ನೀಡುತ್ತಾ ಬಂದಿದ್ದರೂ, ಜನಸಂದಣಿ ಮಾತ್ರ ದೂರವಾಗುತ್ತಿಲ್ಲ. ಇದರ ನಡುವೆ ಸೋಮವಾರ ಸಂತೆಯ ಅಗತ್ಯವೇನಿತ್ತು ಎಂಬಂತೆ ಪರ-ವಿರೋಧ ಚರ್ಚೆ ಬರುತ್ತಿದ್ದರೂ, ಪಾಪ ವ್ಯಾಪಾರವನ್ನೇ ನಂಬಿ ಬದುಕುತ್ತಿರುವ ರೈತ ವ್ಯಾಪಾರಸ್ಥರಿಗೆ ಮುಂದಿನ ಗತಿಯೇನು ಎಂಬ ಪ್ರಶ್ನೆ ಉದ್ಭವಾಗುವುದು ಸಹಜ. ಅದರಂತೆ ಇಲ್ಲಿನ ಸಂತೆ ವ್ಯಾಪಾರಸ್ಥರ ಸಂಘವು ಪ್ರಸ್ತುತ ಪ್ರಾಯೋಗಿಕವಾಗಿ ಸೋಮವಾರ ಸಂತೆಯನ್ನು ಆರಂಭಿಸಿ ರೈತ ವ್ಯಾಪಾರಸ್ಥರಿಗೆ ವ್ಯಾಪಾರವನ್ನು ಮಾಡಲು ಅನುವು ಮಾಡಿಕೊಟ್ಟಿದ್ದರೂ, ಪ್ರತಿಯೋರ್ವ ವ್ಯಾಪಾರಸ್ಥ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಇಲ್ಲದಿದ್ದರೆ ಸಂತೆಯಲ್ಲಿ ವ್ಯಾಪಾರವನ್ನು ಮಾಡಲು ಅವಕಾಶ ನೀಡುವುದಿಲ್ಲ ಎನ್ನುವ ಕಟ್ಟಪ್ಪಣೆಯೂ ಜಾರಿಗೊಳಿಸಿದೆ.

ಒಟ್ಟಾರೆ ಪುತ್ತೂರಿನ ಪ್ರತಿಷ್ಠಿತ ಸೋಮವಾರ ಸಂತೆಗೆ ಮರುಜೀವ ಲಭಿಸಿದೆ. ವ್ಯಾಪಾರಸ್ಥರಾಗಲಿ, ಗ್ರಾಹಕರಾಗಲಿ ಸಂತೆಗೆ ಆಗಮಿಸುವ ಸಂದರ್ಭದಲ್ಲಿ ಕಡ್ಡಾಯ ಮಾಸ್ಕ್ ಧರಿಸಿಕೊಳ್ಳಲು ಮರೆಯಬೇಡಿ. ತಮಗೋಸ್ಕರ ಅಲ್ಲದಿದ್ದರೂ ಮತ್ತೊಬ್ಬರ ಜೀವದ ರಕ್ಷಣೆಗೋಸ್ಕರ ಮಾಸ್ಕ್ ಧರಿಸಿಯೇ ಸಂತೆಗೆ ಬನ್ನಿ. ಕೇವಲ ಸಂತೆಗೆ ಮಾತ್ರ ಕೋವಿಡ್ ನಿಯಮವನ್ನು ಪಾಲನೆ ಬೇಡ, ಪ್ರತಿಯೊಂದು ವಿಚಾರದಲ್ಲೂ ಕೋವಿಡ್ ನಿಯಮ ಪಾಲನೆಯಿರಲಿ. ಮುಂದಿನ ದಿನಗಳಲ್ಲಿ ಸೋಮವಾರ ಸಂತೆಯು ನಿರ್ಭೀತಿಯಿಂದ ಮುನ್ನೆಡೆಯಲು ಸರ್ವರ ಸಹಕಾರ ಅಗತ್ಯವಾಗಿ ಬೇಕಾಗಿದೆ.

