ಕೊರೋನಾರ್ಭಟಕ್ಕೆ ನೆಲಕಚ್ಚುತ್ತಿದೆ ಕುಕ್ಕುಟೋದ್ಯಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

                                                                                                                                                      @ ಸಿಶೇ ಕಜೆಮಾರ್
ಸಂಕಷ್ಟದಲ್ಲಿ ಕೋಳಿಸಾಕಾಣೆದಾರರು, ಸರಕಾರದ ನೆರವಿಗೆ ಆಗ್ರಹ
ಪುತ್ತೂರು: ಕೊರೋನಾ ಎರಡನೇ ಅಲೆಯ ಹೊಡೆತಕ್ಕೆ ಕುಕ್ಕುಟೋದ್ಯಮ ನೆಲಕಚ್ಚುವ ಭೀತಿಯಲ್ಲಿದೆ. ಲಾಕ್‌ಡೌನ್‌ನಿಂದಾಗಿ ಕೋಳಿ ಖರೀದಿ ಕುಸಿತ ಕಂಡ ಹಿನ್ನೆಲೆಯಲ್ಲಿ ಕೋಳಿ ಸಾಕಾಣೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಕಿದ ಕೋಳಿಗಳನ್ನು ಮಾರಾಟ ಮಾಡಲಾಗದೆ ತೊಂದರೆಗೀಡಾಗಿದ್ದು ಸರಕಾರ ಕೋಳಿ ಸಾಕಾಣೆದಾರರ ನೆರವಿಗೆ ಬರಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಪುತ್ತೂರು ತಾಲೂಕಿನಲ್ಲೇ ಸಾವಿರಕ್ಕೂ ಅಧಿಕ ಕೋಳಿ ಫಾರಂಗಳಿದ್ದು 40 ದಿನಕ್ಕೊಮ್ಮೆ ಲಕ್ಷಕ್ಕೂ ಅಧಿಕ ಕೋಳಿಗಳ ಉತ್ಪಾದನೆಯಾಗುತ್ತಿದೆ. ಇದಲ್ಲದೆ ಒಂದು ಫಾರಂನಲ್ಲಿ ಕನಿಷ್ಠ 5 ಕ್ಕೂ ಅಧಿಕ ಮಂದಿ ದುಡಿಯುತ್ತಿದ್ದು ಸಾವಿರಾರು ಕುಟುಂಬಗಳು ನೇರ ಹಾಗೂ ಪರೋಕ್ಷವಾಗಿ ಇದರಿಂದ ಬದುಕು ಕಟ್ಟಿಕೊಂಡಿದೆ. ಕೊರೋನಾ ಲಾಕ್‌ಡೌನ್‌ನಿಂದಾಗಿ ಕೋಳಿಗಳ ಮಾರಾಟ ಕುಸಿತ ಹಿನ್ನೆಲೆಯಲ್ಲಿ ಸಾಕಾಣೆದಾರರು ಮುಗಿಲು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಹೆಚ್ಚಿನ ಕೋಳಿ ಸಾಕಾಣೆದಾರರು ಖಾಸಗಿ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಕೋಳಿಮರಿ, ಆಹಾರ, ಔಷಧಿಗಳನ್ನು ಕಂಪೆನಿಗಳಿಂದ ಪಡೆದು ಸಾಕಾಣೆ ಮಾಡಿಕೊಡುತ್ತಾರೆ. 42 ದಿನಗಳಲ್ಲಿ ಮರಿಗಳನ್ನು ಬೆಳೆಸಿ ಕಂಪೆನಿಗೆ ಕೊಡಬೇಕಾಗುತ್ತದೆ. ಇಲ್ಲಿ ಕಂಪೆನಿ ನಿಗದಿ ಮಾಡಿರುವ ಲಾಭಾಂಶ ರೈತರಿಗೆ ದೊರೆಯುತ್ತದೆ. ನಿಗದಿತ ದಿನಗಳಲ್ಲಿ ಮರಿಗಳನ್ನು ಕಂಪೆನಿಯವರು ಕೊಂಡುಹೋಗದಿದ್ದರೆ ರೈತರಿಗೆ ನಷ್ಟವಾಗುತ್ತದೆ.
2000 ಮರಿಗಳ ಫಾರಂನಲ್ಲಿ 2 ಲಕ್ಷಕ್ಕೂ ಅಧಿಕ ನಷ್ಟ

