HomePage_Banner
HomePage_Banner
HomePage_Banner
HomePage_Banner

ನಿವೇಶನ ಪಡೆದು ಮನೆ ನಿರ್ಮಿಸದಿದ್ದರೆ ಹಕ್ಕುಪತ್ರ ರದ್ದತಿಗೆ ತಹಶಿಲ್ದಾರ್‌ಗೆ ಪತ್ರ; ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಂಚಾಯತ್‌ನಿಂದ ಮನೆ ನಿವೇಶನದ ಹಕ್ಕುಪತ್ರ ಪಡೆದುಕೊಂಡು ಅದರಲ್ಲಿ ಮನೆ ನಿರ್ಮಿಸದೇ ಪಂಚಾಯತ್‌ನ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳದ ಫಲಾನುಭವಿಗಳ ಹಕ್ಕು ಪತ್ರದ ರದ್ದತಿಗೆ ತಹಶಿಲ್ದಾರ್‌ಗೆ ಪತ್ರ ಬರೆಯುವುದಾಗಿ ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.


ಸಭೆಯು ಎ.೨೦ರಂದು ಅಧ್ಯಕ್ಷೆ ಜಯ ಏಕರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗತ ಸಭೆಯ ವರದಿಗೆ ಸಂಬಂದಿಸಿದ ಮನೆ ನಿವೇಶನ ವಿತರಣೆ ಬಗ್ಗೆ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಪಿಡಿಓ ನಾಗೇಶ್‌ರವರು, ಮನೆ ನಿವೇಶನವನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಜಾಗ ಲಭ್ಯವಿರುವಲ್ಲಿ ನೀಡಲಾಗುತ್ತದೆ. ಫಲಾನುಭವಿಗಳ ಅನುಕೂಲಕ್ಕೆ ತಕ್ಕಂತೆ ವಿತರಣೆ ಅಸಾಧ್ಯ. ಈ ಹಿಂದೆ ಬೀರ್ನಹಿತ್ಲು ಕೊಪ್ಪಳದಲ್ಲಿ ಹಲವು ಮಂದಿಗೆ ನಿವೇಶನ ಗುರುತಿಸಿ ಅದಕ್ಕೆ ಸಂಬಂಧಿಸಿದ ಹಕ್ಕು ಪತ್ರ ವಿತರಿಸಲಾಗಿದೆ. ಆದರೆ ಅಲ್ಲಿ ಇನ್ನೂ ಕೆಲವರು ಮನೆ ನಿರ್ಮಿಸಿಲ್ಲ. ಪಂಚಾಯತ್ ನೀಡಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳದೆ ದುರ್ಬಳಕೆ ಮಾಡುವುದು ಸರಿಯಲ್ಲ. ಒಂದು ಬಾರಿ ಹಕ್ಕುಪತ್ರ ದೊರೆತ ಫಲಾನುಭವಿಗಳಿಗೆ ಮತ್ತೆ ನಿವೇಶನ ನೀಡಲು ಸಾಧ್ಯವಿಲ್ಲ. ಹೀಗಾಗಿ ಹಕ್ಕುಪತ್ರ ಪಡೆದುಕೊಂಡ ಫಲಾನುಭವಿಗಳಿಗೆ ಮನೆ ಕಟ್ಟುವಂತೆ ನೋಟೀಸ್ ನೀಡಿ ೩೦ ದಿನಗಳ ಕಾಲಾವಕಾಶ ನೀಡಲಾಗುವುದು. ೩೦ ದಿನಗಳಲ್ಲಿ ಅವರಿಂದ ಸೂಕ್ತ ಉತ್ತರ ದೊರೆಯದೇ ಇದ್ದಲ್ಲಿ ಹಕ್ಕು ಪತ್ರ ರದ್ದುಪಡಿಸುವಂತೆ ತಹಶಿಲ್ದಾರ್‌ಗೆ ಪತ್ರ ಬರೆಯಲಾಗುವುದು. ಬಳಿಕ ಆ ನಿವೇಶನವನ್ನು ಹೊಸದಾಗಿ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಪಿಡಿಓ ನಾಗೇಶ್ ತಿಳಿಸಿದರು. ಇದಕ್ಕೆ ಸಭೆಯು ಅನುಮೋದನೆ ನೀಡಿತು.

