ಎಚ್ಚರ…ಬರ್‍ತಾ ಇದೆ ಡೇಂಜರ್ ಡೆಂಗ್ಯೂ…! ಇದು ಕೊರೋನಾಕ್ಕಿಂತಲೂ ಮಾರಕ, ಸ್ವಚ್ಛತೆ ಇರಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್

ಸೊಳ್ಳೆ ಉತ್ಪಾದನೆಯಾಗದಂತೆ ಎಚ್ಚರವಹಿಸಿ

ಪುತ್ತೂರು: ಜನಜೀವನವನ್ನು ತಲ್ಲಣಗೊಳಿಸಿದ ಕೊರೋನಾ ವೈರಸ್‌ನ ಎರಡನೆ ಅಲೆಯ ಆರ್ಭಟ ಹತೋಟಿಗೆ ಬರುತ್ತಿರುವ ಬೆನ್ನಲ್ಲೆ ಮಹಾಮಾರಿ ಡೆಂಗ್ಯೂ ಜ್ವರ ಮತ್ತೆ ವಕ್ಕರಿಸಿಕೊಂಡು ಬಿಟ್ಟಿದೆ. ಕೊರೋನಾಕ್ಕಿಂತಲೂ ಡೇಂಜರ್ ಎಂದೇ ಪರಿಗಣಿಸಲ್ಪಟ್ಟಿರುವ ಡೆಂಗ್ಯೂ ಸಾಂಕ್ರಾಮಿಕ ಜ್ವರಬಾಧೆ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಒಂದು ಕಡೆಯಲ್ಲಿ ಕೊರೋನಾ ಜ್ವರದಿಂದ ಕಂಗಾಲಾಗಿರುವ ಜನರಿಗೆ ಡೆಂಗ್ಯೂ ಜ್ವರ ಕೂಡ ಬಾಧಿಸುತ್ತಿದ್ದು ಹಿಂಡಿಹಿಪ್ಪೆ ಮಾಡಿಬಿಡುತ್ತಿದೆ. ಕೊರೋನಾ ಜ್ವರ ಕಡಿಮೆಯಾಗುತ್ತಿದ್ದಂತೆ ಸದ್ದಿಲ್ಲದೆ ಡೆಂಗ್ಯೂ ಜನರನ್ನು ಆಕ್ರಮಿಸಿಕೊಳ್ಳುತ್ತಿರುವುದು ಜನರಲ್ಲಿ ಭಯವನ್ನುಂಟು ಮಾಡಿದೆ. ಈಗಾಗಲೇ ಡೆಂಗ್ಯೂ ನಿರ್ಮೂಲನಕ್ಕೆ ತಾಲೂಕು ಆರೋಗ್ಯ ಇಲಾಖೆ ಸಕಲ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಂಡಿದ್ದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭಗೊಂಡಿದೆ. ಕೊರೋನಾ ಮತ್ತು ಡೆಂಗ್ಯೂ ಜ್ವರಕ್ಕೆ ಏಕಕಾಲದಲ್ಲಿ ಚಿಕಿತ್ಸೆ ನೀಡಬೇಕಾದ ಕ್ಲಿಷ್ಟಕರ ಪರಿಸ್ಥಿತಿ ಆರೋಗ್ಯ ಇಲಾಖೆಯದ್ದಾದರೆ, ಇವೆರಡರ ಮಧ್ಯೆ ಚಿಕಿತ್ಸೆ ಪಡೆಯಬೇಕಾದ ಸಂಕಷ್ಟ ಜನರದ್ದಾಗಿದ್ದಾಗಿದೆ.

