HomePage_Banner
HomePage_Banner
HomePage_Banner
HomePage_Banner

ಅಪರಿಚಿತನ ರಾದ್ಧಾಂತ: ಬೆಚ್ಚಿ ಬಿದ್ದ ಮನೆಯವರು! ಕೊನೆಗೂ ಸಾವಿನ ದಾರಿಯಿಂದ ಪಾರಾದ ಯುವಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಅಪರಿಚಿತ ಯುವಕನೋರ್ವ ಮನೆಯೊಂದರ ಕೊಟ್ಟಿಗೆಗೆ ನುಗ್ಗಿ ಸೃಷ್ಟಿಸಿದ ರಾದ್ಧಾಂತದಿಂದ ಮನೆಯವರು ಹಾಗೂ ಪರಿಸರದವರು ಕೆಲಕಾಲ ಬೆಚ್ಚಿ ಬೀಳುವಂತಾದ ಘಟನೆ 34 ನೆಕ್ಕಿಲಾಡಿಯಲ್ಲಿ ಮೇ.4ರಂದು ನಡೆದಿದ್ದು, ಅಲ್ಲಿನವರು ಧೈರ್ಯದಿಂದ ಯುವಕನ ನಡೆಯನ್ನು ಪರಿಶೀಲಿಸಲು ಮುಂದಾಗಿದ್ದರಿಂದ ಯುವಕನ ಜೀವ ಉಳಿಯುವಂತಾಗಿದೆ.

ಇಲ್ಲಿನ ದರ್ಬೆಯ ಮಂಚು ನಾಯ್ಕ ಎಂಬವರ ಮನೆಗೆ ಇಂದು ಬೆಳಗ್ಗೆ 7ರ ಸುಮಾರಿಗೆ ಗುಡ್ಡೆಯ ಬದಿಯಿಂದ ಓಡಿಕೊಂಡು ಬಂದ ಯುವಕನೋರ್ವ ಏಕಾಏಕಿ ನುಗ್ಗಲು ಯತ್ನಿಸಿದ್ದ. ಆಗ ಅಲ್ಲೇ ಇದ್ದ ಮನೆಯವರು ಬಾಗಿಲು ಹಾಕಿ ಇವರ ಮನೆಯೊಳಗೆ ನುಗ್ಗುವುದನ್ನು ತಡೆದಿದ್ದು, ಅಲ್ಲಿಂದ ಓಡಿದ ಆತ ಅವರ ಮನೆಯ ಹೊರಗೆ ಕಟ್ಟಿರುವ ದಾಸ್ತಾನು ಕೊಠಡಿ (ಕೊಟ್ಟಿಗೆ)ಗೆ ನುಗ್ಗಿ ಅಲ್ಲಿನ ಬಾಗಿಲು, ಕಿಟಕಿಗಳನ್ನೆಲ್ಲಾ ಮುಚ್ಚಿ ಒಳಗಿನಿಂದ ಲಾಕ್ ಹಾಕಿಕೊಂಡಿದ್ದ. ಅಲ್ಲದೇ, ಯಾರಲ್ಲಿಯೋ ಫೋನಿನಲ್ಲಿ ಮಾತನಾಡಲು ತೊಡಗಿದ್ದ. ಈತನ ಈ ನಡೆಯನ್ನು ನೋಡಿ ಭೀತಿಗೊಳಪಟ್ಟ ಮನೆಯವರು ಕೂಡಲೇ ನೆರೆಕರೆಯವರನ್ನು ಕರೆದಿದ್ದು, ಅಲ್ಲಿಗೆ ಬಂದ ಈತ ಕಳ್ಳನಾಗಿರಬಹುದೆಂದು ಭಾವಿಸಿ, ಆತ ನುಗ್ಗಿದ ಕೊಠಡಿಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿಕೊಂಡಿದ್ದರು. ಅಲ್ಲದೇ, ಘಟನೆಯ ಬಗ್ಗೆ ಪೊಲೀಸರಿಗೂ ಫೋನಾಯಿಸಿ ತಿಳಿಸಿದ್ದರು. ಸ್ವಲ್ಪ ಹೊತ್ತಲ್ಲೇ ಈತ ಒಳಗಿನ ಬಾಗಿಲಿನ ಚಿಲಕ ತೆಗೆದಿದ್ದು, ಕೊಠಡಿಯೊಳಗೆ ಬಂಧಿಯಾಗಿದ್ದ. ಮನೆಯ ಬಳಿ ಸ್ವಲ್ಪ ಪರಿಸರವಾಸಿಗಳು ಸೇರಿದ ಮೇಲೆ ಈತನನ್ನು ವಿಚಾರಿಸಲು ಧೈರ್ಯದಿಂದ ಬಾಗಿಲು ತೆರೆದಿದ್ದು, ಆಗ ಮತ್ತಷ್ಟು ಭಯಭೀತರಾಗುವ ಸರದಿ ಅಲ್ಲಿನವರದ್ದಾಗಿತ್ತು. ಯಾಕೆಂದರೆ ಇವರು ಬಾಗಿಲು ತೆರೆದು ಒಳ ನೋಡಿದಾಗ ಈತ ತನ್ನ ಕೈಯಲ್ಲಿದ್ದ ಉದ್ದನೆಯ ಶಾಲಿನಿಂದ ಆ ಕೊಠಡಿಯ ಛಾವಣಿಗೆ ನೇಣು ಹಾಕಿಕೊಂಡು ಅದರಲ್ಲಿ ತನ್ನ ಕುತ್ತಿಗೆಯನ್ನು ಬಿಗಿದು ನೇತಾಡುತ್ತಿದ್ದ. ಕೂಡಲೇ ಅಲ್ಲಿನವರೆಲ್ಲಾ ಸೇರಿ ಆತನನ್ನು ರಕ್ಷಿಸಿದ್ದು, ಇದರಿಂದ ಅದೃಷ್ಟವಶಾತ್ ಈತ ಬದುಕುಳಿಯುವಂತಾದ.