ಬನ್ನೂರಿಗೆ ಮತ್ತೊಂದು ಡಂಪಿಂಗ್ ಯಾರ್ಡ್ ಬೇಡ;
ಈ ಹಿಂದೆ ಬನ್ನೂರು ಪಂಚಾಯತ್ ವ್ಯಾಪ್ತಿಯಲ್ಲಿದ್ದ ಡಂಪಿಂಗ್ ಯಾರ್ಡ್ ಈಗ ನಗರ ಸಭಾ ವ್ಯಾಪ್ತಿಗೆ ಸೇರಿದೆ. ಇನ್ನು ನಗರ ಸಭೆಯು ವಿಸ್ತರಣೆಯಾದಾಗ ಪಂಚಾಯತ್ ಪೂರ್ಣ ನಗರ ಸಭಾ ವ್ಯಾಪ್ತಿಗೆ ಬರಲಿದೆ. ಬನ್ನೂರಿನಲ್ಲಿ ಪ್ರತ್ಯೇಕ ಡಂಪಿಂಗ್ ಯಾರ್ಡ್ ನಿರ್ಮಾಣಕ್ಕೆ ಈಗಾಗಲೇ ಆಕ್ಷೇಪವಿದೆ. ಹೀಗಾಗಿ ಬನ್ನೂರಿನಲ್ಲಿ ಪ್ರತ್ಯೇಕ ಡಂಪಿಂಗ್ ಯಾರ್ಡ್ ನಿರ್ಮಾಣ ಬೇಡ. ಬನ್ನೂರು ಗ್ರಾ.ಪಂ ಡಂಪಿಂಗ್ ಯಾರ್ಡ್‌ಗೆ ಅತೀ ಹತ್ತಿರದ ಪಂಚಾಯತ್ ಆಗಿದ್ದು, ಸದರಿ ಯಾರ್ಡ್‌ನಲ್ಲಿಯೇ ಬನ್ನೂರು ಗ್ರಾ.ಪಂನ ಒಣ ತ್ಯಾಜ್ಯ ಹಾಕಲು ಅವಕಾಶ ನೀಡುವಂತೆ ನಗರ ಸಭೆಗೆ ಮನವಿ ಮಾಡಬೇಕು ಎಂದು ಸದಸ್ಯ ಶೀನಪ್ಪ ಕುಲಾಲ್ ಒತ್ತಾಯಿಸಿದರು. ಈ ಕುರಿತು ಶಾಸಕರಿಗೂ ಮನವಿ ಮಾಡುವುದಾಗಿ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ.

ಮಾಹಿತಿ ಹಕ್ಕು ದುರುಪಯೋಗವಾಗದಿರಲಿ;
ಉತ್ತಮ ಉದ್ದೇಶದಿಂದ ಮಾಹಿತಿ ಹಕ್ಕು ಅಧಿನಿಯಮ ಜಾರಿಯಾಗಿದೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಕಿರುಕುಳ ಕೊಡುವುದು ಸರಿಯಲ್ಲ. ಸದುದ್ದೇಶದಿಂದಲೇ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಬೇಕು. ಒಂದು ಅರ್ಜಿಗೆ ಪೂರಕವಾದ ಉತ್ತರ ನೀಡಲು ಸಾಕಷ್ಟು ಕಾಲಾವಕಾಶದ ಆವಶ್ಯಕತೆಯಿದೆ. ಇದರಿಂದಾಗಿ ಕಚೇರಿಯಲ್ಲಿ ಕಡತ ವಿಲೇವಾರಿ ವಿಳಂಬವಾಗಿ ಅಭಿವೃದ್ಧಿ ಕುಂಠಿತವಾಗಲಿದೆ. ಹೀಗಾಗಿ ವೈಯಕ್ತಿಕ ಧ್ವೇಷ ಸಾಧಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸುವುದು ಸರಿಯಲ್ಲ. ಸದುದ್ದೇಶದಿಂದ ಪ್ರಶ್ನೆ ಕೇಳುವುದು ಉತ್ತಮ ಎಂದು ಪಿಡಿಓ ತಿಳಿಸಿದರು.

ವಿಮೆ, ಆಧಾರ್ ಕ್ಯಾಂಪ್;
ಕೇಂದ್ರ ಸರಕಾರದ ಯೋಜನೆಯಾದ ಬ್ಯಾಂಕ್ ಖಾತೆ ಹೊಂದಿರುವವರಿಗೆ ರೂ.೩೩೦ ಪಾವತಿಸಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಅಪಘಾತ ವಿಮೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಪ್ರಯೋಜನವನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೊರೋನಾ ಮುಗಿದ ಬಳಿಕ ಬ್ಯಾಂಕ್ ನವರ ಸಹಯೋಗದೊಂದಿಗೆ ಕ್ಯಾಂಪ್ ನಡೆಸಲಾಗುವುದು ಎಂದು ಪಿಡಿಒ ತಿಳಿಸಿದರು. ಇದರ ಜೊತೆಗೆ ಆಧಾರ್ ಕ್ಯಾಂಪ್ ಆಯೋಜಿಸುವುದು ಉತ್ತಮ ಎಂದು ಸದಸ್ಯ ಶೀನಪ್ಪ ಕುಲಾಲ್ ತಿಳಿಸಿದರು.