ತಾಲೂಕಿನಲ್ಲಿ 14 ಡೆಂಗ್ಯೂ ಪ್ರಕರಣ
ಇದುವರೆಗೆ ಜಿಲ್ಲೆಯಲ್ಲಿ ೫೯ ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ೯೧೦ರಷ್ಟು ಶಂಕಿತ ಪ್ರಕರಣ ವರದಿಯಾಗಿದ್ದು ಅದಿನ್ನು ದೃಢಗೊಳ್ಳಬೇಕಿದೆ. ಪುತ್ತೂರಿನಲ್ಲಿ ೧೪, ಸುಳ್ಯದಲ್ಲಿ ೧೪, ಬೆಳ್ತಂಗಡಿ ೫, ಬಂಟ್ವಾಳ ೫, ಮಂಗಳೂರಿನಲ್ಲಿ ೮ ಪ್ರಕರಣ ದೃಢಪಟ್ಟಿದೆ. ಕಳೆದ ಒಂದು ತಿಂಗಳಿನಿಂದ ಡೆಂಗ್ಯೂ ಪ್ರಕರಣ ಏರಿಕೆ ಹಂತದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗ್ಯೂ ಹರಡುತ್ತಿರುವ ತೀವ್ರತೆಯಲ್ಲಿ ಏರಿಕೆ ಕಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕಾಲಿಕ ಮಳೆ
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಮತ್ತಷ್ಟು ಹೆಚ್ಚುವ ಅಪಾಯವಿದೆ. ಮಳೆ ಬಿಸಿಲಿನಾಟದ ಮಧ್ಯೆ ಜನರು ಸಂಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾರದ ಹಿಂದೆ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ನೀರು ತುಂಬಿಕೊಂಡಿದ್ದು ಸೊಳ್ಳೆ ಉತ್ಪತ್ತಿಗೆ ಇಂತಹ ನೀರು ವರದಾನವಾಗಿದೆ. ಮನೆಯ ಸುತ್ತಮುತ್ತ ಚರಂಡಿಗಳಲ್ಲಿ, ಹಳ್ಳಕೊಲ್ಲಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಅಂತಹ ನೀರಿನಲ್ಲಿ ಲಾರ್ವ ಇದ್ದು ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಮನೆ,ವಠಾರದ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾದ ಜವಬ್ದಾರಿ ನಮ್ಮದಾಗಿದೆ. ಜ್ವರ ಬಂದ ಮೇಲೆ ಔಷಧಿ ಪಡೆಯುವುದಕ್ಕಿಂತ ಜ್ವರ ಬರದಂತೆ ಎಚ್ಚರ ವಹಿಸುವುದು ಸೂಕ್ತ.

ಮನೆ ಮನೆ ಭೇಟಿ
ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಮನೆ ಭೇಟಿ ಮಾಡುವ ಸಂದರ್ಭದಲ್ಲಿ ಹೌಸ್ ಇಂಡೆಕ್ಸ್ ಆಧಾರದಲ್ಲಿ ಡೆಂಗ್ಯೂ ಬಾಧಿತ ಪ್ರದೇಶ ಎಂದು ನಿರ್ಧರಿಸುತ್ತಾರೆ. ಸರ್ವೆ ಮಾಡಿದ ಮನೆಗಳ ಪೈಕಿ ಲಾರ್ವಾ ಕಂಡು ಬಂದ ಮನೆಗಳನ್ನು ಒಟ್ಟು ಮನೆಗಳೊಂದಿಗೆ ಹೋಲಿಕೆ ಮಾಡಿ ಬಾಧಿತ ಪ್ರದೇಶವನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ ೨೦ ಮನೆಗಳನ್ನು ಸರ್ವೆ ಮಾಡಿದಾಗ ಅದರಲ್ಲಿ ೫ ಮನೆ ಪರಿಸರದಲ್ಲಿ ಲಾರ್ವಾ ಉತ್ಪಾದನೆ ಅಂಶ ಗೋಚರಿಸಿದರೆ ಆಗ ಅಲ್ಲಿ ರೋಗ ಹರಡುವ ಸಾಧ್ಯತೆ ಇದೆ ಎಂದು ಪರಿಗಣಿಸಲಾಗುತ್ತದೆ. ೨೦ ರಲ್ಲಿ ೧ ಮನೆಯಲ್ಲಿ ಲಕ್ಷಣ ಕಂಡು ಬಂದಲ್ಲಿ ಹರಡುವ ಸಾಧ್ಯತೆ ಕಡಿಮೆ ಎಂದು ಗುರುತಿಸಿ ರೋಗ ನಿಯಂತ್ರಣಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗುತ್ತದೆ.

