HomePage_Banner
HomePage_Banner
HomePage_Banner
HomePage_Banner

ತೆರಿಗೆ ಪರಿಶೀಲನೆ ಸಂದರ್ಭ ಡೋರ್ ನಂಬ್ರ ಬದಲಾವಣೆ ಬೇಡ; ಅರಿಯಡ್ಕ ಗ್ರಾ.ಪಂ. ಸಭೆಯಲ್ಲಿ ಸದಸ್ಯರ ಆಗ್ರಹ-ನಿರ್ಣಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅರಿಯಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ತೆರಿಗೆ ಪರಿಶೀಲನೆಯಾಗಿದ್ದು ಈ ಸಂದರ್ಭದಲ್ಲಿ ಡೋರ್ ನಂಬರ್ ಕೂಡ ಬದಲಾವಣೆ ಮಾಡಿರುವುದರಿಂದ ಜನಸಾಮಾನ್ಯರಿಗೆ ಭಾರೀ ತೊಂದರೆಯಾಗಲಿದೆ ಎಂದು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಅರಿಯಡ್ಕ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆಯೂ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರ ಅಧ್ಯಕ್ಷತೆಯಲ್ಲಿ ಗ್ರಾ. ಪಂ. ಸಭಾಂಗಣದಲ್ಲಿ ಎ. ೮ರಂದು ನಡೆಯಿತು.

ಪ್ರಸ್ತುತ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ಮನೆ, ಕಟ್ಟಡಗಳ ಪರಿಶೀಲನೆ ನಡೆದು ಹೊಸ ತೆರಿಗೆ ನೀತಿಯನ್ನು ಜಾರಿಗೊಳಿಸಲಾಗಿದೆ. ಇದಕ್ಕೆ ಪೂರಕ ಎಂಬಂತೆ ಡೋರ್ ನಂಬರ್ ಕೂಡ ವ್ಯತ್ಯಾಸ ಮಾಡಿ ಹೊಸ ನಂಬರ್ ಕೊಡಲಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ಸದಸ್ಯ ಲೋಕೇಶ್ ಚಾಕೋಟೆ ಆಕ್ಷೇಪಿಸಿ, ಇದರಿಂದ ಜನರ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಾನ್ ಕಾರ್ಡ್, ಪಾಸ್ ಪೋರ್ಟ್ ಇತ್ಯಾದಿ ದಾಖಲೆಗಳ ಮೇಲೆ ಭಾರೀ ಪರಿಣಾಮ ಬೀಳಲಿದೆ. ಯಾವುದೇ ಕಾರಣಕ್ಕೂ ಡೋರ್ ನಂಬರ್ ವ್ಯತ್ಯಾಸ ಮಾಡಬೇಡಿ ಎಂದು ಹೇಳಿದರು. ಇತರ ಸದಸ್ಯರು ಧ್ವನಿಗೂಡಿಸಿದರು. ಡೋರ್ ನಂಬರ್ ವ್ಯತ್ಯಾಸ ಮಾಡದಿರಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಹಿಂದೂ ದಫನ ಕೇಂದ್ರ ಅಭಿವೃದ್ಧಿಗೆ ಒತ್ತಾಯ: ಮಾಡ್ನೂರು ಗ್ರಾಮದ ಬೊಮ್ಮಡ್ಕ ಎಂಬಲ್ಲಿ ಹಿಂದೂ ದಫನ ಕೇಂದ್ರಕ್ಕೆ ೫೦ ಸೆಂಟ್ಸ್ ಸ್ವಂತ ಜಾಗವಿದ್ದು, ಅದನ್ನು ಅಭಿವೃದ್ಧಿ ಪಡಿಸಬೇಕೆಂದು ಸಾರ್ವಜನಿಕ ಅರ್ಜಿ ಬಂದಿದ್ದು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸದಸ್ಯರಾದ ಲೋಕೇಶ್ ಚಾಕೋಟೆ, ಮೋನಪ್ಪ ಪೂಜಾರಿ ಕೆರೆಮಾರು, ಜಯಂತಿ ಪಟ್ಟುಮೂಲೆ ಒತ್ತಾಯಿಸಿದರು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೆ ಬರೆಯಲು ಅಧ್ಯಕ್ಷರು ಸೂಚಿಸಿದರು. ಅರಿಯಡ್ಕ ಗ್ರಾಮದಲ್ಲಿ ಕೂಡ ಹಿಂದೂ ದಫನ ಕೇಂದ್ರಕ್ಕೆ ಜಾಗ ಮಂಜೂರು ಮಾಡಲು ಕಂದಾಯ ಇಲಾಖೆಗೆ ಪ್ರಸ್ತಾವನೆ ಮಾಡಬೇಕೆಂದು ಸದಸ್ಯ ಹರೀಶ್ ರೈ ಜಾರತ್ತಾರು ಒತ್ತಾಯಿಸಿದರು.