ಮಳೆ ಕೊಯ್ಲಿಗೆ ಪ್ರೋತ್ಸಾಹ ಧನ
ಮಳೆ ನೀರು ಇಂಗಿಸಿ ಅಂತರ್ಜಲ ವೃದ್ಧಿಸಲು ಗ್ರಾಮದಲ್ಲಿ ಪ್ರತಿ ಮನೆಯವರು ಮಳೆಕೊಯ್ಲುನ್ನು ಅಳವಡಿಸುವಂತೆ ಪಂಚಾಯತ್ ನಿಂದ ಅಭಿಯಾನ ನಡೆಸಲಾಗುವುದು. ಮಳೆ ಕೊಯ್ಲು ಅಳವಡಿಸುವವರಿಗೆ ಪಂಚಾಯತ್ ನ ಸ್ವಂತ ನಿಧಿಯಿಂದ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಪಿಡಿಓ ತಿಳಿಸಿದರು.
ಪಂಚಾಯತ್ ನ ವಾಟ್ಸಪ್ ಗ್ರೂಪ್ ರಚಿಸಲಾಗಿದೆ. ಅದರಲ್ಲಿ ಬೀದಿ ದೀಪ ದುರಸ್ತಿ ಗೊಳಿಸುವ ಇಲೆಕ್ಟ್ರಿಷಿಯನ್‌ರವರು ಗ್ರೂಪ್‌ನಲ್ಲಿದ್ದು ಆಯಾ ವಾರ್ಡ್ ಗಳಲ್ಲಿ ಬೀದಿ ದೀಪ ದುರಸ್ಥಿಗಳಿದ್ದರೆ ಗ್ರೂಪ್‌ನಲ್ಲಿ ಮಾಹಿತಿ ನೀಡಿದಾಗ ಅವರು ಗಮನಿಸಿ ದುರಸ್ತಿಕಾರ್ಯ ಶೀಘ್ರವಾಗಿ ನಡೆಯಲಿದೆ.

`ಸುದ್ದಿ’ ಸಹಯೋಗದಲ್ಲಿ ಇ-ವೇಸ್ಟ್ ಸಂಗ್ರಹ:
ಕೆಲವೊಂದು ಮರು ಬಳಕೆಯಾಗದ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮೊದಲಾದ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಪರಿಸರಕ್ಕೆ ಹಾನಿಕಾರಕ. ಪರಿಸರದ ಸಂರಕ್ಷಣೆಯ ದೃಷ್ಠಿಯಲ್ಲಿ ಇದನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಅಪಾಯವಿದೆ. ಹೀಗಾಗಿ ಇ-ವೇಸ್ಟ್ ಸಂಗ್ರಹ ಯೋಜನೆಯನ್ನು ಪಂಚಾಯತ್ ವತಿಯಿಂದ `ಸುದ್ದಿ ಬಿಡುಗಡೆ’ ಮಾಧ್ಯಮ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸುವುದು ಹಾಗೂ ಅದರ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಪಿಡಿಓ ನಾಗೇಶ್ ತಿಳಿಸಿದರು.

ಉಪಾಧ್ಯಕ್ಷೆ ಗೀತಾ ಕೊಡಂಗೆ, ಸದಸ್ಯರಾದ ಹರಿಣಾಕ್ಷಿ, ಸುಪ್ರೀತಾ ಪ್ರಭು, ತಿಮ್ಮಪ್ಪ ಪೂಜಾರಿ, ಸ್ಮಿತಾ ಕೃಷ್ಣ ನಾಯ್ಕ, ರಾಘವೇಂದ್ರ ಗೌಡ, ಗಣೇಶ್, ಗಿರಿಧರ ಗೌಡ, ರಮಣಿ ಡಿ ಗಾಣಿಗ, ವಿಮಲ ಹಾಗೂ ಶ್ರೀನಿವಾಸ ಪೆರ್‍ವೋಡಿ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ನಾಗೇಶ್ ಸ್ವಾಗತಿಸಿದರು. ಲೆಕ್ಕ ಸಹಾಯಕಿ ಜಯಂತಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.