ಆಶಾ ಕಾರ್ಯಕರ್ತೆಯರಿಗೆ ನೆರವಾಗಿ ಮಾದರಿಯಾದ ಶಿಕ್ಷಕರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನರಿಮೊಗರು ಕ್ಲಸ್ಟರ್, ಪ್ರಾ.ಶಾ.ಶಿ.ಸಂಘದ ಸಹಭಾಗಿತ್ವದಲ್ಲಿ ಅಕ್ಕಿ, ಕೊಡೆ ವಿತರಣೆ

ಪುತ್ತೂರು: ಸರಕಾರಿ ಪ್ರಾಥಮಿಕ ಶಾಲಾ ನರಿಮೊಗರು ಕ್ಲಸ್ಟರ್‌ನ ಶಿಕ್ಷಕರು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಭಾಗಿತ್ವದಲ್ಲಿ ಸರ್ವೆ ಪ್ರಾ.ಆರೋಗ್ಯ ಕೇಂದ್ರ ವ್ಯಾಪ್ತಿಗೊಳಪಡುವ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಸೇರಿದಂತೆ ಒಟ್ಟು 25 ಮಂದಿ ಆಶಾ ಕಾರ್ಯಕರ್ತೆಯರಿಗೆ ಅಕ್ಕಿ ಹಾಗೂ ಕೊಡೆ ವಿತರಣೆ ಮೇ 25ರಂದು ನರಿಮೊಗರು ಗ್ರಾ.ಪಂ ವಠಾರದಲ್ಲಿ ನಡೆಯಿತು.

ಅಕ್ಕಿ ಮತ್ತು ಕೊಡೆಯನ್ನು ವಿತರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ಎಲ್ಲರೂ ಮನೆಯಲ್ಲಿದ್ದರೆ ಆಶಾ ಕಾರ್ಯಕರ್ತೆಯರು ಮನೆಯಿಂದ ಹೊರಗಿದ್ದು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ದುಡಿಯುತ್ತಿದ್ದಾರೆ. ಕೊರೋನಾ ವೈರಸ್ ನಮಗೊಂದು ಸವಾಲಾಗಿದ್ದು ಅದರ ನಿಯಂತ್ರಣ ವಿಚಾರದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಮಹತ್ವದ್ದಾಗಿದೆ ಎಂದು ಹೇಳಿದರು. ಕೊರೋನಾ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿದೆ, ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಅವರಿಗೆ ನೆರವಾಗಿ ಪ್ರೋತ್ಸಾಹ ನೀಡಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಕರಿಂದ ಮಾದರಿ ಕಾರ್ಯಕ್ರಮ-ಲೋಕೇಶ್
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ ಕೊರೋನಾ ವಾರಿಯರ್ಸ್ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಅವರಿಗೆ ಆತ್ಮ ಸ್ಥೈರ್ಯವನ್ನು ನೀಡುವ ಉದ್ದೇಶದಿಂದ ನರಿಮೊಗರು ಕ್ಲಸ್ಟರ್‌ನ ಶಿಕ್ಷಕರು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಭಾಗಿತ್ವದಲ್ಲಿ ಅಕ್ಕಿ ಮತ್ತು ಕೊಡೆ ನೀಡುವ ಯೋಜನೆ ಹಾಕಿಕೊಂಡಿರುವ ಕಾರ್ಯದ ಬಗ್ಗೆ ಖುಷಿಯಾಗಿದೆ, ಇದು ತಾಲೂಕಿನ ಶಿಕ್ಷಕ ಸಂಘದ ಪರವಾಗಿ ನೀಡಿರುವ ಮೊದಲ ಕಾರ್ಯಕ್ರಮವಾಗಿದ್ದು ಜಿಲ್ಲೆಗೆ ಮಾದರಿಯಾಗಿದೆ ಎಂದು ಹೇಳಿದರು.

ಪ್ರತೀ ಮನೆಯಲ್ಲೂ ಜಾಗೃತಿ ಮೂಡಿಸಿದ್ದಾರೆ-ಲಕ್ಷ್ಮಣ ನಾಯ್ಕ
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ ಕೆ ಅವರು, ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಪ್ರತೀ ಮನೆಗಳಲ್ಲೂ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ, ಇವರಿಗೆ ಅಕ್ಕಿ ಮತ್ತು ಕೊಡೆ ನೀಡುವ ಕಾರ್ಯಕ್ಕೆ ಸಂಘದ ಹಾಗೂ ನರಿಮೊಗರು ಕ್ಲಸ್ಟರ್‌ನ ಶಿಕ್ಷಕ\ಶಿಕ್ಷಕಿಯರು ಸಹಕರಿಸಿದ್ದಾರೆ ಎಂದು ಹೇಳಿದರು.