ಕಾವು-ಡೆಂಬಾಳೆ-ಕಾವು ೩೩/೧೧ ಕೆ.ವಿ ವಿದ್ಯುತ್ ಉಪಕೇಂದ್ರಕ್ಕೆ ಹೋಗುವ ರಸ್ತೆ ಕಾಂಕ್ರಿಟೀಕರಣಕ್ಕೆ ಒತ್ತಾಯ: ಕಾವು-ಡೆಂಬಾಳೆ-ಕಾವು ೩೩/೧೧ ಕೆ.ವಿ ವಿದ್ಯುತ್ ಉಪಕೇಂದ್ರಕ್ಕೆ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು ಆ ಭಾಗದ ಜನರಿಗೆ ತೊಂದರೆಯಾಗಿದೆ. ಈ ರಸ್ತೆಯನ್ನು ಕಾಂಕ್ರಿಟೀಕರಣ ಮಾಡುವರೇ ಶಾಸಕರಿಗೆ ಪತ್ರ ಬರೆಯಲು ಸದಸ್ಯ ಲೋಕೇಶ್ ಚಾಕೋಟೆ ಒತ್ತಾಯಿಸಿದರು.

ಮಾಡ್ನೂರಿನಲ್ಲಿ ಕುಡಿಯುವ ನೀರಿನ ಬಿಲ್ಲು ಸಂಗ್ರಹವಾಗುವುದಿಲ್ಲ ಯಾಕೆ? : ಮಾಡ್ನೂರು ಗ್ರಾಮದಲ್ಲಿ ನೀರಿನ ಬಿಲ್ಲು ಸರಿಯಾಗಿ ಸಂಗ್ರಹವಾಗದೇ ಕೆಲವು ವರ್ಷಗಳಿಂದ ಪಂಚಾಯತ್‌ಗೆ ನಷ್ಟವಾಗುತ್ತಿದೆ ಎಂದು ಸದಸ್ಯ ರಾಜೇಶ್ ಮಯಾ ಹೇಳಿದರು. ಮಾಡ್ನೂರಿನಲ್ಲಿ ಸರಿಯಾಗಿ ನೀರೇ ಬರುವುದಿಲ್ಲ ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮೋನಪ್ಪ ಪೂಜಾರಿ ಹೇಳಿದಾಗ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಈ ಸಂದರ್ಭದಲ್ಲಿ ಮಾತಾಡಿದ ಉಪಾಧ್ಯಕ್ಷ ಸಂತೋಷ್ ಮಯಾ, ನೀರು ಸರಿಯಾಗಿ ಬರುತ್ತಿದೆ, ಬಿಲ್ಲು ಬರುತ್ತಿಲ್ಲ. ನೀರು ಬಾರದೆ ಇದ್ದಿದ್ದರೆ ಕರೆಂಟು ಬಿಲ್ ಯಾಕೆ ಬರುತ್ತಿದೆ ಎಂದರು. ಆ ಭಾಗದ ಜಲಪ್ರೇರಕಿಯನ್ನು ಬಿಲ್ ಕಲೆಕ್ಷನ್‌ಗೆ ಕಳುಹಿಸಬೇಕೆಂದು, ನಿರ್ಣಯಿಸಲಾಯಿತು. ಸದಸ್ಯರಾದ ಹರೀಶ್ ರೈ, ಲೋಕೇಶ್ ಚಾಕೋಟೆ, ಹೇಮಾವತಿ, ಚರ್ಚೆಯಲ್ಲಿ ಪಾಲ್ಗೊಂಡರು.