ಕೋಳಿ ಮರಿಗಳನ್ನು ಖರೀದಿಸಿ ಸಾಕಾಣೆ ಮಾಡುವ ರೈತರು ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಒಂದು ಮರಿಗೆ 42 ದಿನಗಳಲ್ಲಿ ಬರೋಬ್ಬರಿ ಮೂರುವರೆ ಕೆ.ಜಿ ಆಹಾರ ಬೇಕಾಗುತ್ತದೆ. ಒಂದು ಕೆ.ಜಿ ಆಹಾರಕ್ಕೆ 42 ರೂಪಾಯಿ ಖರ್ಚು ಇದ್ದು ಒಟ್ಟಾರೆಯಾಗಿ ಒಂದು ಮರಿಗೆ 140 ರೂಪಾಯಿ ಆಹಾರ 42 ಕ್ಕೆ ಬೇಕಾಗುತ್ತದೆ. ಒಂದು ಕೋಳಿ ಮರಿಗೆ 51 ರೂಪಾಯಿ ಇದೆ. ಒಂದು ಬ್ಯಾಗ್ ಆಹಾರಕ್ಕೆ 2500 ರೂ.ಇದೆ. ಒಬ್ಬ ರೈತ 2000 ಸಾವಿರ ಕೋಳಿ ಮರಿಯ ಫಾರಂ ಹೊಂದಿದ್ದರೆ ಆತ ಸುಮಾರು 2 ರಿಂದ 3 ಲಕ್ಷ ನಷ್ಟವನ್ನು ಹೊಂದುವ ಸಾಧ್ಯತೆ ಇದೆ.

ಕೋಳಿ ಉದ್ಯಮಕ್ಕೆ ಮೊದಲ ಹೊಡೆತ
ಲಾಕ್‌ಡೌನ್ ಆಗಲಿ ಅಥವಾ ಯಾವುದೇ ಸಾಂಕ್ರಾಮಿಕ ರೋಗ ಬಂದರೂ ಮೊದಲು ಹೊಡೆತ ತಿನ್ನುವವರು ಕೋಳಿ ಸಾಕಾಣೆದಾರರಾಗಿದ್ದಾರೆ. ಕಳೆದ ವರ್ಷ ಹಕ್ಕಿ ಜ್ವರದಿಂದಾಗಿ ಲಕ್ಷಾಂತರ ನಷ್ಟ ಉಂಟಾಯಿತು. ಎಲ್ಲೇ ದೂರದಲ್ಲಿ ಒಂದು ಚಿಕ್ಕ ಸಾಂಕ್ರಾಮಿಕ ರೋಗ ಲಕ್ಷಣ ಕಂಡು ಬಂದರೂ ಕೋಳಿ ದರದಲ್ಲಿ ಏರುಪೇರು ಉಂಟಾಗುತ್ತದೆ. ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ಕೋಳಿ ಉದ್ಯಮ ಕೋಟಿಗಟ್ಟಲೆ ನಷ್ಟ ಹೊಂದಿದೆ. ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ಕೋರೋನಾ ಲಾಕ್‌ಡೌನ್ ರೈತರನ್ನು ತಲ್ಲಣಗೊಳಿಸಿದೆ.

ಕೋಳಿ ಮಾರಾಟದಲ್ಲಿ ಕುಸಿತ
ಬೆಳಿಗ್ಗೆ 6ರಿಂದ 10 ಗಂಟೆಯವರೇಗೆ ಅಗತ್ಯ ವಸ್ತುಗಳ ಖರೀದಿಗೆ ಸರಕಾರ ಅವಕಾಶ ನೀಡಿದೆ ಈ ಸಮಯದಲ್ಲಿ ಹತ್ತಿಪ್ಪತ್ತು ಕೋಳಿ ಮಾರಾಟ ಮಾಡುವುದು ಕೂಡ ಕಷ್ಟಸಾಧ್ಯ ಏಕೆಂದರೆ ಒಂದು ಕೋಳಿಯನ್ನು ಮಾಂಸ ಮಾಡಿ ಕೊಡಬೇಕಾದರೆ ಕನಿಷ್ಠ 15 ನಿಮಿಷ ಬೇಕಾಗುತ್ತದೆ. ಆದ್ದರಿಂದ ಮಧ್ಯಾಹ್ನ 12 ಗಂಟೆಯವರೇಗಾದರೂ ಕೋಳಿ ಮಾರಾಟ ಅಂಗಡಿಗಳಿಗೆ ಅನುಮತಿ ನೀಡಿದರೆ ಒಂದಷ್ಟು ಪ್ರಯೋಜನವಾಗಬಹುದು ಎನ್ನುತ್ತಾರೆ ಕೋಳಿ ಮಾರಾಟಗಾರರು. ದಿನದಿಂದ ದಿನಕ್ಕೆ ಏರುಪೇರಾಗುತ್ತಿರುವ ದರ ಮತ್ತು ಕೋಳಿ ಇತರ ಜಿಲ್ಲೆಗಳಿಗೆ ಸಾಗಾಟವಾಗದೇ ಇರುವುದೇ ಕೋಳಿ ಉದ್ಯಮದಲ್ಲಿ ತೀವ್ರ ನಷ್ಟ ಉಂಟಾಗಲು ಕಾರಣವೆನ್ನಲಾಗಿದೆ.