ಬಳಿಕ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಬಂದಿದ್ದು, ಈತನನ್ನು ವಿಚಾರಿಸಿದಾಗ ಈತ ಮಾನಸಿಕ ಅಸ್ವಸ್ಥನಂತೆ ಒಂದಕ್ಕೊಂದು ಸಂಬಂಧಪಡದ ಗೊಂದಲದ ಉತ್ತರವನ್ನೇ ನೀಡುತ್ತಿದ್ದ. ಸಂಪೂರ್ಣ ಭಯಭೀತಗೊಳಗಾಗಿದ್ದ ಈತನನ್ನು ಪೊಲೀಸರು ಸಮಾಧಾನದಿಂದಲೇ ಬಾಯಿ ಬಿಡಿಸಿದಾಗ ಮತ್ತೆ ತನ್ನ ಪರಿಚಯ ಹೇಳತೊಡಗಿದ. ಅದರಂತೆ ಈತ ಮಂಜಲಪಡ್ಪು ಸಮೀಪದ ಚೇವುರೆಯ ರಮೇಶ (೨೮) ಎಂದು ತಿಳಿದು ಬಂದಿದ್ದು, ತನ್ನ ತಂದೆ- ತಾಯಿಯೊಂದಿಗೆ ಅಲ್ಲೇ ಸಮೀಪದ ಸಂಬಂಧಿಕರ ಮನೆಗೆ ಬಂದಿದ್ದನಂತೆ. ಬಳಿಕ ಈತನ ತಂದೆ- ತಾಯಿಯನ್ನು ಕರೆಸಲಾಗಿದ್ದು, ಈತ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ. ಕುಮಾರಧಾರ ನದಿ ಸೇರಿದಂತೆ ಹಲವು ಕಡೆ ಈತನಿಗಾಗಿ ಹುಡುಕಾಡಿದ್ದೆವು ಎಂದಿದ್ದರು. ಈತ ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದು, ಬಳಿಕ ಈತನ ತಂದೆ-ತಾಯಿಯ ಜೊತೆಗೆ ಪೊಲೀಸರು ಈ ಯುವಕನನ್ನು ಕಳುಹಿಸಿಕೊಟ್ಟರು.

ಭೀತಿ ತಂದ ರಾದ್ಧಾಂತ: ದರ್ಬೆ ಪರಿಸರವು ಬಹುತೇಕ ಒಂಟಿ ಮನೆಗಳೇ ಜಾಸ್ತಿ ಇರುವ ಪ್ರದೇಶವಾಗಿದ್ದು, ಸುತ್ತಲೂ ಗುಡ್ಡ, ಕಾಡುಗಳಿಂದ ಆವರಿಸಿದೆ. ಮಂಚು ನಾಯ್ಕರ ಮನೆಯ ಕೂಗಳತೆಯ ದೂರದಲ್ಲಿ ಒಂದು ಮನೆಯಿರುವುದು ಬಿಟ್ಟರೆ ಮತ್ತೆಲ್ಲಾ ಮನೆಗಳು ದೂರ ದೂರ ಇವೆ. ಆ ಕಡೆ ಈ ಕಡೆ ತೋಟ, ಗುಡ್ಡ, ಕಾಡುಗಳಿವೆ. ಇಂತಹ ಮನೆಗೆ ಅಪರಿಚಿತ ಯುವಕನೋರ್ವ ಓಡಿ ಬಂದು ನುಗ್ಗಿ ಬಾಗಿಲು ಹಾಕಿಕೊಂಡು ರದ್ಧಾಂತ ಸೃಷ್ಟಿಸಿರುವುದು ಇಲ್ಲಿನವರನ್ನೆಲ್ಲಾ ಒಮ್ಮೆ ಭೀತಿಗೊಳಪಡಿಸಿದೆ. ಆದರೆ ಬಳಿಕ ಇವರು ಬಾಗಿಲು ತೆರೆದಾಗ ಈತ ಕುತ್ತಿಗೆಗೆ ನೇಣು ಹಾಕಿಕೊಂಡು ನೇತಾಡುತ್ತಿರುವುದು ಇನ್ನಷ್ಟು ಭಯಕ್ಕೆ ಒಳಪಡಿಸಿದೆ. ಅಲ್ಲಿದ್ದವರೆಲ್ಲಾ ಸೇರಿ ಧೈರ್ಯ ತಂದುಕೊಂಡು ಸಕಾಲಕ್ಕೆ ಬಾಗಿಲು ತೆರೆಯದಿದ್ದರಿಂದ ಈತ ಪ್ರಾಣಾಪಾಯದಿಂದ ಬಚಾವಾಗುವಂತಾಗಿದ್ದು, ಇಲ್ಲದಿದ್ದರೆ ಈತ ಸಾಯುವುದಲ್ಲದೆ, ಆ ಮನೆಯವರು ಈತನಿಂದಾಗಿ ಪೊಲೀಸ್ ಠಾಣೆಗೆ ಅಲೆದಾಡುವ ಪರಿಸ್ಥಿತಿ ಬರುತ್ತಿತ್ತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.