ಯುವವಾಹಿನಿ ಮನವಿಗೆ ಸ್ಪಂದನೆ, ಪುತ್ತೂರು ಬಸ್ಸು ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು ನಾಮಕರಣ | ಶೀಘ್ರದಲ್ಲೇ ಬರಲಿದೆ ಆದೇಶ ಶಾಸಕ ಸಂಜೀವ ಮಠಂದೂರು ಭರವಸೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

– ಸಿಶೇ ಕಜೆಮಾರ್

ಪುತ್ತೂರು: ಜಿಲ್ಲೆಯ ಅತೀ ದೊಡ್ಡ ಬಸ್ಸು ನಿಲ್ದಾಣ ಎಂದು ಕರೆಸಿಕೊಂಡಿರುವ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣಕ್ಕೆ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರು ನಾಮಕರಣ ಮಾಡುವ ಕಾರ್ಯ ಸದ್ಯದಲ್ಲೇ ಆಗಲಿದೆ. ಮಂಗಳೂರನ್ನು ಹೊರತುಪಡಿಸಿದರೆ ಪುತ್ತೂರು ಜಿಲ್ಲೆಯ ಪ್ರಧಾನ ಕೇಂದ್ರವಾಗಿರುವ ಕಾರಣ ಮತ್ತು ಪುತ್ತೂರು ಪರಿಸರದಲ್ಲೇ ಕೋಟಿ ಚೆನ್ನಯರ ಬದುಕಿನ ಘಟನಾವಳಿಗಳು ನಡೆದಿರುವ ಕಾರಣ ಪುತ್ತೂರು ಬಸ್ಸು ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವುದು ಸೂಕ್ತ ಎಂದು ಯುವವಾಹಿನಿ ಪುತ್ತೂರು ಘಟಕದ ವತಿಯಿಂದ 2019 ರಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿಯವರಿಗೆ ಮನವಿ ನೀಡಲಾಗಿತ್ತು. ಮನವಿಗೆ ಸ್ಪಂದನೆ ನೀಡಿದ ಶಾಸಕ ಸಂಜೀವ ಮಠಂದೂರುರವರ ಸತತ ಪ್ರಯತ್ನದ ಫಲವಾಗಿ ಶೀಘ್ರದಲ್ಲೇ ನಾಮಕರಣ ಮಾಡಲು ಆದೇಶ ಬರಲಿದೆ ಎಂದು ತಿಳಿದು ಬಂದಿದೆ.

ನಗರ ಸಭೆಯಲ್ಲಿ ನಿರ್ಣಯ ಆಗಿದೆ
ಕೋಟಿ ಚೆನ್ನಯರ ಹೆಸರು ಇಡುವ ಬಗ್ಗೆ ಶಾಸಕ ಸಂಜೀವ ಮಠಂದೂರುರವರು ವಿಶೇಷ ಮುತುವರ್ಜಿ ತೆಗೆದುಕೊಂಡು ಕೆಎಸ್‌ಆರ್‌ಟಿಸಿ ಚೆಯರ್‌ಮೆನ್ ಚಂದ್ರಪ್ಪರವರಿಗೆ ಪತ್ರ ಬರೆದಿದ್ದರು ಅಲ್ಲದೆ ಈ ಬಗ್ಗೆ ಅವರಲ್ಲಿ ಮಾತನಾಡಿದಾಗ ನಗರ ಸಭೆಯಲ್ಲಿ ನಿರ್ಣಯ ಆಗಿ ಬಂದ ಮೇಲೆ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದರು. ಅದರಂತೆ ಕಳೆದ ಬಾರಿ ನಗರಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಲಾಗಿದ್ದು ನಿರ್ಣಯದ ಪ್ರತಿಯನ್ನು ಕೆಎಸ್‌ಆರ್‌ಟಿಸಿ ಚೆಯರ್‌ಮೆನ್‌ರವರಿಗೆ ಕಳುಹಿಸಿಕೊಡಲಾಗಿದೆ. ಕೆಎಸ್‌ಆರ್‌ಟಿಸಿ ಅಧ್ಯಕ್ಷರು ಕೂಡ ಒಪ್ಪಿಗೆ ನೀಡಿದ್ದು ನಗರಸಭೆಯ ನಿರ್ಣಯ ಬಂದ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದೀಗ ನಗರಸಭೆಯ ನಿರ್ಣಯ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕೈ ಸೇರಿದ್ದು ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಕೋಟಿ ಚೆನ್ನಯರ ಹೆಸರಿಗೆ ಸರಕಾರಿ ಮಟ್ಟದಲ್ಲಿ ಗೌರವ ಮನ್ನಣೆ
ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಮೂಲಸ್ಥಾನ ಪುತ್ತೂರು ತಾಲೂಕಿನಲ್ಲಿದೆ. ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆತಿಯ ಹೆಸರನ್ನು ಶಾಶ್ವತ ಮಾಡುವಲ್ಲಿ ಪಡುಮಲೆಯ ಮುಡಿಪುನಡ್ಕದಲ್ಲಿ ರಾಜ್ಯ ಸರಕಾರ ನಿರ್ಮಿಸಿದ ಔಷಧಿವನಕ್ಕೆ ದೇಯಿ ಬೈದ್ಯೆತಿಯ ಹೆಸರನ್ನು ಇಡಲಾಗಿದೆ. ಈಗಾಗಲೇ ಕೋಟಿ ಚೆನ್ನಯರ ಹುಟ್ಟೂರು ಅಭಿವೃದ್ಧಿಗೆ ಸರಕಾರ ಐದು ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಮಂಜೂರು ಕೂಡ ಮಾಡಿದ್ದು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಈ ಎಲ್ಲಾ ಹಿನ್ನೆಲೆಗಳ ನಡುವೆ ಕೋಟಿ ಚೆನ್ನಯರ ಹೆಸರಿಗೆ ಸರಕಾರಿ ಮಟ್ಟದಲ್ಲಿ ಉನ್ನತ ಗೌರವ ಅರ್ಪಣೆ ಮಾಡುವ ಕೆಲಸ ನಡೆಯಲಿದ್ದು ಕರಾವಳಿಯ ಜನರ ಅಭಿಲಾಷೆಯಂತೆ ಪುತ್ತೂರು ಸರಕಾರಿ ಬಸ್ಸು ನಿಲ್ದಾಣಕ್ಕೆ ಕೋಟಿ ಚೆನ್ನಯ ಬಸ್ಸು ನಿಲ್ದಾಣ ಎಂಬ ನಾಮಕರಣ ಸದ್ಯದಲ್ಲೇ ಆಗಲಿದೆ. ಆ ಮೂಲಕ ಕೋಟಿ ಚೆನ್ನಯರಿಗೆ ಸರಕಾರಿ ಮಟ್ಟದಲ್ಲಿ ಗೌರವ ಸಿಕ್ಕಂತಾಗಲಿದೆ.

