HomePage_Banner
HomePage_Banner
HomePage_Banner
HomePage_Banner

ಅಂಬಿಕಾ ಕ್ಯಾಂಪಸ್‌ನಲ್ಲಿ ಹೊಸವರ್ಷಾಚರಣೆ, ಭಾರತೀಯ ದಿನದರ್ಶಿಕೆ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಯುಗಾದಿ ಹಬ್ಬ ಭಾರತೀಯ ಪರಂಪರೆಯ ಹೊಸವರ್ಷ : ಆದರ್ಶ ಗೋಖಲೆ

ಪುತ್ತೂರು: ಡಿಸೆಂಬರ್ ೩೧ರ ರಾತ್ರಿ ಕಳೆದು ಜನವರಿ ೧ ಬಂದಾಗ ದಿನ ಬದಲಾವಣೆಯಾಗುತ್ತದೆಯೇ ವಿನಃ ಪ್ರಾಕೃತಿಕ ಬದಲಾವಣೆಗಳಿಲ್ಲ. ಆದರೆ ಭಾರತೀಯ ಕಲ್ಪನೆಯ ಯುಗಾದಿಯಂದು ಪ್ರಕೃತಿಯೇ ತನ್ನಲ್ಲಿ ಬದಲಾವಣೆಗಳನ್ನು ತಂದು ಸಹಜವಾದ ಹೊಸತನದತ್ತ ಹೆಜ್ಜೆ ಇಡುತ್ತದೆ. ಆದ್ದರಿಂದಲೇ ಯುಗಾದಿ ನಿಜಾರ್ಥದಲ್ಲಿ ನೂತನ ವರ್ಷಾರಂಭ ಎಂಬ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು.

ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ಯುಗಾದಿ – ಹೊಸವರ್ಷಾಚರಣೆ ಹಾಗೂ ‘ಆಮ್ನಾಯಾಃ – ಭಾರತೀಯ ದಿನದರ್ಶಿಕಾ ಗನ್ಧವಹಸದನಂ’ ಎಂಬ ಭಾರತೀಯ ಕಾಲಗಣನೆಯ ಆಧಾರದಲ್ಲಿ ರೂಪಿತವಾಗಿರುವ ಕ್ಯಾಲೆಂಡರ್‌ನ ಲೋಕಾರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಯುಗಾದಿ ಪ್ರಯುಕ್ತ ಮಂಗಳವಾರ ವಿಶೇಷ ಉಪನ್ಯಾಸ ನೀಡಿದರು.

ಭಾರತೀಯ ಕಲ್ಪನೆಯಲ್ಲಿ ಹಬ್ಬ ಎಂದರೆ ಮೋಜು ಮಸ್ತಿಗಾಗಿ ಇರುವ ದಿನವಲ್ಲ. ಇದು ಪ್ರಕೃತಿಗೆ ಪೂರಕವಾಗಿ ಆಚರಿಸುವ, ಪ್ರಕೃತಿಯನ್ನು ಆರಾಧಿಸುವ ದಿನ. ವಸುಂಧರೆಯ ಪೂಜೆಯೊಂದಿಗೆ ನಮ್ಮಲ್ಲಿ ಹೊಸವರ್ಷವನ್ನು ಸ್ವಾಗತಿಸಲಾಗುತ್ತದೆ. ಹಾಗಾಗಿ ನಮ್ಮ ಪರಂಪರೆಯಲ್ಲಿ ಪ್ರತಿಯೊಂದು ಆಚರಣೆಗೂ ವಿಶೇಷ ಅರ್ಥ ಮತ್ತು ಹಿನ್ನೆಲೆಗಳಿವೆ. ಯುಗಾದಿಯಂದು ಹಂಚುವ ಬೇವು ಬೆಲ್ಲ ಅಥವ ರಾಮನವಮಿಯಂದು ಹಂಚುವ ಪಾನಕಗಳು ನಮ್ಮ ಶಕ್ತಿವರ್ಧಕಗಳು. ಆದರೆ ನಾವಿಂದು ಇಮ್ಯೂನಿಟಿ ಬೂಸ್ಟರ್ ಎಂಬ ಹೆಸರಿನಲ್ಲಿ ಔಷಧವನ್ನು ಸ್ವೀಕರಿಸುತ್ತಿದ್ದೇವೆ. ನಮ್ಮ ಹಿರಿಯರ, ನಮ್ಮ ಆಚರಣೆಗಳ ಬಗೆಗಿನ ತಾತ್ಸಾರ, ಅವಜ್ಞೆಗಳಿಂದಾಗಿ ಅನೇಕ ಉಪಯುಕ್ತ ವಿಚಾರಗಳಿಂದ ನಾವು ವಿಮುಖರಾಗುವಂತಾಗಿದೆ. ಹಾಗಾಗಿ ಮತ್ತೊಮ್ಮೆ ಅಂತಹ ಉತ್ಕೃಷ್ಟ ಸಂಗತಿಗಳೆಡೆಗೆ ನಾವು ದೃಷ್ಟಿ ಹರಿಸಬೇಕಿದೆ ಎಂದು ನುಡಿದರು.