ಬಸ್ಸು ತಂಗುದಾಣದ ಉದ್ಘಾಟನೆ ಯಾವಾಗ?….: ಮಾಡ್ನೂರಿನ ಉಜ್ರುಗುಳಿ-ಅಮ್ಚಿನಡ್ಕದಲ್ಲಿ ೨೦೧೯-೨೦ನೇ ಸಾಲಿನ ೧೪ನೇ ಹಣಕಾಸು ಯೋಜನೆಯಡಿ ಬಸ್ಸು ಪ್ರಯಾಣಿಕರ ತಂಗುದಾಣ ರಚನೆಯಾಗಿದೆ. ಈ ತಂಗುದಾಣವನ್ನು ಪಂಚಾಯತ್‌ನಿಂದ ಅತಿಶೀಘ್ರವಾಗಿ ಲೋಕಾರ್ಪಣೆ ಮಾಡಬೇಕೆಂದು ಸದಸ್ಯ ಪ್ರವೀಣ ಎ.ಬಿ ಒತ್ತಾಯಿಸಿದರು. ಎ.೧೭ರಂದು ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಅಧ್ಯಕ್ಷೆ ಹೇಳಿದರು.

ವಾಟರ್‌ಮ್ಯಾನ್ ಬದಲಾವಣೆ ಅವಶ್ಯ: ಕೌಡಿಚ್ಚಾರಿನ ಸಿ.ಆರ್.ಸಿ ಕಾಲೋನಿಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ, ವಾಟರ್‌ಮ್ಯಾನ್ ಉದಯ್‌ಕುಮಾರ್ ಸಭೆಗೆ ಕರೆದರೂ ಬರುವುದಿಲ್ಲ. ಗೌರವ ಕೊಡುವ ಪದ್ಧತಿ ಕಲಿತುಕೊಂಡಿಲ್ಲ. ಜನರಿಗೆ ಇದರಿಂದ ತುಂಬಾ ತೊಂದರೆಯಾಗಿದೆ. ಕೂಡಲೇ ವಾಟರ್‌ಮ್ಯಾನ್‌ನ್ನು ಬದಲಾಯಿಸಬೇಕು. ಬದಲಿ ವ್ಯವಸ್ಥೆ ಆಗುವ ತನಕ ವಾಟರ್‌ಮ್ಯಾನ್ ಐತ್ತಪ್ಪ ಮಯಾಯವರಿಗೆ ಸೂಚಿಸಬೇಕೆಂದು ಉಪಾಧ್ಯಕ್ಷ ಸಂತೋಷ್ ಮಯಾ ಹೇಳಿದರು. ಲೋಕೇಶ್ ಚಾಕೋಟೆ ಧ್ವನಿಗೂಡಿಸಿದರು.