ಯುವವಾಹಿನಿಯ ಮುತುವರ್ಜಿ
1987 ರಲ್ಲಿ ಆರಂಭವಾದ ಯುವವಾಹಿನಿ ಸಂಘಟನೆ ವಿದ್ಯೆ ಉದ್ಯೋಗ ಸಂಪರ್ಕ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಬಸ್ಸು ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು ಎಂಬ ಹೋರಾಟದ ಹಿಂದೆಯೂ ಯುವವಾಹಿನಿಯ ಶ್ರಮವಿದೆ. 2019 ರಲ್ಲಿ ಯುವವಾಹಿನಿಯ ಅಧ್ಯಕ್ಷರಾಗಿದ್ದ ನಾರಾಯಣ ಪೂಜಾರಿ ಕುರಿಕ್ಕಾರ, ಮಾಜಿ ಉಪಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನರವರ ತಂಡ ಈ ಕಾರ್ಯದ ಹಿಂದೆ ಕೆಲಸ ಮಾಡಿದೆ. ಮನವಿ ನೀಡುವ ಸಂದರ್ಭದಲ್ಲಿ ಯುವವಾಹಿನಿ ಅಧ್ಯಕ್ಷರಾಗಿದ್ದ ನಾರಾಯಣ ಪೂಜಾರಿ ಕುರಿಕ್ಕಾರ, ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್, ಯುವವಾಹಿನಿಯ ಮಾಜಿ ಅಧ್ಯಕ್ಷರುಗಳಾದ ನಿತೀಶ್ ಕುಮಾರ್ ಶಾಂತಿವನ, ಶಶಿಧರ್ ಕಿನ್ನಿಮಜಲು, ಕೇಶವ ಬೆದ್ರಾಳ, ಮಹೇಶ್ಚಂದ್ರ ಸಾಲ್ಯಾನ್, ಉಪಾಧ್ಯಕ್ಷ, ಹಾಲಿ ಅಧ್ಯಕ್ಷ ಬಾಬು ಇದ್ಪಾಡಿ ಉಪಸ್ಥಿತರಿದ್ದರು.

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡಬೇಕು ಎಂಬ ಬಗ್ಗೆ ಪುತ್ತೂರು ನಗರಸಭೆಯಲ್ಲಿ ನಿರ್ಣಯ ಆಗಿದೆ. ಕೆಎಸ್‌ಆರ್‌ಟಿಸಿ ಚೆಯರ್‌ಮೆನ್ ಚಂದ್ರಪ್ಪ ಎಂಬವರಲ್ಲಿ ನಾನು ಈ ಬಗ್ಗೆ ಮಾತನಾಡಿದ್ದೇನೆ. ನಗರಸಭೆಯ ನಿರ್ಣಯವನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಕೆಎಸ್‌ಆರ್‌ಟಿಸಿ ಅಧ್ಯಕ್ಷರು ಕೂಡ ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಕೆಎಸ್‌ಆರ್‌ಟಿಸಿಯಿಂದ ಆದೇಶ ಬರಲಿದೆ – ಸಂಜೀವ ಮಠಂದೂರು, ಶಾಸಕರು ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.