ಕೋಳಿ ಸಾಕಾಣೆದಾರರ ನೆರವಿಗೆ ಮನವಿ
ರಾಜ್ಯದಲ್ಲಿ ಲಕ್ಷಾಂತರ ಮಂದಿ ಕೋಳಿ ಸಾಕಾಣೆಯನ್ನು ಮಾಡುತ್ತಿದ್ದಾರೆ. ಕೋಳಿ ಫಾರಂಗಳನ್ನೇ ನಂಬಿ ಅದೆಷ್ಟೋ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಈಗಾಗಲೇ ಸರಕಾರ ಕೃಷಿಕರಿಂದ ಹಿಡಿದು ಕೆಲವು ವರ್ಗದವರಿಗೆ ಸಹಾಯಧನವನ್ನು ಘೋಷಿಸಿದೆ. ಆದರೆ ಕುಕ್ಕುಟೋದ್ಯಮವನ್ನು ಮರೆತಿದ್ದಾರೆ ಎನ್ನುತ್ತಾರೆ ರೈತರು. ಆದ್ದರಿಂದ ಈ ಕೂಡಲೇ ಕೋಳಿ ಸಾಕಾಣೆದಾರರಿಗೂ ನೆರವು ನೀಡಬೇಕೆಂಬುದು ಕೋಳಿ ಉದ್ಯಮೆದಾರರ ಆಗ್ರಹವಾಗಿದೆ.

ಕೊರೋನಾ ಲಾಕ್‌ಡೌನ್‌ನಿಂದಾಗಿ ಕೋಳಿ ಸಾಕಾಣೆದಾರರು ಲಕ್ಷಾಂತರ ರೂ.ನಷ್ಟವನ್ನು ಅನುಭವಿಸುತ್ತಿದ್ದಾರೆ. 2000 ಕೋಳಿ ಮರಿಗಳ ಫಾರಂನಲ್ಲಿ 2 ರಿಂದ 3 ಲಕ್ಷದಷ್ಟು ನಷ್ಟವನ್ನು ಹೊಂದುತ್ತಿದ್ದಾರೆ. ಸರಕಾರ ಕೋಳಿ ಸಾಕಾಣೆದಾರರ ಭವಣೆಯನ್ನು ಅರ್ಥಮಾಡಿಕೊಂಡು ನೆರವು ನೀಡಬೇಕಾಗಿದೆ.
ದಯಾನಂದ ರೈ ಕೊಲ್ಲಾಜೆ, ಅನುಗ್ರಹ ಫಾರಂ, ಕೋಳಿ ಸಾಕಾಣೆದಾರರು

ಒಂದು ಕೋಳಿಯನ್ನು ಮಾಂಸ ಮಾಡಿ ಕೊಡಲು ಕನಿಷ್ಟ ಕಾಲು ಗಂಟೆ ಬೇಕಾಗುತ್ತದೆ. 6 ರಿಂದ 10 ಗಂಟೆಯ ಅವಧಿಯಲ್ಲಿ ಎಷ್ಟು ಕೋಳಿ ಮಾರಾಟ ಮಾಡಬಹುದು. ಫಾರಂನಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡಬೇಕು, ವಿದ್ಯುತ್ ಬಿಲ್, ನೀರಿನ ಬಿಲ್ ಎಲ್ಲವನ್ನು ಕಟ್ಟಬೇಕು ಆದ್ದರಿಂದ ಕೋಳಿ ಮಾರಾಟದ ಅವಧಿಯನ್ನು 12 ಗಂಟೆಯವರೆಗೆ ಹೆಚ್ಚಿಸಬೇಕು ಎಂಬುದು ಜಿಲ್ಲಾಡಳಿತಕ್ಕೆ ನಮ್ಮ ಮನವಿಯಾಗಿದೆ.
ಅಬ್ದುಲ್ ನವಾಝ್, ಸುಫ್ರೀಮ್ ಚಿಕನ್ ಸೆಂಟರ್ ಪರ್ಪುಂಜ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.