ನಿರ್ಣಯ, ಜಮಾ ಖರ್ಚಿನ ವಿವರ ಮುಂಚಿತವಾಗಿ ನೀಡಿ: ಸಾಮಾನ್ಯ ಸಭೆಯ ನೋಟಿಸ್‌ನೊಂದಿಗೆ, ಕಳೆದ ಸಾಮಾನ್ಯ ಸಭೆಯ ನಿರ್ಣಯ ಪ್ರತಿ ಮತ್ತು ಜಮಾ ಖರ್ಚಿನ ವಿವರಗಳನ್ನು ನೀಡಬೇಕು. ಈ ರೀತಿ ನೀಡಿದಾಗ ಸಭೆಯಲ್ಲಿ ಅವುಗಳನ್ನು ಮಂಡಿಸುವ ಪ್ರಮೇಯ ಬರುವುದಿಲ್ಲ. ಸಮಯ ಸಾಕಷ್ಟು ಉಳಿದು ಸಭೆಯನ್ನು ಬೇಗನೆ ಮುಗಿಸಬಹುದೆಂದು ಸದಸ್ಯ ದಿವ್ಯನಾಥ ಶೆಟ್ಟಿ ಕಾವು ಅಭಿಪ್ರಾಯಪಟ್ಟರು. ಈ ಬಗ್ಗೆ ಚರ್ಚೆ ನಡೆದು, ಬಳಿಕ ಮಾತಾಡಿದ ಉಪಾಧಕ್ಷ ಸಂತೋಷ್ ಮಯಾ ನಿರ್ಣಯ ಪ್ರತಿ ಪ್ರತಿಯೊಬ್ಬ ಸದಸ್ಯರಿಗೆ ನೀಡಲು ಕಷ್ಟ ಪ್ರತಿ ಬೇಕಾದವರು ಮುಂಚಿತವಾಗಿ ತಿಳಿಸಿ, ಪ್ರತಿ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು. ಚರ್ಚೆಯಲ್ಲಿ ಸದಸ್ಯರಾದ ಸಲ್ಮಾ, ಮೋನಪ್ಪ ಪೂಜಾರಿ, ಜಯಂತಿ ಭಾಗವಹಿಸಿ ಸಲಹೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯರಾದ ದಿವ್ಯನಾಥ ಶೆಟ್ಟಿ ಕಾವು, ಲೋಕೇಶ್ ಚಾಕೋಟೆ, ಮೋನಪ್ಪ ಪೂಜಾರಿ ಕೆರೆಮಾರು, ವಿಜೀತ್ ಕೆರೆಮಾರು, ಹರೀಶ್ ರೈ ಜಾರತ್ತಾರು, ರೇಣುಕಾ ಕರ್ಕೆರ, ಸಾವಿತ್ರಿ ಪೊನ್ನೆತಳಕ್ಕ, ನಾರಾಯಣ ನಾಯ್ಕ, ಪುಷ್ಪಲತಾ, ರಾಜೇಶ್ ಮಣಿಯಾಣಿ, ಪ್ರವೀಣ ಎ.ಬಿ., ಸಲ್ಮಾ ಅಮ್ಚಿನಡ್ಕ, ಜಯಂತಿ ಪಟ್ಟುಮೂಲೆ, ಭಾರತಿ ವಸಂತ್, ಉಷಾರೇಖಾ ರೈ, ಅನಿತಾ ಆಚಾರಿಮೂಲೆ, ಶಂಕರ ಕಾವು, ವಿನುತಾ, ಸದಾನಂದ ಮಯಾ, ಮೀನಾಕ್ಷಿ, ಹೇಮಾವತಿ ಚಾಕೋಟೆ ಹಾಗೂ ಕಿರಿಯ ಆರೋಗ್ಯ ಸಹಾಯಕಿ ನವ್ಯಾ ಉಪಸ್ಥಿತರಿದ್ದರು. ಪಂಚಾಯತ್ ಪಿ.ಡಿ.ಒ ಪದ್ಮಕುಮಾರಿ ಸ್ವಾಗತಿಸಿ, ಸಿಬ್ಬಂದಿ ಪ್ರಭಾಕರ ಸುತ್ತೋಲೆ ಮತ್ತು ಅರ್ಜಿಗಳನ್ನು ಓದಿದರು. ಕಾರ್ಯದರ್ಶಿ ಶಿವರಾಮ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.