ನರಿಮೊಗರು ಗ್ರಾ.ಪಂ ಪಿಡಿಓ ರವಿಚಂದ್ರ ಮಾತನಾಡಿದರು.
ವೇದಿಕೆಯಲ್ಲಿ ತಾ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಎ, ಉಪಾಧ್ಯಕ್ಷ ಸುಧಾಕರ ಕುಲಾಲ್ ಉಪಸ್ಥಿತರಿದ್ದರು. ಸರ್ವೆ ಕಲ್ಪಣೆ ಪ್ರಾಥಮಿಕ ಶಾಲಾ ಶಿಕ್ಷಕಿ ಸುನಿತಾ ಪ್ರಾರ್ಥಿಸಿದರು. ವೀರಮಂಗಲ ಶಾಲಾ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರ.ಕಾರ್ಯದರ್ಶಿ ವೇದಾವತಿ ವಂದಿಸಿದರು. ಮುಕ್ವೆ ಶಾಲಾ ಶಿಕ್ಷಕ ಚರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ವಿಮಲ್ ಕುಮಾರ್, ಮುಂಡೂರು ಶಾಲಾ ಶಿಕ್ಷಕಿ ವನಿತಾ, ವೀರಮಂಗಲ ಶಾಲಾ ಶಿಕ್ಷಕಿ ಶೋಭಾ, ಆನಡ್ಕ ಶಾಲಾ ಶಿಕ್ಷಕಿ ಮಾಲತಿ ಮತ್ತಿತರರು ಉಪಸ್ಥಿತರಿದ್ದರು. ನರಿಮೊಗರು ಗ್ರಾ.ಪಂ ಸಿಬ್ಬಂದಿ ಮಾಧವ ಸಹಕರಿಸಿದರು.

ಕೊರೋನಾ ಈ ಸಂಕಷ್ಟದ ಸಮಯದಲ್ಲಿ ಸಮಾಜಕ್ಕಾಗಿ ನಾವು ಏನಾದರೂ ನೆರವು ನೀಡಬೇಕು ಎಂದು ಅನೇಕ ಶಿಕ್ಷಕರು ನನ್ನ ಬಳಿ ವಿಚಾರ ಪ್ರಸ್ತಾಪಿಸಿದಾಗ ನನಗೂ ಏನಾದರೂ ಸಮಾಜಕ್ಕೆ ಕೊಡಬೇಕು ಎಂದನಿಸಿತು. ಆ ಪ್ರಕಾರ ನಾವೆಲ್ಲಾ ಚರ್ಚಿಸಿ ಆಶಾ ಕಾರ್ಯಕರ್ತೆಯರಿಗೆ ನೆರವು ನೀಡುವ ಬಗ್ಗೆ ತೀರ್ಮಾನಿಸಿದೆವು. ಇದಕ್ಕೆ ಮುಂದಾಳತ್ವವನ್ನು ನಾನೇ ವಹಿಸಬೇಕೆಂಬ ಹಲವರ ಕೋರಿಕೆಯ ಮೇರೆಗೆ ಮುಂದಾಳತ್ವ ವಹಿಸಿಕೊಂಡು ಪ್ರತೀ ಶಿಕ್ಷಕರನ್ನು ಕರೆ ಮಾಡಿ ವಿಷಯ ತಿಳಿಸಿದಾಗ ಎಲ್ಲರೂ ಸ್ಪಂದನೆ ನೀಡಿ ನೆರವು ನೀಡಲು ಮುಂದೆ ಬಂದಿದ್ದಾರೆ. ಕ್ಲಸ್ಟರ್ ಮಟ್ಟದ ಶಾಲಾ ಮುಖ್ಯ ಶಿಕ್ಷಕರಿಗೆ ಮತ್ತು ನೆರವು ನೀಡಲು ಸಹಕಾರ ನೀಡಿದ ಎಲ್ಲ ಶಿಕ್ಷಕರಿಗೆ ಕೃತಜ್ಞತೆಗಳು.
-ವೇದಾವತಿ, ಪ್ರ.ಕಾರ್ಯದರ್ಶಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.