ಆಧ್ಯಾತ್ಮದ ತಳಪಾಯವಿಲ್ಲದ ವಿಜ್ಞಾನ ಶೂನ್ಯ. ನಾವು ಜೀವಿಸುವ ಭೂಮಿ ನಮ್ಮದಲ್ಲ, ಅದು ನಮ್ಮ ಮೊಮ್ಮಕ್ಕಳದು ಎಂಬ ಭಾವನೆಯಿಂದ ಬದುಕುವ ಅವಶ್ಯಕತೆಯಿದೆ. ಪ್ರಕೃತಿಗೆ ಹಾನಿ ಮಾಡದೆ ನಮ್ಮ ವಿಚಾರಗಳ ಕುರಿತು ಸ್ವಾಭಿಮಾನದೊಂದಿಗೆ ಬದುಕುವುದು ಇಂದಿನ ಅಗತ್ಯ ಎಂದರಲ್ಲದೆ ವಿದೇಶೀಯರು ಹೇಳಿದ್ದೇ ಪರಮಸತ್ಯ ಎಂಬ ಭ್ರಮೆಯಿಂದ ಹೊರಬಂದು ಪ್ರಾಚೀನ ಭಾರತದ ಜ್ಞಾನಪರಂಪರೆಯ ಬಗೆಗೆ ತಿಳಿದುಕೊಳ್ಳಬೇಕು. ವಿಜ್ಞಾನವಾದರೂ ಒಂದು ಹಂತದಲ್ಲಿ ಸೋಲಬಹುದು ಆದರೆ ಪ್ರಾಚೀನ ಭಾರತದ ಸಿದ್ಧಾಂತ ಎಂದೂ ಸೋಲದೆಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾರತೀಯ ದಿನದರ್ಶಿಕೆಯನ್ನು ಲೋಕಾರ್ಪಣೆಗೊಳಿಸಿದ ಜಿ.ಎಲ್.ಆಚಾಯ್ ಜ್ಯುವೆಲ್ಲರ್‍ಸ್‌ನ ಮಾಲಕ ಬಲರಾಮ ಆಚಾರ್ಯ ಮಾತನಾಡಿ ಅಂಬಿಕಾ ಶಿಕ್ಷಣ ಸಂಸ್ಥೆಗಳು ಅನೇಕ ಹೊಸತನಗಳಿಗೆ ಕಾರಣೀಭೂತವಾಗುತ್ತಿವೆ. ಪುತ್ತೂರಿನಲ್ಲಿ ಅಮರ್ ಜವಾನ್ ಜ್ಯೋತಿ ಸ್ಥಾಪನೆ, ಪದವಿ ಶಿಕ್ಷಣದಲ್ಲಿ ತತ್ವಶಾಸ್ತ್ರ ಅಳವಡಿಕೆಯೇ ಮೊದಲಾದ ರಾಷ್ಟ್ರಹಿತದ ಕಾರ್ಯಗಳನ್ನು ಅಂಬಿಕಾ ಸಂಸ್ಥೆ ನೆರವೇರಿಸುತ್ತಿರುವುದು ಗಮನಾರ್ಹ. ಭಾರತೀಯ ಕ್ಯಾಲೆಂಡರ್ ಅನ್ನು ಪ್ರತಿಯೊಬ್ಬರೂ ಅನುಸರಿಸುವಂತಾಗಬೇಕು. ಕ್ಯಾಲೆಂಡರ್‌ನ ಅರ್ಥಸಹಿತ ವಿವರಣೆಯನ್ನು ವಿದ್ಯಾರ್ಥಿ ಸಮುದಾಯಕ್ಕೆ ತಲಪಿಸುವ ಕಾರ್ಯ ಆಗಬೇಕು ಎಂದು ನುಡಿದರು.

ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ವಿದ್ಯಾರ್ಥಿಗಳಲ್ಲಿ ತುಂಬುವ ನಿರಂತರ ಪ್ರಯತ್ನವನ್ನು ಅಂಬಿಕಾ ಸಂಸ್ಥೆ ಮಾಡುತ್ತಿದೆ. ಡಿಸೆಂಬರ್ ಕೊನೆಯ ರಾತ್ರಿ ಕುಡಿದು ಕುಪ್ಪಳಿಸುವುದು ನಮ್ಮ ಸಂಸ್ಕೃತಿಯಲ್ಲ. ನಮ್ಮ ಪಾಲಿಗೆ ಯುಗಾದಿಯೇ ಹೊಸವರ್ಷ. ಈ ಸತ್ಯವನ್ನು ಪ್ರತಿಯೊಬ್ಬರೂ ತಿಳಿಯಬೇಕು. ಪ್ರವಾಹದ ವಿರುದ್ಧ ಈಜುವ ಕಾರ್ಯವನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ಮಾಡುತ್ತಿವೆ ಎಂದರು.

‘ಆಮ್ನಾಯಾಃ – ಭಾರತೀಯ ದಿನದರ್ಶಿಕಾ ಗನ್ಧವಹಸದನಂ’ ಇದನ್ನು ರೂಪಿಸಿರುವ ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ನಾವಿಂದು ಪ್ಲವ ಸಂವತ್ಸರಕ್ಕೆ ಅಡಿಯಿಟ್ಟಿದ್ದೇವೆ. ವಿಪ್ಲವಗಳನ್ನು ಮೀರಿ ಬೆಳೆಯುವುದಕ್ಕೆ ಈ ಸಂವತ್ಸರ ನಮಗೆ ಒದಗಿ ಬರುವಂತಾಗಬೇಕಿದೆ. ನಮ್ಮ ಆಚರಣೆ, ಹಬ್ಬ ಹರಿದಿನಗಳು, ಶುಭ ಕಾರ್ಯಗಳು ಎಲ್ಲವೂ ಭಾರತೀಯ ಕಾಲಗಣನೆ – ಪಂಚಾಂಗದ ಆಧಾರದ ಮೇಲೆಯೇ ನಡೆಯುತ್ತದೆ. ಹೀಗಾಗಿ ನಮ್ಮದೇ ಆದ ಕಾಲಗಣನೆಯ ಕ್ಯಾಲೆಂಡರ್ ನಮಗೆ ಅವಶ್ಯಕ. ನಮ್ಮ ಭವಿಷ್ಯವನ್ನು ನಾವು ತಿಳಿದುಕೊಳ್ಳುವುದೂ ಭಾರತೀಯ ಕಾಲಗಣನೆಯ ಆಧಾರದಲ್ಲಿಯೇ ವಿನಃ ಆಧುನಿಕ ಕ್ಯಾಲೆಂಡರ್ ದಿನಾಂಕಗಳಿಂದಲ್ಲ. ಆದ್ದರಿಂದ ನಮ್ಮದೇ ಆದ ಉತ್ಕೃಷ್ಟ ದಿನದರ್ಶಿಕೆ ನಮಗೆ ಬೇಕಿದೆ ಎಂದರಲ್ಲದೆ ತನ್ನ ಕಾರ್ಯಕ್ಕೆ ಸಹಕರಿಸಿದ ಹೆತ್ತವರನ್ನು, ಗುರುಗಳನ್ನು, ಸಹಕಾರಿಗಳನ್ನು, ಅಂಬಿಕಾ ಸಂಸ್ಥೆಯ ಆಡಳಿತ ವರ್ಗವನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಬಾರತೀಯ ದಿನದರ್ಶಿಕೆಯನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕು. ನಮ್ಮತನವನ್ನು ಸಮಾಜದಲ್ಲಿ ಪ್ರಚಾರಕ್ಕೆ ತರುವುದು ನಮ್ಮ ಜವಾಬ್ಧಾರಿ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರ ನಾರಾಯಣ ಭಟ್, ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ)ದ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.

ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ವಚನ್ ಸ್ವಾಗತಿಸಿ, ವಿದ್ಯಾರ್ಥಿನಿ ವೈಷ್ಣವೀ ಜೆ ರಾವ್ ವಂದಿಸಿದರು. ವಿದ್ಯಾರ್ಥಿನಿ ನಾಝ್ ಎಂ.ಎನ್ ಕಾರ್ಯಕ್ರಮ ನಿರ್ವಹಿಸಿದರು. ಬೇವು ಬೆಲ್ಲವನ್ನು ವಿತರಿಸುವುದರ ಮೂಲಕ ಯುಗಾದಿ ಹೊಸವರ್ಷವನ್ನು ಆಚರಿಸಲಾಯಿತು.

ಆಮ್ನಾಯಾಃ ಭಾರತೀಯ ದಿನದರ್ಶಿಕೆ ಗನ್ಧವಹಸದನಮ್ : ಇದು ಭಾರತೀಯ ಕಾಲಮಾನವನ್ನು ಸೂಚಿಸುವ, ತಿಥಿ, ರಾಶಿ, ವಾರ, ನಕ್ಷತ್ರ, ಮಾಸವೇ ಮೊದಲಾದ ಪಂಚಾಂಗ ಕೇಂದ್ರಿತ ಸಂಗತಿಗಳನ್ನೊಳಗೊಂಡ ದಿನಸೂಚಿಯಾಗಿದೆ. ಯಾವುದೇ ಶುಭ ಸಮಾರಂಭಗಳಿಗೆ, ಜನ್ಮ, ಶ್ರಾದ್ಧವೇ ಮೊದಲಾದ ವಿಚಾರಗಳಿಗೆ ಈ ದಿನದರ್ಶಿಕೆಯನ್ನು ಆಧಾರವಾಗಿ ಇಟ್ಟುಕೊಳ್ಳಬಹುದಾಗಿದೆ. ಇದೇ ಮೊದಲ ಬಾರಿಗೆ ಇಂತಹದ್ದೊಂದು ದಿನದರ್ಶಿಕೆಯನ್ನು ಮುದ್ರಿಸಲಾಗುತ್ತಿದ್ದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಜಿಎಲ್ ಆಚಾರ್ಯ ಜ್ಯುವೆಲ್ಲರ್‍ಸ್ ಈ ದಿನದರ್ಶಿಕೆಗೆ ಪ್ರಾಯೋಜಕತ್ವ ಒದಗಿಸಿವೆ.

ಅಂಬಿಕಾ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಇದನ್ನು ರೂಪಿಸಿದ್ದು, ಅಂಬಿಕಾ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಜಿಎಲ್ ಆಚಾರ್ಯ ಜ್ಯುವೆಲ್ಲರ್‍ಸ್‌ನ ಮಾಲಕ ಬಲರಾಮ ಆಚಾರ್ಯ, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಕಾರ್ಯಾಧ್ಯಕ್ಷ ಡಾ.ಬಿ.ಎಸ್.ರಾಘವೇಂದ್ರ ಭಟ್ಟ ದಿನದರ್ಶಿಕೆಯ ಮಹಾಪೋಷಕರಾಗಿರುತ್ತಾರೆ. ವಿದ್ವಾನ್ ಚಂದ್ರಶೇಖರ ಭಟ್ಟ ಗಾಳಿಮನೆ, ವಿದ್ವಾನ್ ಶ್ರೀನಿವಾಸ ಅಡಿಗ ಹಾಗೂ ವಿದ್ವಾನ್ ಮಾಧವ ಅಡಿಗ ಗೌರವ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ವೇದಮೂರ್ತಿ ಶಿರಿಯ ವಿಘ್ನೇಶ ಕಾರಂತ, ವೇದಮೂರ್ತಿ ಗಣೇಶ ಐತಾಳ ಹಾಗೂ ವಿದ್ವಾನ್ ಕೇಶವ ಭಟ್ಟ ಕೇಕಣಾಜೆ ಸಂಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಡಾ.ಗೋಪಾಲಕೃಷ್ಣ ನಾ ಭಟ್ಟ ಹರಿಗಾರು, ವೇ.ಬ್ರ.ಜಯರಾಮ ಜೋಯಿಸ, ವೇ.ಬ್ರ.ಮಿತ್ತೂರು ಪುರೋಹಿತ ಶ್ರೀನಿವಾಸ ಭಟ್ಟ ಹಾಗೂ ವಿದ್ವಾನ್ ಕೃಷ್ಣರಾಜ ಭಟ್ಟ ಬಂಟ್ವಾಳ ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.