ಫಾಗಿಂಗ್‌ನಿಂದ ಲಾರ್ವ ನಾಶ ಸಾಧ್ಯ
ಡೆಂಗ್ಯೂ ಪ್ರಕರಣ ದೃಢಪಟ್ಟ ವ್ಯಕ್ತಿಯ ಪರಿಸರದಲ್ಲಿ ೨೪ ತಾಸಿನೊಳಗೆ ಫಾಗಿಂಗ್ ಮೂಲಕ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಒಂದು ವಾರ ಬಿಟ್ಟು ಮಾಡಿದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನಿಯಂತ್ರಣ ಕ್ರಮದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಜ್ವರ ಇಡೀ ಊರಿಗೆ ಡೆಂಗ್ಯೂ ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಗಪ್ಪಿ ಮೀನು ಬೆಳೆಸಿ ಲಾರ್ವ ನಾಶ ಮಾಡಿ
ಡೆಂಗ್ಯೂ, ಮಲೇರಿಯಾದಂತಹ ಮಾರಕ ಖಾಯಿಲೆಗಳನ್ನು ಹರಡುವ ಲಾರ್ವಾಗಳ ನಿಯಂತ್ರಣಕ್ಕೆ ಗಪ್ಪಿ ಮೀನು ಬೆಳೆಸುವುದು ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ಇಲಾಖೆ ವಿನಂತಿಸಿದೆ. ಇವುಗಳು ಲಾರ್ವಾ (ಸೊಳ್ಳೆಯ ಮೊಟ್ಟೆ)ಯನ್ನು ತಿನ್ನುತ್ತವೆ. ಈ ಮೂಲಕ ಸೊಳ್ಳೆಗಳ ಉತ್ಪತ್ತಿಯನ್ನು ಆರಂಭದಲ್ಲೇ ನಿಯಂತ್ರಣ ಮಾಡಲು ಸಾಧ್ಯವಿದೆ. ೧ ಸೆ.ಮೀ.ಉದ್ದ ಇರುವ ಈ ಮೀನುಗಳಿಗೆ ಲಾರ್ವಾಗಳೇ ಆಹಾರ. ಪ್ರತಿ ತಾಲೂಕು ಆರೋಗ್ಯ ಇಲಾಖೆಯಲ್ಲಿ ಈ ಮೀನನ್ನು ಉಚಿತವಾಗಿ ನೀಡಲಾಗುತ್ತಿದ್ದು ಮನೆ, ವಠಾರದಲ್ಲಿ ನೀರು ನಿಲ್ಲುವ ಅಥವಾ ಸಂಗ್ರಹಿಸುವ ಸಾಧನಗಳಲ್ಲಿ ಈ ಮೀನನ್ನು ಸಾಕಿದರೆ ಅಂತಹ ನೀರಲ್ಲಿ ಉಂಟಾಗುವ ಲಾರ್ವಗಳನ್ನು ಮೀನುಗಳು ತಿಂದು ಹಾಕುತ್ತವೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗುವುದಿಲ್ಲ ಎನ್ನುತ್ತದೆ ಆರೋಗ್ಯ ಇಲಾಖೆ.

