ಪುತ್ತೂರು: ರಾಜ್ಯದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ತೀವ್ರವಾಗಿ ಹೆಚ್ಚಿರುವುದರಿಂದ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಆದೇಶದ ಮೇರೆಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಅವರು, ನಾಗಾರಾಧನೆಯ ಪುಣ್ಯ ತಾಣ ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಸಾರ್ವಜನಿಕ ಭಕ್ತರ ಪ್ರವೇಶವನ್ನು ಬುಧವಾರ ರಾತ್ರಿಯಿಂದ ಸರಕಾರದ ಮುಂದಿನ ಆದೇಶದ ತನಕ ನಿರ್ಬಂಧಿಸಿದೆ ಎಂದು ತಿಳಿಸಿದ್ದಾರೆ.
ಸರಕಾರದ ಆದೇಶದಂತೆ ಶ್ರೀ ದೇವರ ದರ್ಶನ, ಸೇವೆಗಳು, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ವಿಶೇಷ ಉತ್ಸವ ಗಳನ್ನು ನಿರ್ಬಂಧಿಸಿದೆ. ದೇವಳದ ವಸತಿ ಗೃಹ, ಅತಿಥಿ ಗೃಹಗಳನ್ನು ಭಕ್ತರಿಗೆ ನೀಡಲಾಗುವುದಿಲ್ಲ. ಆದರೆ ಸಂಪ್ರದಾಯ ಪ್ರಕಾರ ದಿನಂಪ್ರತಿ ನಡೆಯುವ ವೈದಿಕ ವಿಧಿ ವಿಧಾನಗಳು, ಪಂಚಪರ್ವ ಉತ್ಸವಗಳು ಅರ್ಚಕರ ನೇತೃತ್ವದಲ್ಲಿ ನಡೆಯಲಿದೆ. ಸಂಬಂಧಪಟ್ಟ ಸಿಬ್ಬಂದಿ ಮಾತ್ರ ಭಾಗವಹಿಸಬಹುದು. ಸಾರ್ವಜನಿಕ ಭಕ್ತರಿಗೆ ಇದರಲ್ಲಿ ಭಾಗವಹಿಸಲು ಅವಕಾಶ ವಿಲ್ಲ ಎಂದು ಅವರು ತಿಳಿಸಿದ್ದಾರೆ.