ಕಡಬ ಸಮುದಾಯ ಆಸ್ಪತ್ರೆಗೆ ಸಚಿವರು, ಸಂಸದರ ಭೇಟಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಕ್ರಮ: ಸಚಿವ ಅಂಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಎಲ್ಲಾ ಕೊರೋನಾ ಸೋಂಕಿತರನ್ನು ಹೋಂ ಐಸೋಲೇಶನ್ ಬದಲಿಗೆ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆದು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ತಿಳಿಸಿದ್ದಾರೆ.

ಅವರು ಸೋಮವಾರ ಸಂಸದ ನಳಿನ್ ಕುಮಾರ್ ಕಟೀಲ್ ಜೊತೆ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಾಧಿಕಾರಿ ಜೊತೆಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

ಕೊರೋನಾ ಪಾಸಿಟಿವ್ ಬಂದವರನ್ನು ಈ ಬಾರಿ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಹೋಂ ಐಸೋಲೇಶನ್‌ನಲ್ಲಿರಲು ಅವಕಾಶ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ಬಹುತೇಕ ಮಂದಿ ಸೋಂಕಿತರು ದುರುಪಯೋಗಪಡಿಸಿಕೊಂಡಿರುವುದು ತಿಳಿದುಬಂದಿದೆ. ಸೋಂಕಿತರು ಮನೆ ಮಂದಿಗೆ ಸೋಂಕು ಹರಡಬಹುದೆಂಬ ಕನಿಷ್ಠ ಜಾಗ್ರತೆಯನ್ನೂ ಮಾಡದೇ ಮನೆ ಮಂದಿಯೊಂದಿಗೆ ವ್ಯವಹರಿಸುತ್ತಿರುವುದು ಹಾಗೂ ಮನೆಯಿಂದ ಹೊರಬಂದು ಸಾರ್ವಜನಿಕರಿಗೆ ಸೋಂಕು ಹರಡಲು ಕಾರಣವಾಗುವಂತೆ ಎಲ್ಲೆಡೆ ತಿರುಗಾಟ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸರಕಾರ ಜನರ ಆರೋಗ್ಯದ ದೃಷ್ಟಿಯಿಂದ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಮಾಡಿದ್ದರೂ ಕೆಲವರ ನಿರ್ಲಕ್ಷ್ಯದಿಂದಾಗಿ ಗ್ರಾಮೀಣ ಭಾಗದಲ್ಲಿಯೂ ಕೋವಿಡ್ ಸೋಂಕು ಹರಡುವಂತಾಗಿದೆ. ಆದುದರಿಂದ ಕೊರೋನಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಿ ಅಲ್ಲಿಯೇ ಅವರ ಆರೈಕೆ ಮಾಡಲು ಅಗತ್ಯವಾದ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗಿದೆ. ಕೊರೋನಾ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.

ಕಡಬ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಅವರು ಸಚಿವರು ಮತ್ತು ಸಂಸದರಿಗೆ ಅಗತ್ಯ ಮಾಹಿತಿ ನೀಡಿದರು. ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಹರೀಶ್ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ, ರವಿರಾಜ್ ಶೆಟ್ಟಿ ಕಡಬ, ಮಂಕುಡೆ ವೆಂಕಟ್ರಮಣ ರಾವ್, ಪ್ರಕಾಶ್ ಎನ್.ಕೆ., ವೆಂಕಟ್ರಮಣ ಕುತ್ಯಾಡಿ, ಮಲ್ಲೇಶ್ ಆಲಂಕಾರು, ಮಾಧವ ಕೋಲ್ಪೆ, ಮುತ್ತುಕುಮಾರ್, ಅಶೋಕ್‌ಕುಮಾರ್ ಪಿ., ಜಿನಿತ್ ಮರ್ದಾಳ ಮುಂತಾದವರು ಹಾಜರಿದ್ದರು.

ಸುಸಜ್ಜಿತ ಕೋವಿಡ್ ಕೇರ್ ಸೆಂಟರ್:
ಈಗಾಗಲೇ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 50 ಬೆಡ್‌ಗಳ ಸಾಮರ್ಥ್ಯದ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಸಿದ್ಧಪಡಿಸಲಾಗಿದೆ. ಕಡಬದ ಸರಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಹಾಗೂ ಸುಬ್ರಹ್ಮಣ್ಯದ ಆಶ್ರಮ ಶಾಲೆಯನ್ನು ಕೋವಿಡ್ ಕೇಂದ್ರಕ್ಕಾಗಿ ಎಲ್ಲಾ ವ್ಯವಸ್ಥೆಗಳೊಂದಿಗೆ ಸಿದ್ಧಪಡಿಸಿ ಕಾದಿರಿಸಲಾಗಿದೆ ಎಂದು ಮಾಹಿತಿ ನೀಡಿದ ಸಚಿವರು ಕೋವಿಡ್ ಸೋಂಕಿತರು ಕೋವಿಡ್ ಸೆಂಟರ್‌ಗೆ ದಾಖಲಾಗಲು ಒಪ್ಪದಿದ್ದರೆ ಪೊಲೀಸರ ನೆರವಿನೊಂದಿಗೆ ಅವರನ್ನು ಕೋವಿಡ್ ಸೆಂಟರ್‌ಗೆ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಡಬದಲ್ಲಿ ಆಕ್ಸಿಜನ್ ಪ್ಲ್ಯಾಂಟ್‌ಗೆ ಕ್ರಮ:
ಕಡಬ ಸಮುದಾಯ ಆಸ್ಪತ್ರೆಯಲ್ಲಿ ಹೈಪ್ಲೋ ಆಕ್ಸಿಜನ್, ಏರ್ ಮತ್ತು ವ್ಯಾಕ್ಯೂಮ್‌ಪಾಯಿಂಟ್ ಅಳವಡಿಸಲು ಕ್ರಮ ಕೈಗೊಂಡಿದ್ದು, ಈಗಾಗಲೇ 48 ಲಕ್ಷ ರೂ. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಕೆ, ಆಕ್ಸಿಜನ್ ಜಂಬೋ ಸಿಲಿಂಡರ್ ಸಂಗ್ರಹಕ್ಕಾಗಿ ಶೆಡ್ ನಿರ್ಮಾಣ ಮುಂತಾದ ಕಾಮಗಾರಿ ಪೂರ್ಣಗೊಂಡಿದೆ. 30 ಜಂಬೋ ಆಕ್ಸಿಜನ್ ಸಿಲಿಂಡರ್‌ಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ. ಕಡಬದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಸಲುವಾಗಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು, ಅವರು ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಅಂಗಾರ ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.