ಕೋವಿಡ್ ರೂಲ್ಸ್ ಪಾಲನೆ…
ಪುತ್ತೂರು ನಗರಸಭೆಯ ಎದುರಿನ ಸೋಮವಾರ ಸಂತೆಯ ಪ್ರವೇಶ ಜಾಗದಲ್ಲಿ ಕೋವಿಡ್ ಜಾಗೃತಿ ದೃಷ್ಟಿಯಿಂದ ಕೈ ತೊಳೆಯಲು ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ನನ್ನ ಆರೋಗ್ಯ, ನನ್ನ ರಕ್ಷಣೆ ಕುರಿತಂತೆ ಕಡ್ಡಾಯ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎನ್ನುವ ಬೋರ್ಡ್‌ನ್ನು ಕೂಡ ಅಳವಡಿಸಲಾಗಿದೆ. ಸಂತೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಸ್ಥಳವನ್ನು ಅಂತರವಿರಿಸಿ ಹಂಚಿಕೆ ಮಾಡಲಾಗಿದ್ದು, ಗ್ರಾಹಕರು ವಸ್ತುಗಳನ್ನು ಖರೀದಿ ಮಾಡಲು ಬಾಕ್ಸ್‌ಗಳನ್ನು ಕೂಡ ಹಾಕಿದ್ದರು. ಆದರೆ ಹಿಂದಿನ ದಿನ ಮಳೆ ಸುರಿದಿರುವುದರಿಂದ ಹಾಕಿದ ಬಾಕ್ಸ್ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರ ನಡುವೆ ಓರ್ವ `ಮಾಸ್ಕ್ ಧರಿಸಿಕೊಳ್ಳಿ’ ಎನ್ನುವ ಘೋಷಣೆಯನ್ನು ಆಗಾಗ ಕೂಗುತ್ತಾ ಜನರಿಗೆ ಜಾಗೃತಿಯನ್ನು ನೀಡುವ ಕೆಲಸದ ಜೊತೆಗೆ ಮಾಸ್ಕ್ ಹಾಕದವರಿಗೆ ಉಚಿತವಾಗಿ ಮಾಸ್ಕ್ ನೀಡುವ ಕೈಂಕರ್ಯವೂ ಗಮನ ಸೆಳೆದಿತ್ತು.

ಕಿಲ್ಲೆ ಮೈದಾನದಲ್ಲಿ ಸಂತೆ ವ್ಯಾಪಾರ ಎನ್ನುವುದು ಪ್ರತಿಷ್ಠೆಯ ತಾಣವಾಗಿತ್ತು. ವಿವಿಧ ಕಡೆಗಳಿಂದ ಆಗಮಿಸಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಈ ಸಂತೆ ವರಮಾನಕ್ಕೆ ಒಂದು ವೇದಿಕೆಯಾಗಿತ್ತು. ಗ್ರಾಹಕರ ಚೌಕಾಸಿಯ ನಡುವೆಯೂ ವ್ಯಾಪಾರ ಮಾಡಿ ಸಂಜೆ ಹೊತ್ತು ತೆರಳುವ ಮುನ್ನ ವಾಪಾರಸ್ಥರ ಮುಖದಲ್ಲಿ ಕಾಣುವ ಧನ್ಯತಾಭಾವವು ಮನಸ್ಸಿಗೆ ಮುದ ನೀಡುವಂತಿತ್ತು. ಆದರೆ ಈ ಕೊರೋನಾ ಇವೆಲ್ಲದ್ದಕ್ಕೂ ಅಡ್ಡಗಾಲಾಗಿ ಪರಿಣಮಿಸಿದ್ದರೂ, ವರ್ಷದ ಬಳಿಕ ಈಗ ಇಲ್ಲಿ ಸಂತೆಯನ್ನು ಪುನರಾರಂಭಿಸಲು ಅವಕಾಶ ಮಾಡಿರುವುದು ಹರ್ಷ ತಂದಿದೆ.
-ಡಿ.ಕೆ ಹಮೀದ್, ಅಧ್ಯಕ್ಷರು, ಸಂತೆ ವ್ಯಾಪಾರಸ್ಥರ ಸಂಘ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.