ನೀರು ನಿಲ್ಲದಂತೆ ನೋಡಿಕೊಳ್ಳಿ
ಡೆಂಗ್ಯೂ ಜ್ವರವು ಏಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ರಾತ್ರಿಯಲ್ಲೂ ಸಂಚರಿಸುವ ಈ ಸೊಳ್ಳೆಯು ಅತ್ಯಂತ ಅಪಾಯಕಾರಿ ಸೊಳ್ಳೆಯಾಗಿದೆ. ಇದು ಹಗಲು ಹೊತ್ತಿನಲ್ಲಿ ಅದರಲ್ಲೂ ಸೂರ್ಯೋದಯದ ಎರಡು ಗಂಟೆಗಳ ಮೊದಲು ಮತ್ತು ಸೂರ್ಯಾಸ್ತಮಾನದ ಎರಡು ಗಂಟೆ ಮೊದಲು ಈ ಸೊಳ್ಳೆ ಹೆಚ್ಚು ಆಕ್ಟೀವ್ ಆಗಿರುತ್ತದೆ. ಇದೇ ಸಮಯದಲ್ಲಿ ಹೆಚ್ಚು ಮಂದಿಗೆ ಕಚ್ಚುತ್ತದೆ. ಇದಲ್ಲದೆ ರಾತ್ರಿಯಲ್ಲೂ ಸ್ವಲ್ಪ ಬೆಳಕು ಕಂಡರೂ ಇವುಗಳು ಮನುಷ್ಯನನ್ನು ಕಚ್ಚುತ್ತವೆ. ಈ ಹೆಣ್ಣು ಸೊಳ್ಳೆಯ ಜೀವನ ಅವಧಿ ಕೇಲವ ೪೦ರಿಂದ೬೦ ದಿನಗಳು ಅಷ್ಟೇ ಆದರೆ ಇಷ್ಟು ಅವಧಿಯಲ್ಲಿ ಅದೆಷ್ಟೋ ಮಂದಿಗೆ ರೋಗ ಹರಡಿ ಹೋಗುತ್ತದೆ. ಇಂತಹ ಸೊಳ್ಳೆಗಳು ಉತ್ಪತ್ತಿಯಾಗುವುದು ನಿಂತ ನೀರಲ್ಲಿ ಆದ್ದರಿಂದ ಮನೆಯ ಸುತ್ತ ಮುತ್ತ ಮಳೆಯ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪಾತ್ರೆ,ಗೆರಟೆ,ಟಯರ್,ಬಾಟಲಿ,ಪ್ಲಾಸ್ಟಿಕ್ ಪಿಂಗಾಣಿಗಳು, ಕುಡಿದು ಎಸೆದ ಸಿಯಾಳ ಇತ್ಯಾದಿಗಳಲ್ಲಿ ನೀರು ನಿಲ್ಲುತ್ತದೆ. ಹೀಗೆ ನಿಂತ ನೀರಲ್ಲಿ ಲಾರ್ವಗಳು ಉತ್ಪತ್ತಿಯಾಗಿ ಸೊಳ್ಳೆಗಳಾಗುತ್ತದೆ. ಆದ್ದರಿಂದ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವುದು ಎಲ್ಲಕ್ಕಿಂತ ಮೊದಲು ಮಾಡಬೇಕಾದ ಕೆಲಸವಾಗಿದೆ.

ಲಾರ್ವಾ ಉತ್ಪತಿಯಾಗಲು ಕಾರಣವಾಗುವ ಅಂಶಗಳನ್ನು ಗುರುತಿಸಿ ಅದರ ನಿಯಂತ್ರಣಕ್ಕೆ ಆದ್ಯತೆ ನೀಡುವುದೇ ಡೆಂಗ್ಯೂ ತಡೆಗೆ ಇರುವ ಉತ್ತಮ ದಾರಿ. ಆಶಾ, ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಮನೆ-ಮನೆ ಭೇಟಿ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಅಕಾಲಿಕ ಮಳೆ ಪರಿಣಾಮ ಕಳೆದ ಒಂದು ತಿಂಗಳಿನಿಂದ ಡೆಂಗ್ಯೂ ಹರಡುವಿಕೆ ಪ್ರಮಾಣ ಏರಿಕೆ ಕಂಡಿದೆ – ಡಾ| ನವೀನ್ ಚಂದ್ರ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಮಂಗಳೂರು

ತಾಲೂಕಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಕಲ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಈಗಾಗಲೇ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಮನೆ ಮನೆ ಭೇಟಿ ಮಾಡಿ ಲಾರ್ವ ಸಮೀಕ್ಷೆ ಮಾಡುತ್ತಿದ್ದಾರೆ. ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಡೆಂಗ್ಯೂ ಜ್ವರ ಕಂಡ ಬಂದ ಪ್ರದೇಶದಲ್ಲಿ ತಕ್ಷಣವೇ ಫಾಗಿಂಗ್ ಮಾಡುವ ಕೆಲಸವೂ ನಡೆಯುತ್ತಿದೆ. ಜನರು ಭಯಗೊಳ್ಳದೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಿಂದ ಡೆಂಗ್ಯೂ ಜ್ವರದ ನಿಯಂತ್ರಣ ಮಾಡಬಹುದಾಗಿದೆ – ಡಾ.ಅಶೋಕ್ ಕುಮಾರ್ ರೈ, ತಾಲೂಕು ಆರೋಗ್ಯಾಧಿಕಾರಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.